ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಸತತ ಮೂರನೇ ದಿನವೂ ಪ್ರತಿಪಕ್ಷಗಳ ಸಂಸದರಿಂದ ಪ್ರತಿಭಟನೆ

Most read

ನವದೆಹಲಿ: ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ(ಎಸ್‌ ಆರ್‌ ಐ) ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಇಂದೂ ಸಹ ಪ್ರತಿಭಟನೆ ನಡೆಸಿದವು. ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟ ಪಕ್ಷಗಳ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು.

ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆ.ಸಿ ವೇಣುಗೋಪಾಲ್, ಸಮಾಜವಾದಿ ಪಕ್ಷದ ಜಿಯಾವುರ್ ರೆಹಮಾನ್ ಬರ್ಕ್, ಟಿಎಂಸಿಯ ಕೀರ್ತಿ ಆಜಾದ್, ಡಿಎಂಕೆಯ ಎ. ರಾಜಾ ಸೇರಿದಂತೆ ಪ್ರಮುಖ ನಾಯಕರು, ‘ಪ್ರಜಾಪ್ರಭುತ್ವವನ್ನು ಉಳಿಸಿ’ ಸೇರಿ ಹಲವು ಘೋಷಣೆಗಳನ್ನು ಕೂಗಿ ಫಲಕಗಳನ್ನು ಪ್ರದರ್ಶಿಸಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಹಿಂದಕ್ಕೆ ಪಡೆಯಬೇಕು, ಉಭಯ ಸದನಗಳಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಪ್ರತಿಭಟನಾ ನಿರತ ಸಂಸದರು ಆಗ್ರಹ ಪಡಿಸಿದ್ದಾರೆ.

ದಿನದ ಕಲಾಪ ಪ್ರಾರಂಭವಾಗುವ ಮೊದಲು, ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ, ಜೆಎಂಎಂ, ಆರ್‌ಜೆಡಿ ಮತ್ತು ಎಡ ಪಕ್ಷಗಳ ನಾಯಕರು ಮತ್ತು ಪ್ರತಿಪಕ್ಷಗಳ ಸಂಸದರು ಸಂಸತ್ತಿನ ಮಕರ ದ್ವಾರದ ಹತ್ತಿರ ಸರ್ಕಾರ ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆರ್) ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಂಸತ್‌ ಕಲಾಪ ಆರಂಭವಾದ ಮೊದಲ ದಿನದಿಂದಲೂ ಪ್ರತಿಪಕ್ಷಗಳು ಪ್ರತಿಭಟನೆಯನ್ನು ನಡೆಸುತ್ತಲೇ ಬಂದಿವೆ.

More articles

Latest article