ಸೂತಕದ ಸಮಯದಲಿ ಸಂಘಿಗಳ ರಾಜಕಾರಣ

Most read


ಯಾವುದೋ ತಲೆತಿರುಕ ವ್ಯಕ್ತಿ ಪ್ರೀತಿಯಲ್ಲಿ ಹುಚ್ಚನಾಗಿ ಕೊಚ್ಚಿ ಕೊಲೆಮಾಡಿದ್ದಕ್ಕೂ ಆತ ಹುಟ್ಟಿದ ಸಮುದಾಯವನ್ನೇ ಅಪರಾಧಿಯನ್ನಾಗಿಸುವ ಹುನ್ನಾರಕ್ಕೂ ಎಲ್ಲಿಯ ಸಂಬಂಧ? ಏನೂ ಇಲ್ಲದೇ ಇದ್ದರೂ ಸಂಬಂಧಗಳ ಕಲ್ಪಿಸುವ ಕಲೆ ಬಿಜೆಪಿಗರಿಗೆ ಸಿದ್ಧಿಸಿದೆ. ಹತ್ಯೆಯಿಂದಾಗಿ ಜನರಲ್ಲಿ ಹುಟ್ಟಿದ ಆಕ್ರೋಶವನ್ನು ಮುಸ್ಲಿಂ ಸಮಾಜದ ಮೇಲೆ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ  ತಿರುಗಿಸಿ ಹೇಗೆ ಹಿಂದೂ ಮತಗಳ ಲಾಭ ಪಡೆಯಬೇಕೆಂಬ ಕೌಶಲ ಸಂಘಿಗಳ ಅಂಗಾಂಗಗಳಲ್ಲಿ ಬೆರೆತು ಹೋಗಿದೆ.
– ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ರಾಮನವಮಿಯ ಮಾರನೆಯ ದಿನ ಕರುನಾಡಲ್ಲಿ ಎರಡು ದುರಂತ ಘಟನೆಗಳು. ಹಾಡುಹಗಲೇ ಇಬ್ಬರು ಹರೆಯದ ಹೆಣ್ಣುಮಕ್ಕಳ ಬರ್ಭರ ಹತ್ಯೆಗಳು. ಎರಡೂ ದುರಂತಗಳಿಗೂ  ಕಾರಣ ಒಂದೇ ಅದು ಪ್ರೇಮ ನಿರಾಕರಣೆ. ಒಂದು ಉತ್ತರ ಕರ್ನಾಟಕದ ಹುಬ್ಬಳ್ಳಿಯ ಕಾಲೇಜಿನಲ್ಲಿ. ಇನ್ನೊಂದು ಬೆಂಗಳೂರಿನ ಸಾರಕ್ಕಿಯ ಉದ್ಯಾನವನದಲ್ಲಿ. 

ಮೊದಲ ದುರಂತ ಕತೆ-ಆ ಹೆಣ್ಮಗಳು ನೇಹಾ ಹಿರೇಮಠ. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿದ್ದಳು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೋರೇಟರ್ ಮಗಳು. ಆತ ಫಯಾಜ್. ಅದೇ ಕಾಲೇಜಿನ ಅದೇ ವಿಭಾಗದಲ್ಲಿ ಓದುತ್ತಿದ್ದವ. ನೇಹಾಳ ಪ್ರೀತಿಯಲಿ ಹುಚ್ಚನಾಗಿದ್ದ. ಈ ಪ್ರೀತಿ ಏಕಮುಖವೋ ದ್ವಿಮುಖವೋ ಗೊತ್ತಿಲ್ಲ. ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಎಪ್ರಿಲ್ 18 ರಂದು ಸಂಜೆ ಕಾಲೇಜ್ ಕ್ಯಾಂಪಸ್‌ ನಲ್ಲಿ ನೇಹಾಳನ್ನು ಚೂರಿಯಿಂದ ಚುಚ್ಚಿ ಕೊಲೆಮಾಡಿ ತನ್ನ ವಿಕೃತಿಯನ್ನು ಮೆರೆದ. ಘಟನೆ ನಡೆದಾಗ ಹತ್ತಿರದಲ್ಲಿ ಹಲವರು ಇದ್ದರಾದರೂ ಯಾರೂ ಆಕೆಯ ರಕ್ಷಣೆಗೆ ಹೋಗಲಿಲ್ಲ. ಗುಬ್ಬಚ್ಚಿಯಂತಿದ್ದ ಹುಡುಗಿ ರಣಹದ್ದಿನ ಆಕ್ರಮಣಕ್ಕೆ ಹೆಣವಾಗಿ ಹೋದಳು.

ಎರಡನೆಯದು – ಇತ್ತ ಬೆಂಗಳೂರಿನ ಸಾರಕ್ಕಿ ಪಾರ್ಕಲ್ಲಿ  ಮಾತಾಡಬೇಕಿದೆ ಬಾ ಎಂದು ಕರೆದ ದುಷ್ಕರ್ಮಿ ಸುರೇಶ್ ಎಂಬಾತ ಅನುಷಾ ಎಂಬ 25 ವರ್ಷದ ಹೆಣ್ಮಗಳನ್ನು ಚಾಕುವಿನಿಂದ ಐದಾರು ಬಾರಿ  ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ. ಇತ್ತೀಚೆಗೆ ಆತನ ಜೊತೆ ಅನುಷಾ ಅಂತರವನ್ನು ಕಾಪಾಡಿಕೊಂಡಿದ್ದಕ್ಕೆ ಹುಚ್ಚನಂತಾಗಿದ್ದ ಸುರೇಶ್ ಕೊಲೆ ಮಾಡಿದ್ದ. ಆದರೆ ಮಗಳನ್ನು ಹಿಂಬಾಲಿಸಿ ಬಂದಿದ್ದ ಆಕೆಯ ತಾಯಿ ಮಗಳನ್ನು ರಕ್ಷಿಸಲು ಇಟ್ಟಿಗೆಯಿಂದ ಕೊಲೆಗಾರನ ತಲೆಗೆ ಹೊಡೆದು ಸಾಯಿಸಿದಳು. ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ಅನುಷಾ ಶವವಾಗಿದ್ದಳು.

ಅತ್ತ ಹುಬ್ಬಳ್ಳಿಯಲ್ಲಿ ಕೋಲಾಹಲವೇ ನಡೆಯಿತು. ಸುದ್ದಿ ಗೊತ್ತಾಗುತ್ತಿದ್ದಂತೆ ಅದೆಲ್ಲಿದ್ದವೋ ಸಂಘ ಪರಿವಾರದ ಅಂಗಗಳು  ಜಾಗೃತವಾದವು. ಬಿಜೆಪಿಗರ ದಂಡು ಕೇಸರಿ ಶಾಲುಗಳನ್ನು ಹಾಕಿಕೊಂಡೇ ಬಂದಿದ್ದವು. ಎಬಿವಿಪಿ ಎನ್ನುವ ಆರೆಸ್ಸೆಸ್ ವಿದ್ಯಾರ್ಥಿ ಅಂಗದ ವಿದ್ಯಾರ್ಥಿಗಳು ಧರಣಿ ಕೂತರು. ಎಲ್ಲಾ ಕಾಲೇಜುಗಳನ್ನು ಬಂದ್ ಮಾಡಿಸಲಾಯ್ತು. ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್..  ಮುಂತಾದ ಸಂಘದ  ಮಿಲಿಟೆಂಟ್ ವಿಭಾಗದವರು ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಕೇಸರಿ ಶಾಲುಗಳ ಸಮೇತ ಭಾಗವಹಿಸಿದರು. ಧಾರವಾಡ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಓಡೋಡಿ ಬಂದರು. ಬಿಜೆಪಿಯ ನಾಯಕರುಗಳ ದಂಡೇ ನೆರೆದಿತ್ತು.

ನೇಹಾ ಮತ್ತು ಫಯಾಜ್

ಈ ಎಲ್ಲಾ ಕೇಸರಿಗರ ಆಕ್ರೋಶ ಕಾಂಗ್ರೆಸ್ ಸರಕಾರದತ್ತ ತಿರುಗಿತು. ಕಾಂಗ್ರೆಸ್ ವಿರುದ್ಧ ಧಿಕ್ಕಾರಗಳು ಮೊಳಗಿದವು. ಬಿಜೆಪಿ ಬ್ಯಾನರ್ ಹಿಡಿದು ಬಂದ ಕೇಸರಿ ಶಾಲಿನ ಕಾರ್ಯಕರ್ತರ ಟಾರ್ಗೆಟ್ ಕಾಂಗ್ರೆಸ್ ಸರಕಾರವೇ ಆಗಿತ್ತು. ಸೂತಕದ ವಾತಾವರಣ ರಾಜಕೀಕರಣಗೊಂಡಿತ್ತು. ಪ್ರೇಮ ವೈಫಲ್ಯವೇ ಈ ಕೊಲೆಗೆ ಕಾರಣವೆಂದು ಗೃಹ ಸಚಿವ ಪರಮೇಶ್ವರರು ಹೇಳಿದರು. ವೈಯಕ್ತಿಕ ವಿಚಾರಕ್ಕೆ ಆದ ಹತ್ಯೆ ಎಂದು ಸಿಎಂ.ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟರು. ಇದರಿಂದ ಇನ್ನಷ್ಟು ಕೆರಳಿದ ಕೇಸರಿಗರು ಸರಕಾರದ ಮೇಲೆ ಮುಗಿ ಬಿದ್ದರು. ಕುಟುಂಬಸ್ಥರ ರೋಧನೆ ಹಾಗೂ ಸಂಘಿಗಳ ಪ್ರತಿಭಟನೆ ನಡುವೆಯೇ ನೇಹಾಳ ಅಂತ್ಯಕ್ರಿಯೆ ನಡೆಯಿತಾದರೂ ಸರಕಾರದ ಮೇಲಿನ ಕೇಸರಿ ಕಲಿಗಳ ಆಕ್ರೋಶ ಕಡಿಮೆಯಾಗಲಿಲ್ಲ. 

ಅತ್ತ ಸಾರಕ್ಕಿ ಪಾರ್ಕಲ್ಲಿ ಕೊಲೆಯಾದ ಅನುಷಾಳ ಕುರಿತು ಈ ಯಾವ ಸಂಘಿಗಳೂ  ಮಾತಾಡಲಿಲ್ಲ. ಇತ್ತ ನೇಹಾಳ ಸಾವಿನ ನಂತರ ಹುಬ್ಬಳ್ಳಿ ಹಾಗೂ ಪಕ್ಕದ ಬೆಳಗಾಂ ಪ್ರಕ್ಷುಬ್ಧವಾದವು. ನೇಹಾಳ ಹಾಗೆ ಅನುಷಾಳೂ ಹೆಣ್ಣಲ್ಲವೇ?, ಅವಳದೂ ಕೊಲೆಯಲ್ಲವೇ?. ಆದರೆ ಯಾಕೆ ನೇಹಾ ಹತ್ಯೆಯತ್ತ ಮಾತ್ರ ಈ ಸಂಘಿಗಳ ಚಿತ್ತ ಕೇಂದ್ರೀಕರಣವಾಗಿತ್ತು. ಯಾಕೆಂದರೆ ಅನುಷಾಳನ್ನು ಕೊಂದವನು ಹಿಂದೂ ವ್ಯಕ್ತಿಯಾಗಿದ್ದ. ಆದರೆ ನೇಹಾಳನ್ನು ಹತ್ಯೆ ಮಾಡಿದವನು ಮುಸ್ಲಿಂ ಆಗಿದ್ದ. ಯಾವುದೇ ಅಪರಾಧದಲ್ಲಿ ಮುಸ್ಲಿಂ ಹೆಸರು ಇದ್ದರೆ ಸಾಕು ಅಲ್ಲಿ ಕೇಸರಿಗರ ಧರ್ಮದ್ವೇಷ ಜಾಗೃತವಾಗುತ್ತದೆ. ಕೋಮುವಾದಿಗಳಿಂದ ಕೋಮು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುತ್ತದೆ. ಇಡೀ ಮುಸ್ಲಿಂ ಸಮುದಾಯದ ಮೇಲೆ ಆಕ್ರೋಶ ವ್ಯಕ್ತವಾಗುತ್ತದೆ. ಸರಕಾರದ  ‘ಮುಸ್ಲಿಂ ತುಷ್ಟೀಕರಣದಿಂದ ಪ್ರೇರಿತರಾದ ಇಸ್ಲಾಮಿಗರು ಇಂತಹ ದುಸ್ಸಾಹಸಕ್ಕೆ ಮುಂದಾಗುತ್ತಾರೆ ಎಂದು ಕಾಂಗ್ರೆಸ್ ಮೇಲೆ ಆರೋಪಿಸಲಾಗುತ್ತದೆ. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಇಂತಹ ಹಲವಾರು ಬರ್ಬರ ಘಟನೆಗಳನ್ನು ಮರೆತು ಬಿಡುತ್ತಾರೆ.

ಹೆಣವೊಂದು ಬಿದ್ದರೆ, ಅದರ ಹಿಂದೆ ಮುಸ್ಲಿಂ ವ್ಯಕ್ತಿಗಳ ಕೈವಾಡ ಇದ್ದರೆ ಈ ಸಂಘ ಪರಿವಾರಿಗರು ರಣಹದ್ದುಗಳಂತೆ ಹಾರಿ ಬರುತ್ತಾರೆ. ಕೋಮುದ್ವೇಷವನ್ನು ಹರಡುತ್ತಾರೆ. ಇದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಈಗ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಇಂತಹ ಸುವರ್ಣಾವಕಾಶವನ್ನು ಕೈಬಿಟ್ಟು ಸುಮ್ಮನಿರಲು ಈ ಕೋಮುಪಡೆಗೆ ಸಾಧ್ಯವಾ? ಶವದ ಮೇಲೆ ರಾಜಕೀಯ ಶುರುವಾಯ್ತು. ಅದಕ್ಕೆ ಲವ್ ಜಿಹಾದ್ ಬಣ್ಣ ಹಚ್ಚಲಾಯ್ತು. ಕಾಂಗ್ರೆಸ್ಸೇ ಇದಕ್ಕೆಲ್ಲಾ ಕಾರಣವೆಂದು ಬೀದಿಯಲ್ಲಿ ಗುಂಪು ಕಟ್ಟಿಕೊಂಡು ನಿಂತು ಮಾಧ್ಯಮಗಳ ಮುಂದೆ ದ್ವೇಷ ಭಾಷಣಗಳನ್ನು ಮಾಡಲು ಆರಂಭವಾಯ್ತು. ಅದಕ್ಕೆ ಗೋದಿ ಮಾಧ್ಯಮಗಳು ಇನ್ನಷ್ಟು ಒಗ್ಗರಣೆ ಹಾಕಿ ಯಥಾಪ್ರಕಾರ ಜನರನ್ನು ಉದ್ವೇಗಕ್ಕೆ ಒಳಪಡಿಸುವಲ್ಲಿ ತಮ್ಮ ಕೊಡುಗೆ ಕೊಡುವಲ್ಲಿ ನಿರತವಾದವು.

ನೇಹಾ ಕೊಲೆಯಲ್ಲಿ ಸರಕಾರದ ವಿರುದ್ಧ ಎಬಿವಿಪಿ ಯವರ ಪ್ರತಿಭಟನೆ

“ಕೊಲೆಪಾತಕನನ್ನು ಕೂಡಲೇ ಗಲ್ಲಿಗೆ ಹಾಕಬೇಕು, ಎನ್ ಕೌಂಟರ್ ಮಾಡಿ ಸಾಯಿಸಬೇಕು” ಎನ್ನುವಂತಹ ಆಕ್ರೋಶದ ಮಾತುಗಳು ಮಾರ್ದನಿಸುತ್ತಿವೆ. ಯಾರೇ ಎಂತಹ ಘನಘೋರ ಅಪರಾಧ ಮಾಡಿದರೂ ಅದನ್ನು ವಿಚಾರಣೆ ಮಾಡಿ ಶಿಕ್ಷೆ ಕೊಡಲು ನ್ಯಾಯಾಂಗ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎಂಬುದೂ ಈ ಉನ್ಮಾದಿತರಿಗೆ ಗೊತ್ತಾಗುವುದಿಲ್ಲ. ಹೋಗಲಿ ಈ ಮಾಧ್ಯಮಗಳಿಗಾದರೂ ಕಾನೂನಿನ ಅರಿವು ಇರಬೇಕಲ್ಲವೇ. ಅವು ಕೂಡಾ ಅದೇ ಧಾಟಿಯಲ್ಲಿ ಪ್ರತಿಕಾರದ ಭಾಷೆಯಲ್ಲೇ ಮಾತಾಡುತ್ತಿವೆ. ಸಾವಿನ ಮನೆಯ ಸೂತಕದ ನೆಪದಲ್ಲಿ ಬಿಜೆಪಿ ಮಾಡುತ್ತಿರುವ ಮತಬೇಟೆಯ ಅಭಿಯಾನಕ್ಕೆ ಮಾಧ್ಯಮಗಳೂ ಪೂರಕವಾಗಿ ಸ್ಪಂದಿಸುತ್ತಿವೆ. ಲವ್ ಜಿಹಾದ್ ಕಹಾನಿಯನ್ನು ಕಟ್ಟಿ ಹಿಂದೂಗಳನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುತ್ತಿವೆ.

ಹೋಗಲಿ ಈ ಸಂಘಿಗಳ ಆಕ್ರೋಶ ಇರುವುದು ಕೊಲೆ ಮಾಡಿದ ವ್ಯಕ್ತಿಯ ಮೇಲೋ ಅಥವಾ ಆತನ ಸಮುದಾಯದ ಮೇಲೋ? ಬಿಜೆಪಿಗರ ಗುರಿ ಇರುವುದು ಕೊಲೆಪಾತಕನಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸುವುದೋ ಇಲ್ಲಾ ಕಾಂಗ್ರೆಸ್ ಸರಕಾರವನ್ನು ಖಳನಾಯಕನೆಂಬಂತೆ ಬಿಂಬಿಸಿ ಮತಬೇಟೆಯಾಡುವುದರಲ್ಲೋ? ಕೊಲೆಯಂತಹ ದುಷ್ಕೃತ್ಯವನ್ನು ಯಾವ ಜಾತಿ ಧರ್ಮದ ವ್ಯಕ್ತಿ ಮಾಡಿದರೂ ಅದು ಖಂಡನೀಯವೇ. ಘೋರ ಅಪರಾಧ ಮಾಡಿದವನ್ನು ಶೀಘ್ರ ವಿಚಾರಣೆಗೆ ಅಳವಡಿಸಿ ಆದಷ್ಟು ಬೇಗ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸುವುದು ನಾಗರೀಕರಾದವರ ಕರ್ತವ್ಯ. ಸಾವಾದ ಕುಟುಂಬಕ್ಕೆ ಸಂತಾಪ ಹೇಳುವ ನೆಪದಲ್ಲಿ ಧರ್ಮದ್ವೇಷವನ್ನು ಹುಟ್ಟಿಸುವ ಹುನ್ನಾರಗಳು ಅಕ್ಷಮ್ಯ. 

“ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಮನೆಯ ಹೊರಗೆ ನಿರ್ಭಯವಾಗಿ ಮಹಿಳೆಯರು ಹೋಗುವಂತಿಲ್ಲ” ಎಂದು ಇಲ್ಲದ ಭಯವನ್ನು ಈ ಸಂಘಿಗಳು ಹುಟ್ಟಿಸುತ್ತಿದ್ದಾರೆ‌. ಮಹಿಳೆಯರನ್ನು ಹಿಂದೂ ಮುಸ್ಲಿಂ ಎಂದು ಧರ್ಮಾಧಾರಿತವಾಗಿ ವಿಭಜಿಸುತ್ತಿದ್ದಾರೆ. ಅದೇ ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಂ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದರೆ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಜಾಣ ಮೌನಕ್ಕೆ ಶರಣಾಗುತ್ತಾರೆ. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಹೀಗಿದೆ..

ರುಕ್ಸಾನಾ ಮತ್ತು ಪ್ರದೀಪ್

ಆ ಮುಸ್ಲಿಂ ಹೆಣ್ಣುಮಗಳ ಹೆಸರು ರುಕ್ಸಾನಾ. ಪ್ರದೀಪ್ ಎನ್ನುವಾತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯಾಗಿಸಿದ. ಮದುವೆಯಾಗು ಎಂದು ರುಕ್ಸಾನಾ ಒತ್ತಾಯಿಸಿದಾಗ ಮಾರ್ಚ್ 31 ರಂದು ತುಮಕೂರಿನ ದೊಡ್ಡಗುಣಿ ಹತ್ತಿರ ಕೊಲೆಮಾಡಿ ಸುಟ್ಟು ಹಾಕಿದ. ಈ ದುಷ್ಕೃತ್ಯವನ್ನು ಸಂಘಪರಿವಾರಿಗರು ಹಾಗೂ ಅವರ ಸಮರ್ಥಕ ಮಾಧ್ಯಮಗಳು ಖಂಡಿಸಲಿಲ್ಲ. ನ್ಯಾಯಕ್ಕಾಗಿ ಒತ್ತಾಯಿಸಲಿಲ್ಲ. ಎನ್ ಕೌಂಟರ್ ಮಾಡಿ ಕೊಲೆಗಾರನನ್ನು ಸಾಯಿಸಿ ಎಂದು ಬೊಬ್ಬಿರಿಯಲಿಲ್ಲ. ಹಿಂದೂ ಲವ್ ಜಿಹಾದ್ ಎಂದೂ ಆರೋಪಿಸಲಿಲ್ಲ. ಯಾಕೆಂದರೆ ಬೇಟೆಗಾರ ಹಿಂದೂ ಆಗಿದ್ದ, ಬೇಟೆಯಾದವಳು ಮುಸ್ಲಿಂ ಯುವತಿಯಾಗಿದ್ದಳು. ಅದೇ ರೀತಿ ಸಾರಕ್ಕಿ ಪಾರ್ಕಲ್ಲಿ ಹೆಣವಾದವಳು ಹಿಂದೂ ಮಹಿಳೆಯಾಗಿದ್ದರೂ ಕೊಂದವನೂ ಹಿಂದೂ ಆಗಿದ್ದರಿಂದ ಆ ಹೆಣ್ಣಿನ ಸಾವು ಕೇಸರಿಗರ ಕಣ್ಣಿಗೆ ಕಾಣದಾಯಿತು. ಅದೇ ಹತ್ಯೆ ಮಾಡಿದವ ಮುಸ್ಲಿಂ ಆಗಿದ್ದರೆ ಇಷ್ಟೊತ್ತಿಗಾಗಲೇ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯನಂತಹ ಹಿಂದುತ್ವವಾದಿಗಳ ನೇತೃತ್ವದಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಹೋರಾಟ ಹಾರಾಟ ದ್ವೇಷ ಭಾಷಣಗಳು ಮಿತಿ ಮೀರುತ್ತಿದ್ದವು. ಯುವತಿ ಮನೆಯತ್ತ ಬಿಜೆಪಿ ನಾಯಕರುಗಳ ಪರೇಡ್ ನಡೆಯುತ್ತಿತ್ತು. ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಎಂದು ದೊಡ್ಡ ಧ್ವನಿಯಲ್ಲಿ ಆರೋಪಿಸಲಾಗುತ್ತಿತ್ತು. 

ಅಂದರೆ ಈ ಸಂಘಿಗಳಿಗೆ ಯಾವುದೇ ಧರ್ಮದ ಮಹಿಳೆಯರ ಮೇಲೆ ಕಾಳಜಿ ಕನಿಕರ ಏನೂ ಇಲ್ಲ. ಸತ್ತ ಮಹಿಳೆ ಹಿಂದೂ ಆಗಿದ್ದು ದೌರ್ಜನ್ಯದಲ್ಲಿ ಮುಸ್ಲಿಂ ವ್ಯಕ್ತಿ ಹೆಸರಿದ್ದರೆ ಸಾಕು ಇವರ ಹಿಂದೂ ಪರ ಕಾಳಜಿ ಪಂಚೇಂದ್ರಿಯಗಳಲ್ಲಿ ಜಾಗೃತವಾಗುತ್ತದೆ, ಮುಸ್ಲಿಂ ವಿರೋಧ ತಾರಕಕ್ಕೇರುತ್ತದೆ.  ಶವದ ಮೇಲೆ ಧರ್ಮಾಧಾರಿತ ರಾಜಕೀಯ ಶುರುವಾಗುತ್ತದೆ. 

ಈ ಸಂಘಿಗಳ ಅಮಾನವೀಯತೆಗೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದಾಗಿದೆ. ಪ್ರವೀಣ್ ಎಂಬಾತ  ತನ್ನದೇ ಕಂಪನಿಯಲ್ಲಿ ಗಗನಸಖಿಯಾಗಿದ್ದ ಮುಸ್ಲಿಂ ಯುವತಿಯ ಹಿಂದೆ ಬಿದ್ದಿದ್ದ. ಭಗ್ನಪ್ರೇಮದಿಂದ ಸಿಟ್ಟಿಗೆದ್ದು ಉಡುಪಿಯ ಮನೆಗೆ ನುಗ್ಗಿ ಆಕೆಯ ಕುಟುಂಬದ ಮೂವರನ್ನು ಬರ್ಬರವಾಗಿ ಕೊಂದು ಹಾಕಿದ. ಯಾವೊಬ್ಬ ಸಂಘಪರಿವಾರಿಗನೂ ಉಸಿರೆತ್ತಲಿಲ್ಲ. ಯಾಕೆಂದರೆ ಸತ್ತವರು ಮುಸ್ಲಿಂ ಆಗಿದ್ದರು ಹಾಗೂ ಕೊಂದವ ಹಿಂದೂ ಆಗಿದ್ದ.  ಅದೇ ರೀತಿ ದೇಶಾದ್ಯಂತ ಸುದ್ದಿಯಾಗಿದ್ದ ಬಿಲ್ಕೀಸ್ ಭಾನು ಪ್ರಕರಣದಲ್ಲಿ ಮೇಲ್ವರ್ಗದ ಹಿಂದೂಗಳು ಆಕೆಯನ್ನು ಅತ್ಯಾಚಾರ ಮಾಡಿ, ಆಕೆಯ ಮಗುವನ್ನು ಕೊಂದು ಕುಟುಂಬದವರನ್ನು ಸುಟ್ಟು ಹಾಕಿದ್ದರು. ಅಂತಹ ಕೊಲೆಪಾತಕರನ್ನು ಸನ್ನಡತೆ ಆಧಾರದ ಮೇಲೆ ಗುಜರಾತಿನ ಬಿಜೆಪಿ ಸರಕಾರ ಅವಧಿ ಪೂರ್ವ ಬಿಡುಗಡೆ ಮಾಡಿತ್ತು. ಜೈಲಿನಿಂದ ಬಂದ ಈ ಕ್ರೂರಿಗಳನ್ನು ಬ್ರಾಹ್ಮಣರು ಎನ್ನುವ ಕಾರಣಕ್ಕೆ ಮೆರವಣಿಗೆಯಲ್ಲಿ ಇದೇ ಬಿಜೆಪಿ ಪಕ್ಷದ ಮುಖಂಡರು ಹಾರ ಶಾಲು ಹಾಕಿ ಸನ್ಮಾನಿಸಿದರು. ದೇಶಾದ್ಯಂತ ಆಕ್ರೋಶ ತೀವ್ರಗೊಂಡಾಗ ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತೆ ಅವರೆಲ್ಲಾ ಜೈಲು ಸೇರಿದರು. ಅಂದರೆ ಕೊಂದವರು ಹಿಂದೂಗಳಾಗಿದ್ದರೆ, ಅದರಲ್ಲೂ ಬ್ರಾಹ್ಮಣ ಸಮುದಾಯದವರಾಗಿದ್ದರೆ ಅವರ ಪರವಾಗಿ ನಿಲ್ಲುವ ಬಿಜೆಪಿ ಹಾಗೂ ಸಂಘ ಪರಿವಾರಿಗರು ಅದೇ ಮುಸ್ಲಿಂ ವ್ಯಕ್ತಿ ಕ್ರೌರ್ಯ ಮೆರೆದಾಗ ಧರ್ಮದ್ವೇಷದ ಬೆಂಕಿ ಉಗುಳುತ್ತಾರೆ, ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚುತ್ತಾರೆ. 

ಉಡುಪಿಯ ನೇಜಾರಿನ ಕೊಲೆ ಪ್ರಕರಣದ ಆರೋಪಿ ಪ್ರವೀಣ್

ಹೀಗೆ ಜಾತಿ ಧರ್ಮ ನೋಡಿ ಕೋಮುದ್ವೇಷ ಹುಟ್ಟಿಸುವ ಬಿಜೆಪಿಗರು ಮತಪಿಪಾಸುಗಳು. ವಂಚಕರು, ನೀಚರು, ಕೊಲೆಪಾತಕರು ಎಲ್ಲಾ ಜಾತಿ ಮತ ಧರ್ಮಗಳಲ್ಲೂ ಇದ್ದಾರೆ ಇರುತ್ತಾರೆ. ಅಂತಹ ನೀಚರು ಮಾಡಿದ ಅಪರಾಧಕ್ಕೆ ಧರ್ಮಬೇಧವಿಲ್ಲದೇ ಖಂಡಿಸಲೇಬೇಕಿದೆ. ಶಿಕ್ಷೆಗೆ ಆಗ್ರಹಿಸಬೇಕಿದೆ. ಆದರೆ ಅಪರಾಧ ಮಾಡಿದವನ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ದ್ವೇಷವನ್ನು ಕಾರುವುದು ಹಾಗೂ ಎಲ್ಲದಕ್ಕೂ ಆಳುವ ಸರಕಾರವನ್ನೇ ಹೊಣೆಗಾರರನ್ನಾಗಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಧರ್ಮದ್ವೇಷವನ್ನು ಹುಟ್ಟುಹಾಕಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿರುವ ಮತಾಂಧ ಶಕ್ತಿಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ಜನರು ಸೋಲಿಸಬೇಕಿದೆ. ಯಾವುದೇ ಹೆಣ್ಣುಮಗಳ ಮೇಲೆ ದಮನ ದೌರ್ಜನ್ಯ ಕ್ರೌರ್ಯ ಯಾವುದೇ ಜಾತಿ ಧರ್ಮೀಯರಿಂದ ನಡೆದರೂ ವಿರೋಧಿಸಲೇಬೇಕಿದೆ. ಪ್ರೇಮದ ಹೆಸರಲ್ಲಿ ಕ್ರೌರ್ಯಕ್ಕೆ ಬಲಿಯಾದ ನೇಹಾ, ಅನುಷಾ, ರುಕ್ಸಾನಾ ರಂತವರ ಮೇಲೆ ನಡೆದ ಅಮಾನವೀಯ ಕ್ರೌರ್ಯ ಮತ್ತೆಂದೂ ಮರುಕಳಿಸದಿರಲಿ. 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಚೂರಿ ಫಯಾಜ್ ಕೈಯ್ಯಲ್ಲಿತ್ತು…! ಕೊಲೆ ಮಾಡಿದವರು ಯಾರು ?

More articles

Latest article