ಆರೆಸ್ಸೆಸ್ನ ಪ್ರಧಾನ ಉದ್ದೇಶವೇ ಮನುವಾದದ ಮರುಸ್ಥಾಪನೆ. ಅದು ಧಾರ್ಮಿಕ ಗ್ರಂಥವಲ್ಲ. ಬದುಕಿನ ರೀತಿನೀತಿಯನ್ನು ನಿಯಂತ್ರಿಸುವ ಕಾನೂನುಗಳ ಕಟ್ಟಳೆ. ಅದನ್ನು ಮರುಸ್ಥಾಪಿಸಬೇಕೆಂದರೆ ಕೇವಲ ರಾಜಕೀಯ ಅಧಿಕಾರ ಸಿಕ್ಕರೆ ಮಾತ್ರ ಸಾಲದು. ಕಾನೂನು ಅಂಗಳವನ್ನೂ ಅದಕ್ಕೆ ಪೂರಕವಾಗಿ ಅಣಿಗೊಳಿಸಬೇಕು. ಯಾಕೆಂದರೆ ನ್ಯಾಯಾಲಯಗಳು ತಿರುಗಿನಿಂತರೆ ಕಾನೂನುಗಳನ್ನು ತಿರುಗುಮುರುಗಾಗಿಸುವುದು ಸುಲಭದ ಕೆಲಸವಲ್ಲ. ಇದನ್ನು ಅರ್ಥ ಮಾಡಿಕೊಂಡಿರುವ ಆರೆಸ್ಸೆಸ್ ಮೂವತ್ತು ವರ್ಷಗಳ ಹಿಂದೆಯೇ ನ್ಯಾಯಾಲಯಗಳಿಗೆ ದಿಗ್ಬಂಧನ ವಿಧಿಸುವ ತನ್ನ ಕಾರ್ಯಸೂಚಿಯನ್ನು `ಎಬಿಎಪಿ’ಹೆಸರಿನ ಮೂಲಕ ಅನುಷ್ಠಾನಕ್ಕೆ ತರುತ್ತಿದೆ – ಮಾಚಯ್ಯ ಎಂ ಹಿಪ್ಪರಗಿ
1992 ರ ಸೆಪ್ಟೆಂಬರ್ನಲ್ಲಿ ದೆಹಲಿಯಲ್ಲಿ ಒಂದು ಸಭೆ ನಡೆಯಿತು. ವಕೀಲರೆ ಜಮಾಯಿಸಿದ್ದ ಆ ಸಭೆಯ ಉದ್ದೇಶ ಕಾನೂನು ಕಾರ್ಯತಂತ್ರದ ಬಗ್ಗೆ ಅಥವಾ ಗಂಭೀರ ಪ್ರಕರಣಗಳ ಬಗ್ಗೆ ಚರ್ಚಿಸುವುದಾಗಿರಲಿಲ್ಲ. ಆರೆಸ್ಸೆಸ್ ಪ್ರಚಾರಕ ದತ್ತೋಪಂಥ ತೇಂಗಡಿಯವರ ಭಾಷಣ ಕೇಳಲು ಆ ವಕೀಲರು ನೆರೆದಿದ್ದರು. ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ, ಸಾಮಾಜಿಕ್ ಸಾಮರಸ್ಯತಾ ಮಂಚ್ ತರಹದ ಸಂಘಟನೆಗಳನ್ನು ಹುಟ್ಟುಹಾಕುವ ಮೂಲಕ ಆರೆಸ್ಸೆಸ್ ವಿಸ್ತರಣೆಗೆ ಶ್ರಮಿಸಿದ್ದ ತೇಂಗಡಿಯವರು ಅಂತದ್ದೇ ಮತ್ತೊಂದು ಕಾರ್ಯಸೂಚಿ ಇಟ್ಟುಕೊಂಡು ಆ ಸಭೆ ಆಯೋಜಿಸಿದ್ದರು. ಕೇವಲ ಭಾಷಣಕ್ಕಷ್ಟೆ ಸೀಮಿತಗೊಳ್ಳುವುದು ಆ ಸಭೆಯ ಅಜೆಂಡವಾಗಿರಲಿಲ್ಲ. ಸಭೆ ಮುಗಿದ ಬಳಿಕ ಅಲ್ಲಿಯೇ ವಕೀಲರ ಒಂದು ಸಂಘಟನೆಯನ್ನು ತೇಂಗಡಿ ಹುಟ್ಟುಹಾಕಿದರು. ಅದುವೇ ಅಖಿಲ ಭಾರತೀಯ ಅಧಿವಕ್ತ ಪರಿಷತ್ (ಎಬಿಎಪಿ).
ಸಂಘ ಪರಿವಾರದ ಐಡಿಯಾಲಜಿ ಮತ್ತು ಅಜೆಂಡಾಗಳನ್ನು ಭಾರತದ ನ್ಯಾಯಾಲಯಗಳ ಅಂಗಳಕ್ಕೆ ವಿಸ್ತರಿಸುವ ವ್ಯವಸ್ಥಿತ ಉದ್ದೇಶ ಈ ಎಬಿಎಪಿ ಸಂಘಟನೆಯದ್ದು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ನ್ಯಾ.ಎಚ್.ಆರ್ ಖನ್ನಾ, ನ್ಯಾ.ಇ ಎಸ್ ವೆಂಕಟರಾಮಯ್ಯ, ಹೈಕೋರ್ಟ್ ಜಡ್ಜುಗಳಾದ ನ್ಯಾ.ರಾಮಾಜೋಯಿಸ್, ನ್ಯಾ.ಜಿ ಎಂ ಲೋಧಾ, ನ್ಯಾ. ಯು.ಆರ್. ಲಲಿತ್, ನ್ಯಾ. ಆದರ್ಶ್ ಗೋಯೆಲ್, ನ್ಯಾ. ಪರ್ವತ ರಾವ್ ಹಾಗೂ ಹೆಸರಾಂತ ವಕೀಲ ರಾಮ್ ಜೇಠ್ಮಲಾನಿ ಥರದವರು ಈ ಸಂಘಟನೆಗೆ ಬೆನ್ನೆಲುಬಾಗಿ ನಿಂತರು.

ಇವತ್ತು ಎಬಿಎಪಿ ಸಂಘಟನೆ ಬಹಳ ವಿಸ್ತೃತವಾಗಿ ಬೆಳೆದು ನಿಂತಿದೆ. ದೇಶಾದ್ಯಂತ ಲಕ್ಷಾಂತರ ವಕೀಲರು ಆ ಸಂಘಟನೆಯ ಸದಸ್ಯರಾಗಿದ್ದಾರೆ. ಈ ಕುರಿತು ಇತ್ತೀಚೆಗೆ ವಿವರವಾದ ವರದಿ ಪ್ರಕಟಿಸಿರುವ ‘ದಿ ಪ್ರಿಂಟ್’ ವೆಬ್ಪತ್ರಿಕೆ ಹೇಳುವಂತೆ ಪ್ರತಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ 200 ಎಬಿಎಪಿ ಸದಸ್ಯ ವಕೀಲರುಗಳಿದ್ದಾರೆ. ಆರೆಸ್ಸೆಸ್ನ ಬಲಪಂಥೀಯ ರಾಜಕಾರಣವನ್ನು ಮುನ್ನೆಲೆಗೆ ತರುವಂತಹ ಗೋಹತ್ಯೆ, ಲವ್ಜಿಹಾದ್, ಮತಾಂತರ ತರಹದ ಕೇಸುಗಳನ್ನು ಉಚಿತವಾಗಿ ನಡೆಸುವುದು ಈ ವಕೀಲರಿಗೆ ವಹಿಸಲಾಗಿರುವ ಕರ್ತವ್ಯ. ನೆನಪಿರಲಿ, ರಾಮಜನ್ಮಭೂಮಿಯಿಂದ ರಾಮಸೇತು ಪ್ರಕರಣದವರೆಗೆ ಕಾನೂನು ಹೋರಾಟವನ್ನು ಮುನ್ನಡೆಸಿದ್ದೇ ಈ ಎಬಿಎಪಿ ಸಂಘಟನೆಯ ಸದಸ್ಯ ವಕೀಲರು.
ಬಿಜೆಪಿ-ಆರೆಸ್ಸೆಸ್ ನೇರ ನಂಟು
ವಕೀಲರ ಸಂಘಟನೆಗಷ್ಟೇ ಇದು ಸೀಮಿತವಾಗಿದ್ದಿದ್ದರೆ ಅಷ್ಟಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಯಾಕೆಂದರೆ ಪ್ರತಿ ವೃತ್ತಿಯಲ್ಲೂ ಇಂತಹ ಹಲವಾರು ಸಂಘಟನೆಗಳಿವೆ. ಆದರೆ ಈ ಸಂಘಟನೆಯನ್ನು ಬಳಸಿಕೊಂಡು ಆರೆಸ್ಸೆಸ್ ಐಡಿಯಾಲಜಿ ಹೊಂದಿರುವ ವಕೀಲರನ್ನು ಜಡ್ಜ್, ಅಡ್ವೊಕೇಟ್ ಜನರಲ್, ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳಿಗೆ ತುಂಬಲಾಗುತ್ತಿದೆ. ಇವತ್ತಿನ ನ್ಯಾಯಾಲಯಗಳು ನೀಡುತ್ತಿರುವ ತೀರ್ಪುಗಳಲ್ಲಿ ಸೈದ್ಧಾಂತಿಕ ಪಕ್ಷಪಾತಿ ಧೋರಣೆ, ವೈದಿಕ ಉಲ್ಲೇಖಗಳು ರಾರಾಜಿಸುತ್ತಿರುವ ಅಸಲಿ ಕಾರಣವೇ ಆರೆಸ್ಸೆಸ್ನ ಮೂವತ್ತು ವರ್ಷಗಳ ಈ ವ್ಯವಸ್ಥಿತ ಪ್ರಯತ್ನ.
ಒಂದು ನಿರ್ದಿಷ್ಟ ರಾಜಕೀಯ ಸಿದ್ದಾಂತದ ವಿಚಾರಧಾರೆಯವರ ಪರವಾಗಿ ‘ಬಲವಂತದ ಕ್ರಮ ಬೇಡ’ ಎಂಬ ಆದೇಶಗಳು ಪದೇಪದೇ ಹೊರಬಿದ್ದಾಗ; ಸಂವಿಧಾನವನ್ನು ಉಲ್ಲೇಖಿಸಬೇಕಾದ ಪೀಠಗಳು ಮನುಧರ್ಮವನ್ನು ಉಲ್ಲೇಖಿಸಿ ತೀರ್ಪು ಬರೆಯುವಾಗ; ಅಂಬೇಡ್ಕರ್ವಾದಿ ಎಂಬ ಏಕೈಕ ಕಾರಣಕ್ಕೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರ ಮೇಲೆ ಕೋರ್ಟ್ ಆವರಣದಲ್ಲೇ ಶೂ ಎಸೆಯುವಾಗ; ಹಾಗೆ ಎಸೆದ ವ್ಯಕ್ತಿಗೆ ಯಾವುದೇ ಶಿಕ್ಷೆಯಾಗದೆ ಇದ್ದಾಗ; ಪ್ರಗತಿಪರ ಚಿಂತನೆಯವರ ವಿಚಾರದಲ್ಲಿ ವಿನಾ ಕಾರಣ ಜಾಮೀನು ನಿರಾಕರಣೆ ಮಾಡಿದಾಗ…. ನ್ಯಾಯಾಲಯಗಳು ಯಾಕೆ ಬಲಪಂಥೀಯ ಸಿದ್ದಾಂತದ ಕುಲುಮೆಗಳಂತೆ ವರ್ತಿಸುತ್ತಿವೆ? ಎನ್ನುವ ಪ್ರಶ್ನೆ ಪುಟಿದೇಳುತ್ತೆ. 2014 ರಿಂದ ಈಚೆಗೆ ದೇಶ ಒಂದು ವಿಚಿತ್ರ ಸಮೂಹಸನ್ನಿಗೆ ತುತ್ತಾಗಿದೆ. ನ್ಯಾಯಾಲಯ ಅಥವಾ ನ್ಯಾಯಾಧೀಶರು ಕೂಡಾ ಇಂತಹ ಸಾಮಾಜಿಕ ಸನ್ನಿಗೆ ಈಡಾಗಿ ಹೀಗೆ ವರ್ತಿಸುತ್ತಿರಬಹುದು ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಅದು ಕೇವಲ ಅರ್ಧಸತ್ಯ. ಪೂರ್ಣಸತ್ಯ ಈ ಎಬಿಎಪಿ ಸಂಘಟನೆಯ ಹಿಂದೆ ಅಡಗಿದೆ.
2025 ರ ಡಿಸೆಂಬರ್ ನಲ್ಲಿ ರಾಜಸ್ಥಾನದ ಬಲೋತ್ರಾನಲ್ಲಿ ಎಬಿಎಪಿ ಸಂಘಟನೆಯ 17ನೇ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಸುಮಾರು ಎರಡು ಸಾವಿರ ವಕೀಲರು ಸೇರಿದ್ದರು. ಅವರಲ್ಲಿ ಬಹುತೇಕರು ಸರ್ಕಾರಿ ವಕೀಲರು! ಎರಡು ದಿನಗಳ ಕಾಲ ನಡೆದ ಆ ಸಮ್ಮೇಳನದಲ್ಲಿ ಹಾಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರುಗಳು ಭಾಷಣಕಾರರಾಗಿ ಭಾಗವಹಿಸಿದರು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಕ್ರಮ್ಜಿತ್ ಬೆನರ್ಜಿಯವರು 2003ರಿಂದಲೂ ಈ ಎಬಿಎಪಿ ಸದಸ್ಯರಾಗಿರುವಂತವರು. “ಇಂದಿನ ಪೀಳಿಗೆಯವರು ನಮ್ಮ ಸಾಂಸ್ಕೃತಿಕ ಮೌಲ್ಯ ಮತ್ತು ರಾಷ್ಟ್ರೀಯತೆಗಳಿಂದ ಬಹಳ ಪ್ರಭಾವಿತರಾಗಿದ್ದಾರೆ. ನಾನು ಕೊಲ್ಕೊತ್ತಾದಲ್ಲಿ ವೃತ್ತಿ ಶುರು ಮಾಡಿದ ಆರಂಭದ ದಿನಗಳಲ್ಲಿ ಇಂತಹ ವಾತಾವರಣವಿರಲಿಲ್ಲ. ಎಬಿಎಪಿಯಿಂದ ಅದು ಸಾಧ್ಯವಾಗಿದೆ” ಎಂಬ ಅವರ ಮಾತುಗಳು ಈ ಸಂಘಟನೆ ನ್ಯಾಯಾಂಗ ವ್ಯವಸ್ಥೆಯನ್ನು ಎಷ್ಟು ಪ್ರಭಾವಿಸಿದೆ ಮತ್ತು ಬದಲಾಯಿಸಿದೆ ಎಂಬುದನ್ನು ಅರ್ಥ ಮಾಡಿಸುತ್ತವೆ.
ಬಿಜೆಪಿ ಮತ್ತು ಆರೆಸ್ಸೆಸ್ ಜೊತೆಗೆ ತನ್ನ ನಂಟನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಳ್ಳುವ ಎಬಿಎಪಿ ರಾಷ್ಟ್ರೀಯ ಉಪಾಧ್ಯಕ್ಷ ಆರ್ ಜೇಂದ್ರನ್ ಅವರು, “ನಮ್ಮ ಸಂಘಟನೆಯ ಸಿದ್ದಾಂತ ತುಂಬಾ ಸರಳವಾದುದು, ಅದು ರಾಷ್ಟ್ರೀಯತೆ. ಆರೆಸ್ಸೆಸ್ ಕಳೆದ 100 ವರ್ಷಗಳಿಂದ ಇದೇ ಸಿದ್ದಾಂತವನ್ನು ಪ್ರಚುರಪಡಿಸಲು ಶ್ರಮಿಸುತ್ತಿದೆ. ಹಾಗಾಗಿ ನಮ್ಮ ಎಬಿಎಪಿ ಸಂಘಟನೆಯೂ, ಆರೆಸ್ಸೆಸ್ನ ಈ ವಿಶಾಲ ಸೈದ್ದಾಂತಿಕ ಕುಟುಂಬದ ಭಾಗವಾಗಿದೆ. ಬಿಜೆಪಿ ಕೂಡಾ ರಾಜಕಾರಣದಲ್ಲಿ ಈ ಸಿದ್ದಾಂತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ನಾವು ಅದೇ ದಿಕ್ಕಿನಲ್ಲಿ ವಕೀಲರುಗಳ ಮನಸ್ಥಿತಿ ಪರಿವರ್ತಿಸಲು ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ. ಎಬಿಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಭೂಪೇಂದ್ರ ಯಾದವ್ ಅವರನ್ನು 2021ರಲ್ಲಿ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವರನ್ನಾಗಿ ನೇಮಕ ಮಾಡಲಾಯ್ತು. ಇದು ಎಬಿಎಪಿ ಮತ್ತು ಬಿಜೆಪಿ ನಡುವಿನ ನಂಟಿಗೆ ಮತ್ತೊಂದು ಸಾಕ್ಷಿ.
ಆಯಾಮ ನಾಲ್ಕು; ಅಜೆಂಡಾ ನೂರು!
ಎಬಿಎಪಿ ಸಂಘಟನೆಯು ನಾಲ್ಕು ಆಯಾಮದೊಂದಿಗೆ ಕೆಲಸ ಮಾಡುತ್ತಿದೆ. ಮಾಹಿತಿ ಸಂಗ್ರಹ, ಸಾರ್ವಜನಿಕ ಹಿತಾಸಕ್ತಿ ಆಕ್ಷೇಪಣೆ ಸಲ್ಲಿಕೆ, ಸಂಘಟನೆ ಮತ್ತು ವಿಸ್ತರಣೆ. ಇದರಲ್ಲಿ ಮುಖ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಆಕ್ಷೇಪಣೆಗೆ ಹೆಚ್ಚು ಪ್ರಾಮುಖ್ಯತೆ ಇದೆ. ಬಿಜೆಪಿಯೇತರ ಸರ್ಕಾರಗಳ ಆಳ್ವಿಕೆ ಇರುವೆಡೆಯಲ್ಲಿ ಸರ್ಕಾರದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿ ಅದನ್ನು ರಾಜಕೀಯ ಚರ್ಚೆಯಾಗಿ ಪರಿವರ್ತಿಸುವುದು ಈ ವಿಭಾಗದ ಮುಖ್ಯ ಕೆಲಸ. ಇಂತಹ ಯಾವ ಕೆಲಸವನ್ನೂ ಪರಿಷತ್ ಹೆಸರಿನಲ್ಲಿ ಮಾಡಲಾಗುವುದಿಲ್ಲ. ಸದಸ್ಯರನ್ನು ಬಳಸಿಕೊಂಡು ವ್ಯಕ್ತಿಗತ ಹೋರಾಟದಂತೆ ಸಂಘರ್ಷವನ್ನು ರೂಪಿಸಲಾಗುತ್ತದೆ.
ಜನರಿಗೆ ಸುಲಭವಾಗಿ ನ್ಯಾಯಸೇವೆ ಒದಗಿಸುವ ನೆಪದಲ್ಲಿ ದೇಶಾದ್ಯಂತ `ನ್ಯಾಯಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಈ ಸಂಘಟನೆಯ ಸದಸ್ಯ ವಕೀಲರು ಜನರ ಜೊತೆ ಬೆರೆಯುತ್ತಾರೆ. ಸ್ಥಳೀಯ ಇಶ್ಯೂಗಳನ್ನು ಗುರುತಿಸಿ ಸಂಘಟನೆಯ ಗಮನಕ್ಕೆ ತರುತ್ತಾರೆ. ನೈತಿಕ ಪೊಲೀಸ್ಗಿರಿ, ಗೋರಕ್ಷಣೆ, ಮತಾಂತರ ನೆಪದಲ್ಲಿ ದಾಳಿ, ಅನ್ಯಧರ್ಮೀಯ ಪೂಜಾಸ್ಥಳಗಳ ಮೇಲೆ ದಾಳಿ ಇಂತವುಗಳನ್ನು ಪ್ರಚೋದಿಸಿ, ಸಂಘ ಪರಿವಾರದ ಕಾರ್ಯಕರ್ತರಿಗೆ ಕಾನೂನು ನೆರವು ನೀಡಲಾಗುತ್ತದೆ.
ಎಬಿಎಪಿ ರಾಷ್ಟ್ರೀಯ ಅಧ್ಯಕ್ಷ ಕೆ ಶ್ರೀನಿವಾಸ ಮೂರ್ತಿ ಸಮ್ಮೇಳನದ ವೇದಿಕೆಯಲ್ಲಿ ಮಾತನಾಡುತ್ತಾ, “ಗೋರಕ್ಷಕರು ನಿಮ್ಮ ಬಳಿ ಬಂದು, ಸಾರಿ ಇಂತಿಷ್ಟು ಲಾರಿಗಳಲ್ಲಿ ದನಗಳನ್ನು ಸಾಗಿಸಲಾಗುತ್ತಿದೆ. ಏನು ಮಾಡುವುದು ಎಂದು ಕೇಳುತ್ತಾರೆ. ಅವರು ಎಮೋಷನಲ್ ಉದ್ವೇಗಕ್ಕೆ ಒಳಗಾಗಿರುತ್ತಾರೆ. ಆಗ ನೀವು ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿ, ಕಾರ್ಯಪ್ರವೃತ್ತರಾಗಲು ನೆರವು ನೀಡಬೇಕು” ಎಂದು ವಕೀಲರಿಗೆ ಸಲಹೆ ನೀಡಿದ್ದು ಇದನ್ನು ಸಾಬೀತು ಮಾಡುತ್ತೆ.
ಹೀಗೆ ತಯಾರಾಗುವ ವಕೀಲರು ನ್ಯಾಯ ಮತ್ತು ಸಂವಿಧಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಲು ಸಾಧ್ಯವೇ? ಇಂತಹ ಮನಸ್ಥಿತಿಯ ವಕೀಲರನ್ನು ನ್ಯಾಯಾಧೀಶರ ಸ್ಥಾನಗಳಲ್ಲಿ ಕೂರಿಸಿದಾಗ, ಅವರು ನಿಷ್ಪಕ್ಷಪಾತವಾಗಿ ನ್ಯಾಯ ನೀಡಲು ಸಾಧ್ಯವೇ?
ಕೇವಲ ವಕೀಲರ ಮನಸ್ಥಿತಿಯನ್ನು ಪ್ರಭಾವಿಸುವುದಕ್ಕಷ್ಟೇ ಈ ಪರಿಷತ್ (ಎಬಿಎಪಿ) ಸೀಮಿತವಾಗಿಲ್ಲ. ತಮ್ಮ ಸೈದ್ದಾಂತಿಕ ಅಜೆಂಡಾಕ್ಕೆ ಬದ್ದರಾಗಿರುವಂತವರನ್ನು ಗುರುತಿಸಿ ಅವರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಗಳು ದೊರೆಯುವಂತೆ ಮಾಡಲು ಯತ್ನಿಸಲಾಗುತ್ತದೆ. ಪರಿಷದ್ ಜೊತೆ ನಿಕಟ ಒಡನಾಟವಿದ್ದ ನ್ಯಾ. ಆದರ್ಶ್ ಗೋಯೆಲ್ ಅವರನ್ನು 2001 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿದ ಪ್ರಕ್ರಿಯೆಯೇ ಇದಕ್ಕೆ ಸಾಕ್ಷಿ. ಗೋಯೆಲ್ ಅವರ ಹೆಸರನ್ನು ಪದೋನ್ನತಿಗೆ ಶಿಫಾರಸ್ಸು ಮಾಡಿದಾಗ ಇಂಟೆಲಿಜೆನ್ಸ್ ಬ್ಯೂರೋ ವರದಿಯಲ್ಲಿ ಅವರನ್ನು “ಭ್ರಷ್ಟ” ಎಂದು ಉಲ್ಲೇಖಿಸಲಾಗಿತ್ತು ಮತ್ತು ಅವರು ರಾಜಕೀಯ ಅಜೆಂಡಾ ಹೊಂದಿರುವ ಎಬಿಎಪಿ ಪರಿಷತ್ನ ಪ್ರಧಾನ ಕಾರ್ಯದರ್ಶಿಯಾಗಿರುವುದನ್ನು ಉಲ್ಲೇಖಿಸಲಾಗಿತ್ತು. ಆ ಕಾರಣಕ್ಕೆ ಅಂದಿನ ರಾಷ್ಟ್ರಪತಿಗಳಾದ ಕೆ.ಆರ್. ನಾರಾಯಣನ್ ಅವರು ಗೋಯೆಲ್ ಹೆಸರನ್ನು ವಾಪಾಸು ಕಳಿಸಿದ್ದರು. ಆಗ ವಾಜಪೇಯಿಯವರ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಅರುಣ್ ಜೇಟ್ಲಿಯವರು ಐಬಿ ವರದಿಯನ್ನೆ ಅಸಭ್ಯಕಾರಿ ಎಂದು ತಿರಸ್ಕರಿಸಿ, ಕೊಲಿಜಿಯಂ ವ್ಯವಸ್ಥೆ ಮೂಲಕ ಗೋಯೆಲ್ ಆಯ್ಕೆಯಾಗುವಂತೆ ಮಾಡಿದ್ದರು.
ಅದೇ ರೀತಿ, ಕ್ರಿಶ್ಚಿಯನ್ ಧರ್ಮೀಯರನ್ನು `ಬಿಳಿ ಭಯೋತ್ಪಾದಕರು’ ಎಂದು ಕರೆದು ವಿವಾದಕ್ಕೀಡಾಗಿದ್ದ ನ್ಯಾ. ಎಲ್ ಸಿ ವಿಕ್ಟೋರಿಯಾ ಗೌರಿಯವರನ್ನು ಹಲವರ ವಿರೋಧದ ನಡುವೆಯೂ 2023ರಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯ್ತು. ಆ ಹುದ್ದೆಗೇರುವ ಮುನ್ನ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಂತವರು.
ಭಾವಿ ಪೀಳಿಗೆಗೂ ಗಾಳ!

ಒಂದುಕಡೆ ನ್ಯಾಯ ವ್ಯವಸ್ಥೆಯೊಳಗೆ ಹೀಗೆ ತನ್ನ ಐಡಿಯಾಲಜಿ ಪಸರಿಸುವಂತೆ ಮಾಡುತ್ತಲೇ, ಹೊಸಪೀಳಿಗೆಯ ವಕೀಲರ ಮನಸ್ಸನ್ನೂ ಸೆಳೆಯಲು ಎಬಿಎಪಿ ಕಾರ್ಯತಂತ್ರ ರೂಪಿಸಿದೆ. ಅದಕ್ಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಹಯೋಗದಲ್ಲಿ ‘ಅಂಬೇಡ್ಕರ್ ಕಾನೂನು ಇಂಟರ್ನ್ಶಿಪ್ ಕಾರ್ಯಕ್ರಮ’ ಎಂಬ ತರಬೇತಿಯನ್ನು ನೀಡುತ್ತಿದೆ. ಈ ವರ್ಷ ತರಬೇತಿ ಪಡೆಯಲು ಸುಮಾರು 1000 ವಕೀಲ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಅದರಲ್ಲಿ, ಅಭ್ಯರ್ಥಿಯ ಹಿನ್ನೆಲೆ, ಸೈದ್ದಾಂತಿಕ ಬದ್ಧತೆಯನ್ನು ಸಂದರ್ಶನದ ಮೂಲಕ ಪರೀಕ್ಷಿಸಿ 400 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ದೆಹಲಿಯ ವಿವಿಧ ನ್ಯಾಯಾಲಯಗಳಲ್ಲಿ ಎಬಿಎಪಿ ಹಿರಿಯ ವಕೀಲರಡಿ ಅವರಿಗೆ ತರಬೇತಿ ನೀಡಲಾಗುತ್ತದೆ. ಭವಿಷ್ಯದ ವಕೀಲರನ್ನು ಈಗಲೇ ತನ್ನ ಸಿದ್ದಾಂತಕ್ಕೆ ಅನುಗುಣವಾಗಿ ತಯಾರು ಮಾಡಲು ಎಬಿಎಪಿ ಮೂಲಕ ಆರೆಸ್ಸೆಸ್ ಕಾರ್ಯಪ್ರವೃತ್ತವಾಗಿದೆ. ವಕೀಲರ ವಲಯದ ನಡುವೆ ತನ್ನ ಪ್ರಭಾವವನ್ನು ವಿಸ್ತರಿಸಲು `ನ್ಯಾಯಪ್ರವಾಹ ಎಂಬ ತ್ರೈಮಾಸಿಕ ಪತ್ರಿಕೆಯನ್ನೂ ಪರಿಷತ್ ಪ್ರಕಟಿಸುತ್ತಿದೆ. ಆರೆಸ್ಸೆಸ್ ಸಿದ್ದಾಂತಕ್ಕೆ ಪೂರಕವಾದ ಲೇಖನಗಳು ಅದರಲ್ಲಿರುತ್ತವೆ.
ಹೀಗೆ ಸತತವಾಗಿ 30 ವರ್ಷಗಳಿಂದ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ತನ್ನ ಬಲಪಂಥೀಯ ಧೋರಣೆಯನ್ನು ಪಸರಿಸಲು ಎಬಿಎಪಿ ಸಂಘಟನೆಯನ್ನು ಬಳಸಿಕೊಂಡು ಬರುತ್ತಿದೆ. ಅದರ ಪರಿಣಾಮದಿಂದಲೇ ಇವತ್ತು ನ್ಯಾಯಾಲಯಗಳು ಜನರ ವಿಶ್ವಾಸವನ್ನು ಕಳೆದುಕೊಳ್ಳುವಂಹ ಪಕ್ಷಪಾತಿ ನಿಲುವನ್ನು ಪ್ರದರ್ಶಿಸುತ್ತಿವೆ.
ಆರೆಸ್ಸೆಸ್ನ ಪ್ರಧಾನ ಉದ್ದೇಶವೇ ಮನುವಾದದ ಮರುಸ್ಥಾಪನೆ. ಅದು ಧಾರ್ಮಿಕ ಗ್ರಂಥವಲ್ಲ. ಬದುಕಿನ ರೀತಿನೀತಿಯನ್ನು ನಿಯಂತ್ರಿಸುವ ಕಾನೂನುಗಳ ಕಟ್ಟಳೆ. ಅದನ್ನು ಮರುಸ್ಥಾಪಿಸಬೇಕೆಂದರೆ ಕೇವಲ ರಾಜಕೀಯ ಅಧಿಕಾರ ಸಿಕ್ಕರೆ ಮಾತ್ರ ಸಾಲದು. ಕಾನೂನು ಅಂಗಳವನ್ನೂ ಅದಕ್ಕೆ ಪೂರಕವಾಗಿ ಅಣಿಗೊಳಿಸಬೇಕು. ಯಾಕೆಂದರೆ ನ್ಯಾಯಾಲಯಗಳು ತಿರುಗಿನಿಂತರೆ ಕಾನೂನುಗಳನ್ನು ತಿರುಗುಮುರುಗಾಗಿಸುವುದು ಸುಲಭದ ಕೆಲಸವಲ್ಲ. ಇದನ್ನು ಅರ್ಥ ಮಾಡಿಕೊಂಡಿರುವ ಆರೆಸ್ಸೆಸ್ ಮೂವತ್ತು ವರ್ಷಗಳ ಹಿಂದೆಯೇ ನ್ಯಾಯಾಲಯಗಳಿಗೆ ದಿಗ್ಬಂಧನ ವಿಧಿಸುವ ತನ್ನ ಕಾರ್ಯಸೂಚಿಯನ್ನು `ಎಬಿಎಪಿ’ ಹೆಸರಿನ ಮೂಲಕ ಅನುಷ್ಠಾನಕ್ಕೆ ತರುತ್ತಿದೆ. ಕೇವಲ ಬೈಠಕ್ಗಳಿಗೆ ತನ್ನ ಕಾರ್ಯಾಚರಣೆಯನ್ನು ಸೀಮಿತವಾಗಿಸಿಕೊಳ್ಳದೆ, ಆನಂತರವೂ ಜನಸಮುದಾಯಗಳನ್ನು ಟಾರ್ಗೆಟ್ ಮಾಡಿಕೊಳ್ಳುವ, ಆ ಮೂಲಕ ಆರೆಸ್ಸೆಸ್ ತನ್ನ ಐಡಿಯಾಲಜಿಯನ್ನು ಜನರ ಮೇಲೆ reinforce ಮಾಡುತ್ತಿದೆ. ಒಂದುಕಡೆ ಅಧಿಕಾರ ಕೇಂದ್ರಿತ ರಾಜಕಾರಣವನ್ನು, ಮತ್ತೊಂದೆಡೆ ಜನಕೇಂದ್ರಿತ ಸಮಾಜದ ಮನಸ್ಥಿತಿಯನ್ನು, ಇನ್ನೊಂದೆಡೆ ಕಾನೂನುಕೇಂದ್ರಿತ ನ್ಯಾಯಾಲಯಗಳ ನಿಲುವುಗಳನ್ನು ಸಂಘ ಪರಿವಾರ ವ್ಯವಸ್ಥಿತವಾಗಿ ತನ್ನ ಕೈವಶ ಮಾಡಿಕೊಳ್ಳುತ್ತಿದೆ. ಪ್ರತಿರೋಧ ಒಡ್ಡಬೇಕಿದ್ದ ಪ್ರಜ್ಞಾವಂತ ಸಮಾಜ ನಿರ್ದಿಷ್ಟ ಕಾರ್ಯಸೂಚಿಗಳಿಲ್ಲದೆ ಟೀಕೆ, ವಿಮರ್ಶೆಗಳಿಗೆ ತನ್ನ ಶ್ರಮ ಮತ್ತು ಸಮಯವನ್ನು ವ್ಯಯಿಸುತ್ತಿದೆ. ಎಲ್ಲವೂ ಗೊತ್ತಿದೆ, ಆದರೆ ಏನೂ ಮಾಡಲಾಗದ ಸ್ಥಿತಿ…
ಮಾಚಯ್ಯ ಎಂ ಹಿಪ್ಪರಗಿ
ರಾಜಕೀಯ ವಿಶ್ಲೇಷಕರು
ಮಾಹಿತಿ ಋಣ: https://theprint.in/the-fineprint/from-ram-janmabhoomi-to-ram-setu-rss-legal-arm-adhivakta-
ಇದನ್ನೂ ಓದಿ- ಒಕ್ಕೂಟ ವ್ಯವಸ್ಥೆಯ ಮೇಲೆ ರಾಜ್ಯಪಾಲರು ಸೃಷ್ಟಿಸುವ ಬಿಕ್ಕಟ್ಟು


