ಬೆಂಗಳೂರು: ಕಳೆದ 75 ವರ್ಷಗಳಿಂದ ತುಪ್ಪ ಬೆಣ್ಣೆ ತಿನ್ನುತ್ತಾ ಬಂದವರು ಮಾತ್ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ. ಅವರಿಗೆ ಈಗ ತಮ್ಮ ಪಾಲು ಎಲ್ಲಿ ತಪ್ಪಿ ಹೋಗುವುದೋ ಎಂಬ ಆತಂಕ ಕಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ,ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.
ಸುದ್ದುಗಾರರೊಂದಿಗೆ ಮಾತನಾಡಿದ ಅವರು, ಜಾತಿಯ ಹೆಸರಿನಲ್ಲಿ ಸಾಮ್ರಾಜ್ಯ ಕಟ್ಟಿಕೊಂಡವರಿಗೆ ಸಮೀಕ್ಷೆಯಿಂದ ಭಯ ಉಂಟಾಗಿದೆ. ಪಕ್ಷದ ಪ್ರಣಾಳಿಕೆಯಲ್ಲೇ ಸಮೀಕ್ಷೆ ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು. ಆಗ ವಿರೋಧಿಸದವರು ಈಗೇಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕೆಂದು ಪಕ್ಷದ ವರಿಷ್ಠ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರೇ ತೀರ್ಮಾನ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಸಮೀಕ್ಷೆಗೆ ಚಾಲನೆ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಾವು ನಾಗಪುರಕ್ಕೆ ಸೇರಿದವರಲ್ಲ ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ಅನ್ನು ಪರೋಕ್ಷವಾಗಿ ಟೀಕಿಸಿದರು.
ಇದುವರೆಗೆ ಎಂಟು ವರ್ಷಗಳ ಕಾಲ ಜಿಎಸ್ ಟಿಯನ್ನು ವಿಪರೀತ ಸಂಗ್ರಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಕೇಳುತ್ತಾರೆ ಎಂದು ದೇಶದ ಜನ ಭಾವಿಸಿದ್ದರು. ಆದರೆ, ಅವರು ಸುಳ್ಳು ಹೇಳುತ್ತಿದ್ದಾರೆ. ಜಿಎಸ್ ಟಿ ಇಳಿಸಿದ್ದೇವೆ ಎಂದು ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಆಪಾದಿಸಿದರು.