ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಆ್ಯಪ್ ಆಧಾರಿತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.
ಬಸ್, ರೈಲು ಹಾಗೂ ಮೆಟ್ರೊ ನಿಲ್ದಾಣಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ವಾಹನಗಳ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ 2021ರಲ್ಲಿ ಬಿಜೆಪಿ ಸರ್ಕಾರವು, ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸಿತ್ತು.
2022ರ ಡಿಸೆಂಬರ್‌ನಲ್ಲಿ ಸಾರಿಗೆ ಇಲಾಖೆಯು ಇ-ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಬ್ಲೂಸ್ಟಾರ್ಟ್ ಮತ್ತು ಬೌನ್ಸ್ ಸಂಸ್ಥೆಗಳಿಗೆ ಪರವಾನಗಿ ನೀಡಿತ್ತು.
ಬಿಳಿಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಬೈಕ್‌ಗಳ ಮೂಲಕವೂ ಈ ಸೇವೆ ಒದಗಿಸಲು ಸರ್ಕಾರ ಅನುಮತಿ ನೀಡಿತ್ತು. ಇದಕ್ಕೆ ಆಟೊ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಬೈಕ್ ಟ್ಯಾಕ್ಸಿ ಸವಾರರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಗಳು ವರದಿಯಾಗಿದ್ದವು. ಕೆಲವು ಸವಾರರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರುಗಳು ದಾಖಲಾಗಿದ್ದವು.
ಹಾಗಾಗಿ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿತ್ತು. ಈ ಸಮಿತಿಯ ವರದಿ ಆಧಾರದ ಮೇಲೆ ಯೋಜನೆಯನು ರದ್ದುಗೊಳಿಸಿದೆ.
ಪ್ರಸ್ತುತ ಕೆಲವು ಖಾಸಗಿ ಆ್ಯಪ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರ ಅಡಿಯಲ್ಲಿ ರಚಿಸಿರುವ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿವೆ. ಸಾರಿಗೆಯೇತರ ದ್ವಿಚಕ್ರವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಬಳಕೆ ಮಾಡುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆಟೊ, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಸಂಘಗಳು, ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಸವಾರರ ನಡುವೆ ಹಲವು ಬಾರಿ ಸಂಘರ್ಷ ನಡೆದಿವೆ. ಈ ಬಗ್ಗೆ ಠಾಣೆಗಳಲ್ಲಿ ದೂರು ದಾಖಲಾಗುತ್ತಿವೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ. ಜೊತೆಗೆ ಮಹಿಳೆಯರಿಗೆ ಈ ಸೇವೆಯು ಸುರಕ್ಷಿತವಾಗಿಲ್ಲ ಎಂದು ವಿವರಿಸಿದೆ.
‘ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹ ಮತ್ತು ಪ್ರವರ್ತನ ಚಟುವಟಿಕೆಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಈ ಯೋಜನೆಯಿಂದ ಕಷ್ಟವಾಗುತ್ತಿದೆಯೆಂದು ಸಮಿತಿ ತಿಳಿಸಿದೆ. ಹಾಗಾಗಿ, ರದ್ದುಪಡಿಸಲಾಗಿದೆ’ ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಆದೇಶದಲ್ಲಿ ತಿಳಿಸಿದ್ದಾರೆ.