ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕುರಿತು ದಿನದಿಂದ ದಿನಕ್ಕೆ ಹೆಚ್ಚು ಚರ್ಚೆಯಾಗುತ್ತಿದೆ . ಈವರೆಗೂ ತೆರೆಮರೆಯಲ್ಲಿದ್ದ ಗೋ ಬ್ಯಾಕ್ ಶೋಭಾ ಚಳವಳಿ ಭಾನುವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲೇ ಸ್ಫೋಟಗೊಂಡಿದೆ.
ಹೌದು, ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಚುನಾವಣಾ ನಿರ್ವಹಣಾ ಸಮಿತಿ ಸಭೆ ಆರಂಭವಾಗುತ್ತಿದ್ದಂತೆ ವಿವಿಧ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಕಚೇರಿ ದ್ವಾರದಲ್ಲಿ ಪ್ರತಿಭಟನೆಗೆ ಮುಂದಾದರು. ಗೋಬ್ಯಾಕ್ ಶೋಭ, ಶೋಭಕ್ಕ ತೊಲಗಿಸಿ ಬಿಜೆಪಿ ಉಳಿಸಿ, ಮೋದಿಜೀ ಬೇಕು- ಶೋಭ ಬೇಡ ಎಂಬ ಘೋಷಣೆ ಕೂಗಲಾರಂಭಿಸಿದರು. ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನು ರದ್ದು ಮಾಡುವಂತೆ ಆಗ್ರಹಿಸಿದರು.
ಬಿಜೆಪಿಯಲ್ಲಿ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಆದರೆ, ಯಡಿಯೂರಪ್ಪ ಅವರು ಶೋಭಾ ಅವರಿಗೇ ಟಿಕೆಟ್ ಎಂದು ಎಲ್ಲೆಡೆ ಹೇಳಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದೂ ಎಂಎಲ್‌ಎ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಉಡುಪಿಯಲ್ಲಿ ಬಿಜೆಪಿಯ ಐವರು ಶಾಸಕರಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ನಮ್ಮ ನಾಲ್ವರು ಅಭ್ಯರ್ಥಿಗಳು ಸೋಲಲು ಶೋಭಾ ಕರಂದ್ಲಾಜೆ ಅವರೇ ಕಾರಣ. ಈ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಂಡಿಲ್ಲ ಯಾವುದೇ ಕೆಲಸ ಅವರಿಂದ ಆಗಿಲ್ಲ. ಹೀಗಾಗಿ ಅವರಿಗೆ ಟಿಕೆಟ್ ಕೊಡಬಾರದು ಎನ್ನುವ ಮೂಲಕ ಪರೋಕ್ಷವಾಗಿ ಸಿಟಿ ರವಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನು ರದ್ದು ಮಾಡಲಾಯಿತು.