ಮಹಿಳೆಗೆ ಸಾರ್ವಜನಿಕವಾಗಿ ಮುತ್ತು ನೀಡಿ, ವಿಚಿತ್ರವಾಗಿ ಸಮರ್ಥಿಸಿಕೊಂಡ ಬಿಜೆಪಿ ಅಭ್ಯರ್ಥಿ

Most read

ಕೋಲ್ಕತ್ತ: ಭಾರತೀಯ ಜನತಾ ಪಕ್ಷದ ಲೋಕಸಭಾ ಸದಸ್ಯ ಮತ್ತು ಅಭ್ಯರ್ಥಿ ಖಾಗೇನ್ ಮುರ್ಮು ಎಂಬಾತ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕವಾಗಿ ಬಲವಂತವಾಗಿ ಮಹಿಳೆಯೋರ್ವರಿಗೆ ಮುತ್ತು ನೀಡಿರುವ ಘಟನೆ ವರದಿಯಾಗಿದೆ.

ಪಶ್ಚಿಮ ಬಂಗಾಳದ ಮಾಲ್ಡಾ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿರುವ ಖಾಗೇನ್ ಮುರ್ಮು ಸಿಹಿಪುರ ಗ್ರಾಮದಲ್ಲಿ ಪ್ರಚಾರ ನಡೆಸುವಾಗ ಈ ದುಷ್ಕೃತ್ಯ ನಡೆಸಿದ್ದಾನೆ. ಈ ಸಂಬಂಧ ಫೊಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಲೋಕಸಭಾ ಸದಸ್ಯನ ಈ ಕೃತ್ಯ ಕುರಿತು ತೃಣಮೂಲ ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದ್ದು, ಇದು ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದೆ. ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸುವ, ಬಂಗಾಳಿ ಮಹಿಳೆಯರ ಕುರಿತು ಕೀಳುಮಟ್ಟದ ಹಾಡು ಸೃಷ್ಟಿಸುವ ಬಿಜೆಪಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಬಿಜೆಪಿ ಮಹಿಳಾ ವಿರೋಧಿಯಾಗಿದೆ ಎಂದು ಅದು ಟೀಕಿಸಿದೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಏನು ಮಾಡಬಹುದು ಎಂಬುದನ್ನು ಊಹಿಸಿ ಎಂದಿರುವ ಟಿಎಂಸಿ, ಮೋದಿ ಪರಿವಾರ ಮಾಡುತ್ತಿರುವ ನಾರಿಯರ ಸಮ್ಮಾನವೆಂದರೆ ಇದೇ ಎಂದು ಚಾಟಿ ಬೀಸಿದೆ.

ತನ್ನ ಕೃತ್ಯದ ಕುರಿತು ತಳಬುಡವಿಲ್ಲದ ಸಮಜಾಯಿಷಿ ನೀಡಿರುವ ಖಾಗೇನ್ ಮುರ್ಮು ʻಇದು ಟಿಎಂಸಿ ಸಂಸ್ಕೃತಿಯನ್ನು ತೋರಿಸುತ್ತದೆ. ಎಲ್ಲ ಕುಟುಂಬಗಳಲ್ಲೂ ತಾಯಂದಿರು, ಸೋದರಿಯರು ಇರುತ್ತಾರೆ. ಎಲ್ಲರೂ ಮಗುವೊಂದನ್ನು ಇಷ್ಟಪಡುತ್ತಾರೆ. ಒಬ್ಬ ಕಳ್ಳ ಸಂನ್ಯಾಸಿಯನ್ನು ಭೇಟಿ ಮಾಡಿದರೆ ಆತನನ್ನೂ ಸಂನ್ಯಾಸಿ ಎನ್ನಲಾಗುತ್ತದೆ. ಅದೇ ರೀತಿ ಸಂನ್ಯಾಸಿಯನ್ನೂ ಕಳ್ಳ ಎನ್ನಲಾಗುತ್ತದೆ. ನಾವು ಚುನಾವಣೆಗಳಲ್ಲಿ ಸ್ಪರ್ಧಿಸುತ್ತೇವೆ ಮತ್ತು ಇದಕ್ಕಾಗಿ ಮತದಾರರ ಬಳಿ ಹೋಗುತ್ತೇವೆ. ಮತದಾರರು ನಮಗೆ ದೇವರಿದ್ದಂತೆ, ಹೆಣ್ಣು ಮಕ್ಕಳು ನಮಗೆ ತಾಯಿಯರು ಇದ್ದಂತೆ, ಬಿಜೆಪಿ ಹೆಣ್ಣುಮಕ್ಕಳನ್ನು ಗೌರವಿಸುತ್ತದೆ ಎಂದಿದ್ದಾರೆ.

ಈ ಪ್ರಕರಣ ಕುರಿತು ಕರ್ನಾಟಕ ಕಾಂಗ್ರೆಸ್ ಕೂಡ ಕಟು ಟೀಕೆ ಮಾಡಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಪಕ್ಷ, ಮಹಾಜನಗಳೇ,,, ಬಿಜೆಪಿಯವರಿಂದ ನಿಮ್ಮ ನಿಮ್ಮ ಮನೆಯ “ಬೇಟಿ ಬಚಾವ್” ಮಾಡಿಕೊಳ್ಳಿ. ಪಶ್ಚಿಮ ಬಂಗಾಳದ ಬಿಜೆಪಿಯ ಹಾಲಿ ಎಂಪಿಯಾಗಿರುವ ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಖಾಗೇನ್ ಮುರ್ಮು ಚುನಾವಣಾ ಪ್ರಚಾರದ ವೇಳೆ ಮತ ಕೇಳುವ ಬದಲು ಮುತ್ತು ನೀಡಿ ಯುವತಿಯೊಬ್ಬರಿಗೆ ಸಾರ್ವಜನಿಕವಾಗಿಯೇ ಲೈಂಗಿಕ ಕಿರುಕುಳ ನೀಡಿದ್ದಾರೆ, ಬ್ರಿಜ್ ಭೂಷಣ್ ಸಿಂಗ್ ನಂತಹ ಮಹಿಳಾ ಪೀಡಕನನ್ನು ಸಮರ್ಥಿಸುವ, ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ರಕ್ಷಣೆ ಮಾಡಿ ಹೂವಿನ ಹಾರ ಹಾಕಿ ಸ್ವಾಗತ ಮಾಡುವ ಬಿಜೆಪಿಯಿಂದ ದೇಶದ ಮಹಿಳೆಯರ ಘನತೆ, ಗೌರವ ಉಳಿಯುವುದು ಸಾಧ್ಯವಿಲ್ಲ. ಅತಿ ಹೆಚ್ಚು ಅತ್ಯಾಚಾರ ಆರೋಪ ಹೊತ್ತಿರುವವರ ಪಕ್ಷ ಬಿಜೆಪಿ, ಅತಿ ಹೆಚ್ಚು ಮಹಿಳಾ ಪೀಡಕರಿರುವ ಪಕ್ಷ ಬಿಜೆಪಿ, ಅತಿ ಹೆಚ್ಚು ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾದವರ ಪಕ್ಷ ಬಿಜೆಪಿ. ಇಂತಹ ದುರುಳರ ಸಾಮ್ರಾಜ್ಯವಾಗಿರುವ ಬಿಜೆಪಿಯವರಿಂದ “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಎಂಬ ಸಂಸ್ಕೃತಿಗೆ ಅರ್ಥ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

More articles

Latest article