ಅಧಿಕಾರಕ್ಕೆ ಬರಲು ಬಿಜೆಪಿ ಧರ್ಮ- ಧರ್ಮಗಳ ನಡುವೆ ಕಿಚ್ಚು ಹಚ್ಚುತ್ತಿದೆ: ಭಂಡಾರಿ

Most read

ಕಾರವಾರ: ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಅರಿತ ಪ್ರಧಾನಿ ಧರ್ಮ- ಧರ್ಮಗಳ ನಡುವೆ ಗೊಂದಲ ತಂದು ಮತ ಗಳಿಸಲು ಮುಂದಾಗಿದ್ದಾರೆ. ಜನರು ಈ ಬಾರಿ ಬಿಜೆಪಿಯನ್ನ ನಂಬುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರ ಪ್ರಚಾರಕ್ಕೆಂದು ಕಾರವಾರಕ್ಕೆ ಆಗಮಿಸಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬ್ರಿಟೀಷರು ನಮ್ಮ ಖಜಾನೆ ಖಾಲಿ ಮಾಡಿ ಹೋದಾಗಲು ಅಧಿಕಾರ ತೆಗೆದುಕೊಂಡ ಕಾಂಗ್ರೆಸ್ ಜನರ ಬದುಕನ್ನ ಕಟ್ಟಿದೆ. ಇಂದಿರಾ ಗಾಂಧಿ ಅವರು ಉಳುವವನೆ ಭೂ ಒಡೆಯ ಯೋಜನೆ ತಂದರು. ರಾಜೀವ್ ಗಾಂಧಿ ಎಲ್ಲರೂ ರಾಜಕೀಯಕ್ಕೆ ಬರಬೇಕು ಎಂದು ಮೀಸಲಾತಿ ತಂದಿದೆ. ಎಲ್ಲಾ ಪ್ರಧಾನಿಗಳು ಒಂದೊಂದು ಯೋಜನೆ ಜನರಿಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಬದುಕನ್ನು ಕಟ್ಟಲು ಹೊರಟರೆ ಬಿಜೆಪಿ ಜನರ ಭಾವನೆಯ ಮೇಲೆ ಚುನಾವಣೆ ಮಾಡುತ್ತಿದೆ. ರಾಷ್ಟ್ರ ಪ್ರೇಮಿಗಳು, ರಾಷ್ಟ್ರ ದ್ರೋಹಿಗಳು ಎಂದು ಸರ್ಟಿಫಿಕೇಟ್ ಕೊಡಲು ನಿವು ಯಾರು? ಎಂದು ಪ್ರಶ್ನಿಸಿದರು.

ಪ್ರಧಾನಿ ಈ ಬಾರಿ 400 ಗೆಲ್ಲುತ್ತೇವೆ ಎಂದು ಚುನಾವಣೆ ಪ್ರಾರಂಭಿಸಿದ್ದರು. ಈಗ ಮೊದಲ ಹಂತದ ಚುನಾವಣೆ ನಂತರ ಅವರಿಗೆ ತಿಳಿದಿದೆ ಬಹುಮತ ಯಾರಿಗೆಂದು. ಅಧಿಕಾರಕ್ಕೆ ಹೇಗಾದರು ಬರಲೇ ಬೇಕು ಎಂದು ಮಾಂಗಲ್ಯ, ಮುಸ್ಲಿಂ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿದ್ದಾರೆ. ಹತ್ತು ವರ್ಷದ ಹಿಂದೆ ಅಧಿಕಾರಕ್ಕೆ ಬರುವಾಗ ಕಪ್ಪು ಹಣ ತರುತ್ತೇವೆ ಎಂದು ಚುನಾವಣೆ ಎದುರಿಸಿದರು. ಕಪ್ಪು ಹಣ ತಂದು ಬಂಗಾರದ ರಸ್ತೆ ಮಾಡುತ್ತೇವೆ, ಪೆಟ್ರೋಲ್ ರೇಟ್ ಕಡಿಮೆ ಮಾಡುತ್ತೇವೆ, ಉದ್ಯೋಗ ಕೊಡುತ್ತೇವೆ, ಭ್ರಷ್ಟ ಹಣವನ್ನ ತಮ್ಮ ಖಾತೆಗೆ ಹಾಕುತ್ತೇವೆ ಎಂದರು. ಜನರು ಅವರ ಮಾತಿಗೆ ಮರಳಾದರು. ಅರವತ್ತು ವರ್ಷ ಕಾಂಗ್ರೆಸ್ ಲೂಟಿ ಮಾಡಿದ್ದಾರೆ ಎಂದು ನಂಬಿದ್ದರು.. ಆದರೆ ಐದು ವರ್ಷ ಏನು ಬಿಜೆಪಿಗರು ಮಾಡಲಿಲ್ಲ. ಕಳೆದ ಚುನಾವಣೆ ವೇಳೆಗೆ ಪುಲ್ವಾಮ ದಾಳಿ ಇಟ್ಟುಕೊಂಡು ದೇಶ ರಕ್ಷಣೆಗೆ ಮೋದಿಯೇ ಸರಿ ಎಂದು ಚುನಾವಣೆ ಎದುರಿಸಿದರು. ಜನರು ಆಗ ಓಟು ಹಾಕಿದರು. ಹತ್ತು ವರ್ಷ ಆಗಿದೆ. ಈಗ ಜನರ ಮುಂದೆ ಬನ್ನಿ ಗ್ಯಾಸ್, ಬೆಲೆ, ತೊಗರಿಬೆಲೆ, ಡಾಲರ್ ಬೆಲೆ ಎಷ್ಟಿತ್ತು. ಈಗ ಎಷ್ಟಿದೆ ಎಂದು ತಿಳಿಸಿ. ಬೆಲೆ ಏರಿಕೆ, ನಿರುದ್ಯೋಗ, ರಕ್ಷಣೆ, ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕೇಳಿದರು.

ಸಂಪತ್ತನ್ನ ಲೂಟಿ ಮಾಡಿ ಮುಸ್ಲಿಂ ಅವರಿಗೆ ಕೊಡುತ್ತೇವೆ ಎಂದು ಹೇಳುವ ನಿಮಗೆ ರಾಜಕೀಯ ದಿವಾಳಿತನ ತೋರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೊದಲಬಾರಿಗೆ ಚುನಾವಣಾ ಆಯೋಗ ಪ್ರಧಾನಿ ಭಾಷಣಕ್ಕೆ ನೋಟಿಸ್ ನೀಡಿದ್ದಾರೆ. ಚುನಾವಣಾ ಆಯೋಗವೇ ನಿಮಗೆ ನೋಟಿಸ್ ಕೊಟ್ಟರೇ ನಿಮ್ಮ ಮಾತು ಹೇಗಿದೆ ಎನ್ನುವುದನ್ನ ತಿಳಿಯಲಿ. ಪ್ರಜಾಪ್ರಭುತ್ವ ಎಲ್ಲಿಗೆ ಬಂದಿದೆ ಎಂದರೆ ಪ್ರಜಾಪ್ರಭುತ್ವದಲ್ಲಿರುವ ನಾಯಕರನ್ನ ಜೈಲಿಗೆ ಕಳಿಸಿದ್ದೀರಿ,ಯಾವ ಆಧಾರದ ಮೇಲೆ ಜೈಲಿಗೆ ಕಳಿಸಿದ್ದೀರಿ. ನೀವೆ ತಂದ ಎಲೆಕ್ಟ್ರೋಲ್ ಬಾಂಡ್ ಸರಿಯಾಗಿಲ್ಲ, ಕಪ್ಪು ಹಣ ಮಾಡಲು ದಾರಿದೀಪ ಎಂದು ಹೇಳಲಾಗಿದೆ. ಹಾಗಾದರೆ ಜೈಲಿಗೆ ನೀವು ಹೋಗಬೇಕಲ್ವಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. 2014 ರಲ್ಲಿ 2019 ರಲ್ಲಿ 2024 ರಲ್ಲಿ ಯಾವ ರೀತಿ ಇದ್ದಿರಿ ಎಂದು ಜನರು ನೋಡುತ್ತಿದ್ದಾರೆ. ಜನರು ಇನ್ನೂ ಬಿಜೆಪಿಯನ್ನ ನಂಬಲು ಸಾಧ್ಯವಿಲ್ಲ ಎಂದರು.

ಹದಿನೆಂಟು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಅಧಿಕ ಮತ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದಿತ್ತು. ಈ ಬಾರಿ ಸಹ ಹೆಚ್ಚಿನ ಮತ ಪಡೆಯಲಿದ್ದು, ಹೆಚ್ಚಿನ ಸ್ಥಾನ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಮಂಜುನಾಥ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಐದು ಕೋಟಿ ಜನರಿಗೆ ಗ್ಯಾರಂಟಿಯಿಂದ ಲಾಭ ಆಗಿದೆ. ಜನ ಗ್ಯಾರಂಟಿ ಕೊಡುವ ಮುನ್ನವೇ ಹದಿನೆಂಟು ಕ್ಷೇತ್ರದಲ್ಲಿ ಹೆಚ್ಚು ಸ್ಥಾನದಲ್ಲಿ ಲೀಡ್ ಪಡೆದಿದ್ದೆವು. ಈ ಬಾರಿ 25 ಸ್ಥಾನದಲ್ಲಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸುನೀಲ್ ನಾಯ್ಕ, ಶಂಭು ಶೆಟ್ಟಿ, ವೆಂಕಟೇಶ ಹೆಗಡೆ ಹೊಸಬಾಳೆ, ರಮೇಶ್ ದುಬಾಶಿ, ವಿಶ್ವನಾಥ ಗೌಡ, ಅಪೂರ್ವ ನಾಯ್ಕ ಉಪಸ್ಥಿತರಿದ್ದರು

More articles

Latest article