ಕರ್ನಾಟಕಕ್ಕೆ ಬರಬೇಕಾದ ನ್ಯಾಯಯುತವಾದ ಬರಪರಿಹಾರಕ್ಕೆ ಅಡ್ಡಗಾಲು ಹಾಕಿದ್ದು ಗೃಹ ಸಚಿವರಾದ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿಯವರು. ಈಗ ಸುಪ್ರೀಂ ಆದೇಶದಿಂದ ಅನಿವಾರ್ಯವಾಗಿ ಒಂದಿಷ್ಟಾದರೂ ಹಣವನ್ನು ಬಿಡುಗಡೆ ಮಾಡಬೇಕಾಗಿ ಬಂದಿರುವುದರ ಹಿಂದೆ ಈ ಮೂವರ ಯಾವುದೇ ಪಾತ್ರವೂ ಇಲ್ಲ. ಕನ್ನಡಿಗರ ಹಿತಾಸಕ್ತಿಯ ವಿರುದ್ಧ ಖಳನಾಯಕರಂತೆ ವರ್ತಿಸಿದ ಈ ಮೂವರೂ ಕನ್ನಡ ದ್ರೋಹಿಗಳು. – ಶಶಿಕಾಂತ ಯಡಹಳ್ಳಿ.
ಈ ಬಿಜೆಪಿಗರಿಗೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಅದು ಇದೂ ಅಂತಾ ಏನಾದರೂ ಇದೆಯಾ? ಏಳು ತಿಂಗಳಿಂದ ಕರ್ನಾಟಕ ಸರಕಾರವು ಕೇಂದ್ರದಿಂದ ಬರ ಪರಿಹಾರ ಪಡೆಯಲು ಹರಸಾಹಸ ಮಾಡುತ್ತಿದೆ. ಪತ್ರಗಳ ಮೇಲೆ ಪತ್ರ ಬರೆದಿದೆ. ಕೃಷಿ ಹಾಗೂ ಕಂದಾಯ ಸಚಿವರೇ ಹೋಗಿ ಅಮಿತ್ ಶಾ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ವಿನಂತಿಸಿ ಕೊಂಡಿದ್ದಾರೆ. “ಲೇಟಾಗಿ ಮನವಿ ಮಾಡಿದ್ದರಿಂದ ಬರ ಪರಿಹಾರ ವಿಳಂಬವಾಗಿದೆ” ಎಂದು ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾರವರು ಸಾರ್ವಜನಿಕವಾಗಿ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಎಳೆಎಳೆಯಾಗಿ ಕೇಂದ್ರ ಸರಕಾರದ ದ್ರೋಹವನ್ನು ಸಾರ್ವಜನಿಕವಾಗಿ ಬಿಚ್ಚಿಟ್ಟರು. ಚರ್ಚೆಗೂ ಬಾರದೆ ನಿರ್ಮಲಾರವರು ಪಲಾಯನ ಮಾಡಿದರು. ಇಷ್ಟೆಲ್ಲಾ ಆದರೂ ಒಂದೇ ಒಂದು ರೂಪಾಯಿ ಬರಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರಕಾರದ ದಮನಕಾರಿ ಧೋ ರಣೆಯಿಂದ ಬೇಸತ್ತ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯ್ತು. ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಮೇಲೆ ಚುನಾವಣಾ ಆಯೋಗ ಅನುಮತಿ ಕೊಡಲೇ ಬೇಕಾಯ್ತು. ಕೇಂದ್ರ ಸರಕಾರ ಎನ್ ಡಿ ಆರ್ ಎಫ್ ಮೂಲಕ ಬರಪರಿಹಾರ ನೀಡಲೇ ಬೇಕಾಯ್ತು. ಅದೂ ಎಷ್ಟು? ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ.
ಕರ್ನಾಟಕ ಹಿಂದೆಂದೂ ಕಾಣದ ತೀವ್ರವಾದ ಬರವನ್ನು ಅನುಭವಿಸುತ್ತಿದೆ. 223 ತಾಲ್ಲೂಕುಗಳನ್ನು ಬರಪೀಡಿತವೆಂದು 13-9-2024 ರಂದೇ ರಾಜ್ಯ ಸರಕಾರ ಘೋಷಿಸಿ ಬರಪರಿಹಾರಕ್ಕಾಗಿ ಕಾನೂನು ಪ್ರಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿತು. ಬರದಿಂದಾದ ನಷ್ಟ ಹಾಗೂ ಪರಿಹಾರಕ್ಕಾಗಿ ಒಟ್ಟು 35,162 ಕೋಟಿ ಹಣ ಬೇಕೆಂದು ಎಸ್ಟಿಮೇಟ್ ಮಾಡಲಾಗಿತ್ತು.
ರಾಷ್ಟ್ರೀಯ ಪರಿಹಾರ ನಿಧಿಯ ನಿಯಮಾವಳಿಗಳ ಪ್ರಕಾರ 18,171 ಕೋಟಿ ಬರ ಪರಿಹಾರ ಒದಗಿಸಲು ರಾಜ್ಯ ಸರಕಾರವು ಏಳು ತಿಂಗಳುಗಳಿಂದ ಮನವಿಗಳ ಮೇಲೆ ಮನವಿ ಮಾಡುತ್ತಲೇ ಬಂದಿತ್ತು. ಕೇಂದ್ರ ಸರಕಾರದ ಹಠಮಾರಿ ಧೋರಣೆಗೆ ಬೇಸತ್ತು ಸುಪ್ರೀಂಕೋರ್ಟ್ ನಲ್ಲಿ ನ್ಯಾಯಕ್ಕಾಗಿ ಆಗ್ರಹಿಸಲಾಯ್ತು. ಕೊನೆಗೂ ಕೋರ್ಟಿನ ಆದೇಶದಂತೆ ಈಗ ಕೇವಲ 3,499 ಕೋಟಿ ಹಣವನ್ನು ಮಾತ್ರ ಕೇಂದ್ರ ಸರಕಾರ ಬಿಡುಗಡೆ ಮಾಡಲು ಆದೇಶ ಮಾಡಿದೆ. ಇನ್ನೂ ಬರಬೇಕಾದ ಬಾಕಿ ಬೇಕಾದಷ್ಟಿದೆ. ಅದಕ್ಕಾಗಿ ರಾಜ್ಯ ಸರಕಾರ ಮತ್ತೆ ಕಾನೂನಾತ್ಮಕ ಹೋರಾಟ ಮುಂದುವರೆಸ ಬೇಕಾಗುತ್ತದೆ.
ಕೊಟ್ಟಿದ್ದೇ ಕಡಿಮೆ. ಅದರಲ್ಲೂ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿರುವುದು ಆ ಪಕ್ಷದ ದಿವಾಳಿತನವನ್ನು ತೋರಿಸುತ್ತದೆ. ಈಗ ಬಿಡುಗಡೆಯಾದ ಬರಪರಿಹಾರಕ್ಕೆ ಸುಪ್ರೀಂ ಕೋರ್ಟ್ ನ್ನು ಅಭಿನಂದಿಸ ಬೇಕಿದೆ. ಇದಕ್ಕಾಗಿ ನಿರಂತರವಾಗಿ ಕೇಂದ್ರದ ಜೊತೆ ಜಿದ್ದಿಗೆ ಬಿದ್ದಂತೆ ಬೆನ್ನತ್ತಿ ಒತ್ತಾಯಿಸಿದ ಕೃಷ್ಣ ಬೈರೇಗೌಡರ ಪ್ರಯತ್ನವನ್ನು ಶ್ಲಾಘಿಸಬೇಕಿದೆ. ಒಂದು ಹಂತದಲ್ಲಿ ಸಚಿವರುಗಳು ಕೈಚೆಲ್ಲಿ ಹತಾಶರಾಗಿ ಕೂತಿದ್ದಾಗ ಪ್ರೇರೇಪಿಸಿ ಕೇಂದ್ರ ಸರಕಾರದ ಹಿಂದೆ ಬೀಳುವಂತೆ ಮಾಡಿದ ಸಿಎಂ ಸಿದ್ದರಾಮಯ್ಯನವರನ್ನು ಕೊಂಡಾಡ ಬೇಕಿದೆ. ಸುಪ್ರೀಂ ಕೋರ್ಟ್ ಲ್ಲಿ ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿ ಕೇಂದ್ರ ಸರಕಾರದ ಮುಖವಾಡ ಬಿಚ್ಚಿಟ್ಟ ವಕೀಲರಾದ ಕಪೀಲ್ ಸಿಬಲ್ ರವರ ಪ್ರಯತ್ನ ಮೆಚ್ಚಬೇಕಿದೆ. ಆದರೆ ಕರ್ನಾಟಕಕ್ಕೆ ಬರಬೇಕಾದ ನ್ಯಾಯಯುತವಾದ ಬರಪರಿಹಾರಕ್ಕೆ ಅಡ್ಡಗಾಲು ಹಾಕಿದ್ದು ಗೃಹ ಸಚಿವರಾದ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿಯವರು. ಈಗ ಸುಪ್ರೀಂ ಆದೇಶದಿಂದ ಅನಿವಾರ್ಯವಾಗಿ ಒಂದಿಷ್ಟಾದರೂ ಹಣವನ್ನು ಬಿಡುಗಡೆ ಮಾಡಬೇಕಾಗಿ ಬಂದಿರುವುದರ ಹಿಂದೆ ಈ ಮೂವರ ಯಾವುದೇ ಪಾತ್ರವೂ ಇಲ್ಲ. ಕನ್ನಡಿಗರ ಹಿತಾಸಕ್ತಿಯ ವಿರುದ್ಧ ಖಳನಾಯಕರಂತೆ ವರ್ತಿಸಿದ ಈ ಮೂವರೂ ಕನ್ನಡ ದ್ರೋಹಿಗಳು. ಒಕ್ಕೂಟ ವ್ಯವಸ್ಥೆಯ ವಿಲನ್ ಗಳು.
ಆದರೆ ಈ ಬಿಜೆಪಿ ಎನ್ನುವ ಪಕ್ಷದ ಅವಕಾಶವಾದಿಗಳು ಬರಪರಿಹಾರವನ್ನು ನೀಡಿ ಕನ್ನಡಿಗರ ಹಿತ ಕಾಪಾಡಿದ್ದಕ್ಕೆ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿ ಜಾಹೀರಾತು ಕೊಟ್ಟಿದ್ದಾರೆ. ಇದಕ್ಕಿಂತ ಅಸಹ್ಯಕರ ಸಂಗತಿ ಯಾವುದಿದೆ?.
ಬಿಜೆಪಿ ಪಕ್ಷ ನೈತಿಕವಾಗಿ ಅಧಪತನಕ್ಕೆ ಇಳಿದಿದೆ. ಬೌದ್ಧಿಕವಾಗಿ ದಿವಾಳಿಯಾಗಿದೆ. ಹೇಳಿಕೊಳ್ಳವಂತಹ ಯಾವುದೇ ಅಭಿವೃದ್ಧಿಯ ವಿಷಯ ಇವರಿಗೆ ಇಲ್ಲವಾಗಿದೆ. ಇನ್ಯಾರೋ ಸತತ ಪ್ರಯತ್ನದಿಂದ ತಂದ ಬರ ಪರಿಹಾರಕ್ಕೂ ಮೋದಿ ಹೆಸರನ್ನು ಜೋಡಿಸುವ ಕೇಸರಿ ಪಡೆಯ ಬೇಷರಮ್ ಕಾರ್ಯಕ್ಕೆ ಕನ್ನಡಿಗರು ಪಾಠ ಕಲಿಸಲೇಬೇಕಿದೆ. ಬಿಜೆಪಿ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನೂ ಸೋಲಿಸುವ ಮೂಲಕ ಕರ್ನಾಟಕ ವಿರೋಧಿ ಕೇಂದ್ರ ಸರಕಾರವನ್ನು ಕೆಳಗಿಳಿಸಲೇ ಬೇಕಿದೆ. ಕರ್ನಾಟಕದ ನ್ಯಾಯಯುತವಾದ ಪಾಲನ್ನು ಕೊಡದೇ ವಂಚಿಸುತ್ತಿರುವ ಮೋದಿ ಶಾ ಮತ್ತು ನಿರ್ಮಲಾ ಸೀರಾರಾಮನ್ ರವರ ದುರಹಂಕಾರಕ್ಕೆ ಮದ್ದರೆಯಲೇ ಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-ನಾಯ್ಕರನ್ನು ಕೆರಳಿಸಿದ ಕಾಗೇರಿ ಶಿಷ್ಯರು: ರಂಗೇರಿತು ಉತ್ತರ ಕನ್ನಡ ಚುನಾವಣಾ ಕಣ