Tuesday, December 10, 2024

ಸತ್ಯದ ಕೊಲೆ ಮಾಡಿ ಸುಳ್ಳಿನ ಮೆರವಣಿಗೆ ಮಾಡುವ ಭ್ರಷ್ಟ ಜನತಾ ಪಾರ್ಟಿ: ಪ್ರಿಯಾಂಕ್ ಖರ್ಗೆ

Most read

ಬೆಂಗಳೂರು: ಸುಳ್ಳಿನ ಮೆರವಣಿಗಾಗಿ ಸತ್ಯದ ಕೊಲೆ ಮಾಡಿ ಸಮಾಧಿ ಮಾಡುವ ಪ್ರಯತ್ನ “ಭ್ರಷ್ಟ ಜನತಾ ಪಾರ್ಟಿ“ಯವರದ್ದು. ಆದರೆ ಸತ್ಯಕ್ಕೆ ಸಾವಿಲ್ಲ ಎಂಬ ಅರಿವು ಅವರಿಗೆ ಇದ್ದಂತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಅವಧಿಯಲ್ಲೇ ವಕ್ಫ್‌ ಆಸ್ತಿ ಕುರಿತು ಅತಿ ಹೆಚ್ಚು ನೋಟಿಸ್‌ ನೀಡಿರುವ ವಿಷಯ ಹೊರ ಬರುತ್ತಿದ್ದಂತೆ ಅವರು ಆಕ್ರೋಶ ವ್ಯಕ್ತಪಡಿಸಿ ಕಮಲದ ನಾಯಕರನ್ನು ಲೇವಡಿ ಮಾಡಿದ್ದಾರೆ.

ಕೂಸನ್ನು ಚಿವುಟುವುದೂ ಬಿಜೆಪಿಯವರೇ, ತೊಟ್ಟಿಲು ತೂಗುವುದೂ ಬಿಜೆಪಿಯವರೇ, ಬಿಜೆಪಿಯವರ ಈ ಕಳ್ಳಾಟ ವಕ್ಫ್ ವಿಚಾರದಲ್ಲಿ ಬಟಾಬಯಲಾಗಿದೆ. ಅಂದಹಾಗೆ, ಬಿಜೆಪಿಗರು ನಡೆಸುತ್ತಿರುವುದು ರೈತರ ಪರವಾದ ಹೋರಾಟವಲ್ಲ, ವಿಜಯೇಂದ್ರ ಹಠಾವೋ ಹೋರಾಟ! ಈ ಸತ್ಯ ಜಗನ್ನಾಥ ಭವನದ ಪ್ರತಿ ಕಿಟಕಿ ಬಾಗಿಲುಗಳಿಗೂ ತಿಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಪ್ರಶ್ನೆಗಳಿಗೆ ಉತ್ತರಿಸುವಂತೆ ಅವರು ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ.

* 2018-2023ರ ನಡುವೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆ ನಡೆಸಿ ವಕ್ಫ್ ಆಸ್ತಿ ಗುರುತಿಸಿ, ತೆರವುಗೊಳಿಸಲು ಸೂಚನೆ ನೀಡಿದ್ದು ಏಕೆ?

* 2019ರಿಂದ 2020ರ ಅವಧಿಯಲ್ಲಿ ಬಿಜೆಪಿ ಸರ್ಕಾರ 2,865 ಎಕರೆ ವಿಸ್ತೀರ್ಣದ ಜಮೀನಿಗೆ ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿದ್ದು ಏಕೆ?

* ಹಿಂದಿನ ಬಿಜೆಪಿ ಸರ್ಕಾರ 1,735 ರೈತರಿಗೆ ವಕ್ಫ್ ಅಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದು ಏಕೆ?

* ಹಿಂದಿನ ಬಿಜೆಪಿ ಸರ್ಕಾರ 4,720 ಎಕರೆಯಷ್ಟು ಜಮೀನನ್ನು ಪರಬಾರೆಯಾಗದಂತೆ ವಕ್ಫ್ ಆಸ್ತಿ ಎಂದು ಫ್ಲಾಗ್ ಆಫ್ ಮಾಡಿದ್ದು ಏಕೆ?

* ರೈತರ ಹೆಸರಲ್ಲಿರುವ ಆಸ್ತಿಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೋದಿಸಬೇಕು ಎಂದು ಕುಮಾರ್ ಬಂಗಾರಪ್ಪ ಸಮಿತಿ ಸೂಚಿಸಿದ್ದು ಏಕೆ?

* ರಾಜ್ಯದಾದ್ಯಂತ ತಾಲೂಕುವಾರು ವಕ್ಫ್ ಆಸ್ತಿಗಳನ್ನು ಪರಿಶೀಲಿಸಿ ಭೂಮಿ ಸಾಫ್ಟ್ ವೇರ್ ನಲ್ಲಿ ವಕ್ಫ್ ಆಸ್ತಿ ಎಂದು ನಮೋದಿಸಬೇಕು ಎಂದು ಸೂಚಿಸಿದ್ದು ಏಕೆ?

* ಬಿಜೆಪಿ ಸರ್ಕಾರದ ಅವಧಿಯ ಕುಮಾರ್ ಬಂಗಾರಪ್ಪ ಸಮಿತಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯನ್ನು ವಕ್ಫ್ ಆಸ್ತಿ ಎಂದು ನೀಡಿದ್ದ ವರದಿಯನ್ನು ಸದನದಲ್ಲಿ ಅಂಗೀಕರಿಸಲಾಗಿತ್ತು, ಆಗ ಬಿಜೆಪಿಯವರ ಪ್ರಜ್ಞೆ ಎಲ್ಲಿ ಉದುರಿ ಬಿದ್ದಿತ್ತು?

 ಈ ಎಲ್ಲಾ ಪ್ರಶ್ನೆಗಳಿಗೆ ವಕ್ಫ್ ಆಸ್ತಿ ಅಲ್ಲಾನ ಆಸ್ತಿ ಎಂದಿದ್ದ ಬೊಮ್ಮಾಯಿಯವರು ಉತ್ತರಿಸುತ್ತಾರೋ? ಟಿಪ್ಪು ಟೋಪಿ ಧರಿಸಿ ಖಡ್ಗ ಹಿಡಿದಿದ್ದ ಯಡಿಯೂರಪ್ಪನವರು ಉತ್ತರಿಸುತ್ತಾರೋ? ಅಥವಾ  ವಕ್ಫ್ ವಿಚಾರಕ್ಕಾಗಿ ರಾಜ್ಯ ಪ್ರವಾಸಕ್ಕೆ ಹೊರಡುತ್ತಿರುವ ಬಿಜೆಪಿಯ A ಟೀಮ್, B ಟೀಮ್ ನಾಯಕರು ಜನತೆಗೆ ಈ ಸತ್ಯಗಳನ್ನು ತಿಳಿಸಿ ಬರುತ್ತಾರೆಯೇ ಎಂದು ಸವಾಲು ಹಾಕಿದ್ದಾರೆ.

More articles

Latest article