ಬಿಜೆಪಿಯ 40% ಹಗರಣಕ್ಕೆ ಕ್ಲೀನ್ ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

Most read

ಬೆಂಗಳೂರು: ಲೋಕಾಯುಕ್ತ ಕೇವಲ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಆಟದ ಮೈದಾನಕ್ಕೆ ಸಂಬಂಧಿಸಿದ ಕೇವಲ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ಮಾತ್ರ ಮಾಡಿದೆ. ಹೀಗಾಗಿ ಇದು ಬಿಜೆಪಿಯ 40% ಹಗರಣಕ್ಕೆ ಸಿಕ್ಕಿರುವ ಕ್ಲೀನ್ ಚಿಟ್ ಅಲ್ಲ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ದಿ. 30/08/2022ರಂದು ND TV ಗೆ ನೀಡಿದ ಹೇಳಿಕೆಯಲ್ಲಿ ದಿವಂಗತ ಆರ್. ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು PWD, ಆರೋಗ್ಯ, ವಸತಿ, ಉನ್ನತ ಶಿಕ್ಷಣ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳಲ್ಲಿನ ಕಮಿಷನ್ ಹಾಗೂ ಕೋಲಾರ ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರಾದ ಮುನಿರತ್ನರವರ ವಿರುದ್ಧ ಲಂಚದ ಆರೋಪ ಹಾಗೂ ಕರ್ನಾಟಕ ಖಾಸಗಿ ಶಾಲಾ ಮಾಲೀಕರ ಎರಡು ಸಂಘಟನೆಗಳ ಲಂಚದ ಆರೋಪ, ಅಲ್ಲದೆ ಪಾವಗಡ ಆಸ್ಪತ್ರೆ ನಿರ್ಮಾಣ ಕಾಮಗಾರಿಯಲ್ಲಿ ಲಂಚದ ಅಕ್ರಮದ ಬಗ್ಗೆ ಆರೋಪಿಸಿದ್ದರು. ಆದರೆ ಹಿಂದಿನ ಬಿಜೆಪಿ ಸರ್ಕಾರ ತನಿಖೆಗೆ ವಹಿಸಿದ್ದು ಕೇವಲ ಬಿಬಿಎಂಪಿ ಪೂರ್ವ ವಲಯಕ್ಕೆ ಸಂಬಂಧಿಸಿದ ಆಟದ ಮೈದಾನ ಕಾಮಗಾರಿಯ ಒಂದು ಆರೋಪವನ್ನು ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಾಯುಕ್ತ ತನಿಖೆಗೆ ವಹಿಸಿದ್ದು 27/ 03/ 2023 ರಂದು,. ಅಂದು ಬಿಜೆಪಿ ಸರ್ಕಾರವಿತ್ತು. ಈ ಸಂದರ್ಭದಲ್ಲಿ NDTV ಯಲ್ಲಿ ನೀಡಿದ ಹೇಳಿಕೆಯೊಂದನ್ನು ಆಧರಿಸಿ ತನಿಖೆಗೆ ವಹಿಸಿದ ಬಿಜೆಪಿ ಸರ್ಕಾರ ಇನ್ನುಳಿದ ಆರೋಪಗಳನ್ನು ತನಿಖೆಗೆ ವಹಿಸಲಿಲ್ಲ ಏಕೆ? ಇದಲ್ಲದೆ 40% ಕಮಿಷನ್ ಗೆ ಸಂಬಂಧಿಸಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ ಏಕೆ ತನಿಖೆಗೆ ವಹಿಸಲು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಲೋಕಾಯುಕ್ತ ವರದಿಯಲ್ಲಿ ಅಂಬಿಕಾಪತಿಯವರು ಮರಣ ಹೊಂದಿರುವ ಕಾರಣ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ಅಂಬಿಕಾಪತಿಯವರು ಮಾಡಿರುವ ಆಪಾಧನೆಯು ಮೇಲ್ನೋಟಕ್ಕೆ ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ತನಿಖಾಧಿಕಾರಿಯು ತನಿಖೆಯ ವಿಚಾರವಾಗಿ ಅಂಬಿಕಾಪತಿ ಅವರ ಮನೆಗೆ ತೆರಳಿದಾಗ ಅಂಬಿಕಾಪತಿ ಮರಣ ಹೊಂದಿರುತ್ತಾರೆ, ಅವರ ಪುತ್ರನಿಗೆ ತಂದೆ ಮಾಡಿದ್ದ ಆರೋಪದ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ತನಿಖಾಧಿಕಾರಿ ಅಂಬಿಕಾಪತಿಯವರ ಮರಣ ಪ್ರಮಾಣಪತ್ರವನ್ನು ಪಡೆದು ಹಿಂತಿರುಗುತ್ತಾರೆ. ಕೇವಲ ಬಿಬಿಎಂಪಿ ವ್ಯಾಪ್ತಿಯ ಆಟದ ಮೈದಾನಕ್ಕೆ ಸಂಬಂಧಿಸಿದ ಕೇವಲ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಮಾಡಿರುವ ತನಿಖೆ ಇದಾಗಿದ್ದು, ಇದು ಬಿಜೆಪಿಯ 40% ಹಗರಣಕ್ಕೆ ಸಿಕ್ಕಿರುವ ಕ್ಲೀನ್ ಚಿಟ್ ಅಲ್ಲ, ಅಥವಾ ಅಕ್ರಮದ ನಿರಾಕರಣೆಯೂ ಅಲ್ಲ, ಆರೋಪ ಮಾಡಿದವರು ಅಕಾಲಿಕ ಮರಣದಿಂದಾಗಿ ಸಾಕ್ಷ್ಯಾಧಾರಗಳ ಕೊರತೆ ಉಂಟಾದ್ದರಿಂದ ಆರೋಪವನ್ನು ತನಿಖೆಯಲ್ಲಿ ಸಾಬೀತು ಮಾಡಲು ಸಾಧ್ಯವಾಗಿರುವುದಿಲ್ಲ, ಗುತ್ತಿಗೆದಾರರು ಮಾಡಿದ್ದ ಇತರ ಗಂಭೀರ ಆರೋಪಗಳ ಬಗ್ಗೆ ತನಿಖೆ ನಡೆಸಲು ಬಿಜೆಪಿ ಸರ್ಕಾರ ಮುಂದಾಗಲೇ ಇಲ್ಲ. ಇದು ಬಿಜೆಪಿಯವರ ಜಾಣ ಕುರುಡುತನವಲ್ಲವೇ ಎಂದೂ ಕೇಳಿದ್ದಾರೆ.

ವಿವಿಧ ಇಲಾಖೆಗಳಲ್ಲಿನ 40% ಕಮಿಷನ್ ಆರೋಪದ ಕುರಿತ ಸಮಗ್ರ ತನಿಖೆಗಾಗಿ ಜಸ್ಟಿಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗಿದ್ದು ಪ್ರಸ್ತುತ ತನಿಖೆ ನಡೆಯುತ್ತಿದೆ, ಈ ಆಯೋಗವು ನೀಡುವ ವರದಿಯ ಆಧಾರದ ಮೇಲೆ ” ಬಿಜೆಪಿ ಸರ್ಕಾರದ 40% ಕಮಿಷನ್” ಆರೋಪದ ಕುರಿತ ಸತ್ಯಾಸತ್ಯತೆ ಹೊರಬರಲಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ PSI ಹಗರಣ, ಗಂಗಾಕಲ್ಯಾಣ ಹಗರಣ, KKRDB ಹಗರಣ, ಕೋವಿಡ್ ಹಗರಣ ಹಾಗೂ ಇನ್ನಿತರ ಹಗರಣಗಳು ನಡೆದಿದ್ದರೂ ಅವುಗಳನ್ನು ಬಿಜೆಪಿ ನಿರಾಕರಿಸುತ್ತಲೇ ಬಂದಿತ್ತು. ಆದರೆ ಈಗ ಅವೆಲ್ಲಾ ಹಗರಣಗಳು ನಡೆದಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗುತ್ತಿವೆ ಎಂದಿದ್ದಾರೆ.

ಉದಾಹರಣೆಗೆ 545 PSI ಹಗರಣ ನಡೆದೇ ಇಲ್ಲವೆಂದು ವಾದಿಸುತ್ತಿದ್ದ ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ. ನಮ್ಮ ಸರ್ಕಾರವು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಆಯೋಗದ ಮಧ್ಯಂತರ ವರದಿಯಲ್ಲಿ ಕೋವಿಡ್ ಅವಧಿಯಲ್ಲಿ ನಡೆದಿದ್ದ ಅಕ್ರಮ ಸಾಬೀತಾಗಿದ್ದು, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ರಾಮುಲುರವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಸೆಕ್ಷನ್ 7 ಹಾಗೂ ಸೆಕ್ಷನ್ 11ರ ಅಡಿ ವಿಚಾರಣೆ ನಡೆಸಬಹುದೆಂದು ವರದಿ ಸಲ್ಲಿಸಿರುತ್ತಾರೆ. KKRDB ಯಲ್ಲಿಯೂ ಸಹ ಹಗರಣ ನಡೆದೇ ಇಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು, ಆದರೆ ಈಗ ನಿವೃತ್ತ IAS ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿನ ಅಕ್ರಮವನ್ನು ನಿರಾಕರಿಸಲಾಗಿತ್ತು, ಆದರೆ ಇಲಾಖಾ ತನಿಖೆಯಲ್ಲಿ ಆರೋಪ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಣೆ ನೀಡಿದ್ದಾರೆ.

More articles

Latest article