ಪಾಟ್ನಾ: ಮಧ್ಯಾಹ್ನವಷ್ಟೇ ತಮ್ಮ ಪದವಿಗೆ ರಾಜೀನಾಮೆ ಸಲ್ಲಿಸಿದ್ದ ನಿತೀಶ್ ಕುಮಾರ್ ಇಂದು ಸಂಜೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಪಡೆದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ರಾಜಭವನದಲ್ಲಿಂದು ನಿತೀಶ್ ಪ್ರಮಾಣ ಸ್ವೀಕರಿಸಿದರು. ನಿತೀಶ್ ಕುಮಾರ್ ಅವರ ಜೊತೆಗೆ ಬಿಜೆಪಿ ಶಾಸಕರಾದ ವಿಜಯ್ ಸಿನ್ಹ ಮತ್ತು ಸಮರ್ಥ್ ಚೌಧುರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು.
ಮೂರು ದಿನಗಳ ಕಣ್ಣಾಮುಚ್ಚಾಲೆ ಆಟದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಮಧ್ಯಾಹ್ನ ರಾಜೀನಾಮೆ ಸಲ್ಲಿಸಿದರು. ಜೆಡಿಯು ಶಾಸಕರೊಂದಿಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ನಂತರ ರಾಜಭವನಕ್ಕೆ ತೆರಳಿದ ನಿತೀಶ್, ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಹೊಸ ವ್ಯವಸ್ಥೆ ಆಗುವವರೆಗೆ ಹಂಗಾಮಿ ಮುಖ್ಯಮಂತ್ರಿಗಳಾಗಿ ಇರುವಂತೆ ರಾಜ್ಯಪಾಲರು ಕೋರಿದ್ದರು. ನಂತರ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಿದ ನಿತೀಶ್ ಕುಮಾರ್ ಸಂಜೆ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿತೀಶ್ ರಾಜೀನಾಮೆಯೊಂದಿಗೆ INDIA ಮೈತ್ರಿಕೂಟ ಆರಂಭದಲ್ಲೇ ಆಘಾತ ಅನುಭವಿಸಿದೆ. INDIA ಒಕ್ಕೂಟದ ಭಾಗವಾಗಿದ್ದ ನಿತೀಶ್ ಕುಮಾರ್ ತಮ್ಮನ್ನು ಪ್ರಧಾನಿ ಹುದ್ದೆಗೆ ಪರಿಗಣಿಸದ ಕುರಿತು ಮುನಿಸಾಗಿದ್ದರು. ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರನ್ನು ಗುರಿಯಾಗಿಟ್ಟುಕೊಂಡು ನಿತೀಶ್ ಕುಮಾರ್ ಅವರು ಕುಟುಂಬ ರಾಜಕಾರಣವನ್ನು ಟೀಕಿಸುವುದರೊಂದಿಗೆ ಮಹಾಘಟಬಂಧನದಲ್ಲಿ ಬಿರುಕು ಕಾಣಿಸಿಕೊಂಡಿತ್ತು.
ಬಿಹಾರ ವಿಧಾನಸಭೆಯಲ್ಲಿ ಒಟ್ಟು 243 ಸ್ಥಾನಗಳಿದ್ದು, ಈ ಪೈಕಿ 79 ಸ್ಥಾನಗಳೊಂದಿಗೆ ಲಾಲೂ ಯಾದವ್ ಅವರ ಆರ್ಜೆಡಿ ಪಕ್ಷ ಅತಿದೊಡ್ಡ ಪಕ್ಷವಾಗಿದೆ. ಆರ್ಜೆಡಿ ಬೆನ್ನಲ್ಲೇ 78 ಶಾಸಕ ಸ್ಥಾನ ಹೊಂದಿರುವ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿದೆ. 45 ಸ್ಥಾನ ಗೆದ್ದಿರುವ ನಿತೀಶ್ ಕುಮಾರ್ ಅವರ ಜೆಡಿಯು ಡ್ರೈವಿಂಗ್ ಸೀಟ್ನಲ್ಲಿ ಕುಳಿತುಕೊಂಡಿದೆ. ಮಿಕ್ಕಂತೆ ಕಾಂಗ್ರೆಸ್ನ 19. ಸಿಪಿಐ (ಎಂಎಲ್)ನ 12, ಹಿಂದೂಸ್ತಾನಿ ಅವಾಮಿ ಮೋರ್ಚಾದ 4, ಸಿಪಿಐ (ಎಂ) ಮತ್ತು ಸಿಪಿಐನ ತಲಾ ಇಬ್ಬರು ಹಾಗು AIMIM ನ ಒಬ್ಬರು, ಪಕ್ಷೇತರ ಶಾಸಕರೊಬ್ಬರು ಆಯ್ಕೆಯಾಗಿದ್ದಾರೆ.
ಬಿಹಾರದಲ್ಲಿ ಆಟ ಇನ್ನೂ ಶುರುವಾಗಬೇಕಿದೆ ಎಂದು RJD ನಾಯಕ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ತಮ್ಮ ಪಕ್ಷದ ನಾಯಕರ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಉದ್ಯೋಗ, ಜಾತಿಗಣತಿ, ಮೀಸಲಾತಿ ವಿಷಯದಲ್ಲಿ ಎರಡು ದಶಕಗಳಲ್ಲಿ ನೆನೆಗುದಿಗೆ ಬಿದ್ದಿದ್ದ ತೀರ್ಮಾನಗಳನ್ನು ನಾವು ಸಣ್ಣ ಅವಧಿಯಲ್ಲಿ ಜಾರಿಗೊಳಿಸಿದ್ದೇವೆ. ನಮ್ಮ ಸಾಧನೆಗಳನ್ನು ಜನರ ಮುಂದೆ ಇಡೋಣ ಎಂದು ಅವರು ತಮ್ಮ ಮುಖಂಡರಿಗೆ ಧೈರ್ಯ ತುಂಬುತ್ತಿದ್ದಾರೆ, ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿತೀಶ್ ಸರ್ಕಾರಕ್ಕೆ RJD ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯಬಹುದಲ್ಲವೇ ಎಂಬ ಕೆಲವರ ಪ್ರಶ್ನೆಗೆ, ಸರ್ಕಾರ ನಾವೇ ಬೀಳಿಸಿದಂತೆ ಆಗಬಾರದು. ಅವರೇನು ಮಾಡುತ್ತಾರೋ ಮಾಡಲಿ ಎಂದು ತೇಜಸ್ವಿ ಹೇಳಿದ್ದಾರೆ.
2024ರ ಚುನಾವಣೆಯ ನಂತರ ಜೆಡಿಯು ಪಕ್ಷದ ಅಸ್ತಿತ್ವವೇ ಉಳಿದಿರುವುದಿಲ್ಲ ಎಂದು ಅವರು ಹೇಳಿದ್ದಾರೆ.