ಶಿಕ್ಷೆಗೆ ಒಳಗಾಗಬೇಕಾದವರು ಯುವಕರಲ್ಲಿ ಹಿಂದುತ್ವದ ವಿಷ ಬೀಜ ಬಿತ್ತಿದವರು. ಇಲ್ಲಿ ಖಂಡನೆಗೆ ಒಳಗಾಗಬೇಕಾದವರು ಧರ್ಮಾಂಧತೆಯನ್ನು ಹಿಂದೂ ಸಮುದಾಯದಲ್ಲಿ ಹರಡಿದವರು. ಆದರೆ ಅಂತವರು ಕೋಮುಪ್ರಚೋದನೆ ಮಾಡಿ ಸಮುದಾಯಗಳ ನಡುವೆ ಬೆಂಕಿ ಹಚ್ಚಿ ಅಧಿಕಾರದ ಸುಖ ಅನುಭವಿಸುತ್ತಾರೆ. – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ಯಾರೋ ಪುಂಡ ಅಂಡೆಪಿರ್ಕಿ ಹುಡುಗರು ಹಲ್ಲೆ ಮಾಡಿದ್ದಕ್ಕೂ ಆಳುವ ಸರಕಾರಕ್ಕೂ ಎತ್ತಣಿಂದೆತ್ತ ಸಂಬಂಧ?. ಇಷ್ಟಕ್ಕೂ ಈ ಮತಾಂಧ ಹುಡುಗರನ್ನು ಕಾಂಗ್ರೆಸ್ ಪಕ್ಷವನ್ನೂ ಒಳಗೊಂಡಂತೆ ಯಾರೂ ಸಮರ್ಥನೆ ಮಾಡಿಕೊಂಡಿಲ್ಲ. ಯಾವೊಬ್ಬ ಮುಸ್ಲಿಂ ಸಮುದಾಯದ ಮುಖಂಡರೂ ಹಲ್ಲೆ ಮಾಡಿದವರ ಪರ ಮಾತಾಡಿಲ್ಲ. ಎಲ್ಲರೂ ಈ ಘಟನೆಯನ್ನು ಖಂಡಿಸಿದ್ದಾರೆ.
ಎಪ್ರಿಲ್ 17, ರಾಮನವಮಿ ದಿನ. ದೇಶಾದ್ಯಂತ ಶ್ರೀರಾಮ ಜಯಂತಿಯನ್ನು ಹಿಂದೂಗಳು ಸಂಭ್ರಮದಿಂದ ಆಚರಿಸುವ ಆಸ್ತಿಕರ ಹಬ್ಬ. ಇದೇ ನೆಪದಲ್ಲಿ ‘ಎಲ್ಲಿಯೂ ಕೋಮುಗಲಭೆಗಳು ಆಗದಿರಲಿ, ಕೋಮು ಸೌಹಾರ್ದತೆ ಕದಡದಿರಲಿ’ ಎಂದು ಪ್ರಗತಿಪರರು ಸಾಮಾಜಿಕ ಚಿಂತಕರು ಅಂದುಕೊಳ್ಳುತ್ತಿದ್ದರೆ, ‘ಎಲ್ಲಿಯಾದರೂ ಗಲಭೆಗಳಾಗಲಿ, ಕೋಮುಸಂಘರ್ಷ ನಡೆಯಲಿ’ ಎಂದು ಉಗ್ರ ಹಿಂದುತ್ವವಾದಿ ಸಂಘ ಪರಿವಾರಿಗರು ಕಾಯುತ್ತಿದ್ದರು.
ಯಾಕೆಂದರೆ ಇದು ಚುನಾವಣಾ ಸಮಯ. ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ ವಾರವಷ್ಟೇ ಸಮಯ. ಅಷ್ಟರಲ್ಲಿ ಕೋಮುಗಲಭೆ ಸೃಷ್ಟಿಯಾದಲ್ಲಿ ಶ್ರೀರಾಮನ ಹೆಸರಲ್ಲಿ ಹಿಂದೂಗಳ ಭಾವನೆಗಳನ್ನು ಪ್ರಚೋದಿಸಿ ಮತಗಳಾಗಿ ಪರಿವರ್ತಿಸಬಹುದು ಎಂಬುದು ಬಿಜೆಪಿ ನಾಯಕರ ನಿರೀಕ್ಷೆ. ಇಂತಹುದರಲ್ಲಿ ಆ ಪಕ್ಷಕ್ಕೆ ಬೇಕಾದಷ್ಟು ಅನುಭವವೂ ಇದೆ. ಕಡ್ಡಿಯನ್ನು ಗುಡ್ಡ ಮಾಡಿ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯದವರನ್ನು ಎತ್ತಿಕಟ್ಟುವಲ್ಲಿ ಸಂಘಿಗಳು ಎಕ್ಸಪರ್ಟ್ಸ್ ಎಂದು ಕೋಮುವಾದಿಗಳ ಇತಿಹಾಸ ಹೇಳುತ್ತದೆ.
ಅವರ ನಿರೀಕ್ಷೆಗೆ ತಕ್ಕಂತೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಜೈಶ್ರೀರಾಂ ಪ್ರಕರಣವೊಂದು ಘಟಿಸುತ್ತದೆ. ಇನ್ನೂ ನೆಟ್ಟಗೆ ಮೀಸೆ ಮೂಡದ ಯಾರೋ ಮೂರ್ನಾಲ್ಕು ಮುಸ್ಲಿಂ ಮತಾಂಧ ಹುಡುಗರು ಕಾರೊಂದನ್ನು ನಿಲ್ಲಿಸಿ “ಜೈಶ್ರೀರಾಂ ಘೋಷಣೆ ಕೂಗಬಾರದು, ಕೇವಲ ಅಲ್ಲಾ ಹೋ ಅಕ್ಬರ್ ಕೂಗಬೇಕು” ಎಂದು ತಗಾದೆ ತೆಗೆದರು. ವಾದ ವಿವಾದ ಅತಿಯಾಗಿ ಜೈಶ್ರೀರಾಮಿಗರ ಮೇಲೆ ಅಲ್ಲಾಹೋ ಅಕ್ಬರ್ ಸಮರ್ಥಕರು ಹಲ್ಲೆಯನ್ನೂ ಮಾಡಿದರು. ಪೊಲೀಸ್ ಕೇಸಾಯ್ತು. ಈ ಮುಸ್ಲಿಂ ಮತಾಂಧ ಕೇಡಿಗರನ್ನು ಬಂಧಿಸಿದ್ದೂ ಆಯ್ತು. ಇಂತಹ ಸುದ್ದಿಗಾಗಿಯೇ ರಣಹದ್ದುಗಳಂತೆ ಕಾಯುತ್ತಿದ್ದ ಗೋದಿ ಮೀಡಿಯಾಗಳು ಬ್ರೇಕಿಂಗ್ ನ್ಯೂಸ್ ಮಾಡಿಯೂ ಆಯ್ತು.
ಇಂತಹ ಒಂದು ಘಟನೆಯ ನಿರೀಕ್ಷೆಯಲ್ಲಿದ್ದ ಬಿಜೆಪಿಗರಿಗೆ ಮತಬೇಟೆಗೆ ಮಹಾ ಅಸ್ತ್ರವೊಂದು ಸಿಕ್ಕಂತಾಯ್ತು. ಬಿಜೆಪಿ ನಾಯಕರು ವಿವೇಕವಂತರಾಗಿದ್ದರೆ ಹಲ್ಲೆಕೋರರ ಧರ್ಮ ನೋಡದೇ ‘ಯಾರು ಹಲ್ಲೆ ಮಾಡಿದ್ದಾರೋ ಅಂತವರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಬಹುದಾಗಿತ್ತು. ಆದರೆ ಈ ಕೇಸರಿಗರಿಗೆ ಬೇಕಿರೋದು ಆ ನಾಲ್ಕು ಜನರ ಬಂಧನ ಮಾತ್ರವಲ್ಲ, ಆ ನೆಪದಲ್ಲಿ ರಾಜ್ಯದಲ್ಲಿ ಆಳುವ ಪಕ್ಷವಾಗಿರುವ ಕಾಂಗ್ರೆಸ್ಸನ್ನು ಟಾರ್ಗೆಟ್ ಮಾಡುವುದಾಗಿತ್ತು. ಹಿಂದೂ ವಿರೋಧಿ ಸರಕಾರವೆಂದು ಬಿಂಬಿಸಬೇಕಾಗಿತ್ತು.
“ಕಾಂಗ್ರೆಸ್ ಸರಕಾರ ಮುಸ್ಲಿಂ ಪುಂಡರಿಗೆ ಸಪೋರ್ಟ್ ಮಾಡುತ್ತಿದೆ, ಈ ಸರಕಾರ ಬಂದ ಮೇಲೆ ಮುಸ್ಲಿಂ ಮತಾಂಧರ ಆಟಾಟೋಪ ಹೆಚ್ಚಾಗಿದೆ, ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದಲೇ ಈ ಮುಸ್ಲಿಮರು ಹೀಗೆ ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇಂತಹ ಹಿಂದೂ ವಿರೋಧಿ ಸರಕಾರದಲ್ಲಿ ಜೈಶ್ರೀರಾಂ ಹೇಳುವುದಕ್ಕೂ ಸ್ವಾತಂತ್ರ್ಯವಿಲ್ಲ. ಕಾಂಗ್ರೆಸ್ ಸರಕಾರ ಬಂದ ಮೇಲೆ ಮುಸ್ಲಿಂ ಭಯೋತ್ಪಾದಕರು ಬಾಂಬ್ ಇಡುತ್ತಿದ್ದಾರೆ, ಹಿಂದೂ ಧರ್ಮ ಅಪಾಯದಲ್ಲಿದೆ…” ಎನ್ನುವ ಚರ್ವಿತ ಚರ್ವಣ ಆರೋಪಗಳು ಬಿಜೆಪಿ ನಾಯಕರಿಂದ ಬರತೊಡಗಿದವು.
ಯಾರೋ ಪುಂಡ ಅಂಡೆಪಿರ್ಕಿ ಹುಡುಗರು ಹಲ್ಲೆ ಮಾಡಿದ್ದಕ್ಕೂ ಆಳುವ ಸರಕಾರಕ್ಕೂ ಎತ್ತಲಿಂದೆತ್ತ ಸಂಬಂಧ?. ಇಷ್ಟಕ್ಕೂ ಈ ಮತಾಂಧ ಹುಡುಗರನ್ನು ಕಾಂಗ್ರೆಸ್ ಪಕ್ಷವನ್ನೂ ಒಳಗೊಂಡಂತೆ ಯಾರೂ ಸಮರ್ಥನೆ ಮಾಡಿಕೊಂಡಿಲ್ಲ. ಯಾವೊಬ್ಬ ಮುಸ್ಲಿಂ ಸಮುದಾಯದ ಮುಖಂಡರೂ ಹಲ್ಲೆ ಮಾಡಿದವರ ಪರ ಮಾತಾಡಿಲ್ಲ. ಎಲ್ಲರೂ ಈ ಘಟನೆಯನ್ನು ಖಂಡಿಸಿದ್ದಾರೆ. ಗಲಭೆಕೋರರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸರು ಹಲ್ಲೆಕೋರರನ್ನು ಬಂಧಿಸಿದ್ದಾರೆ. ಆದರೆ ಈ ಕೇಸರಿ ನಾಯಕರು ಮಾತ್ರ ಈ ಘಟನೆಗೆ ಕಾಂಗ್ರೆಸ್ಸೇ ಕಾರಣವೆಂದು ಮಾಧ್ಯಮಗಳ ಮುಂದೆ ಬಾಯಿ ಬಡಿದು ಕೊಳ್ಳುತ್ತಿದ್ದಾರೆ. ಒಂದು ಮತೀಯ ಗಲಭೆಯನ್ನು ರಾಜಕೀಯಗೊಳಿಸಿ, ಹಿಂದೂ ಸಮುದಾಯದ ಕೋಮುಭಾವನೆ ಕೆರಳಿಸಿ ಮತಗಳ ಫಸಲು ತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ಇಷ್ಟಕ್ಕೂ ಇಡೀ ಘಟನೆಯನ್ನು ಅವಲೋಕಿಸಿದರೆ ತಪ್ಪು ಎರಡೂ ಸಮುದಾಯದ ಮತಾಂಧ ಹುಡುಗರದ್ದಾಗಿದೆ. ಈ ಹಿಂದೂ ಮತಾಂಧ ಯುವಕರು ಚಲಿಸುವ ಕಾರಲ್ಲಿ ಮುಸ್ಲಿಂ ಯುವಕರನ್ನು ಕಂಡೊಡನೇ ಹಂಗಿಸುವ ಹಾಗೆ ಜೈಶ್ರೀರಾಂ ಘೋಷಣೆಯನ್ನು ಕೂಗಿ ಪ್ರಚೋದಿಸಿದ್ದಾದರೂ ಯಾಕೆ? ಇದಕ್ಕೆ ಪ್ರತಿಯಾಗಿ ‘ಜೈಶ್ರೀರಾಂ ಘೋಷಣೆ ಕೂಗಬಾರದಾ? ಹಿಂದೂಗಳು ತಮ್ಮ ಹಬ್ಬದ ಸಂಭ್ರಮವನ್ನು ಆಚರಿಸ ಬಾರದಾ?’ ಎಂಬುದು ಸಂಘಿಗಳ ಪ್ರಶ್ನೆಯಾಗಿದೆ. ಇವರಿಗೆ ಮಸೀದಿಯ ಮುಂದೆ, ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ, ಇಲ್ಲವೇ ಅನ್ಯಕೋಮಿನ ಜನರಿದ್ದಾಗಲೇ ಜೈಶ್ರೀರಾಂ ಕೂಗಿ ಇನ್ನೊಂದು ಸಮುದಾಯದವರನ್ನು ಪ್ರಚೋದಿಸುವ ಅಗತ್ಯವಿದೆಯಾ? ಇದು ಧಾರ್ಮಿಕ ಗೂಂಡಾಗಿರಿ ಅಲ್ಲವೇ? ಇದೇ ಮುಸ್ಲಿಂ ಸಮುದಾಯದ ಕೆಲವು ಮತಾಂಧರು ಅವರ ಹಬ್ಬದ ಆಚರಣೆಯಂದು ದೇವಸ್ಥಾನಗಳ ಮುಂದೆ ಇಲ್ಲವೇ ಹಿಂದೂಗಳ ಗುಂಪುಗಳ ಮುಂದೆ ಪ್ರಚೋದನಾಕಾರಿಯಾಗಿ ‘ಅಲ್ಲಾ ಹೋ ಅಕ್ಬರ್’ ಎಂದು ಕೂಗಿದರೆ ಪ್ರತಿರೋಧ ತೋರದೆ ಹಿಂದೂ ಮತಾಂಧ ವ್ಯಕ್ತಿಗಳು ಹಾಗೂ ಅವರ ಹಿಂದಿರುವ ಶಕ್ತಿಗಳು ಸುಮ್ಮನೇ ಇರುತ್ತಾರಾ?.
ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಯವರು ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎಂದು ಹಿಂದೂ ಮತಾಂಧರನ್ನು ಸಮರ್ಥಿಸಿಕೊಂಡಿದ್ದರು. ಬೊಮ್ಮಾಯಿಯವರ ಭಾಷೆಯಲ್ಲೇ ಹೇಳುವುದಾದರೆ ಈ ವಿದ್ಯಾರಣ್ಯಪುರದ ಹಲ್ಲೆ ಪ್ರಕರಣವೂ ಸಹ ಕ್ರಿಯೆಗೆ ಪ್ರತಿಕ್ರಿಯೆಯೇ ಆಗಿದೆ. ಆ ಪ್ರತಿಕ್ರಿಯೆಯ ಲಾಭ ಪಡೆದು ಫಲಾನುಭವಿಯಾಗಲು ಬಿಜೆಪಿ ಪ್ರಯತ್ನಿಸುತ್ತಿದೆ. ಹಿಂದೂ ಮತಾಂಧ ಯುವಕರ ಗುಂಪು ಸಾರ್ವಜನಿಕ ರಸ್ತೆಯಲ್ಲಿ ಮುಸ್ಲಿಂ ಯುವಕರನ್ನು ಟಾರ್ಗೆಟ್ ಮಾಡಿ ಜೈಶ್ರೀರಾಂ ಕೂಗುವ ಮೂಲಕ ಪ್ರಚೋದನೆಯ ಕ್ರಿಯೆಗೆ ಚಾಲನೆ ಇತ್ತಾಗ ಅದಕ್ಕೆ ಪ್ರತಿಕ್ರಿಯೆಯಾಗಿ ಮುಸ್ಲಿಂ ಮತಾಂಧ ಯುವಕರು ವಿರೋಧಿಸಿದ್ದಾರೆ. ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ. ಹಲ್ಲೆ ನಡೆಸಿದವರು ಬಂಧನಕ್ಕೊಳಗಾಗಿದ್ದಾರೆ. ಹಲ್ಲೆಗೆ ಪ್ರಚೋದಿಸಿದವರ ಮನೆಗೆ ಬಿಜೆಪಿ ನಾಯಕರು ಸಾಂತ್ವನ ಹೇಳಲು ಹಾಗೂ ಕೋಮುಸಾಮರಸ್ಯಕ್ಕೆ ಬೆಂಕಿ ಹಾಕಲು ತೆರಳಿದ್ದಾರೆ. ಈ ಹಿಂದೂ ಯುವಕರು ಮತಬೇಟೆಗಾರರ ಗಾಳಕ್ಕೆ ದಾಳವಾಗಿದ್ದಾರೆ.
ಎಂದೂ ವಿವೇಕದಿಂದ ವರ್ತಿಸದ ಹಾಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ” ಹಲ್ಲೆ ಮಾಡಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ” ಎಂದು ಒತ್ತಾಯಿಸಿದ್ದಾರೆ. ಬಿಜೆಪಿಯ ದಮನಕಾರಿ ಸಿದ್ಧಾಂತವನ್ನು ವಿರೋಧಿಸಿದವರ ಮೇಲೆ ದೇಶದ್ರೋಹ ಕಾನೂನು ದಾಖಲಿಸಿ ಕಿರುಕುಳ ಕೊಟ್ಟ ಕೀರ್ತಿ ಬಿಜೆಪಿಗೆ ಸೇರಬೇಕು. ಹಿಂದು ಮುಸ್ಲಿಂ ಮತಾಂಧ ಯುವಕರ ಬೀದಿಬದಿ ಹೊಡೆದಾಟಕ್ಕೂ ದೇಶದ್ರೋಹಕ್ಕೂ ಎಲ್ಲಿಯ ಸಂಬಂಧ. ಯಾವ ಪ್ರಕರಣಕ್ಕೆ ಯಾವ ಕೇಸ್ ದಾಖಲಿಸಬೇಕು ಎಂಬುದರ ಅರಿವೇ ಇಲ್ಲದ ಕೋಮುವ್ಯಾಧಿ ಪೀಡಿತ ಇಂತಹ ವ್ಯಕ್ತಿಯ ಮೇಲೆಯೇ ಕೋಮು ಪ್ರಚೋದನೆ ಮಾಡಿದ ಹಾಗೂ ಧರ್ಮದ್ವೇಷಕ್ಕೆ ಪ್ರೇರೇಪಿಸಿದ ದೂರನ್ನು ದಾಖಲಿಸ ಬೇಕಿದೆ.
ಚುನಾವಣೆಯನ್ನು ತಾವು ಮಾಡಿದ ಜನಪರ ಕೆಲಸಗಳ ಮೂಲಕ, ಅಭಿವೃದ್ಧಿ ಕಾರ್ಯಗಳ ಪ್ರಚಾರದ ಮೂಲಕ ಎದುರಿಸಿ ಗೆಲ್ಲಲಾಗದ ಬಿಜೆಪಿ ಪಕ್ಷದವರಿಗೆ ಇರುವ ಅಸ್ತ್ರವೇ ಹಿಂದೂ ಧಾರ್ಮಿಕರ ಭಾವ ಪ್ರಚೋದನೆ. ದೇವರು ಧರ್ಮದ ಹೆಸರಲ್ಲಿ, ಅನ್ಯ ಧರ್ಮದ್ವೇಷ ಪ್ರಚೋದನೆಯಲ್ಲಿ ಹಿಂದೂ ಮತಗಳನ್ನು ಕ್ರೋಢೀಕರಿಸಿ ಮತಗಳಿಕೆ ಹೆಚ್ಚಿಸಿಕೊಂಡು ಗೆಲುವು ಸಾಧಿಸುವುದೇ ಬಿಜೆಪಿಗರ ಪರಂಪರಾಗತ ಕಾರ್ಯತಂತ್ರ. ಹಿಂದೂ ಮತಾಂಧತೆಯನ್ನು, ಅನ್ಯಕೋಮು ದ್ವೇಷವನ್ನು ಶ್ರೀರಾಮನ ಹೆಸರಲ್ಲಿ ಹಿಂದೂ ಯುವಕರ ಮೆದುಳಲ್ಲಿ ಈ ಸಂಘಿಗಳು ತುಂಬಿ ಪ್ರಚೋದಿಸಿದ್ದರಿಂದಲೇ ಈ ರೀತಿಯ ಘಟನೆಗಳು ಉಲ್ಬಣಿಸುತ್ತವೆ. ಹಿಂದೂ ಹಾಗೂ ಮುಸ್ಲಿಂ ಮಾತಾಂಧರ ಮನಸ್ಸು ಮಲಿನ ಗೊಂಡಾಗಲೇ ಜಗಳ, ಹಲ್ಲೆ, ಹತ್ಯೆ ಕೋಮು ಸಂಘರ್ಷಗಳು ಆರಂಭವಾಗುತ್ತವೆ. ಅದರ ಫಲಾನುಭವಿಯಾಗಲು ಬಿಜೆಪಿ ಸದಾ ಮುಂಚೂಣಿಯಲ್ಲಿರುತ್ತದೆ.. ಎರಡೂ ಕೋಮಿನ ಮತಾಂಧರು ಬೀದಿಗಳಲ್ಲಿ ಹೊಡದಾಡಿಕೊಳ್ಳುತ್ತಲೇ ಇರುತ್ತಾರೆ. ಕೇಸುಗಳು ದಾಖಲಾಗುತ್ತಲೇ ಇರುತ್ತವೆ. ಕೋರ್ಟು ಕಚೇರಿ ಜೈಲುಗಳತ್ತ ಅಲೆದಾಟ ಆರಂಭವಾಗುತ್ತದೆ. ಕುಟುಂಬ ವರ್ಗ ಕಷ್ಟಕ್ಕೆ ಗುರಿಯಾಗುತ್ತಲೇ ಇರುತ್ತದೆ. ಇದಕ್ಕೆಲ್ಲಾ ಮೂಲ ಕಾರಣೀಕರ್ತರಾದ, ಮತಾಂಧತೆಯ ಉತ್ಪಾದಕರಾದ ಕೋಮುವಾದಿ ಪಕ್ಷದವರು ಅಧಿಕಾರದತ್ತ ಒಂದೊಂದೇ ಮೆಟ್ಟಿಲು ಹತ್ತಿ ಪಟ್ಟ ಗಿಟ್ಟಿಸಿಕೊಳ್ಳುತ್ತಾರೆ.
ಇಲ್ಲಿ ಶಿಕ್ಷೆಗೆ ಒಳಗಾಗಬೇಕಾದವರು ಯುವಕರಲ್ಲಿ ಹಿಂದುತ್ವದ ವಿಷ ಬೀಜ ಬಿತ್ತಿದವರು. ಇಲ್ಲಿ ಖಂಡನೆಗೆ ಒಳಗಾಗಬೇಕಾದವರು ಧರ್ಮಾಂಧತೆಯನ್ನು ಹಿಂದೂ ಸಮುದಾಯದಲ್ಲಿ ಹರಡಿದವರು. ಆದರೆ ಅಂತವರು ಕೋಮುಪ್ರಚೋದನೆ ಮಾಡಿ ಸಮುದಾಯಗಳ ನಡುವೆ ಬೆಂಕಿ ಹಚ್ಚಿ ಅಧಿಕಾರದ ಸುಖ ಅನುಭವಿಸುತ್ತಾರೆ. ಅಂತಹ ನಾಯಕರ ಮಕ್ಕಳು ದೇಶ ವಿದೇಶಗಳ ಅತ್ಯುನ್ನತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಬಡ ಮಧ್ಯಮ ವರ್ಗದ ಯುವಕರು ಕೋಮು ವೈರಸ್ಸನ್ನು ಮೆದುಳಿಗೆ ತುಂಬಿಸಿಕೊಂಡು ಬೀದಿಯಲ್ಲಿ ಹಿಂದುತ್ವ, ಹಿಂದೂ ಧರ್ಮ, ಸನಾತನ ಧರ್ಮ ಎಂದು ತಮ್ಮ ಬದುಕನ್ನು ನರಕ ಮಾಡಿಕೊಳ್ಳುತ್ತಾರೆ.
ಒಂದು ತಿಂಗಳ ಹಿಂದೆ ನಗರ್ತಪೇಟೆಯಲ್ಲಿ ವೈಯಕ್ತಿಕ ವ್ಯಾವಹಾರಿಕ ಕಾರಣಕ್ಕೆ ಮೊಬೈಲ್ ಅಂಗಡಿ ಮಾಲೀಕನಿಗೂ ಕೆಲವು ಯುವಕರಿಗೂ ಗಲಾಟೆಯಾಗಿ ಮಾಲೀಕನ ಮೇಲೆ ಹಲ್ಲೆ ಆಯ್ತು. ಹಲ್ಲೆ ಮಾಡಿದವರ ಗುಂಪಿನಲ್ಲಿ ಒಂದಿಬ್ಬರು ಮುಸ್ಲಿಂ ಕೋಮಿನವರು ಇದ್ದರೆಂಬುದನ್ನೇ ನೆಪವಾಗಿಟ್ಟುಕೊಂಡು ಹಿಂದೂ ಧರ್ಮದ ಹೆಸರಲ್ಲಿ ಕೋಮುದಳ್ಳುರಿ ಹಚ್ಚುವ ಕೆಲಸವನ್ನು ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿರುವ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಹಾಗೂ ಪಿ.ಸಿ.ಮೋಹನ್ ಮಾಡಿದರು. ಸಂಘ ಪರಿವಾರದ ಮಿಲಿಟೆಂಟ್ ಗಳನ್ನು ಸೇರಿಸಿ ದೊಡ್ಡ ಹೈಡ್ರಾಮಾ ಮಾಡಿ ಪ್ರಚಾರ ಗಿಟ್ಟಿಸಲು ಪ್ರಯತ್ನಿಸಿದರು. ಶಾಸಕ ಗರುಡಾಚಾರ್ಯರವರು ಇದೊಂದು ವೈಯಕ್ತಿಕ ಜಗಳವೇ ಹೊರತು ಕೋಮುಸಂಘರ್ಷ ಅಲ್ಲ ಅಂತ ಹೇಳಿದ ಮೇಲೆ ಈ ಕೇಸರಿ ಅಭ್ಯರ್ಥಿಗಳು ತಣ್ಣಗಾದರು. ಅದೇ ರೀತಿ ಇತ್ತೀಚೆಗೆ ಪಾರ್ಕಿಂಗ್ ವಿಚಾರದಲ್ಲಿ ಆಟೋ ಡ್ರೈವರ್ ಗಳ ನಡುವೆ ಮಾರಾಮಾರಿ ಆಗಿತ್ತು. ಮುಸ್ಲಿಂ ವ್ಯಕ್ತಿ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಎಂಬ ಕಾರಣಕ್ಕೆ ಇದನ್ನೊಂದು ಕೋಮು ಸಂಘರ್ಷ ಎನ್ನುವಂತೆ ಇದೇ ಬಿಜೆಪಿಗರು ಬಿಂಬಿಸಿದರು. ಎಪ್ರಿಲ್ 19 ರಂದು ಹುಬ್ಬಳ್ಳಿಯ ಕಾರ್ಪೋರೇಟರ್ ಆಗಿರುವವರ ಮಗಳನ್ನು ಫಯಾಜ್ ಎನ್ನುವ ವ್ಯಕ್ತಿ ಕಾಲೇಜ್ ಕ್ಯಾಂಪಸ್‌ನಲ್ಲಿ ಇರಿದು ಕೊಲೆ ಮಾಡಿದ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಕೇಸರಿಗಳು ಇದನ್ನೂ ಸಹ ಮುಸ್ಲಿಂ ಲವ್ ಜಿಹಾದ್ ಎಂದು ಬಿಂಬಿಸಿದರು. ಹಿಂದೂ ಮಹಿಳೆಯರು ಅಪಾಯದಲ್ಲಿದ್ದಾರೆಂದು ಬಿಜೆಪಿ ನಾಯಕರು ಪ್ರಚಾರಕ್ಕಿಳಿದರು. ಹತ್ಯೆಗೊಳಗಾದ ಹೆಣ್ಮಗಳು ಕಾಂಗ್ರೆಸ್ ಕಾರ್ಪೋರೇಟರ್ ಮಗಳಾಗಿದ್ದಕ್ಕೆ ಬರೀ ವಿರೋಧ. ಬಿಜೆಪಿ ಕಾರ್ಪೊರೇಟರ್ ಮಗಳಾಗಿದ್ದರೆ ಇಷ್ಟೊತ್ತಿಗೆ ಇಡೀ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು.
ಈ ಬಿಜೆಪಿಯವರು ಹೇಳುವ ಹಾಗೆ ಯಾವ ಹಿಂದೂ ಧರ್ಮವೂ ಯಾರಿಂದಲೂ ಅಪಾಯ ಎದುರಿಸುತ್ತಿಲ್ಲ. ಸಮಾಜಕ್ಕೆ ಅಪಾಯ ಅನ್ನುವುದೇನಾದರೂ ಇದ್ದರೆ ಹಿಂದೂ ಹಾಗೂ ಮುಸ್ಲಿಂ ಕೋಮಿನಲ್ಲಿರುವ ಮತಾಂಧರಿಂದ ಹಾಗೂ ಇಂತಹ ಮತಾಂಧರನ್ನು ಹುಟ್ಟು ಹಾಕುವ ಧರ್ಮಾಂಧರಿಂದ. ಎಲ್ಲದಕ್ಕೂ ಕೋಮುಬಣ್ಣ ಬಳಿದು ಸಾಮಾಜಿಕ ಸೌಹಾರ್ದತೆಯನ್ನು ಕದಡುತ್ತಿರುವ, ಅನ್ಯ ಧರ್ಮ ದ್ವೇಷವನ್ನು ಪ್ರಚೋದಿಸುತ್ತಿರುವ ಬಿಜೆಪಿ ಪಕ್ಷವನ್ನು ಎಲ್ಲಾ ಸಮುದಾಯದ ಜನತೆ ಚುನಾವಣೆಯಲ್ಲಿ ತಿರಸ್ಕರಿಸಬೇಕಿದೆ. ಯಾವುದೇ ಹಲ್ಲೆ ಹತ್ಯೆ ದೌರ್ಜನ್ಯ ಯಾವುದೇ ಕೋಮಿನವರಿಂದ ನಡೆದರೂ ಆ ಕೇಡಿಗರನ್ನು ಮಾತ್ರ ಖಂಡಿಸಬೇಕಿದೆ, ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಲು ಆಗ್ರಹಿಸಬೇಕಿದೆ. ಕೆಲವರು ಮಾಡುವ ಅಪರಾಧಕ್ಕೆ ಇಡೀ ಕೋಮು ಸಮದಾಯವನ್ನು ದ್ವೇಷಿಸುವಂತೆ ಪ್ರೇರಣೆ ನೀಡುವವರನ್ನು ಜನತೆ ನಿರಾಕರಿಸಬೇಕಿದೆ. ಜಾತಿ ಇಲ್ಲದ ಭೀತಿ ಇಲ್ಲದ ನಾಡು ಕಟ್ಟಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು