ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಅವಮಾನ: ಆರೋಪಿಗಳ ಜಾಮೀನು ಅರ್ಜಿ ರದ್ದುಪಡಿಸಿದ ಕೋರ್ಟ್

Most read

ಕಲಬುರಗಿ: ಕೊಟನೂರ (ಡಿ) ಗ್ರಾಮದ ಕಲಬುರಗಿ-ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಕಳೆದ ಜನವರಿ 23 ರಂದು ಕಿಡಿಗೇಡಿಗಳು ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದರು. ಈ ಪ್ರಕರಣದಲ್ಲಿ ನ್ಯಾಯ ಕೋರಿ ದಿನೇಶ್ ದೊಡ್ಡಮನಿ ಎಂಬುವವರು ದೂರು ಸಲ್ಲಿಸಿದ್ದರು.‌

ಪ್ರಕರಣದ ಆರೋಪಿಗಳಾದ ಸ್ಥಳೀಯ ಸಂಗಮೇಶ ಸುಭಾಷ ಪಾಟೀಲ್, ಕಿರಣ ಪ್ರಭುರಾವ ಬಿರಾದಾರ, ಹಣಮಂತ ಚಂದ್ರಕಾಂತ ಪೂಜಾರಿ, ಮಾನು ಗಂಗಾರಾಂ ರಾಠೋಡ್ ಇವರು ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು, ಪ್ರಕರಣದಲ್ಲಿ ಆರೋಪಿಗಳ ಕುಕೃತ್ಯಕ್ಕೆ ಬಲವಾದ ಸಾಕ್ಷಿಗಳು ಇರುವ ಕಾರಣ ಅವರು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ನ್ಯಾಯಾಲಯವು ಆರೋಪಿಗಳ ಜಾಮೀನು ಅರ್ಜಿ ತಿರಸ್ಕಾರ ಆಗುವಂತೆ ಪೂರಕ ಸಾಕ್ಷಿಗಳನ್ನು ಒದಗಿಸಲು ದೂರುದಾರರ ಪರವಾಗಿ ಖ್ಯಾತ ವಕೀಲ ಲಿಂಗರಾಜ್ ಎಮ್.ಜಿ‌ ವಾದ ಮಂಡಿಸಿದ್ದರು.‌ ಸರ್ಕಾರದ ಪರವಾಗಿ ಪ್ರಭಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜಮಹೇಂದರ ಜಿ. ರವರು ವಾದ ಮಂಡಿಸಿದ್ದರು.‌

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಆರೋಪಿಗಳ ಅರ್ಜಿ ರದ್ದುಗೊಳಿಸಿರುವ ಕೋರ್ಟ್ ತೀರ್ಪನ್ನು ಕಲಬುರಗಿ ಜಿಲ್ಲಾ ವಕೀಲರ ಸಂಘ, ಕಲಬುರಗಿ ಜಿಲ್ಲಾ ಎಸ್.ಸಿ/ಎಸ್.ಟಿ ವಕೀಲರ ಸಂಘ ಸ್ವಾಗತಿಸಿವೆ.

ವಕೀಲರ ಸಂಘದ ಅಶ್ವಿನಿ ಮದನಕರ್, ಆರತಿ ರಾಠೋಡ್, ಶ್ರೀ ರಮೇಶ ರಾಗಿ, ಧರ್ಮಣ್ಣ ಕೋನೆಕರ್, ವಿಜಯಕಾಂತ್ ರಾಗಿ, ಜಗನ್ನಾತ್ ಮಾಳಗೆ, ಮಲ್ಲಿಕಾರ್ಜುನ, ಜೆ.ಡಿ.ಆರ್, ಹಣಮಂತ ಬಾವಿಕಟ್ಟಿ ಎಲ್ಲರೂ ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಶ್ರಮಿಸಿ ಸೂಕ್ತ ಸಾಕ್ಷಾಧಾರಗಳು ಕೋರ್ಟಿಗೆ ಸಲ್ಲಿಕೆಯಾಗುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ವಕೀಲರ ಸಂಘದ ಪತ್ರಿಕಾ ಪ್ರಕಟಣೆ ತಿಳಿಸಿದೆ.

More articles

Latest article