ಈ ಆರೆಸ್ಸೆಸ್ ಎನ್ನುವ ವಿಷ ವೃಕ್ಷ ರಾಜ್ಯಾದ್ಯಂತ ಮಕ್ಕಳ ಹಾಗೂ ಯುವಕರ ಮನದಲ್ಲಿ ಬೇರು ಬಿಡಬಹುದಾದ ಸಾಧ್ಯತೆಗೆ ಬ್ರೇಕ್ ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಶಾಲೆ ಕಾಲೇಜುಗಳಲ್ಲಿ ಯೋಗ ಕಲಿಸ್ತೇವೆ, ವ್ಯಕ್ತಿತ್ವ ವಿಕಸನದ ಪಾಠ ಮಾಡ್ತೇವೆ, ರಾಷ್ಟ್ರಭಕ್ತಿ ಕುರಿತು ಜಾಗೃತಿ ಮಾಡ್ತೇವೆ ಎಂದೆಲ್ಲಾ ಹೇಳುತ್ತಾ ಆರೆಸ್ಸೆಸ್ ಶಾಖಾ ಬೈಠಕ್ ಗಳನ್ನು ಮಾಡುತ್ತಿದ್ದ ಆರೆಸ್ಸೆಸ್ ಸಂಘಕ್ಕೆ ಇನ್ನು ಮೇಲೆ ಸಲೀಸಾಗಿ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಸಂಘಿ ಚಟುವಟಿಕೆಗಳನ್ನು ಮಾಡಲಾಗದು ಹಾಗೂ ಮಾಡಲು ಬಿಡಬಾರದು – ಶಶಿಕಾಂತ್ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಯಾಕೋ ಕರ್ನಾಟಕದಲ್ಲಿ ಈ ಬಿಜೆಪಿ ಪಕ್ಷದವರ ನಸೀಬೇ ಸರಿಯಾಗಿಲ್ಲ. ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಕಳೆದ ಎರಡೂವರೆ ವರ್ಷಗಳಿಂದ ಅದೆಷ್ಟೇ ಹೋರಾಟ ಹಾರಾಟ ಆರೋಪಗಳನ್ನು ಮಾಡುತ್ತಿದ್ದರೂ ಯಾವುದೂ ಕೈ ಹಿಡಿಯುತ್ತಿಲ್ಲ. ಯಾಕೆಂದರೆ ಯಾವುದೇ ನಿಖರವಾದ ಸಾಕ್ಷ್ಯಾಧಾರಗಳಿಲ್ಲದೇ ವಿರೋಧಕ್ಕಾಗಿ ಪ್ರಚಾರಕ್ಕಾಗಿ ತಮ್ಮ ಅಸ್ತಿತ್ವಕ್ಕಾಗಿ ವಿರೋಧ ಮಾಡುವುದರಿಂದ ಹಾಗೂ ನಾಯಕರುಗಳ ಉಢಾಪೆ ಹೇಳಿಕೆಗಳಿಂದಾಗಿ ಇವತ್ತು ರಾಜ್ಯದ ಬಿಜೆಪಿ ಪಕ್ಷ ನಗೆಪಾಟಲಿಗೀಡಾಗುತ್ತಿದೆ.
ಆಧಾರಗಳಿಲ್ಲದೇ ಆರೋಪ ಮಾಡುವುದನ್ನೇ ಕಾಯಕ ಮಾಡಿಕೊಂಡ ಬಿಜೆಪಿ ಪಕ್ಷಕ್ಕೆ ಆ ಆರೋಪಗಳೇ ಭೂಮರಾಂಗ್ ಆಗಿ ಆ ಪಕ್ಷದ ಬುಡಕ್ಕೆ ಪೆಟ್ಟು ನೀಡುತ್ತಿರುವುದು ವಾಸ್ತವ ಸತ್ಯವಾಗಿದೆ.
ಈಗ “ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸಬೇಕು” ಎಂದು ಸಚಿವ ಪ್ರಿಯಾಂಕ ಖರ್ಗೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇ ತಡ ಬೆಚ್ಚಿ ಬಿದ್ದ ಬಿಜೆಪಿಯ ಪ್ರಮುಖ ನಾಯಕರುಗಳೆಲ್ಲಾ ಕಾಂಗ್ರೆಸ್ ಸರಕಾರದ ಮೇಲೆ, ಖರ್ಗೆಯವರ ಮೇಲೆ ಮುಗಿಬಿದ್ದು ಹೇಳಿಕೆಗಳನ್ನು ಕೊಡತೊಡಗಿದರು.
ಆರೆಸ್ಸೆಸ್ ನಾಯಕರುಗಳೇ ದಿವ್ಯ ಮೌನಕ್ಕೆ ಶರಣಾಗಿದ್ದರೂ ಈ ಬಿಜೆಪಿಗರು ಅಂಡು ಸುಟ್ಟ ಬೆಕ್ಕಿನಂತೆ ಎಗರಾಡತೊಡಗಿದರು. ಅಯ್ಯೋ ಆರೆಸ್ಸೆಸ್ ನ್ನು ಬ್ಯಾನ್ ಮಾಡುತ್ತಾರಂತೆ. “ರಾಹುಲ್ ಗಾಂಧಿಯವರ ತಂದೆ, ಅಜ್ಜಿ, ತಾತನಿಗೇ ಬ್ಯಾನ್ ಮಾಡಲು ಆಗಿಲ್ಲಾ, ಇನ್ನು ಇವರಿಗೆ ಆಗುತ್ತದಾ?” ಎಂದು ಅಬ್ಬರಿಸ ತೊಡಗಿದರು. ಧಮ್ಮು ತಾಕತ್ತು ಧೈರ್ಯ ಇದ್ದರೆ ಬ್ಯಾನ್ ಮಾಡಲಿ ನೊಡೋಣ ಎಂದು ಸರಕಾರಕ್ಕೆ ಧಮಕಿ ಹಾಕತೊಡಗಿದರು. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ಸಿದ್ದರಾಮಯ್ಯನವರ ಮೇಲೆ ಮುಗಿಬಿದ್ದು ಒಂದು ರೀತಿಯಲ್ಲಿ ಭಯೋತ್ಪಾದನೆ ಮಾಡತೊಡಗಿದರು.
ಆದರೆ ಇವರ್ಯಾರೂ ಜೂನಿಯರ್ ಖರ್ಗೆಯವರು ಸಿಎಂ ಗೆ ಬರೆದ ಪತ್ರವನ್ನು ಓದಿರಲಿಲ್ಲವೋ ಅಥವಾ ಇಲಿ ಹೋಯ್ತು ಅಂದರೆ ಹುಲಿ ಹೋಯ್ತು ಎನ್ನುವ ಖಯಾಲಿಯ ಇವರು ಅನಧಿಕೃತವಾಗಿ ಮಾಡಲಾಗುತ್ತಿರುವ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎನ್ನುವ ಆಗ್ರಹವನ್ನೇ ಬದಲಾಯಿಸಿ ಆರೆಸ್ಸೆಸ್ ಸಂಘಟನೆಯನ್ನೇ ಬ್ಯಾನ್ ಮಾಡುವ ಪ್ರಯತ್ನ ಎಂದು ಬಿಂಬಿಸಿ ಸಂಘ ಪರಿವಾರದವರನ್ನು ಸರಕಾರದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರು. ಮಡಿಲ ಮಾಧ್ಯಮಗಳೂ ಸಹ ಇದೇ ರೀತಿ ಭಜನೆ ಶುರುಮಾಡಿಕೊಂಡವು.
ಆದರೆ ಯಾವಾಗ ಸರಕಾರಿ ಶಾಲೆ ಕಾಲೇಜು ದೇವಸ್ಥಾನದ ಮೈದಾನಗಳಲ್ಲಿ ಎಲ್ಲಾ ರೀತಿಯ ಖಾಸಗಿ ಕಾರ್ಯಕ್ರಮಗಳನ್ನು ನಿಷೇಧಿಸಿ 2013 ರಲ್ಲಿ ಬಿಜೆಪಿಯ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ರವರು ಹೊರಡಿಸಿದ್ದ ಸರ್ಕಾರಿ ಆದೇಶದ ಪ್ರತಿ ಬಹಿರಂಗವಾಯ್ತೋ ಆಗ ಬಿಜೆಪಿಯ ಸಮಸ್ತ ನಾಯಕರುಗಳು ಇಂಗು ತಿಂದ ಮಂಗದಂತಾದರು. ಅವರಿಗೆಲ್ಲ ತಮ್ಮ ಉಗುಳನ್ನು ತಾವೇ ನುಂಗಿಕೊಳ್ಳುವಂತಾಯಿತು. ಆರೆಸ್ಸೆಸ್ ಚಟುವಟಿಕೆ ಬ್ಯಾನ್ ಎನ್ನುವುದರ ವಿರುದ್ಧ ಕಾಂಗ್ರೆಸ್ ಪಕ್ಷದ ಮೇಲೆ ಹೂಡಲಾದ ಬಾಣಗಳು ತಿರುಗಿ ಬಿಜೆಪಿಗರ ಬುಡಕ್ಕೆ ಬಂದು ಬಿದ್ದವು.
ಶೆಟ್ಟರ್ ರವರು ಹೊರಡಿಸಿದ ಆದೇಶವನ್ನೇ ಗುರಾಣಿಯಾಗಿ ಬಳಸಿದ ಸಿಎಂ ಸಿದ್ದರಾಮಯ್ಯನವರು ಅ.16 ರಂದು ನಡೆದ ಸಂಪುಟ ಸಭೆಯಲ್ಲಿ ಸರಕಾರಿ ಜಾಗಗಳಲ್ಲಿ ಅನುಮತಿ ಇಲ್ಲದೇ ನಡೆಯುವ ಕಾರ್ಯಕ್ರಮಗಳನ್ನ ನಿಷೇಧಿಸುವ ತೀರ್ಮಾನ ತೆಗೆದುಕೊಂಡರು. ಸರ್ಕಾರಿ ಶಾಲಾ – ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಹಾಗೂ ಇತರೆ ಸ್ಥಳಗಳನ್ನು ಯಾವುದೇ ಖಾಸಗಿ ಸಂಘ – ಸಂಸ್ಥೆ, ಸಂಘಟನೆಗಳು ತಮ್ಮ ಚಟುವಟಿಕೆಗಳಿಗೆ ಬಳಸುವ ಮುನ್ನ ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ನಿರ್ಣಯ ಪಾಸ್ ಮಾಡಿದರು.
ಈ ಬಿಜೆಪಿಗರು ಹಾಗೂ ಅವರ ಹಿಂದಿರುವ ಆರೆಸ್ಸೆಸ್ ಸೂತ್ರಧಾರರು ರಾಜ್ಯಾದ್ಯಂತ ಗಲಭೆ ಎಬ್ಬಿಸುವ ಸಾಧ್ಯತೆಗಳನ್ನು ಮನಗಂಡ ಮುಖ್ಯಮಂತ್ರಿಗಳು ತಮ್ಮ ನಿರ್ಣಯದಲ್ಲಿ ಎಲ್ಲಿಯೂ ಆರೆಸ್ಸೆಸ್ ಹೆಸರನ್ನು ಪ್ರಸ್ತಾಪಿಸದೇ ತಮಿಳುನಾಡು ಮಾದರಿಯಲ್ಲಿ ಎಲ್ಲಾ ಖಾಸಗಿ ಸಂಘ ಸಂಸ್ಥೆಗಳ ಅನುಮತಿರಹಿತ ಚಟುವಟಿಕೆಗಳನ್ನು ನಿಷೇಧಿಸಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಯಂತ್ರಿಸುವ ತಮ್ಮ ಉದ್ದೇಶವನ್ನು ಜಾರಿಗೆ ತಂದರು.
ಈಗ ನೂರು ವರ್ಷ ಪೂರೈಸಿ ಸಂಭ್ರಮಿಸುತ್ತಿರುವ ಆರೆಸ್ಸೆಸ್ ನವರಿಗೆ ರಾಜ್ಯ ಸರಕಾರದ ಈ ನಿರ್ಣಯ ನುಂಗಲಾರದ ತುತ್ತಾಯಿತು. ಬಂದ ಬಿಜೆಪಿಗರನ್ನು ಮುಂದೆ ಬಿಟ್ಟು ಸರಕಾರದ ಮೇಲೆ ಒತ್ತಡ ಹೇರುವ ಅದರ ಕಾರ್ಯತಂತ್ರ ವಿಫಲವಾಗಿತ್ತು. ಮಾಧ್ಯಮಗಳ ಕ್ಯಾಮರಾ ಕಂಡಲ್ಲೆಲ್ಲಾ ಬೆಂಕಿ ಕಾರಿಕೊಳ್ಳುತ್ತಿದ್ದ ಬಿಜೆಪಿಯ ನಾಯಕರುಗಳ ಬಾಯಲ್ಲಿ ಮೈಕು ಸಿಕ್ಕಿಕೊಂಡಂತಾಗಿತ್ತು. ಇನ್ನು ಬಿಜೆಪಿಗರ ಮೌತ್ ಪೀಸ್ ಆಗಿರುವ ಮಡಿಲ ಮಾಧ್ಯಮಗಳ ಗೋಳಂತೂ ಕೇಳುವಂತಿಲ್ಲ.
ಈ ಆರೆಸ್ಸೆಸ್ ಎನ್ನುವ ವಿಷ ವೃಕ್ಷ ರಾಜ್ಯಾದ್ಯಂತ ಮಕ್ಕಳ ಹಾಗೂ ಯುವಕರ ಮನದಲ್ಲಿ ಬೇರು ಬಿಡಬಹುದಾದ ಸಾಧ್ಯತೆಗೆ ಬ್ರೇಕ್ ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಶಾಲೆ ಕಾಲೇಜುಗಳಲ್ಲಿ ಯೋಗ ಕಲಿಸ್ತೇವೆ, ವ್ಯಕ್ತಿತ್ವ ವಿಕಸನದ ಪಾಠ ಮಾಡ್ತೇವೆ, ರಾಷ್ಟ್ರಭಕ್ತಿ ಕುರಿತು ಜಾಗೃತಿ ಮಾಡ್ತೇವೆ ಎಂದೆಲ್ಲಾ ಹೇಳುತ್ತಾ ಆರೆಸ್ಸೆಸ್ ಶಾಖಾ ಬೈಠಕ್ ಗಳನ್ನು ಮಾಡುತ್ತಿದ್ದ ಆರೆಸ್ಸೆಸ್ ಸಂಘಕ್ಕೆ ಇನ್ನು ಮೇಲೆ ಸಲೀಸಾಗಿ ಅನುಮತಿ ಇಲ್ಲದೇ ಎಲ್ಲೆಂದರಲ್ಲಿ ಸಂಘಿ ಚಟುವಟಿಕೆಗಳನ್ನು ಮಾಡಲಾಗದು ಹಾಗೂ ಮಾಡಲು ಬಿಡಬಾರದು. ಯಾಕೆಂದರೆ ದೇಶಭಕ್ತಿಯ ಹೆಸರಲ್ಲಿ ದೊನ್ನೆ ಹಿಡಿದು ಯೋಗ ಹಾಡು ಕರಾಟೆ ಹೇಳಿಕೊಡುವ ಜೊತೆಗೆ ಅನ್ಯ ಧರ್ಮದ್ವೇಷವನ್ನು ಯುವಪೀಳಿಗೆಯಲ್ಲಿ ಬಿತ್ತಿ ಮತಾಂಧತೆಯನ್ನು ಬೆಳೆಯುವ ಸಂಘದ ಉದ್ದೇಶವೇ ಸರ್ವ ಜನಾಂಗದ ಶಾಂತಿಯ ತೋಟವನ್ನು ಹಾಳುಮಾಡುವಂತಹುದು. ಮನುಶಾಸ್ತ್ರ ಆಧಾರಿತ ವೈದಿಕಶಾಹಿ ಸಿದ್ಧಾಂತವನ್ನು ರಾಷ್ಟ್ರೀಯವಾದದ ಹೆಸರಲ್ಲಿ ಮರುಸ್ಥಾಪಿಸುವ ಗುರಿಯನ್ನು ಸಾಧಿಸಲು ಯುವಜನಾಂಗದ ಮೆದುಳು ಮಾರ್ಪಡಿಸುವ ಕಾಯಕವನ್ನು ಆರೆಸ್ಸೆಸ್ ಮಾಡುತ್ತಲೇ ಬಂದಿದೆ. ಸಂವಿಧಾನದ ವಿರುದ್ಧ ಸನಾತನಿ ಸರ್ವಾಧಿಕಾರಿ ಯುದ್ಧಕ್ಕೆ ಸೈನಿಕರನ್ನು ತಯಾರಿಸುವ ಕೆಲಸವನ್ನು ಸಂಘದ ಶಾಖೆಗಳಲ್ಲಿ, ಬೈಠಕ್ ಗಳಲ್ಲಿ ಮಾಡಲಾಗುತ್ತಿದೆ.
ಕೇವಲ ಸರಕಾರದ ಸ್ಥಳಗಳಲ್ಲಿ ನೋಂದಣಿ ಇಲ್ಲದೆ ದೇಶಭಕ್ತಿಯ ಹೆಸರಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಈ ಸನಾತನಿ ಆರೆಸ್ಸೆಸ್ ಶಾಖಾ ಪ್ರಯೋಗ ಇಷ್ಟಕ್ಕೆ ನಿಲ್ಲಿಸಲಾಗದು. ಅವರು ಬೇರೆ ಜಾಗಗಳನ್ನು ಹುಡುಕಿಕೊಳ್ಳುತ್ತಾರೆ ಇಲ್ಲವೇ ಸಂಘ ಪರಿವಾರದ ಶಾಲಾ ಕಾಲೇಜು ದೇವಸ್ಥಾನಗಳ ಆವರಣಗಳಲ್ಲಿ ತಮ್ಮ ಸಂಘಿ ಚಟುವಟಿಕೆಗಳನ್ನು ಮುಂದುವರೆಸುತ್ತಾರೆ. ಈ ವಿಷವೃಕ್ಷದ ಒಂದು ಟೊಂಗೆಯನ್ನು ನಿರ್ಬಂಧಿಸಿದರೆ ನೂರಾರು ಟೊಂಗೆ ಟಿಸಿಲುಗಳು ಹುಟ್ಟಿಕೊಳ್ಳುತ್ತವೆ. ಅದನ್ನು ನಿರ್ಬಂಧಿಸಬೇಕೆಂದರೆ ಸನಾತನಿಗಳ ದಾರಿ ಮತ್ತು ಗುರಿಯನ್ನು ಜನರ ಮುಂದೆ ಸಶಕ್ತವಾಗಿ ಪ್ರಸ್ತುತ ಪಡಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ವೈದಿಕಶಾಹಿ ಹುನ್ನಾರ ನಾಶವಾಗಲೇಬೇಕೆಂದು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ದೇವನೂರು ಮಹದೇವರವರು ಬರೆದ “ಆರೆಸ್ಸೆಸ್ ಆಳ ಅಗಲ” ಪುಸ್ತಕವನ್ನು ಕೋಟ್ಯಾಂತರ ಸಂಖ್ಯೆಯಲ್ಲಿ ಮುದ್ರಿಸಿ ಪ್ರತಿ ಮನೆಮನೆಗೂ ಹಂಚಬೇಕಿದೆ. ಆ ಪುಸ್ತಕದ ಕುರಿತು ಶಾಲೆ ಕಾಲೇಜುಗಳಲ್ಲಿ ಚರ್ಚೆ ಸಂವಾದ ಏರ್ಪಡಿಸಬೇಕಿದೆ. ಯಾರೂ ತಮ್ಮ ಮಕ್ಕಳನ್ನು ಸಂಘದ ಶಾಖೆಗಳಿಗೆ ಸೇರಿಸದಂತೆ ಜಾಗೃತಿ ಮೂಡಿಸಬೇಕಿದೆ. “ದೇಶಪ್ರೇಮ ಅಂದರೆ ಅನ್ಯ ಧರ್ಮದ್ವೇಷವಲ್ಲ, ಮತಾಂಧತೆಯಂತೂ ಮೊದಲೇ ಅಲ್ಲ, ಎಲ್ಲಾ ಜಾತಿ ಕುಲ ಮತ ಧರ್ಮದವರೂ ಸಹಮತದಿಂದ ಸಹಬಾಳ್ವೆ ಮಾಡಿಕೊಂಡು ಹೋಗುವುದೇ ದೇಶಪ್ರೇಮ” ಎನ್ನುವುದನ್ನು ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಅಳವಡಿಸಬೇಕಿದೆ. ಆಗ ಮಾತ್ರ ಈ ಸನಾತನ ವೈದಿಕಶಾಹಿ ವಿಷವೃಕ್ಷದ ಬೆಳವಣಿಗೆಯನ್ನು ನಿರ್ಬಂಧಿಸಲು ಸಾಧ್ಯ. ಈ ದೇಶದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಸಾಧ್ಯ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಅದೊಂದ್ ದೊಡ್ಡ ಕಥೆ, ಆತ್ಮಕಥೆ ಸರಣಿ- 8 |ಅಪ್ಪನ ಗೀತಾ ಪಠಣ