ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಸಂಬಂಧ ಇಂದು ವಿಧಾನಪರಿಷತ್ನಲ್ಲಿ ಅನಾವಶ್ಯಕವಾಗಿ ಬಿಜೆಪಿ ಚರ್ಚೆ ನಡೆಸಿತು. ಈ ವೇಳೆ ಮಾತನಾಡುತ್ತಿದ್ದ ಬಿಕೆ ಹರಿಪ್ರಸಾದ್, ಪಾಕಿಸ್ತಾನ (Pakistan) ನಮ್ಮ ಶತ್ರು ರಾಷ್ಟ್ರವಲ್ಲ, ನೆರೆಯ ರಾಷ್ಟ್ರ. ಬಿಜೆಪಿಯವರಿಗೆ ಪಾಕಿಸ್ತಾನ ಮತ್ತು ಮುಸ್ಲಿಂ (Muslim) ಎಂಬ ಎರಡು ವಿಷಯಗಳನ್ನು ಬಿಟ್ಟು ಬೇರೆ ಏನು ಮಾತಾಡೋದಕ್ಕೆ ಬರಲ್ಲ. ದೇಶದ ಶೇ.5ರಷ್ಟು ಜನರು ಪ್ರತಿದಿನ 46 ರೂಪಾಯಿಯಲ್ಲಿ ಜೀವನ ನಡೆಸುತ್ತಿದ್ದಾರೆ ಅದರ ಬಗ್ಗೆ ಯಾರು ಮಾತನಾಡಲ್ಲ ಯಾಕೆ ಎಂದು ಬಿಕೆ ಹರಿಪ್ರಸಾದ್ ಪ್ರಶ್ನೆ ಮಾಡಿದರು.
ಚೀನಾ ನಾಲ್ಕೂವರೆ ಸಾವಿರ ಸೆಕ್ವೇರ್ ಮೀಟರ್ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಇಂತಹ ವಿಷಯಗಳ ಬಗ್ಗೆ ಮಾತನಾಡದ ಇವರು ಶತ್ರು ರಾಷ್ಟ್ರದ ಜೊತೆಗೆ ನಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಇವರ ಪ್ರಕಾರ ಶತ್ರು ರಾಷ್ಟ್ರ ಅಂದ್ರೆ ಪಾಕಿಸ್ತಾನ. ಅದು ನಮಗೆ ಶತ್ರು ರಾಷ್ಟ್ರ ಅಲ್ಲ. ಅದು ನಮ್ಮ ಪಕ್ಕದಲ್ಲಿರೋ ರಾಷ್ಟ್ರ ಎಂದು ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯರು, ಹಾಗಾದ್ರೆ ನಿಮಗೆ ಅದು ಮಿತ್ರ ರಾಷ್ಟ್ರನಾ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಮತ್ತೆ ಮಾತು ಮುಂದುವರಿಸಿದ ಹರಿಪ್ರಸಾದ್, ಇತ್ತೀಚೆಗಷ್ಟೇ ಎಲ್ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಯ್ತು. ಅಡ್ವಾಣಿ ಅವರು ಜಿನ್ನಾ ಸಮಾಧಿ ಬಳಿ ಹೋಗಿ, ಅವರನ್ನ ಜಾತ್ಯಾತೀಯ ನಾಯಕ ಎಂದು ಹೊಗಳಿದವರು. ಆವಾಗ ನಿಮಗೆ ಪಾಕಿಸ್ತಾನ ಶತ್ರು ರಾಷ್ಟ್ರ ಆಗಲಿಲ್ಲವಾ ಎಂದು ಬಿಜೆಪಿ ಸದಸ್ಯರನ್ನು ಹರಿಪ್ರಸಾದ್ ಪ್ರಶ್ನೆ ಮಾಡಿದರು. ನವಾಜ್ ಷರೀಫ್ ಮೊಮ್ಮಗಳ ಬರ್ತ್ ಡೇಗೆ ಹೋಗಿ ಕೇಕ್, ಬಿರಿಯಾನಿ ತಿಂದು ಬಂದಾಗ ಪಾಕಿಸ್ತಾನ ನಿಮಗೆ ಶತ್ರು ರಾಷ್ಟ್ರ ಆಗಿರಲಿಲ್ಲವಾ? ಎಂದು ಪ್ರಶ್ನಿಸಿದರು.