ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇನ್ನಿಲ್ಲದಂತೆ ಬಾಧಿಸುತ್ತಿರುವುದಂತೂ ಸ್ಪಷ್ಟವಾಗಿದೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ದಿನಕ್ಕೊದ್ದರಂತೆ ಬಿಜೆಪಿ ಜೆಡಿಎಸ್ ರಾಜಕೀಯವಾಗಿ ಆರೋಪ ಮಾಡಿ ಅವರನ್ನು ಮಣಿಸುವ ಉನ್ನಾರ ಮಾಡುತ್ತುದ್ದು, ಇದರ ವಿರುದ್ದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಸಿಡಿದೆದ್ದು ಎರಡು ಪ್ರತಿಪಕ್ಷಗಳಗೂ ಎಚ್ಚರಿಕೆ ರವಾನಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಇತ್ತಿಚೇಗೆ ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಖುರ್ಚಿ ಆಸೆಗಾಗಿ ಜನಪರ ಇರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, 15 ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಸೇರಿದಂತೆ 40 ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಹಲವು ಮಹತ್ವದ ಅಧಿಕಾರದ ಹುದ್ದೆಯಲ್ಲಿ ಇದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯರವರ ವರ್ಚಸ್ಸಿಗೆ ಮಸಿ ಬಳಿದು ಅವರನ್ನು ರಾಜಕೀಯವಾಗಿ ಮುಗಿಸಿಯೇ ಬಿಡುವ ಹುನ್ನಾರ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರ ಕುತಂತ್ರಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರೂ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ನಾಯಕರಾದ ಆರ್. ಅಶೋಕ್ ಬಿ.ವೈ. ವಿಜಯೇಂದ್ರ ಜೊತೆಗೆ ಬಿಜೆಪಿಯ ರಾಷ್ಟ್ರೀಯ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಲ್. ಸಂತೋಷ್ ಮತ್ತಿತರರು ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿರುವುದರ ಹಿಂದೆ ಹಲವು ಕಾರಣಗಳಿವೆ. ಸಿದ್ದರಾಮಯ್ಯರವರನ್ನು ಅಧಿಕಾರದಿಂದ ಕೆಳಗಿಳಿಸಿ ಹಿಂದುಳಿದ ವರ್ಗಗಳ ನಾಯಕತ್ವವನ್ನು ಕೊನೆಗಾಣಿಸಬಹುದು, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಶಾಶ್ವತವಾಗಿ ಹಿಂದುಳಿದ ವರ್ಗಗಳನ್ನು ಅಧಿಕಾರದಿಂದ ದೂರ ಇಡಬಹುದು ಮತ್ತು ಸಿದ್ದರಾಮಯ್ಯರವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸಕಲ ಹಿಂದುಳಿದ ವರ್ಗಗಳು ಅಧಿಕಾರ ನಡೆಸಲು ಅಸಮರ್ಥ ಎಂದು ಬಿಂಬಿಸಬಹುದು ಎನ್ನುವ ಹುನ್ನಾರದಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ವಾಲ್ಮೀಕಿ ನಿಗಮದ ವಿವಾದದಲ್ಲಿ ಅವರ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂದು ದೂರಿದ್ದಾರೆ.
ಇವರಿಗೆ ಸಿದ್ದರಾಮಯ್ಯ ಅವರೇ ಏಕೆ ಟಾರ್ಗೆಟ್?
ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡ ಮತ್ತು ದುರ್ಬಲ ವರ್ಗದವರ ನಾಯಕ ಇವರು. ಬಡವರು, ರೈತರು, ಕೂಲಿ ಕಾರ್ಮಿಕರು ವಿಶ್ವಾಸ ಇಟ್ಟಿರುವ ನಾಯಕ ಎಂಬುದೇ ಸಿದ್ದರಾಮಯ್ಯರವರನ್ನು ಬಿಜೆಪಿ-ಜೆಡಿಎಸ್ ನಾಯಕರು ದ್ವೇಷಿಸಲು ಇರುವ ಪ್ರಮುಖ ಕಾರಣ. ಸಿದ್ದರಾಮಯ್ಯ ಅವರ ನಡೆ, ನುಡಿ, ಬದ್ಧತೆ, ಬುದ್ದಿವಂತಿಕೆಗಳನ್ನು ಕಂಡು ಇಷ್ಟು ದಿನ ಒಳಗೊಳಗೆ ಕರುಬುತ್ತಿದ್ದ ಬಿಜೆಪಿ-ಜೆಡಿಎಸ್ ನಾಯಕರು ಈಗ ಬಹಿರಂಗವಾಗಿ ತಮ್ಮ ಹತಾಷೆಯನ್ನು ತೋಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವ ಬಿಜೆಪಿ-ಜೆಡಿಎಸ್ ನಾಯಕರ ಅಸಹನೆಗೆ ಇನ್ನೂ ಒಂದಿಷ್ಟು ಕಾರಣಗಳಿವೆ.
ಸಿದ್ದರಾಮಯ್ಯ ಎಂದರೆ……
ಸಿದ್ದರಾಮಯ್ಯ ಎಂದರೆ… ಇಡೀ ದೇಶದಲ್ಲಿ ನರೇಂದ್ರ ಮೋದಿ ಅವರ ತಪ್ಪುಗಳ ವಿರುದ್ಧ ರಾಹುಲ್ ಗಾಂಧಿ ಅವರ ನಂತರ ಗಟ್ಟಿ ದನಿಯಲ್ಲಿ ಮಾತನಾಡುವ ನಾಯಕ. ಸಂವಿಧಾನ, ಸಮ ಸಮಾಜದ, ಸಾಮಾಜಿಕ ನ್ಯಾಯ, ಮೀಸಲಾತಿ, ಜಾತಿ ಜನಗಣತಿ ಪರವಾಗಿ ಸ್ಪಷ್ಟ ದನಿಯಲ್ಲಿ ಮಾತನಾಡುವ ನಾಯಕ. ಕರ್ನಾಟಕ ಮತ್ತು ಕನ್ನಡದ ಅಸ್ಮಿತೆ ಪರ, ನಾಡಿನ ನೆಲ-ಜಲಗಳ ಬಗ್ಗೆ ನಿಖರವಾಗಿ ಮಾತನಾಡುವ ನಾಯಕ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ಸೆಟೆದು ನಿಂತಿರುವ ನಾಯಕ. ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕಟೆಕಟೆಗೆ ಕರೆಸಿ ಅನುದಾನ ಹಂಚಿಕೆಯ ಅನ್ಯಾಯದ ವಿರುದ್ಧ ಗೆದ್ದಿರುವ ನಾಯಕ. ತಾವು ಮಂಡಿಸಿದ 15 ಬಜೆಟ್ ಗಳಲ್ಲಿಯೂ ಬಡವರ ಪರ ಕಾರ್ಯಕ್ರಮಗಳನ್ನು ಕೊಟ್ಟು ಸೈ ಎನಿಸಿಕೊಂಡಿರುವ ನಾಯಕ ಬುದ್ಧ, ಬಸವಣ್ಣ, ನಾರಾಯಣಗುರು, ಡಾ. ಬಿ.ಆರ್. ಅಂಬೇಡ್ಕರ್, ಕುವೆಂಪು ಮತ್ತಿತರ ಮಹನೀಯರ ಆಶಯಗಳಿಗೆ ತಕ್ಕಂತೆ ನಡೆಯುತ್ತಿರುವ ನಾಯಕ. ದಿವಂಗತ ದೇವರಾಜು ಆರಸು ಅವರ ನಂತರ ಯಶಸ್ವಿಯಾಗಿ 5 ವರ್ಷಗಳ ಅವಧಿ ಮುಗಿಸಿದ ಮುಖ್ಯಮಂತ್ರಿ. ಆರಸು ಅವರ ನಂತರ 2ನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಗೇರಿದ ಹಿಂದುಳಿದ ವರ್ಗಗಳ ನಾಯಕ. ಬಂಗಾರಪ್ಪ ಅವರ ನಂತರ ಹಿಂದುಳಿದ ವರ್ಗಗಳ ರಾಜಕೀಯವೇ ಮುಗಿಯಿತು ಎಂಬಂತಹ ಪರಿಸ್ಥಿತಿಯಲ್ಲಿ ಹಿಂದುಳಿದ ವರ್ಗಗಳಿಗೆ ದನಿಯಾದವರು.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದಂತೆ ಕಾಂಗ್ರೆಸ್ 135 ಸೀಟು ಬರಲು ಕಾರಣ ಸಿದ್ದರಾಮಯ್ಯರವರ ಅಹಿಂದ ತತ್ವ ಮತ್ತು ಶೋಷಿತ ಸಮುದಾಯಗಳ ಐಕ್ಯತೆಗಳೇ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಸಿದ್ದರಾಮಯ್ಯರವರು ಚುನಾವಣೆಗೂ ಮುನ್ನ ಕೊಟ್ಟಿದ್ದ 5 ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬರುತ್ತಿದ್ದಂತೆ ಯಶಸ್ವಿಯಾಗಿ ಜಾರಿಗೆ ತಂದು ಜನತೆಯ ಭರವಸೆ ಉಳಿಸಿಕೊಂಡವರು. 1998ರಿಂದ ಪ್ರತಿ ಲೋಕಸಭಾ ಚುನಾವಣೆಯಲ್ಲೂ ಸರಾಸರಿ 7% ಮತ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ 13% ಮತ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಅವರ ನಾಯಕತ್ವವೇ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ 5 ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು 55 ಸಾವಿರ ಕೋಟಿ ರೂಪಾಯಿಗಳನ್ನು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ, ನಯಾ ಪೈಸೆ ಸೋರಿಕೆಯಾಗದಂತೆ, ಸ್ವಲ್ಪವೂ ಭ್ರಷಾಚಾರವಾಗದಂತೆ ನೇರವಾಗಿ ಪಲಾನುಭವಿಗಳಿಗೆ ತಲುಪುವಂತೆ ಮಾಡಿರುವ ಕೀರ್ತಿ ಸಿದ್ದರಾಮಯ್ಯ ಅವರದು. ಇದು ಸಿದ್ದರಾಮಯ್ಯ ಅವರಿಗೆ ಬಡವರು, ಮಹಿಳೆಯರು, ಗ್ರಾಮೀಣ ಭಾಗದ ಜನತೆಯ ಬಗ್ಗೆ ಇರುವ ಕಾಳಜಿಗೆ ಹಿಡಿದ ಕನ್ನಡಿ.
ಸಿದ್ದರಾಮಯ್ಯ ಇಂತಹ ಗಟ್ಟಿ ನಾಯಕ, ಜನ ನಾಯಕ ಎಂಬುದು ಬಿಜೆಪಿ-ಜೆಡಿಎಸ್ ನಾಯಕರಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸದೆ ತಮ್ಮ ರಾಜಕೀಯ ಸಾಧ್ಯವಿಲ್ಲ ಎಂದುಕೊAಡೇ ಈಗ ಅವರ ಹೆಸರಿಗೆ ಕುಂದು ತರುವ ಕುತಂತ್ರ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಎಸ್ ನಾಯಕರು ಆರೋಪಿಸುತ್ತಿರುವ ವಾಲ್ಮೀಕಿ ನಿಗಮದ ವಿವಾದವನ್ನು ರಾಜ್ಯದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಆದರೆ ರಾಜ್ಯದ ತನಿಖಾ ಸಂಸ್ಥೆ ಮೇಲೆ ತಮ್ಮ ಪ್ರಭಾವ ಬಳಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ತರಾತುರಿಯಲ್ಲಿ ಕೇಂದ್ರದ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯದಿಂದಲೂ ತನಿಖೆ ಆಗುವಂತೆ ಮಾಡಿದ್ದಾರೆ. ಜಾರಿ ನಿರ್ದೇಶನಾಲಯಕ್ಕೂ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದು ಗೊತ್ತಾಗಿದೆ. ಆದರೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅವರ ಬಾಯಿಂದ ಸಿದ್ದರಾಮಯ್ಯ ಅವರ ಹೆಸರು ಹೇಳಿಸುವ ಕುತಂತ್ರ ಮಾಡಲಾಗುತ್ತಿದೆ.
ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿದು, ಹಿಂದುಳಿದವರ ದನಿ ಅಡಗಿಸಲು ಷಡ್ಯಂತ್ರ ರೂಪಿಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರೇ ಸ್ವತಃ ಕಳಂಕಿತರು. ಸಾಕ್ಷಾತ್ ಸತ್ಯಹರಿಶ್ಚಂದ್ರನ ಅಪರಾವತಾರ ಎಂಬAತೆ ಮಾತನಾಡುವ ‘ಹಿಟ್ ಅಂಡ್ ರನ್’ ಖ್ಯಾತಿಯ ಎಚ್.ಡಿ. ಕುಮಾರಸ್ವಾಮಿ ಅವರು ಕೇತಿಗಾನಹಳ್ಳಿಯಲ್ಲಿ ನೂರಾರು ಎಕರೆ ದಲಿತರ ಜಮೀನನ್ನು ಕಿತ್ತು ತಿಂದಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇವೆ. ಇದೇ ಕುಮಾರಸ್ವಾಮಿ ಮತ್ತವರ ಕುಟುಂಬಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಷ್ಟು ನಿವೇಶನಗಳನ್ನು ನೀಡಿದೆ ಎಂಬುದರ ಕುರಿತು ಸದ್ಯದ ಅವರ ದೋಸ್ತಿಪಕ್ಷ ಬಿಜೆಪಿ ಹಿಂದೊಮ್ಮೆ ಜಾಹೀರಾತು ನೀಡಿತ್ತು. ಆ ಪ್ರತಿಯನ್ನೂ ಈ ಪತ್ರಿಕಾ ಪ್ರಕಟಣೆಯ ಜೊತೆಗೆ ನೀಡಲಾಗಿದೆ. ಇದಲ್ಲದೆ ಕುಮಾರಸ್ವಾಮಿ ಅವರ ಸಹೋದರ ಎಚ್.ಡಿ. ರೇವಣ್ಣ ಅವರ ಕುಟುಂಬದ ಸಾಹಸಗಾಥೆಗಳು ಇತ್ತೀಚೆಗೆ ಧಾರವಾಹಿಯಂತೆ ಪ್ರಸಾರವಾಗಿವೆ. ಅವುಗಳ ಬಗ್ಗೆ ಎಳ್ಳಷ್ಟೂ ಅಸಹ್ಯ ಪಟ್ಟುಕೊಳ್ಳದೆ ಇನ್ನೊಬ್ಬರ ಬಗ್ಗೆ ಅಸೂಹೆ ಪಡುವುದು ಅವರ ಸ್ಥಾನಕ್ಕೆ ತಕ್ಕದಾದುದಲ್ಲ ಎಂದು ಆಗ್ರಹಿಸಿದೆ.
“ಅಪರೇಷನ್ ಕಮಲದ ಪಿತಾಮಹ” ಎಂದೇ ಖ್ಯಾತರಾದ, ಭ್ರಷ್ಟಾಚಾರದ ಮೇಲೆ ಜೈಲಿಗೆ ಹೋಗಿ ಬಂದಿರುವ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಈಗ ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ. ‘ಸನ್ ಆಫ್’ ಎಂಬ ಅರ್ಹತೆ ಇಲ್ಲದೆ ಇದ್ದರೆ ಗ್ರಾಮ ಪಂಚಾಯಿತಿಯನ್ನೂ ಗೆಲ್ಲಲಾಗದ, ಅಪ್ಪನ ಸಹಿಯನ್ನು ನಕಲಿ ಮಾಡಿದರು ಎಂಬ ಆರೋಪ ಎದುರಿಸುತ್ತಿರುವ ಬಿ.ವೈ. ವಿಜಯೇಂದ್ರ ಅವರು ಕುಮಾರಸ್ವಾಮಿ ಎದುರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕೆ ಇಳಿದಿರುವುದು ಇನ್ನೊಂದು ಜೋಕ್. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಕುಟುಂಬದ ಮೇಲಿನ ಭ್ರಷ್ಟಾಚಾರದ ಪ್ರಕರಣಗಳ ತನಿಖೆಗಳು ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಎನ್ನುವುದಾದರೂ ಅವರಿಗೆ ನೆನಪಾಗಬೇಕು ಎಂದು ಕಿಡಿಕಾರಿದೆ.
ಬಿಜೆಪಿ-ಜೆಡಿಎಸ್ ನಾಯಕರಿಗೆ ಎಚ್ಚರಿಕೆ
ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ಆಯೋಗ ರಚಿಸಿರುವ ದೇಶದ ಏಕೈಕ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ಇವರಿಗೆ ಅರ್ಥವಾಗಬೇಕು. ಹಿಂದೆಯೂ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿAಗ್ ಮತ್ತಿತರರ ವಿರುದ್ಧ ಇಂತಹುದೇ ಷಡ್ಯಂತ್ರ ರೂಪಿಸಲಾಗಿತ್ತು. ಈಗ ಶೋಷಿತ ಸಮುದಾಯಗಳು ಜಾಗೃತವಾಗಿವೆ. ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯರವರು ಸದಾ ಬಡವರು, ಮಹಿಳೆಯರು, ರೈತರು ಮತ್ತು ಕಾರ್ಮಿಕರ ಪರ ಇರುವಂತೆ ಈ ವರ್ಗಗಳು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರ ಬಂಡೆಯಂತೆ ನಿಂತಿವೆ ಎಂಬುದು ಕಳೆದ ಚುನಾವಣೆಯಲ್ಲಿ ಗೊತ್ತಾಗಿದೆ ಎಂದು ಹೇಳಿದೆ.
ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ಇದು ಸ್ಪಷ್ಟವಾದ ಎಚ್ಚರಿಕೆ. ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸುವುದು, ಸಿದ್ದರಾಮಯ್ಯರವರನ್ನು ದುರ್ಬಲ ಗೊಳಿಸುವ ಕುತಂತ್ರವನ್ನು ಕೂಡಲೇ ನಿಲ್ಲಿಸದಿದ್ದರೆ ಶೋಷಿತ ಸಮುದಾಯಗಳು ನಿಮ್ಮ ವಿರುದ್ಧ ಸಿಡಿದೇಳಬೇಕಾಗುತ್ತದೆ. ನೀವು ಪಾದಯಾತ್ರೆಯ ಬೆದರಿಕೆ ಹಾಕಿದರೆ ಪರ್ಯಾಯವಾಗಿ ಶೋಷಿತ ಸಮುದಾಯಗಳು ಇಡೀ ರಾಜ್ಯಾದ್ಯಂತ ಪ್ರತಿಭಟನಾ ಕಾರ್ಯಕ್ರಮಗಳು ಹಾಗೂ “ಶೋಷಿತ ಸಮುದಾಯಗಳ ಎಚ್ಚರಿಕೆ ಸಮಾವೇಶ” ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದೆ.
ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ ರಾಮಚಂದ್ರಪ್ಪ, ಸಂಚಾಲರಾದ ಮಾವಳ್ಳಿ ಶಂಕರ್, ಅನಂತನಾಯ್ಕ.ಎನ್, ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಅಬ್ದುಲ್ ಮನಾನ್‌ಸೇಠ್ ಹಾಗೂ ಸದಸ್ಯರಾದ ಬಿ.ಟಿ ಲಲಿತಾನಾಯಕ್, ಆದರ್ಶ ಯಲ್ಲಪ್ಪ, ಕೆ. ವೆಂಕಟಸುಬ್ಬರಾಜು, ಸಿ. ನಂಜಪ್ಪ, ಇಂದೂಧರ್ ಹೊನ್ನಾಪುರ, ವಿ. ನಾಗರಾಜ್, ಜಿ.ಡಿ ಗೋಪಾಲ್ ಸಹಿ ಹಾಕಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.