ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಾಯಕರು, ಸೀಟು ಹಂಚಿಕೆಗಾಗಿ ಕಸರತ್ತು ನಡೆಸುತ್ತಿದ್ದು, ಬಹುತೇಕ ಅಂತಿಮ ಹಂತದ ಚರ್ಚೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಮತ್ತೊಂದು ಕಡೆ ಚುನಾವಣಾ ಆಯೋಗವು ಇಂದು ಸಂಜೆ 4 ಗಂಟೆಗೆ ಬಿಹಾರ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಿಸಲಿದೆ.
ನಿನ್ನೆ ಭಾನುವಾರ ತಡರಾತ್ರಿವರೆಗೂ ‘ಇಂಡಿಯಾ’ ಬಣದ ಸಹಕಾರ ಸಮಿತಿಯ ಮುಖ್ಯಸ್ಥರಾಗಿರುವ, ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ನಿವಾಸದಲ್ಲಿ ಸಭೆ ನಡೆದಿದೆ. ಸೀಟಿ ಹಂಚಿಕೆ ಕುರಿತು ಅಂತಿಮ ಸುತ್ತಿನ ಮಾತುಕತೆ ನಡೆಯಬೇಕದ್ದು, ಶೀಘ್ರವೇ ವಿವರಗಳನ್ನು ಹಂಚಿಕೊಳ್ಳುವುದಾಗಿ ಇಂಡಿಯಾ ಒಕ್ಕೂಟದ ನಾಯಕರು ತಿಳಿಸಿದ್ದಾರೆ.
ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲೋಕ್ ಮೆಹ್ರಾ ಪ್ರತಿಕ್ರಿಯಿಸಿ, ಚುನಾವಣೆ ಕುರಿತು ಅನೇಕ ವಿಚಾರಗಳನ್ನು ಚರ್ಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದಿದ್ದಾರೆ.
ಚುನಾವಣಾ ಆಯೋಗವು ಬಿಹಾರದಲ್ಲಿ ಎರಡು ದಿನಗಳ ಕಾಲ ಪರಿಶೀಲನೆ ನಡೆಸಿದ್ದು ಇಂದು ದಿನಾಂಕವನ್ನು ಪ್ರಕಟಿಸಲಿದೆ.
243 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಅವಧಿ ನವೆಂಬರ್ 22 ರಂದು ಕೊನೆಗೊಳ್ಳುತ್ತದೆ. ಎನ್ ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ನೇರ ಹಣಹಣಿ ನಡೆಯಲಿದೆ.
ಆಯೋಗವು ಬಿಹಾರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್ ಐ ಆರ್) ಪೂರ್ಣಗೊಳಿಸಿದೆ. ಎಸ್‌ಐಆರ್‌ನ ಕೊನೆಯ ಪಟ್ಟಿಯ ಪ್ರಕಾರ, 47 ಲಕ್ಷ ಮತದಾರರು ಕಡಿಮೆಯಾಗಿ ಒಟ್ಟು 7.42 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ.