ಪೋಕ್ಸೋ ಪ್ರಕರಣದ ಆರೋಪಿ ಯಡಿಯೂರಪ್ಪನವರ ಮೇಲೆ, ಏಡ್ಸ್ ಟ್ರ್ಯಾಪ್ ಆರೋಪಿ ಮುನಿರತ್ನನ ಮೇಲೆ, ಚುನಾವಣಾ ಬಾಂಡ್ ಹಗರಣದಲ್ಲಿ ಆರೋಪಿಯಾಗಿ ಎಫ್ ಐ ಆರ್ ದಾಖಲಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ ಮತ್ತು ಗ್ಯಾಂಗ್ ತಲೆ ಮೇಲೆ ತಲಾ ಒಂದೆರಡು ಲೀಟರ್ ಗೋಮಯ ಸಿಂಪಡಿಸಿ ಶುದ್ಧೀಕರಣ ಮಾಡಬಹುದಿತ್ತಲ್ಲವೇ? ಬಿಜೆಪಿ ಸಹಚರ ಡಿನೋಟಿಫಿಕೇಶನ್ ಹಗರಣದ ಆರೋಪಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಗೋಮೂತ್ರದಲ್ಲಿ ಅದ್ದಿ ತೆಗೆದು ಸಂಪೂರ್ಣ ಶುದ್ಧೀಕರಣಕ್ಕೆ ಒಳಪಡಿಸಬಾರದೇಕೆ? _ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಬಿಜೆಪಿಯ ವಾಷಿಂಗ್ ಮೆಷಿನ್ ಪಾಲಿಟಿಕ್ಸ್ ಅಪ್ ಗ್ರೇಡ್ ಆಗಿದೆ. ಈಗ ಪಕ್ಷಾಂತರಿಗಳ ಲೀಗಲೀಕರಣದ ಜೊತೆಗೆ ಶುದ್ಧೀಕರಣ ಪ್ರಕ್ರಿಯೆ ಶುರುವಾಗಿದೆ. ರಾಜಸ್ಥಾನದ ರಾಜಧಾನಿ ಜೈಪುರ ಮಹಾನಗರ ಪಾಲಿಕೆಯ ರಾಜಕೀಯ ಇದಕ್ಕೆ ಸಾಕ್ಷಿಯಾಗಿದೆ.
ಜೈಪುರ ಮಹಾನಗರ ಪಾಲಿಕೆಯ ಮೇಯರ್ ಮುನೇಶ್ ಗುಜ್ರಾಲ್ ರವರನ್ನು ಪದಚ್ಯುತಗೊಳಿಸಿದ ಬಿಜೆಪಿಯು ಕಾಂಗ್ರೆಸ್ಸಿನ ಏಳು ಹಾಗೂ ಒಬ್ಬ ಪಕ್ಷೇತರ ಕೌನ್ಸಿಲರ್ ಗಳನ್ನು ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಸೇರಿಸಿಕೊಂಡು ಅವರ ಬೆಂಬಲದಿಂದ ಕುಸುಮ್ ಯಾದವ್ ಎನ್ನುವವರನ್ನು ಮೇಯರ್ ಆಗಿ ಆಯ್ಕೆ ಮಾಡಿದೆ.
ಇದರಲ್ಲೇನಿದೆ ವಿಶೇಷ?. ಎಲ್ಲಾ ಕಡೆ ಬಿಜೆಪಿ ಪಕ್ಷ ಈ ರೀತಿಯ ಆಪರೇಶನ್ ಕಮಲ ಮಾಡಿಯೇ ಅಧಿಕಾರವನ್ನು ಗಳಿಸಿಕೊಂಡಿದ್ದರಿಂದಾಗಿ ಇದೇನೂ ಆ ಪಕ್ಷಕ್ಕೆ ಹೊಸದೇನಲ್ಲ. ಬೇರೆ ಪಕ್ಷದ ಪ್ರಭಾವಿ ನಾಯಕರುಗಳ ಮೇಲೆ ಭ್ರಷ್ಟಾಚಾರ ಆರೋಪ ಹೊರೆಸುವುದು ಹಾಗೂ ತನಿಖೆಗೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಟ್ಟು ಬ್ಲಾಕ್ಮೇಲ್ ಮಾಡುವುದು. ಹಾಗೆ ಹೆದರಿದವರನ್ನು ಕೇಸರಿ ಪಾಳಯದ ವಾಶಿಂಗ್ ಮೆಷಿನ್ ಲ್ಲಿ ಹಾಕಿ ಭ್ರಷ್ಟತೆಯ ಕಳಂಕ ತೊಳೆದು ಸ್ವಚ್ಚವಾಗಿಸಿ ಬಿಜೆಪಿಗೆ ಸೇರಿಸಿಕೊಳ್ಳುವುದು ಕಳೆದ ಹತ್ತು ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡೇ ಬರುತ್ತಿದೆ.
ಆದರೆ ಇದರ ಜೊತೆಗೇ ಈಗ ಬಿಜೆಪಿಯ ಹೊಸ ಟ್ರೆಂಡ್ ಏನೆಂದರೆ ಅದು ಪಕ್ಷಾಂತರಿಗಳ ಶುದ್ಧೀಕರಣ. ಭ್ರಷ್ಟಾಚಾರದ ಆರೋಪಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿ ಕೊಂಡಾದ ಮೇಲೆ ಭ್ರಷ್ಟರನ್ನು ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸುವುದು ಬಿಜೆಪಿಗರ ಗುಣವಿಶೇಷ. ಆದರೆ ಹೀಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿಸಿಕೊಂಡು ಮೇಯರ್ ಸ್ಥಾನ ದಕ್ಕಿಸಿಕೊಂಡ ರಾಜಸ್ಥಾನದ ಬಿಜೆಪಿ ಹೊಸ ಮಾದರಿಯನ್ನು ಹುಟ್ಟುಹಾಕಿದೆ.
ವೃತ್ತಿಯಲ್ಲಿ ಅರ್ಚಕನೂ ಆಗಿರುವ ಅಲ್ಲಿಯ ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ಮಾಡಿದ ಮೊದಲ ಕೆಲಸವೇನೆಂದರೆ ಪಕ್ಷಾಂತರಿಗಳನ್ನೆಲ್ಲಾ ಶುದ್ಧೀ ಕರಣ ಮಾಡಿ ಪರಮ ಪಾವನರನ್ನಾಗಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದು. ಪಕ್ಷಾಂತರಗೊಂಡ ಜೈಪುರ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ರವರ ಮೇಲೆ ಗಂಗಾಜಲ ಹಾಗೂ ಗೋಮೂತ್ರ ಪ್ರೋಕ್ಷಣೆ ಮಾಡಿ ಅವರನ್ನು ಭ್ರಷ್ಟಾಚಾರದ ಅನಾಚಾರಗಳಿಂದ ಮುಕ್ತಗೊಳಿಸಿ ಶಾಸ್ತ್ರೋಕ್ತವಾಗಿ ಶುದ್ಧೀಕರಣ ಕಾರ್ಯ ನೆರವೇರಿಸಿದ್ದು ಬಿಜೆಪಿಗರಿಗೆ ಅದ್ಭುತ ಅನನ್ಯ ಮಾದರಿಯಾಗಿದೆ. ಕಾಂಗ್ರೆಸ್ಸಿನ ಭ್ರಷ್ಟಾಚಾರ ಆರೋಪಿತರ ಜೊತೆಗೆ ಪಾಲಿಕೆಯ ಅಧಿಕಾರಿಗಳನ್ನೆಲ್ಲಾ ಸಾಲಾಗಿ ನಿಲ್ಲಿಸಿ ಗೋಮೂತ್ರ ಸಿಂಪಡಿಸಿ ಅವರನ್ನೂ ಶುದ್ಧೀಕರಿಸಲಾಗಿದೆ. ಇಡೀ ಮಹಾನಗರ ಪಾಲಿಕೆಯೂ ಸಹ ಗೋಮೂತ್ರ ಸಿಂಪಡಣೆಯಿಂದ ಭ್ರಷ್ಟಾಚಾರ ಮುಕ್ತವಾಗಿದೆ.
“ನಾವು ಗಂಗಾಜಲದಿಂದ ಕಛೇರಿಯನ್ನು ಶುದ್ಧಗೊಳಿಸಿದ್ದೇವೆ. ಈಗ ಇಲ್ಲಿನ ಸಕಲ ಕಲ್ಮಶಗಳನ್ನು ತೊಲಗಿಸಲಾಗಿದೆ. ಈಗಿನ ಮೇಯರ್ ಶುದ್ಧ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ” ಎಂದು ಈ ಶುದ್ಧೀಕರಣದ ರೂವಾರಿ ಸಂಘಿ ಸನಾತನಿ ಶಾಸಕ ಆಚಾರ್ಯ ಹೇಳಿದ್ದಾರೆ. “ಹಿಂದೂ ಸಂಸ್ಕೃತಿಯಲ್ಲಿ ಗಂಗಾಜಲ ಮತ್ತು ಗೋಮೂತ್ರ ಸಿಂಪಡಿಸುವ ಮೂಲಕ ಶುದ್ಧೀಕರಣ ಕ್ರಿಯೆ ನಡೆಸುವುದು ಸಹಜ” ಎಂದು ಮಹಾನಗರ ಪಾಲಿಕೆಯ ಸದಸ್ಯ ಮನೋಜ್ ಮುದ್ಗಲ್ ಎನ್ನುವಾತ ಪ್ರತಿಕ್ರಿಯಿಸಿದ್ದಾನೆ.
ಇದೊಂದು ಸನಾತನಿಗಳ ಅದ್ಭುತ ಶುದ್ಧೀಕರಣ ತಂತ್ರಗಾರಿಕೆಯಾಗಿದೆ. ಈ ಗೋಮೂತ್ರ ಡಿವೈನ್ ಥೆರಪಿಯಿಂದ ಕೇವಲ ವಿರೋಧ ಪಕ್ಷಗಳಿಂದ ಕರೆತಂದವರ ಮೇಲೆ ಅಷ್ಟೇ ಯಾಕೆ, ಬಿಜೆಪಿ ಪಕ್ಷದ ಭ್ರಷ್ಟರ ಸಕಲ ಅಂಗಾಂಗಗಳಿಗೂ ಗೋಮೂತ್ರ ಸಿಂಪಡಿಸಿ ಅವರೆಲ್ಲರನ್ನೂ ಶುದ್ಧೀಕರಿಸಬಾರದೇಕೆ? ಕರ್ನಾಟಕಕ್ಕೂ ಆ ಗೋಮೂತ್ರವನ್ನು ಕಳಿಸಿಕೊಟ್ಟು ಭ್ರಷ್ಟಾಚಾರದ ಪ್ರಕರಣಗಳ ಆರೋಪಿತರಾದ ರಾಜ್ಯ ಬಿಜೆಪಿಯ ನಾಯಕರೆಲ್ಲರ ಮೇಲೆ ಈ ಶುದ್ಧೀಕರಣ ಪ್ರಕ್ರಿಯೆ ಮಾಡಬಹುದಲ್ಲವೇ? ಪೋಕ್ಸೋ ಪ್ರಕರಣದ ಆರೋಪಿ ಯಡಿಯೂರಪ್ಪನವರ ಮೇಲೆ, ಏಡ್ಸ್ ಟ್ರ್ಯಾಪ್ ಆರೋಪಿ ಮುನಿರತ್ನನ ಮೇಲೆ, ಚುನಾವಣಾ ಬಾಂಡ್ ಹಗರಣದಲ್ಲಿ ಆರೋಪಿಯಾಗಿ ಎಫ್ ಐ ಆರ್ ದಾಖಲಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ ಮತ್ತು ಗ್ಯಾಂಗ್ ತಲೆ ಮೇಲೆ ತಲಾ ಒಂದೆರಡು ಲೀಟರ್ ಗೋಮಯ ಸಿಂಪಡಿಸಿ ಶುದ್ಧೀಕರಣ ಮಾಡಬಹುದಿತ್ತಲ್ಲವೇ? ಬಿಜೆಪಿ ಸಹಚರ ಡಿನೋಟಿಫಿಕೇಶನ್ ಹಗರಣದ ಆರೋಪಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಗೋಮೂತ್ರದಲ್ಲಿ ಅದ್ದಿ ತೆಗೆದು ಸಂಪೂರ್ಣ ಶುದ್ಧೀಕರಣಕ್ಕೆ ಒಳಪಡಿಸಬಾರದೇಕೆ?
ಮೊದಲು ಸ್ವಪಕ್ಷೀಯ ಭ್ರಷ್ಟರ ಮೇಲೆ ಈ ಗೋಮೂತ್ರ ಪ್ರಯೋಗ ನಡೆಸಿ ಶುದ್ಧೀಕರಣ ಮಾಡಿಸಿ ಎಲ್ಲರನ್ನೂ ನೈತಿಕ ಮಾರ್ಗದಲ್ಲಿ ಮುನ್ನಡೆಸುವುದೇ ಆದರೆ ಈ ಗೋಮೂತ್ರ ಪ್ರಯೋಗಕ್ಕೆ ಜನರೂ ಜೈ ಹೇಳಬಹುದಾಗಿದೆ.
ಬಿಜೆಪಿ ಪಕ್ಷವೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿ ಕಾನೂನಿಗೆ ತಿದ್ದುಪಡಿ ತರಬಹುದಾಗಿದೆ. ಬಿಜೆಪಿಗರು ಹಾಗೂ ಅದರ ಮಿತ್ರಪಕ್ಷದಲ್ಲಿರುವವರು ಮತ್ತು ಬಿಜೆಪಿ ಪಕ್ಷಕ್ಕೆ ಬಂದು ಸೇರುವವರು ಶಾಸ್ತ್ರೋಕ್ತವಾಗಿ ಗೋಮೂತ್ರ ಶುದ್ಧೀಕರಣಕ್ಕೆ ಒಳಗಾಗಿ ಸಕಲ ಪಾಪಗಳಿಂದ ಮುಕ್ತರಾದವರ ಮೇಲಿನ ಎಲ್ಲಾ ಭ್ರಷ್ಟಾಚಾರಾದಿ ಇತರೇ ಕೇಸುಗಳನ್ನು ಎಲ್ಲಾ ನ್ಯಾಯಾಲಯಗಳು ಖುಲಾಸೆ ಮಾಡಬೇಕು ಹಾಗೂ ಶುದ್ಧಚಾರಿತ್ರ್ಯದವರು ಎಂದು ಘೋಷಿಸಬೇಕು” ಎಂದು ಕಾನೂನು ತಂದರೆ ಸಂಘದ ಹಿಂದೂರಾಷ್ಟ್ರದ ಕಲ್ಪನೆ ನನಸಾಗ ಬಹುದಾಗಿದೆ. ಕಳಂಕ ಪೀಡಿತ ಭ್ರಷ್ಟಾತಿ ಭ್ರಷ್ಟರೆಲ್ಲ ಬಿಜೆಪಿ ಪಕ್ಷ ಸೇರಿದರೆ ಬೇರೆಲ್ಲಾ ಪಕ್ಷಗಳೂ ಸ್ವಚ್ಚವಾಗಬಹುದು. ಗೋಮೂತ್ರವನ್ನು ಪಾಪನಾಶಕ ದಿವ್ಯೌಷಧಿಯಾಗಿ ವ್ಯಾಪಕವಾಗಿ ಸಂಘಿಗಳು ಬಳಸಬಹುದು. ಗೋಮೂತ್ರವೇ ಅಧಿಕಾರ ಹಿಡಿಯುವ ಸೂತ್ರವಾಗಿ ಕಮಲ ದೇಶಾದ್ಯಂತ ಅರಳಬಹುದು. ಜೊತೆಗೆ ಇಂತಹ ಮೌಢ್ಯಗಳು ಇನ್ನೂ ಗಾಢವಾಗಿ ಹರಡಬಹುದು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ಪತ್ರಕರ್ತರು
ಈ ಸುದ್ದಿ ಓದಿದ್ದೀರಾ?– ನಿರ್ಮಲಾ ಕೊರಳಿಗೆ ಸುತ್ತಿಕೊಂಡ ಚುನಾವಣಾ ಬಾಂಡ್ ಹಗರಣ: ಎಸ್ಐಟಿ ರಚಿಸುತ್ತಾ ಸರ್ಕಾರ?