ಬೆಂಗಳೂರು: ಕೆರಗೋಡು ಹನುಮಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಠೇವಣಿ ಸಿಕ್ಕಿಲ್ಲ. ಆ ಅಸಹನೆಯಿಂದಾಗಿ ಅಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಂಡ್ಯ ಶಾಂತಿಯ ನಾಡು. ಮಹಾರಾಜರು ಆಳಿದ ನಾಡು. ಅಲ್ಲಿನ ಜನರು ಶಾಂತಿಪ್ರಿಯರು ಮತ್ತು ಜಾತ್ಯತೀತ ಮನೋಭಾವದವರು. ಬಿಜೆಪಿಯ ಹತಾಶ ಯತ್ನಗಳಿಗೆ ಅವರು ಬೆಲೆ ಕೊಡುವುದಿಲ್ಲ ಎಂದರು.
ಬಿಜೆಪಿಯವರು ಮಾತ್ರ ಹಿಂದೂಗಳೇ? ನಾವು ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದ ಅವರು ಲೋಕಸಭಾ ಚುನಾವಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈ ನಡುವೆ ಕೆರಗೋಡಿನಿಂದ ಪಾದಯಾತ್ರೆ ನಡೆಸಿರುವ ಭಾರತೀಯ ಜನತಾ ಪಕ್ಷ ಬೆಂಗಳೂರು, ಮಂಡ್ಯ ಸೇರಿದಂತೆ ಹಲವೆಡೆ ಹನುಮಧ್ವಜ ತೆರವುಗೊಳಿಸಿದ ಪ್ರಕರಣ ಕುರಿತಂತೆ ಪ್ರತಿಭಟನೆ ನಡೆಸಿದೆ.
ವಿದೇಶಿ ಮನಸ್ಥಿತಿಯ ಕಾಂಗ್ರೆಸ್ ಸರ್ಕಾರ ಭಾರತೀಯತೆ, ಹಿಂದೂಗಳ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿದೆ. ಔರಂಗಜೇಬ್ ಪ್ಲೆಕ್ಸ್ ಹಾಕಲು ಕಿಡಿಗೇಡಿಗಳಿಗೆ ಅವಕಾಶ ಕೊಡುವ ಸರ್ಕಾರ ಊರವರು ಸೇರಿ ಹನುಮಧ್ವಜ ಹಾರಿಸಲು ಅವಕಾಶವಿಲ್ಲ ನೀಡುತ್ತಿಲ್ಲ. ಕೋಲಾರದಲ್ಲಿ ಕತ್ತಿಯ ಕಮಾನು ನಿರ್ಮಿಸಲು ಅನುಮತಿ ನೀಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ.