7% ಇರುವ ಕುರುಬ ಸಮುದಾಯಕ್ಕೆ BJP ಒಂದೂ ಟಿಕೆಟ್ ಕೊಟ್ಟಿಲ್ವಲ್ಲಾ ನಿಮಗೆ ಸಿಟ್ಟು ಬರಲ್ವಾ: ಸಿದ್ದರಾಮಯ್ಯ

Most read

ದಾವಣಗೆರೆ (ಹೊನ್ನಾಳಿ): ಹತ್ತತ್ತು ವರ್ಷ ಪ್ರಧಾನಿಯಾಗಿರುವ ಮೋದಿಯವರೇ ಕೇವಲ ಹತ್ತೇ ಹತ್ತು ಜನೋಪಯೋಗಿ ಕೆಲಸ ಮಾಡಿದ್ದರೆ ತೋರಿಸಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ನೇರ ಸವಾಲು ಹಾಕಿದರು.

ದಾವಣಗೆರೆ ಲೋಕಸಭಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ನಡೆದ ಪ್ರಜಾಧ್ವನಿ-2 ಜನಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿ ತಾವು ರಾಜ್ಯದಲ್ಲಿ ಜಾರಿಮಾಡಿದ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು, ಭಾಗ್ಯಗಳ ಪಟ್ಟಿ ಮಾಡಿದ ಸಿ.ಎಂ ಸಿದ್ದರಾಮಯ್ಯ ಅವರು ನೀವು ಪ್ರಧಾನಿಯಾಗಿ ಮಾಡಿದ ಸಾಧನೆಗಳನ್ನು ತಾಕತ್ತಿದ್ದರೆ ಭಾರತೀಯರ ಮುಂದೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು.

ಮೋದಿಯವರ ಸಾಧನೆಗಳ ಪಟ್ಟಿ ಹಾಕಬೇಕು ಎಂದರೆ ಅವರು ಹೇಳಿದ ಸುಳ್ಳುಗಳ ಪಟ್ಟಿ ಮಾಡಬಹುದು, ಭಾರತೀಯರಿಗೆ ಹಾಕಿದ ಮೂರು ನಾಮಗಳ ಪಟ್ಟಿ ಮಾಡಬಹುದು, ಕನ್ನಡಿಗರ ಕೈಗೆ ಕೊಟ್ಟ ಚೊಂಬಿನ ಪಟ್ಟಿ ಮಾಡಬಹುದು ಎಂದು ವ್ಯಂಗ್ಯವಾಡಿದರು.

ರಾಜ್ಯದ ಪರವಾಗಿ, ದಾವಣಗೆರೆ ಜಿಲ್ಲೆಯ ಪರವಾಗಿ, ಹೊನ್ನಾಳಿ ಜನರ ಪರವಾಗಿ ಒಂದೇ ಒಂದು ದಿನವೂ ಬಿಜೆಪಿ ಸಂಸದ ಸಿದ್ದೇಶ್ವರ್ ಅವರು ಪಾರ್ಲಿಮೆಂಟಿನಲ್ಲಿ ಬಾಯಿ ಬಿಡಲಿಲ್ಲ. ಹೀಗಾಗಿ ಬಿಜೆಪಿಗೆ ನೀವು ಹಾಕುವ ಮತಕ್ಕೆ ಬೆಲೆ ಬರಲಿಲ್ಲ ಎಂದರು.

ರಾಜ್ಯಕ್ಕೆ ಆರ್ಥಿಕವಾಗಿ ಬಿಜೆಪಿ ತೀವ್ರ ಅನ್ಯಾಯ ಮಾಡಿತು. ಬರಗಾಲ ಬಂದಾಗ, ಪ್ರವಾಹ ಬಂದಾಗಲೂ ರಾಜ್ಯಕ್ಕೆ ಅನ್ಯಾಯವಾಯಿತು. ಆಗಲೂ ಸಿದ್ದೇಶ್ವರ್ ಬಾಯಿ ಬಿಡಲಿಲ್ಲ. ಮತ್ತೆ ಇವರು ಪಾರ್ಲಿಮೆಂಟಿಗೆ ಕಳುಹಿಸಿ ಏನು ಪ್ರಯೋಜನ ಆಯ್ತು. ಬರಿ ಟಿ.ಎ, ಡಿ.ಎ ತಗೊಳೊಕೆ , ಶೋಕಿ ಮಾಡೋಕೆ ಪಾರ್ಲಿಮೆಂಟಿಗೆ ಕಳಿಸಿದ್ರಾ ಎಂದು ಪ್ರಶ್ನಿಸಿದರು.

ಬಿಜೆಪಿ ಸೋತಾಗಿದೆ. ಮೋದಿ ಮತ್ತೆ ಪ್ರಧಾನಿಯಾಗಲ್ಲ. ಇಲ್ಲಿ ಗಾಯತ್ರಿ ಸಿದ್ದೇಶ್ವರ್ ಯಾವುದೇ ಕಾರಣಕ್ಕೂ ಗೆಲ್ಲಲ್ಲ. ಬಿಜೆಪಿ ಕುಮ್ಮಕ್ಕಿನಿಂದ ಪಕ್ಷೇತರವಾಗಿ ಸ್ಪರ್ಧಿಸಿರುವ ವಿನಯ್ ಕುಮಾರ್ ಗೆ ಒಂದೂ ಮತ ಹಾಕಬೇಡಿ. ವಿನಯ್ ಗೆ ಬೀಳುವ ಮತ ಬಿಜೆಪಿಗೆ ಬಿದ್ದ ಹಾಗೆ. ಕಾಂಗ್ರೆಸ್ ಪಕ್ಷದ ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಶಕ್ತಿ ಬರುತ್ತದೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದರು.

More articles

Latest article