ಬೆಂಗಳೂರು: PSI ನೇಮಕಾತಿ ಹಗರಣದ ಮುಖ್ಯ ಆರೋಪಿ ಮನೆಗೆ ಬಿಜೆಪಿ ಅಭ್ಯರ್ಥಿ ಭೇಟಿನೀಡಿದ ಪ್ರಕರಣ ಕುರಿತು ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತೀಯ ಜನತಾ ಪಕ್ಷ ಹಗರಣದ ಆರೋಪಿಗಳ ಜೊತೆ ಶಾಮೀಲಾಗಿದೆ, ಅವರ ವಿರುದ್ಧ ಇರುವ ಸಾಕ್ಷ್ಯಗಳನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದೆ.
ಕೆಪಿಸಿಸಿ ಕಚೇರಿಯಲ್ಲಿಂದ ಕಾಂಗ್ರೆಸ್ ನಾಯಕರುಗಳಾದ ರಮೇಶ್ ಬಾಬು, ತೇಜಸ್ವಿನಿ ರಮೇಶ್ ಜಂಟಿ ಸುದ್ದಿಗೋಷ್ಠಿ ನಡೆಸಿ ಅಪರಾಧಿಗಳೊಂದಿಗಿನ ಬಿಜೆಪಿ ಸಖ್ಯದ ಕುರಿತು ಕಿಡಿಕಾರಿದರು.
ಪಿಎಸ್ ಐ ನೇಮಕಾತಿ ಹಗರಣ ಸಂದರ್ಭದಲ್ಲಿ 55 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅಂದಿನ ಗೃಹ ಸಚಿವರು ಅಕ್ರಮ ನಡೆದೇ ಇಲ್ಲ ಎಂದಿದ್ದರು. ಪ್ರಿಯಾಂಕ್ ಖರ್ಗೆ ದಾಖಲೆ ಸಮೇತ ಹೊರಗಿಟ್ಟಿದ್ದರು. ಆಗ ಸಿಐಡಿ ತನಿಖೆಗೆ ನೀಡಲಾಗಿತ್ತು. ಉಮೇಶ್ ಜಾದವ್ ಕಲಬುರಗಿ ಬಿಜೆಪಿ ಕ್ಯಾಂಡಿಡೇಟ್. ಕಾಪಿ ಕೇಂದ್ರ ತಯಾರು ಮಾಡುವಲ್ಲಿ ಜಾಧವ್ ಪ್ರಮುಖರು. ಒಂದು ಶಾಲೆಗೆ ಇವರೇ ರೆಕಮೆಂಡ್ ಮಾಡ್ತಾರೆ. ಪರೀಕ್ಷಾ ಕೇಂದ್ರಕ್ಕೆ ಅನುಮತಿ ಕೊಡಿಸ್ತಾರೆ. ಈಗ ಪ್ರಕರಣದ ಕಿಂಗ್ ಪಿನ್, ಜಾಮೀನಿನ ಮೇಲೆ ಹೊರಗೆ ಇರು ಆರ್. ಡಿ. ಪಾಟೀಲ್ ಮನೆಗೆ ಹೋಗಿದ್ದಾರೆ. ಇದು ಕ್ರಿಮಿನಲ್ ಗಳ ಜೊತೆ ಬಿಜೆಪಿಯವರಿಗೆ ಇರುವ ನಂಟು ತೋರಿಸುತ್ತದೆ ಎಂದರು.
ಕ್ರಿಮಿನಲ್ ಗಳ ಮನೆಯಲ್ಲಿ ಊಟ ಮಾಡಿ ಬರ್ತಾರೆ. ಊಟ ಮಾಡಿದ ಫೋಟೋ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಕೊಳ್ಳುತ್ತಾರೆ. ಆರೋಪಿ ದಿವ್ಯಾ ಹಾಗರಗಿ ಜೊತೆ ಮೆರವಣಿಗೆ ನಡೆಸಿದ್ದಾರೆ. ಕ್ರಿಮಿನಲ್ ಕೇಸ್ ಇದ್ದಾಗ ಜಾಮೀನು ಸಿಗಲ್ಲ. ಸಾಕ್ಷ್ಯ ನಾಶ ಮಾಡಲ್ಲ ಅನ್ನುವ ಮುಚ್ಚಳಿಕೆ ಮೇಲೆ ಜಾಮೀನು ಸಿಗುತ್ತೆ. ಇಂತವರ ಜೊತೆಗೆ ಜಾಧವ್ ಕಾಣಿಸಿಕೊಂಡಿದ್ದಾರೆ. ಆರೋಪಿಗಳ ಜೊತೆ ಸೇರಿ ಸಾಕ್ಷ್ಯ ನಾಶ ಮಾಡ್ತಿದ್ದಾರೆ ಎಂದು ಉಮೇಶ್ ಜಾಧವ್ ವಿರುದ್ಧ ರಮೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಭ್ರಷ್ಟಾಚಾರ ಹೊರಗೆ ಬಂದಿದೆ. ಆರೋಪಿ ಜೊತೆ ಕೂರೋದು. ಅವರ ಜೊತೆ ಊಟ ಮಾಡೋದು. ಅವರ ಜೊತೆ ಮೆರವಣಿಗೆ ಮಾಡೋದು ಕಂಡಿದೆ. ಬಿಜೆಪಿಯವರು ನಾಳೆ ಶ್ರೀಕಿಯನ್ನು ಕರೆದು ಕ್ಯಾನ್ ವಾಸ್ ಮಾಡಬಹುದು. ಬಿಜೆಪಿಯವರು ಕ್ರಿಮಿನಲ್ಸ್ ಗಳ ಜೊತೆಯೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಪಿಎಸ್ ಐ ಸ್ಕ್ಯಾಂ ತನಿಖೆ ನಡೆದಿದೆ. ನ್ಯಾ.ವೀರಪ್ಪ ಕಮಿಟಿ ತನಿಖೆ ನಡೆಸಿದೆ. ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಆದರೆ ಕೆಲವರು ಸಮಿತಿ ಮುಂದೆ ಹಾಜರಾಗಿಲ್ಲ. ಪ್ರಕರಣಕ್ಕೆ ಸಂಬಂದಿಸಿದಂತೆ ಮಾಹಿತಿ ಕೊಟ್ಟಿಲ್ಲ. ಆರಗ ಜ್ಙಾನೇಂದ್ರ ಸೇರಿ ಕೆಲವರು ಕೊಟ್ಟಿಲ್ಲ. ಹಾಗಾಗಿ ಜನರೇ ಇದಕ್ಕೆ ಉತ್ತರ ಕೊಡಬೇಕು. ಭ್ರಷ್ಟರ ಜೊತೆ ಸೇರಿರುವವರಿಗೆ ಬುದ್ಧಿ ಕಲಿಸಬೇಕು. ಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡಬೇಕು. ರಾಜ್ಯದ ಜನರಿಗೆ ರಮೇಶ್ ಬಾಬು ಕರೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ವೈಯಕ್ತಿನ ನಿಂದನೆಗೆ ಇಳಿದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸೋಲಿನ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಹತಾಶ ಮನೋಭಾವ ಎದ್ದುಕಾಣ್ತಿದೆ ಎಂದು ಅವರು ಟೀಕಿಸಿದರು.
ದೇವೇಗೌಡರಿಗೆ ಎಲ್ಲರೂ ಗೌರವ ಕೊಡ್ತಾರೆ. ಆದರೆ ಮಗನ ಮೇಲೆ ಬಂದ ಆರೋಪದ ಹಿನ್ನೆಲೆಯಲ್ಲಿ ದೇವೇಗೌಡರು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ವೈಯುಕ್ತಿಕ ನಿಂದನೆ ಮಾಡಿದ್ದಾರೆ. 1999ರಿಂದಲೂ ಡಿ.ಕೆ.ಶಿವಕುಮಾರ್ ಅವರ ಮೇಲೆ ಕುಮಾರಸ್ವಾಮಿಗೆ ದ್ವೇಷವಿದೆ. ಅದಕ್ಕಾಗಿ ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ ಎಂದರು.
2013 ರಲ್ಲಿಯೇ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿದ್ದರು. ಆಗ ಅನಿತಾ ಕುಮಾರಸ್ವಾಮಿ ಸೋತಿದ್ದರು. ಅಂದೇ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ವರ್ಕ್ ಔಟ್ ಆಗೋದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಸುಮಲತಾ ವಿರುದ್ಧ ನಿಖಿಲ್ ಸೋತ್ರು. ರಾಮನಗರದಲ್ಲೂ ಸೋತರು. ಹಾಗಾಗಿ ಕುಮಾರಸ್ವಾಮಿಗೆ ಡಿಕೆಶಿ ಮೇಲೆ ದ್ವೇಷ ಇದೆ. ಮಗನನ್ನು ಸೋಲಿಸಿದರು ಅನ್ನೋ ದ್ವೇಷವಿದೆ ಎಂದು ಅವರು ನುಡಿದರು.
ದೇವೇಗೌಡರು ದಲಿತರಿಗೆ ಅನ್ಯಾಯ ಮಾಡಿದ್ದರು. ಹೊಳೆನರಸೀಪುರದಲ್ಲಿ ದೇಗುಲಕ್ಕೆ ಪ್ರವೇಶ ಕೊಡಲಿಲ್ಲ. ಅದನ್ನ ಯಾರು ಮರೆತಿಲ್ಲ. ರಾಜಕೀಯವಾಗಿ ಡಿಕೆಶಿ ಎದುರಿಸೋಕೆ ಆಗ್ತಿಲ್ಲ. ಹಾಗಾಗಿ ವೈಯುಕ್ತಿಕ ನಿಂದನೆ ಮಾಡಿದ್ದಾರೆ ಎಂದಿದ್ದಾರೆ ಎಂದು ಅವರು ಕಿಡಿಕಾರಿದರು.