ಬಿಹಾರ: ಮತದಾರರ ವಿಶೇಷ ಪರಿಷ್ಕರಣೆಯಲ್ಲಿ ಕರಡು ಪಟ್ಟಿಯಿಂದ 65 ಲಕ್ಷ ಮತದಾರರು ಔಟ್

Most read

ನವದೆಹಲಿ: ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆರ್)ಯ ಮೊದಲ ಹಂತ ಪೂರ್ಣಗೊಂಡಿದ್ದು, ಮತದಾರರ ಪಟ್ಟಿಯಿಂದ 65 ಲಕ್ಷ ಮತದಾರರನ್ನು ಕೈಬಿಡಲಾಗಿದೆ.

ಜೂನ್ 24 ರಿಂದ ಜುಲೈ 25, 2025 ರವರೆಗೆ ನಡೆದ ಮತದಾರರ ಪರಿಷ್ಕರಣೆಯಲ್ಲಿ ಒಟ್ಟು 7.89 ಕೋಟಿ ಮತದಾರರ ಪೈಕಿ 65 ಲಕ್ಷ ಮತದಾರರು “ತಪ್ಪಾಗಿ ಮತದಾರರಾಗಿ ಸೇರ್ಪಡೆಯಾಗಿದ್ದಾರೆ” ಹಾಗೂ ಇವರು ಮುಂದಿನ ಮತದಾನದಲ್ಲಿ ನಕಲಿ ಮತದಾನ ಮಾಡುವ ಸಾಧ್ಯತೆಗಳಿದ್ದವು.  ಹೀಗಾಗಿ ಅವರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಆಯೋಗದ  ಪ್ರಕಾರ, ಈ ಪರಿಷ್ಕರಣೆಯು ಬಿಹಾರದ ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾದ ಮತದಾರರ ಪರಿಶೀಲನಾ ಅಭಿಯಾನಗಳಲ್ಲಿ ಒಂದಾಗಿದ್ದು, ಆಗಸ್ಟ್ 1 ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಿಂದ 65 ಲಕ್ಷ ಮತದಾರರನ್ನು ಹೊರಗಿಡಲಾಗುವುದು ಎಂದು ಚುನಾವಣಾ ಆಯೋಗ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದಿನ ಮತದಾರರ ಪಟ್ಟಿಯಲ್ಲಿದ್ದ ಸುಮಾರು 22 ಲಕ್ಷ ಮೃತ ಮತದಾರರು, 36 ಲಕ್ಷ ಶಾಶ್ವತವಾಗಿ ಸ್ಥಳಾಂತರಗೊಂಡವರು ಅಥವಾ ಪತ್ತೆಯಾಗದ ಮತದಾರರು ಮತ್ತು 7 ಲಕ್ಷ ಮತದಾರರು ವಿವಿಧ ಕಡೆಗಳಲ್ಲಿ ನೋಂದಾಯಿಸಲ್ಪಟ್ಟವರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಆಯೋಗ ತಿಳಿಸಿದೆ.

ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅಥವಾ ಬದಲಾವಣೆಗಾಗಿ ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಆಕ್ಷೇಪಣೆ ಸಲ್ಲಿಸಲು ಅಥವಾ ಬದಲಾವಣೆಗಾಗಿ ಅವಕಾಶ ಇರುತ್ತದೆ ಎಂದೂ ಆಯೋಗ ತಿಳಿಸಿದೆ. ಈ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುತ್ತಿರುವ ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ.‌

More articles

Latest article