ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು ಪ್ರಚಾರದ ಭರಾಟೆ ಜೋರಾಗಿದೆ. ಒಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮತ್ತೊಂದು ಕಡೆ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಸ್ ಮುಖಂಡರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಗೆಂಡೆಕಟ್ಟೆ ದೊಡ್ಡಿಯಲ್ಲಿ ಮಾತನಾಡಿದ H.D ಕುಮಾರಸ್ವಾಮಿ ನ.13ರಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿದ್ದು, ಧರ್ಮ ಹಾಗೂ ಅಧರ್ಮದ ನಡುವಿನ ಚುನಾವಣೆಯಾಗಿದೆ. ಕ್ಷೇತ್ರದ ಜನತೆಗೆ ಯಾರು ಕೆಲಸ ಮಾಡಿದ್ದಾರೆಂದು ಗೊತ್ತಿದೆ. ಚನ್ನಪಟ್ಟಣ ಕ್ಷೇತ್ರ ಮೂಲಸೌಕರ್ಯದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದಕ್ಕೆ ಕಾರಣ ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸ. ಜಾತಿಗಳ ನಡುವೆ ಸಂಘರ್ಷ ತರದೆ ಕೆಲಸ ಮಾಡಿದ್ದೇನೆ ಎಂದರು.
ಬೆಂಗಳೂರಿಗೆ ಹೋಲಿಸಿದರೆ ಚನ್ನಪಟ್ಟಣದ ಹಳ್ಳಿಗಳ ರಸ್ತೆ ಚೆನ್ನಾಗಿವೆ. ಬಾವುಟ ಹಾರಿಸೋದು ಮುಖ್ಯವಲ್ಲ,ಅದರಿಂದ ಜನರ ಹೊಟ್ಟೆ ತುಂಬಲ್ಲ ಎಂದು ಡಿ.ಕೆ.ಶಿವಕುಮಾರ್ ಗೆ ಕುಮಾರಸ್ವಾಮಿ ಟಾಂಗ್ ನೀಡಿದರು. ಧ್ಜಜಾರೋಹಣದ ಜೊತೆಗೆ ರಾಜ್ಯದ ಸಂಪತ್ತು ಲೂಟಿ ಮಾಡಿದ್ದೀರಾ ಎಂದು ಕಿಡಿ ಕಾರಿದರು.
ಕೈ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಗಚಗೆರೆ ಎಂಬಲ್ಲಿ ಮಾತನಾಡುತ್ತಾ ಚನ್ನಪಟ್ಟಣ ಬೇಡವೆಂದು ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ನಾನು ಇಂದು ಚುನಾವಣೆಗೆ ನಿಂತಿದ್ದೇನೆ. ಕುಮಾರಸ್ವಾಮಿ ನನಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ದುರದೃಷ್ಟವೆಂದರೆ ಅವರ ಕುಟುಂಬವೇ ನನ್ನ ವಿರೋಧಿಯಾಗಿದೆ. ಕಳೆದ 15 ವರ್ಷಗಳಿಂದ ಕುಮಾರಸ್ವಾಮಿ ಅವರ ಕುಟುಂಬ ಸ್ಪರ್ಧೆ ಮಾಡುತ್ತಿದೆ. ವಂಶಪಾರಂಪರ್ಯ ರಾಜಕಾರಣ ಕೊನೆಗೊಳ್ಳಬೇಕು. ನಾನು ಸೋತರೂ ನಿಮ್ಮ ಜೊತೆ ಕೆಲಸ ಮಾಡ್ತಿದ್ದೇನೆ. ಕುಮಾರಸ್ವಾಮಿ, ಪುತ್ರ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಯದ್ದು ಇದೇ ಕೊನೆ ಚುನಾವಣೆ ಎಂದು ವಾಗ್ದಾಳಿ ನಡೆಸಿದರು.
ರಾಮನಗರದಿಂದ ಎಚ್.ಡಿ ಕುಮಾರಸ್ವಾಮಿ ಅವರನ್ನು ಓಡಿಸಿ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಜೆಡಿಎಸ್ ಮುಖಂಡ ಸುರೇಶ್ ಗೌಡ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಇಲ್ಲಿಂದ H.D.ಕುಮಾರಸ್ವಾಮಿ 2 ಬಾರಿ ಶಾಸಕರಾಗಿದ್ದಾರೆ. ಇದು ಡಿಕೆಶಿ ಜಾಗೀರ್ ದಾರ್ ಕ್ಷೇತ್ರವಲ್ಲ. ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಪಡೆ ಬಲಿಷ್ಟ. ಅನಿವಾರ್ಯ ಕಾರಣಗಳಿಂದ ನಿಖಿಲ್ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್ ಸಂಚು ಎದುರಿಸಲು ನಿಖಿಲ್ ಸಮರ್ಥ. ಸಿಪಿವೈ ಮನಸ್ಥಿತಿ ಅಲ್ಪಸಂಖ್ಯಾತರಿಗೆ ಗೊತ್ತು. ಯೋಗಶ್ವರ್ ಅಲ್ಪಸಂಖ್ಯಾತರ ಪರ ನಿಲ್ಲಲ್ಲ ಎಂದರು.
ನಿಖಿಲ್ ಕುಮಾರಸ್ವಾಮಿ ಮುಕುಂದ ಗ್ರಾಮದಲ್ಲಿ ಭರ್ಜರಿ ಮತಬೇಟೆಯಾಡಿದರು. ಗ್ರಾಮದಲ್ಲಿ ಇವರಿಗೆ ಅದ್ದೂರಿ ಸ್ವಾಗತ ಕೋರಿದರು. ನಿಖಿಲ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಅಣಿಗೆರೆ ಗ್ರಾಮಕ್ಕೆ ಆಗಮಿಸಿದ ನಿಖಿಲ್ ಅವರನ್ನು ಜನರು ಪಟಾಕಿ ಸಿಡಿಸಿ ಆತ್ಮೀಯವಾಗಿ ಸ್ವಾಗತಿಸಿದರು.