ವಯನಾಡ್: ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಾಂವಿಧಾನಿಕ ಮೌಲ್ಯಗಳು ನಿರಂತರವಾಗಿ ಬುಡಮೇಲಾಗುತ್ತಿವೆ ಎಂದು ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ, ಆರೋಪಿಸಿದ್ದಾರೆ. ಮೀನಂಗಡಿಯಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ
ಸಭೆಯಲ್ಲಿ ಮಾತನಾಡಿದ ಅವರು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪ್ರಸ್ತಾಪಿಸಿ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಯೋಜಿತ ದಾಳಿ ನಡೆಯುತ್ತಿವೆ ಎಂದು ಆಪಾದಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಸಮುದಾಯಗಳಲ್ಲಿ ಭಯ, ಸಿಟ್ಟು ಮತ್ತು ದ್ವೇಷವನ್ನು ಹರಡುತ್ತಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿ, ಮಣಿಪುರದಲ್ಲಿ ನಡೆದ ಹಿಂಸಾಚಾರಗಳನ್ನು ನೀವು ನೋಡಿದ್ದೀರಿ ಎಂದರು. ಪ್ರಧಾನಿ ಮೋದಿ ತಮ್ಮ ಸ್ನೇಹಿತರಿಗೆ ಅನುಕೂಲ ಆಗುವಂತಹ ನೀತಿಗಳನ್ನು ಒಂದಾದ ಮೇಲೊಂದರಂತೆ ಜಾರಿಗೆ ತರುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಸ್ವಲ್ಪವೂ ಸಹಾನುಭೂತಿ ಇಲ್ಲ. ಆದಿವಾಸಿಗಳ ಕಷ್ಟಗಳನ್ನು ಕೇಳುವವರಿಲ್ಲ. ಅವರ ಭೂಮಿಯನ್ನು ಶ್ರೀಮಂತರು ಕಬಳಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಅತ್ಯಂತ ಭಾರದ ಹೃದಯದಿಂದ ರಾಹುಲ್ ಗಾಂಧಿ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ನನ್ನ ಅಣ್ಣನ ಮೇಲಿನ ಪ್ರೀತಿಯಿಂದಲೂ ನೀವು ಇಲ್ಲಿಗೆ ಬಂದಿದ್ದೀರಿ ಎಂಬುದು ನನಗೆ ತಿಳಿದಿದೆ. ನಿಮ್ಮೊಂದಿಗೆ ಅವರಿಗೆ ನಿಕಟ ಸಂಬಂಧವಿತ್ತು ಎಂದು ಪ್ರಿಯಂಕಾ ಹೇಳಿದ್ದಾರೆ.
ಇಂದು ನಾವು ದೊಡ್ಡ ಯುದ್ಧ ಮಾಡುತ್ತಿದ್ದೇವೆ. ರಾಹುಲ್ ಅದರ ನೇತೃತ್ವವಹಿಸಿದ್ದಾರೆ. ದೇಶ ನಿರ್ಮಾಣಕ್ಕೆ ಆಧಾರವಾಗಿದ್ದ
ಮೌಲ್ಯಗಳ ರಕ್ಷಣೆಗಾಗಿ, ನಮ್ಮ ಸಾಂವಿಧಾನಿಕ ಮೌಲ್ಯಗಳಿಗಾಗಿ, ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿ ಹೋರಾಡುತ್ತಿದ್ದೇವೆ. ಈ
ಹೋರಾಟದಲ್ಲಿ ನೀವೆಲ್ಲರೂ ಭಾಗಿಯಾಗಿರುವುದು ಹೆಮ್ಮೆಯ ವಿಷಯ ಎಂದು ಪ್ರಿಯಾಂಕಾ ಹೇಳಿದ್ದಾರೆ. ಈ ಕ್ಷೇತ್ರದಿಂದ ಆಯ್ಕೆಯಾದರೆ ಶಕ್ತಿ ಮೀರಿ ನಿಮಗಾಗಿ ಶ್ರಮಿಸುತ್ತೇನೆ ಎಂದು ಮತ ಯಾಚಿಸುತ್ತಿದ್ದಾರೆ.