ಸದೃಢ ಸರ್ಕಾರ ಕೆಡವಲು ಬಿಜೆಪಿ-ಜೆಡಿಎಸ್ ಯತ್ನ: ಕೃಷ್ಣ ಬೈರೇಗೌಡ ಗಂಭೀರ ಆರೋಪ

Most read

ಸಕಲೇಶಪುರ: ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ‌ ಬೆಂಬಲದಿಂದ ಕನ್ನಡಿಗರಿಂದ ಆಯ್ಕೆಯಾಗಿರುವ ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ತಾಲೂಕಿನ ದೊಡ್ಡತಪ್ಪಲು ಬಳಿ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಇಬ್ಬರೂ ಸೇರಿ ಏನಾದರೂ ಮಾಡಿ ಸರ್ಕಾರ ಕೆಡವಲು ಪ್ಲಾನ್ ಮಾಡುತ್ತಿದ್ದಾರೆ. ಚುನಾಯಿತ ಸರ್ಕಾರವನ್ನು ಸಂವಿಧಾನಕ್ಕೆ ವಿರುದ್ಧವಾಗಿ ಬುಡಮೇಲು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಬಿಜೆಪಿಯ ಪೊಲಿಟಿಕಲ್ ವಿಂಗ್ ಆಗಿದೆ, ಪೊಲಿಟಿಕಲ್ ಟೂಲ್‌ಕಿಟ್ ಸಹ ಆಗಿದೆ. ಇಡಿಯವರು ಬಂದು ತಪ್ಪು ಮಾಡಿರುವವರಿಗೆ ರಕ್ಷಣೆ ಕೊಡುತ್ತೇವೆ ನೀವು ಸಿಎಂ ಮೇಲೆ ಹೇಳಿಕೆ ಕೊಡಿ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

ತಪ್ಪು ಮಾಡಿರುವವರನ್ನು ರಕ್ಷಣೆ ಮಾಡಿ ಹಗರಣ ಮುಚ್ಚಿ ಹಾಕಿ ಸಿಎಂ ತಲೆಗೆ ಕಟ್ಟಬೇಕು ಎನ್ನುವುದು ಅವರ ಉದ್ದೇಶ. ಹಗರಣದ ಹಿಂದೆ ಇರುವವರನ್ನು ಪತ್ತೆ ಮಾಡಿ ಶಿಕ್ಷೆ ಕೊಡಲು ಅವರು ಬಂದಿಲ್ಲ ಎಂದು ಆರೋಪಿಸಿದರು. ಈ ಹಗರಣ ಉಪಯೋಗಿಸಿಕೊಂಡು ರಾಜ್ಯ ಸರ್ಕಾರ ಬುಡಮೇಲು ಮಾಡಬೇಕು ಎನ್ನುವುದು ಅವರ ಉದ್ದೇಶ. ಬೇರೆ ರಾಜ್ಯಗಳಲ್ಲೂ ಇದೇ ರೀತಿ ಸರ್ಕಾರ ಅಸ್ಥಿರಗೊಳಿಸಿರುವ ಅನೇಕ ನಿದರ್ಶನಗಳಿವೆ ಎಂದು ಅವರು ನುಡಿದರು.

ಕರ್ನಾಟಕದಲ್ಲೂ ತನಿಖಾ ಸಂಸ್ಥೆ ಉಪಯೋಗಿಸಿಕೊಂಡು ನಮ್ಮ ಸರ್ಕಾರ ಬುಡಮೇಲು ಮಾಡಲು ಕುತಂತ್ರದಿಂದ ಹೊರಟಿದ್ದಾರೆ. ಚುನಾವಣೆ ಮುಗಿದ ಮೇಲೆ ಏನಾದರೂ ಮಾಡಿ ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಕಲ್ಲೇಶ್ ಎನ್ನುವ ಅಧಿಕಾರಿಗೆ ಸಿಎಂ ವಿರುದ್ಧ ಹೇಳಿಕೆ ಕೊಡು, ಕೊಡಲಿಲ್ಲ ಎಂದರೆ 7 ವರ್ಷ ಜೈಲಿಗೆ ಹಾಕ್ತೀನಿ ಎಂದು ಹೆದರಿಸುತ್ತಿದ್ದಾರೆ. ನೀನು ಹೇಳಿಕೆ ಕೊಟ್ಟರೆ ನಾವೇ ರಕ್ಷಣೆ ಕೊಡುತ್ತೇವೆ ಎಂದು ಬಲವಂತದ ಹೇಳಿಕೆ ಕೊಡಿಸಿ ಸರ್ಕಾರವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಅವರು ದೂರಿದರು.

ಇಡಿ ಅಧಿಕಾರಿ ಮೇಲೆ ಎಫ್ಐಆರ್ ಕೂಡ ಆಗಿದೆ. ಅದನ್ನು ಅಲ್ಲಿಗೇ ಬಿಟ್ಟು ಈಗ ರಾಜಭವನ ದುರುಪಯೋಗ ಪಡಿಸಿಕೊಳ್ಳಲು ಹೊರಟಿದ್ದಾರೆ. ರಾಜ್ಯಪಾಲರಿಗೆ ಅರ್ಜಿ ಕೊಟ್ಟು ರಾಜ್ಯಪಾಲರಿಂದ ಸರ್ಕಾರಕ್ಕೆ ಪತ್ರ ಬರೆಸಿ ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿಯವರು ಇವತ್ತು ಹತಾಶರಾಗಿದ್ದಾರೆ. ಜೆಡಿಎಸ್‌ನವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಜೆಡಿಎಸ್‌ನ ಒಬ್ಬರು, ಬಿಜೆಪಿಯ ಒಬ್ಬರು ದೆಹಲಿಯಲ್ಲಿ ಕುಳಿತು ಕರ್ನಾಟಕಕ್ಕೆ ನ್ಯಾಯ ಕೊಡಿಸುವುದನ್ನು ಬಿಟ್ಟು ನಮ್ಮ ಸರ್ಕಾರ ಬೀಳಿಸಲು ಹೊಂಚು ಹಾಕುತ್ತಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿರುವವರು ಮೇಕೆದಾಟು, ಕಳಸಾ ಬಂಡೂರಿ ಯೋಜನೆಗೆ ದುಡ್ಡು ಕೊಡಿಸುವುದು ಬಿಟ್ಟು ಅಲ್ಲಿ ಕುಳಿತು ನಮ್ಮ ಸರ್ಕಾರ ಬೀಳಿಸುವುದು ಹೇಗೆಂದು ಸ್ಕೆಚ್ ಹಾಕುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಅವರು ಏನು ಮಾಡ್ತಾರೆ ಮಾಡಲಿ, ನಾವು ಎಲ್ಲಾ ಸವಾಲು ಎದುರಿಸಲು ತಯಾರಿದ್ದೇವೆ. ಅವರ ಹಗಲು ಕನಸು ಫಲಿಸದು ಎಂದ ಅವರು, ಮುಡಾದಲ್ಲಿ ಹೆಚ್ಚು ಸೈಟ್ ತೆಗೆದುಕೊಂಡಿರುವುದು ಬಿಜೆಪಿ, ಜೆಡಿಎಸ್‌ನವರು. ಸಾವಿರಾರು ಸೈಟ್, ಸಾವಿರಾರು ಬದಲಿ ಜಮೀನು ಪಡೆದಿದ್ದಾರೆ. ಅವರೇ ಮಾಡಬಾರದ್ದು ಮಾಡಿ ನಮ್ಮ ಕಡೆಗೆ ಬೆರಳು ತೋರಿಸುತ್ತಿದ್ದಾರೆ ಎಂದು ದೂರಿದರು.

ಅವರ ಉದ್ದೇಶ ಯಾವ ಹಗರಣ ವಿರೋಧಿಸುವುದೂ ಅಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು ಅಲ್ಲ. ಅವರಿಗೆ ಅಧಿಕಾರದ ದಾಹ. ಬಡವರ ಪರವಾಗಿರುವ ಕಾಂಗ್ರೆಸ್ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ವಾಲ್ಮೀಕಿ ಹಗರಣ ಮುಚ್ಚಿ ಹಾಕಿದರು ಎಂದು ಯತ್ನಾಳ್ ಅವರು ಹೇಳಿದ್ದಾರೆ. ಇನ್ನೊಂದು ಕಡೆ ಪಾದಯಾತ್ರೆ ಬೇಕಾಗಿಲ್ಲ ಎಂದು ಜೆಡಿಎಸ್‌ನವರು ಹೇಳುತ್ತಿದ್ದಾರೆ. ಏಕೆಂದರೆ ಅವರೇ ಹೆಚ್ಚು ಪಲಾನುಭವಿಗಳು. ತನಿಖೆ ಮಾಡಿದರೆ ಹೆಚ್ಚು ಹೊರಗೆ ಬರುವುದು ಅವರದ್ದೇ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ನಮ್ಮ ಸರ್ಕಾರ ದೃಢವಾಗಿದೆ. ಆ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಕೃಷ್ಣಬೈರೇಗೌಡ ನುಡಿದರು.

More articles

Latest article