ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅಧಿಕೃತ ಒಪ್ಪಿಗೆ ಕೊಡಲ್ಲ. ಆದರೆ ಅವರು ಯಾರಿಗೂ ತೊಂದರೆ ಮಾಡದೇ ಪಾದಯಾತ್ರೆ ಮಾಡುವುದಾದರೆ ಮಾಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಮುಡಾದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಪಾದಯಾತ್ರೆ ನಡೆಸಲು ನಿರ್ಧರಿಸಿವೆ.
ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ನಮ್ಮ ಪಾದಯಾತ್ರೆಗೂ ಅವರು ಅನುಮತಿ ಕೊಟ್ಟಿರಲಿಲ್ಲ. ಆದರೂ ನಾವೂ ಮಾಡಿದೆವು, ಹಾಗೇ ಅವರೂ ಮಾಡಲಿ. ಆದರೆ ಸರ್ಕಾರದ ಅನುಮತಿ ಇರಲ್ಲ. ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಸರ್ಕಾರ ಅನುಮತಿ ಕೊಡಲ್ಲ. ಅವರು ಪಾದಯಾತ್ರೆ ಮಾಡಿದರೆ ಮಾಡಲಿ. ಆದರೆ ಅಧಿಕೃತವಾಗಿ ಅದಕ್ಕೆ ನಮ್ಮ ಪೊಲೀಸ್ ಇಲಾಖೆ ಅನುಮತಿ ಕೊಡಲ್ಲ. ಪಾದಯಾತ್ರೆಗೆ ತಡೆ ಹಾಕಲ್ಲ. ಅನುಮತಿ ಕೊಟ್ಟರೆ ಕಾನೂನು ಸಮಸ್ಯೆಗಳಾಗಲಿವೆ. ಆದರೆ ಅವರು ಜನರಿಗೆ ತೊಂದರೆ ಕೊಡದೇ ಪಾದಯಾತ್ರೆ ನಡೆಸಲಿ. ಪಾದಯಾತ್ರೆಗೆ ಏನು ವ್ಯವಸ್ಥೆ ಬೇಕೋ ಮಾಡಿಕೊಡ್ತೇವೆ ಎಂದರು.