ಬೆಂಗಳೂರು: ಕಲಬುರಗಿಯ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನದವರು ಎಂದು ಬಿಜೆಪಿಯ ವಿಧಾನಪರಿಷತ್ ಬಿಜೆಪಿ ಸದಸ್ಯ ಎನ್ ರವಿ ಕುಮಾರ್ ವಿರುದ್ಧ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ವಾಗ್ದಾಳಿ ನಡೆಸಿದರು.
ವಿಕಾಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಬಿಜೆಪಿಯವರೆಗೆ ಬುದ್ದಿ ಭ್ರಮಣೆಯಾಗಿದೆ. ಐಎಎಸ್ ಅಧಿಕಾರಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಷಾದನೀಯ. ಶಾಲಾ ಮಕ್ಕಳು ಕೂಡ ಹೀಗೆ ಮಾತನಾಡಲ್ಲ. ಸಾರ್ವಜನಿಕ ಜೀವನದಲ್ಲಿ ಇರಲು ಇಂಥವರು ಅನರ್ಹ ಎಂದು ಕಿಡಿಕಾರಿದರು.
ಐಎಎಸ್ ಅಧಿಕಾರಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವದನ್ನು ಐಎಎಸ್ ಅಧಿಕಾರಿಗಳ ಒಕ್ಕೂಟ ಈಗಾಗಲೇ ರವಿಕುಮಾರ್ ವಿರುದ್ಧ ಪತ್ರ ಬರೆದು, ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ವಿಧಾನ ಪರಿಷತ್ ನಾಯಕರೊಬ್ಬರು ಈ ರೀತಿ ಮಾತನಾಡಿದ್ದು ಅಪ್ರಬುದ್ಧತೆ ತೋರುತ್ತದೆ. ಹೇಳಿಕೆ ನೀಡುವಾಗ ಸರಿ, ತಪ್ಪು ಎಂಬುದರ ಬಗ್ಗೆ ಜ್ಞಾನ ಕಳೆದುಕೊಂಡಿದ್ದಾರೆ. ಅಧಿಕಾರ ಕಳೆದುಕೊಂಡು ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಾರೆ ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ನೀತಿ ಸಭೆಗೆ ಸಿಎಂ ಗೈರು, ಸಚಿವರ ಸಮರ್ಥನೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ವಾರ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಗೈರು ಹಾಜರಾಗಿದ್ದರಲ್ಲಿ ತಪ್ಪಿಲ್ಲ, ಸರ್ಕಾರದ ಪರವಾಗಿ ನಮ್ಮ ಕಂದಾಯ ಸಚಿವರು ಹೋಗಿದ್ದರು ಎಂದು ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು. ಪ್ರಧಾನಮಂತ್ರಿ ಈ ಹಿಂದೆ ನಡೆದ ನೀತಿ ಆಯೋಗದ ಎಷ್ಟೋ ಸಭೆಗಳಿಗೆ ಹೋಗಿಲ್ಲ. ಆಗ ಹಣಕಾಸು ಸಚಿವರು ನಡೆಸಿದ್ದಾರೆ. ಮತ್ತೆ ಸಭೆಗೆ ಹೋದರೂ ಅವರು ಹೇಳಿದ್ದನ್ನು ಮಾತ್ರ ಕೇಳಿಕೊಂಡು ಬರಬೇಕು. ನಮಗೆ ಕೇಳುವ ಹಕ್ಕು, ಸಮಯ ಎರಡನ್ನೂ ಕೊಡುವುದಿಲ್ಲ. ಒನ್ ವೇ ಸಭೆಗಳಿಗೆ ನಾವೇಕೆ ಹೋಗಬೇಕು ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.