ಬೆಂಗಳೂರು: ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನ್ನು ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶದ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಿಡುಗಡೆ ಮಾಡಿರುವ ಅನುದಾನವನ್ನು ಗಮನಿಸಿದರೆ ಉದ್ದೇಶಪೂರ್ವಕವಾಗಿ ಈ ಯೋಜನೆಯನ್ನು ಹಾಳುಗೆಡವಲು ಮುಂದಾಗಿರುವಂತಿದೆ. ಇದರ ವಿರುದ್ಧ ದನಿ ಎತ್ತಬೇಕಾಗಿದ್ದ ಕೇಂದ್ರ ಸಚಿವ ಸೋಮಣ್ಣ ಇವರು ಈ ದ್ರೋಹವನ್ನು ಮುಚ್ಚಿಹಾಕಲು ಸುಳ್ಳು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಕ್ಸ್ ಮೂಲಕ ಅಂಕಿಅಶಗಳ ಸಹಿತ ಕೇಂದ್ರ ಸರ್ಕಾರದ ಅನ್ಯಾಯವನ್ನು ಬಿಚ್ಚಿಟ್ಟಿದ್ದಾರೆ.
ಇಲ್ಲಿದೆ ನೋಡಿ ಸತ್ಯ:
ಜೆಜೆಎಂ ( ಜಲಜೀವನ್ ಮಿಷನ್)ಗೆ ಒಟ್ಟು ಹಂಚಿಕೆ – ₹49,262 ಕೋಟಿ (ಕೇಂದ್ರದ ಪಾಲು – ₹26,119 ಕೋಟಿ, ರಾಜ್ಯದ ಪಾಲು – ₹23,142 ಕೋಟಿ)
ಬಿಡುಗಡೆಯಾದ ಒಟ್ಟು ಅನುದಾನ – ₹32,202 ಕೋಟಿ (ಕೇಂದ್ರದ ಪಾಲು – ₹11,760 ಕೋಟಿ, ರಾಜ್ಯದ ಪಾಲು – ₹20,442 ಕೋಟಿ)
ಕರ್ನಾಟಕದ ಒಟ್ಟು ಖರ್ಚು – ₹29,413 ಕೋಟಿ
🔴 ಕೇಂದ್ರದ ಪಾಲು
➡ ₹26,119 ಕೋಟಿ ಹಂಚಿಕೆ
➡ ಕೇವಲ ₹11,760 ಕೋಟಿ ಬಿಡುಗಡೆಯಾಗಿದೆ – ಶೇ. 45ರಷ್ಟು ಮಾತ್ರ ಬದ್ಧತೆಯನ್ನು ಹೊಂದಿದೆ.
🔴 ರಾಜ್ಯದ ಪಾಲು
➡ ₹23,142 ಕೋಟಿ ಹಂಚಿಕೆ
➡ ₹20,442 ಕೋಟಿ ಬಿಡುಗಡೆ – ಶೇ. 88.3ರಷ್ಟು ಹೆಚ್ಚಿನ ಮೊತ್ತ!
ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಪ್ರತಿಯೊಂದು ರೂಪಾಯಿಯನ್ನು ರಾಜ್ಯ ಸರ್ಕಾರವು ಉದ್ದೇಶಿತ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಂಪೂರ್ಣವಾಗಿ ಬಳಸಿಕೊಂಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಅನುದಾನದ ಪಾಲನ್ನು ನೀಡಲು ನಿರಾಕರಿಸುತ್ತಾ ಬಂದಿದೆ.
🔹 2024-25ನೇ ಸಾಲಿನ ಬಜೆಟ್‌ನಲ್ಲಿ – ಕೇಂದ್ರದ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ
➡ ಕೇಂದ್ರ ಸರ್ಕಾರವು ಜೆಜೆಎಮ್ ಗೆ ₹3,804 ಕೋಟಿ ಹಂಚಿಕೆ ಮಾಡಿದೆ. ಆದರೆ ಅದರಲ್ಲಿ ₹570 ಕೋಟಿ ಮಾತ್ರ ಬಿಡುಗಡೆಯಾಗಿರುತ್ತದೆ.
➡ಈ ವಿಚಾರವಾಗಿ ಹಲವಾರು ಪತ್ರಗಳನ್ನು ಬರೆದು ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಹಣವನ್ನು ಬಿಡುಗಡೆ ಮಾಡಿರುವುದಿಲ್ಲ.
➡ ಮತ್ತೊಂದೆಡೆ, ಕರ್ನಾಟಕವು ತನ್ನ ಬಜೆಟ್ ನಲ್ಲಿ ₹7,652 ಕೋಟಿ ಹಂಚಿಕೆ ಮಾಡಿದ್ದು, ₹4,977 ಕೋಟಿ ಹಣವನ್ನು ಬಿಡುಗಡೆ ಮಾಡಿದೆ.
ಇದು ಕೇವಲ ಕರ್ನಾಟಕಕ್ಕೆ ಸಂಬಂಧಿಸಿದ್ದು ಮಾತ್ರ ಅಲ್ಲ – ಇದು ದೇಶದ ಎಲ್ಲಾ ರಾಜ್ಯಗಳಿಗೆ ಮಾಡುತ್ತಿರುವ ಅನ್ಯಾಯ.
➡ ಜೆಜೆಎಂ (2024-25) ಗಾಗಿ ಅಂದಾಜು ಬಜೆಟ್ – ₹70,163 ಕೋಟಿ
➡ ಪರಿಷ್ಕೃತ ಅಂದಾಜು ಮೊತ್ತವನ್ನು ಕೇವಲ ₹22,694 ಕೋಟಿಗೆ ಇಳಿಸಲಾಗಿದೆ.
ನರೇಂದ್ರ ಮೋದಿ ಅವರ ಸರ್ಕಾರ ತನ್ನ ಬಜೆಟ್ ನಲ್ಲಿ ಅಗತ್ಯ ಪ್ರಮಾಣದ ಅನುದಾನ ನೀಡದೆ ಜಲ ಜೀವನ್ ಮಿಷನ್ ಯೋಜನೆಯನ್ನು ಕೊಲ್ಲುತ್ತಿದೆ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಅನ್ಯಾಯವನ್ನು ಪ್ರಶ್ನಿಸಬೇಕಿದ್ದ ಸಚಿವ ಸೋಮಣ್ಣ ಅವರಂತಹ ಬಿಜೆಪಿ ನಾಯಕರು ನಿರ್ಲಜ್ಜರಾಗಿ ತಪ್ಪು ಮಾಹಿತಿಯನ್ನು ಹರಡಿ ಕನ್ನಡಿಗರಿಗೆ ದ್ರೋಹ ಎಸಗುತ್ತಿದ್ದಾರೆ. ಈ ರೀತಿ ಜನರನ್ನು ದಾರಿ ತಪ್ಪಿಸುವ ಬದಲು, 2024-25 ಸಾಲಿನ ಬಜೆಟ್‌ನಲ್ಲಿ ಜೆಜೆಎಂಗೆ ಹಂಚಿಕೆಯಾಗಿದ್ದ ಪೂರ್ಣ ಅನುದಾನವನ್ನು ಯಾಕೆ ನೀಡಿಲ್ಲ ಎಂದು ಸಚಿವ ವಿ. ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿಯ ಇಂತಹ ಕೃತ್ಯಗಳ ಹೊರತಾಗಿಯೂ ಕರ್ನಾಟಕದಲ್ಲಿ ನಮ್ಮ ಸರ್ಕಾರವು ನುಡಿದಂತೆ ನಡೆದು ಉತ್ತಮ ಸಾಧನೆ ಮಾಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆಯನ್ನು ಮುಂದುವರಿಸುತ್ತಿದ್ದರೂ, ಜಲ ಜೀವನ್ ಮಿಷನ್ ಯೋಜನೆಯ ಮುಖಾಂತರ ಪ್ರತಿ ಮನೆಗೆ ಸುರಕ್ಷಿತ ಕುಡಿಯುವ ನೀರನ್ನು ನೀಡಲು ಬದ್ಧವಾಗಿದ್ದೇವೆ.