ನವದೆಹಲಿ: ಸಂಸತ್ ಭವನದಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಳ್ಳಿ ಅವರ ಮಂಡಿಗೆ ಗಾಯವಾಗುವ ಹಾಗೆ ಬಿಜೆಪಿ ಸದಸ್ಯರು ವರ್ತಿಸಿದ್ದಾರೆ. ಈ ಸಂಬಂಧ ಖರ್ಗೆ ಅವರು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಪಡಿಸಿದ್ದಾರೆ.
ರಾಜ್ಯಸಭಾ ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಆಡಿದ ಅಪಮಾನಕಾರಿ ಹೇಳಿಕೆಗೆ ಗೃಹ ಸಚಿವ ಅಮಿತ್ ಶಾ , ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ದೇಶದ ಕ್ಷಮೆ ಯಾಚಿಸಬೇಕು ಎಂದು ಇಂಡಿಯಾ ಒಕ್ಕೂಟದ ಸದಸ್ಯರು ಪ್ರೇರಣಾ ಸ್ಥಳದಿಂದ ಮಕರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದೆವು. ಇತರ ಸಹದ್ಯೋಗಿಗಳೊಂದಿಗೆ ಮಕರ ವೃತ್ತ ತಲುಪಿದಾಗ ಬಿಜೆಪಿ ಸದಸ್ಯರು ದೈಹಿಕವಾಗಿ ನನ್ನನ್ನು ತಳ್ಳಿದರು. ಇದರಿಂದ ನಾನು ನಿಯಂತ್ರಣ ಕಳೆದುಕೊಂಡೆ ಮತ್ತು ಮಕರ ದ್ವಾರದ ಮುಂಬಾಗ ನೆಲದ ಮೇಲೆ ಕುಳಿತುಕೊಳ್ಳುವಂತಾಯಿತು. ಅವರು ತಳ್ಳಿದ್ದರಿಂದ ಈಗಾಗಲೇ ಶಸ್ತ್ರಚಿಕಿತ್ಸೆಯಾಗಿರುವ ನನ್ನ ಮಂಡಿಗೆ ಗಾಯವಾಗಿದೆ. ಕೂಡಲೇ ನನ್ನ ಸಹದ್ಯೋಗಿಗಳು ನನಗೆ ಕುರ್ಚಿಯನ್ನು ತಂದುಕೊಟ್ಟರು. ನಂತರ ನಾನು ಸಾವರಿಸಿಕೊಂಡು ಸದನವನ್ನು ತಲುಪಬೇಕಾಯಿತು. ಇದು ನನಗೆ ವೈಯಕ್ತಿಕವಾಗಿ ಮಾಡಿದ ಅವಮಾನವಲ್ಲ. ಬದಲಾಗಿ ರಾಜ್ಯಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರಸ್ ಅಧ್ಯಕ್ಷರಿಗೆ ಮಾಡಿದ ಅಪಮಾನವಾಗಿದೆ. ಆದ್ದರಿಂದ ತಾವು ಕೂಡಲೇ ಈ ಪ್ರಕರಣ ಕುರಿತು ತನಿಖೆ ನಡೆಸಬೇಕು ಎಂದು ಖರ್ಗೆ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.