ಬಿಡುಗಡೆಯ ಹಂಬಲ  ಮತ್ತು ವಾಸ್ತವದ ಮುಖಾಮುಖಿ

ಜಾತಿ ವರ್ಗಗಳ   ಹಂಗಿನರಮನೆಯಿಂದ ಬಿಡುಗಡೆಗೊಳ್ಳಬೇಕೆಂಬುದು  ಈ ಕಥೆಯಲ್ಲಿ ಆಶಯವೇ ಹೊರತು ವಾಸ್ತವವಲ್ಲ.  ದುಸ್ವಪ್ನದಲ್ಲಿ ಕಾಣುವ ಹೆಂಡತಿಯ ಮುಖದ  ಹುಲಿ ಈ ವಾಸ್ತವದ ರೂಪಕವೇ.  ಈ ಕತೆಯಲ್ಲಿ ರೋಗವೆಂಬುದು ಕಥಾನಾಯಕನ ದೈಹಿಕ ಸ್ಥಿತಿಯೂ ಹೌದು, ಅವನ ಭಾವನಾತ್ಮಕ ಮತ್ತು ಸಾಮಾಜಿಕ ಬದುಕಿನ ರೂಪಕವೂ ಹೌದು.  ಒಂದಕ್ಕೊಂದು ಜೊತೆಯಾಗಿಯೇ ಬೆಳೆದಿವೆ.  ಕಥಾನಾಯಕನಿಗೆ ತನ್ನ ರೋಗದ ಸಾಮಾಜಿಕ ಮೂಲ ಮತ್ತು ಬೆಳವಣಿಗೆ ಕುರಿತು ಪೂರ್ಣ ತಿಳಿದಿದೆ. ಆ ತಿಳುವಳಿಕೆಯೇ ಅವನ ದುರಂತ.   ಜೊತೆಗೆ, ನಿಶ್ಚಯದ ಬಾಳನ್ನು ಬಾಳಲಾಗದೆ ತೊಳಲಾಡುವ, ತನ್ನ ಬದುಕಿನ ಸತ್ಯಗಳು ತನ್ನವಲ್ಲವೆಂದು ತಿಳಿದಿರುವ ಅವನು, ಮಾನಸಿಕ ಸಂಘರ್ಷದಲ್ಲಿ ಒದ್ದಾಡುತ್ತಾನೆ. ಜಾತಿಯ ಕಾರಣಕ್ಕಾಗಿ ಪ್ರೀತಿಸಿದವಳನ್ನು  ಮದುವೆಯಾಗಲಾಗದ ಅಸಹಾಯಕತೆ ಇಡೀ ವ್ಯವಸ್ಥೆಯ ಕುರಿತು ಅವನಲ್ಲಿ  ಜಿಗುಪ್ಸೆಯನ್ನುಂಟು ಮಾಡಿದೆ.   ಸಹಮನುಷ್ಯರು ಮತ್ತು ತನ್ನ ನಡುವಿನ ಸಹಜ ಸಂಬಂಧಗಳನ್ನು ಕತ್ತರಿಸಿ ಹಾಕಿರುವ ಜಾತಿಯ ವಿಷಗೋಡೆ   ತನ್ನ ನಿಲುವು ನಿರ್ಣಯ ಕ್ರಿಯೆಗಳನ್ನೆಲ್ಲ ನಿಯಂತ್ರಿಸಿ, ತಾನೇ ತನಗೆ ಪರಕಿಯನಾಗುವಂತೆ ಮಾಡಿದೆ. ಪರಿಣಾಮವಾಗಿ, ಜಗತ್ತು ವಿಚಿತ್ರವಾಗಿ ಕಾಣುತ್ತದೆ. ಅರ್ಥಹೀನ ಎಂದುಕೊಳ್ಳುತ್ತಾನೆ. ಆದರೆ, ಹೊರಲೋಕದಲ್ಲಿ ಬಹುತೇಕರಿಗೆ ಮಾನಸಿಕವಾಗಿ  ಸಾಮಾಜಿಕವಾಗಿ ರಾಜಕೀಯವಾಗಿ ತಮಗೆ ಬಡಿದಿರುವ ರೋಗಗಳ ಅರಿವೇ ಇಲ್ಲ.

ಗಂಡು ಹೆಣ್ಣಿನ ಸಂಬಂಧಗಳಲ್ಲಿ ನಮ್ಮ ಸಮಾಜದ  ಜಾತಿಯಾಧಾರಿತ ವರ್ತನೆಗಳನ್ನ ಈ  ಕತೆ ಗಂಭೀರವಾಗಿ ಮುಖಾಮುಖಿಯಾಗಿದೆ. ಜಾತಿ ಮತ್ತು ವರ್ಗ ವ್ಯವಸ್ಥೆಯ ಹಂಗಿನರಮನೆಯಲ್ಲಿ ಸಿಕ್ಕ ಬದುಕುಗಳು ಇಲ್ಲಿ ಥರಗುಟ್ಟುತ್ತವೆ.  ಇಲ್ಲಿ  ಮನುಷ್ಯನೊಬ್ಬನಲ್ಲಿ ಪ್ರೇಮ ಸಹಾನುಭೂತಿ ಗೌರವ ಇನ್ನೊಬ್ಬರ ವರ್ತನೆಗಳನ್ನಾಧರಿಸಿ ಸಹಜವಾಗಿ ಹುಟ್ಟುವುದಿಲ್ಲ; ಅವರ ಜಾತಿಯನ್ನಾಧರಿಸಿರುತ್ತವೆ. ಇವರು ಸ್ವಂತ  ವಿವೇಚನೆಯಿಂದ ತಮ್ಮ ಬಾಳಿನ ಸತ್ಯವನ್ನ  ಹುಡುಕುವವರಲ್ಲ.  ಗಂಟೆಯ ಶಬ್ದ ಮತ್ತು ಆಹಾರವನ್ನು ಏಕಕಾಲಕ್ಕೆ ಕೊಟ್ಟುಕೊಟ್ಟು ಪಳಗಿಸಿದ, ಕೊನೆಗೆ ಗಂಟೆಯ ಶಬ್ದಕ್ಕೇ ಜೊಲ್ಲು ಸುರಿಸುವ ವರ್ತನಾವಾದಿ ಪಾವಲೋನಾ ನಾಯಿಗಳಂತೆ ಈ ಜನ; ವರ್ತನೆಗಳೆಲ್ಲಾ ನಿಯಂತ್ರಿತ. ತರಬೇತಿಗೊಳಿಸಿದ ಸರ್ಕಸ್  ಪ್ರಾಣಿಗಳು. ತಮ್ಮ ಬಾಳಿನ ಅಧಿಕೃತತೆಯನ್ನು ಎಂದೂ ಕಾಣದವರು.  ಇಂಥ ಜೊಳ್ಳು ಬಾಳಿನ ಕುರಿತಾದ ವಿಷಾದ ಮತ್ತು ವ್ಯಂಗ್ಯ  ಕಥೆಯುದ್ದಕ್ಕೂ ಹರಿದಿದೆ. ಮೇಲ್ಜಾತಿ ಮತ್ತು ಮೇಲ್ವರ್ಗಗಳ ಪಾತ್ರಗಳು ತಮ್ಮ ಆತ್ಮವಂಚನೆಯ ಅಗಾಧತೆಗೆ ಹೆದರಿ ನರಳುತ್ತವೆ. ಜಾತಿಯ ಹಂಗಿನಲ್ಲಿ ಸಿಕ್ಕ ವ್ಯಕ್ತಿ ಮನುಷ್ಯನಾಗಿ ಬದುಕುವ ನೈತಿಕತೆಯನ್ನೇ ಕಳೆದುಕೊಳ್ಳುವಂತಾಗಿರುವುದು ಇಲ್ಲಿ ಕಾಣುತ್ತದೆ.  ಪರಿಣಾಮವಾಗಿ, ನಿಜ ಮನುಷ್ಯರ ಹುಡುಕಾಟವಿದೆ.  ತಮ್ಮ ಬಾಳು  ತಮ್ಮದೇ ಎಂದು ಸ್ವತಂತ್ರವಾಗಿ ಬಾಳಬಲ್ಲ  ಮನುಷ್ಯರಿಗಾಗಿ ಕತೆ ಹಂಬಲಿಸುತ್ತಿದೆ.  ಈ ಕಥೆಯ ಮಟ್ಟಿಗೆ, ಶಿಕ್ಷಣವೆಂಬುದು  ಬಾಳಿನ ಶೋಧದ ಅರಿವನ್ನ ತಂದಂತಿದೆ. ಶಿಕ್ಷಣದ ಪ್ರಭಾವ ಒಬ್ಬೊಬ್ಬರ ಮೇಲೆ  ಒಂದೊಂದು  ಬೇರೆ ಪ್ರಮಾಣದಲ್ಲಿದ್ದರೂ,  ತಾವಿರುವ ಹಂಗಿನರಮನೆಯ ತಿಳುವಳಿಕೆಯನ್ನು  ಅದು ನೀಡಿದೆ. ಹಿಂದಿನ ಶತಮಾನದ ಅರವತ್ತರ  ದಶಕದ ಆಸುಪಾಸಲ್ಲಿ ಜಾತಿ ಎಂಬ ಸಂಸ್ಥೆಯೊಂದಿಗಿನ ಗುದ್ದಾಟದಲ್ಲಿ ಸುಶಿಕ್ಷಿತ ಮೊದಲ ತಲೆಮಾರು ಅನುಭವಿಸುವ ತಲ್ಲಣ ಪರಕೀಯತೆ ಅದರ ಪರಿಣಾಮವಾಗಿ ಮನುಷ್ಯ ಸಂಬಂಧಗಳಲ್ಲಿ ಕಾಣುವ ಅಸಂಗತತೆಯನ್ನು ಕಥೆ ಅನಾವರಣಗೊಳಿಸುತ್ತದೆ. ಈ ನಿಟ್ಟಿನಲ್ಲಿ ಇದು ಅಸ್ತಿತ್ವವಾದಿ ಬಿಕ್ಕಟ್ಟಿನಲ್ಲಿ ಮೂಡಿದ ವ್ಯಕ್ತಿ ವಿಶಿಷ್ಟವಾದಿ  ನಿರೂಪಣೆಯಾಗಿ ಕಾಣುತ್ತದೆ. ವ್ಯವಸ್ಥೆಯ ಮೇಲ್ತುದಿಯಲ್ಲಿರುವ ಸುಶಿಕ್ಷಿತರಲ್ಲಿ ತಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲಾಗದ್ದಕ್ಕಾಗಿ ಹುಟ್ಟುವ ಪಶ್ಚಾತ್ತಾಪ ಮತ್ತು ಪಾಪಪ್ರಜ್ಞೆಯನ್ನು, ಅರಮನೆಯೊಳಗಿನ ಬಂಧನದ ಅನುಭವವನ್ನು, ಆ ಕಾಲವನ್ನು ಪ್ರಭಾವಿಸಿದ ತಾತ್ವಿಕ ಮತ್ತು ವೈಚಾರಿಕ ಚೌಕಟ್ಟಿನಲ್ಲಿ ಗ್ರಹಿಸಬೇಕು.

ಇದು ಮನುಷ್ಯರ ಅಸ್ತಿತ್ವದ ಅರ್ಥ ಮತ್ತು ಉದ್ದೇಶದ ಕುರಿತು  ಜಿಜ್ಞಾಸೆ ಹುಟ್ಟಿಸುವ ಕಥನ.  ಮನೋವೈಜ್ಞಾನಿಕ ಚಲನೆಗಳಲ್ಲಿ ಆಸಕ್ತರಲ್ಲದವರಿಗೆ ಓದು ಸರಾಗ ಎನಿಸಲಿಕ್ಕಿಲ್ಲ. ಮೊದಲಾರ್ಧದಲ್ಲಿ ಘಟನಾವಳಿಗಳು ಚಲಿಸುವುದಿಲ್ಲ.  ಕ್ರಿಯೆಗಳ ಮೂಲಕ ಕಟ್ಟುವಿಕೆ ಕಾಣುವುದಿಲ್ಲ. ಆಲೋಚನೆಗಳಿಂದ ತುಂಬಿದೆ ಎನಿಸುತ್ತದೆ.  ಆದರೆ,  ಇದೇ ಮಿತಿಯಾಗುವ ಇಕ್ಕಟ್ಟಿಗೆ ಇನ್ನೇನು ಸಿಕ್ಕಿಕೊಳ್ಳುವುದೇನೋ ಎಂದುಕೊಳ್ಳುವಾಗಲೇ  ತಿರುವು ಪಡೆಯುತ್ತದೆ. ಕಿರಣಳ  ಪ್ರವೇಶ  ಕತೆಯ ದಿಕ್ಕನ್ನು ಸಂಪೂರ್ಣ ಬದಲಾಯಿಸದಿದ್ದರೂ, ಆಕೃತಿ ಮತ್ತು ಆಶಯದಲ್ಲಿ ಜೀವಂತಿಕೆಯನ್ನು ತರುತ್ತದೆ. ಆಕೃತಿ ಮತ್ತು ಆಶಯ ಎರಡರ ದೃಷ್ಟಿಯಿಂದಲೂ ಇಲ್ಲಿಂದ ಕೃತಿ ಏರಿಕೆಯನ್ನು ಕಾಣುತ್ತದೆ. ಪ್ರಾರಂಭದಲ್ಲಿ ಅತಿವೈಚಾರಿಕತೆ ಮತ್ತು ಸಿನಿಕತನದ ಒಣ ತೌಡಿನಲ್ಲಿ ಹೊರಳಾಡುತ್ತಿರುವಂತೆ ಕಾಣುವ ಕಥೆ, ಕೊನೆ ಕೊನೆಗೆ ವಿಶ್ವಾತ್ಮಕವಾಗಿ ಮನುಷ್ಯ ಚೇತನಗಳ ಬಿಡುಗಡೆಗೆ ಹಂಬಲಿಸುವ ಕಾವ್ಯದಂತೆ ಬದಲಾಗಿಬಿಡುತ್ತದೆ. ಕಥನದ ನಿರೂಪಣೆಯಲ್ಲಿರುವ ಶಕ್ತಿ ಇದು. ಕಥಾನಾಯಕ ಅಪ್ಪ ಅಮ್ಮ ತಮ್ಮ ಹೆಂಡತಿ ಯಾರಿಗೂ ಹೆಸರಿಲ್ಲದಿರುವುದು –  ಇವರೆಲ್ಲಾ ವ್ಯವಸ್ಥೆ ರೂಪಿಸಿದ ಸೂತ್ರದ ಗೊಂಬೆಗಳಂತೆ ತಮ್ಮ ಪಾತ್ರಗಳನ್ನು ಆಡುತ್ತಿರುವುದನ್ನು ಸೂಚಿಸುತ್ತದೆ. ವ್ಯಕ್ತಿಗಳಾಗಿ ತಮ್ಮ ಕರ್ತೃತ್ವ ಶಕ್ತಿಯನ್ನು ರವಿ ಮತ್ತು ಕಿರಣರಲ್ಲಿ  ಮಾತ್ರ ಕಾಣಬಹುದು.  ಪ್ರಥಮ ಪುರುಷ ನಿರೂಪಣೆ ಓದುಗನಲ್ಲಿ ಅನುಭವದ ತೀವ್ರತೆಯನ್ನು ತಂದು ಇದನ್ನು ನಮ್ಮೆಲ್ಲರ ಕಥೆಯಾಗಿಸುತ್ತದೆ. ಜೊತೆಗೆ, ಒಂದಲ್ಲಾ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ರೋಗಗಳಿಗೆ ಬಲಿಯಾಗಿರುವ ಮನುಷ್ಯ ಕುಲ, ವಿವೇಕದ ಒಂದು ಘಳಿಗೆಯಲ್ಲಿ ತಾನೇ ತಂದುಕೊಂಡ ರೋಗಗಳಿಂದ ಹೊರಬರಲಾಗದ ಸಂಕಟವನ್ನು ಹೇಳಿಕೊಳ್ಳುತ್ತಿದೆಯೇನೋ ಎಂಬ ಭಾವತೀವ್ರತೆಯನ್ನು  ಉಂಟುಮಾಡುತ್ತದೆ. ಇದು ಈ ಕಥೆಯ ನಿಜವಾದ ಗೆಲುವು. ವರ್ಗವ್ಯವಸ್ಥೆಯ ರೋಗಕ್ಕೆ ಪ್ರೇಮಸಂಬಂಧ ಬಲಿಯಾಗಿ ಪ್ರಾಣ ಕಳೆದುಕೊಂಡ ಯುವತಿಯ ಕತೆಯೂ ಇಲ್ಲಿದೆ.  ಹಂಗಿನರಮನೆ ಎಂಬ ರೂಪಕ  ಅತ್ಯಂತ ಧ್ವನಿಪೂರ್ಣವಾಗಿದೆ; ಜಾತಿ ವರ್ಗಗಳಾಚೆಗೆ  ಮನುಷ್ಯ ಕುಲವನ್ನು ಬಾಧಿಸುತ್ತಿರುವ  ಹಲವಾರು ವಿಷಮತೆಗಳನ್ನು ಈ ರೂಪಕ ಒಳಗೊಳ್ಳುತ್ತಿದೆ.

ಈ ಕಥಾ ಚೌಕಟ್ಟಿನೊಳಗಿನಿಂದಲೇ ಹುಟ್ಟುವ ಇನ್ನೊಂದು ನೋಟ, ಕಥಾನಾಯಕನ  ಅನಿಶ್ಚಿತ ಮನಸ್ಥಿತಿಯನ್ನೂ  ದುರಂತಕ್ಕೆ  ಹೊಣೆಯಾಗಿಸಬಹುದು.  ತಂದೆಗೆ ಮುಖ ತೋರಿಸದಂತಾದರೂ, ಅಂತರ್ಜಾತಿಯ ವಿವಾಹವಾಗಿ ಅವನ ಆಪ್ತ ಸ್ನೇಹಿತ ರವಿ ಹೇಗೋ ಬದುಕುತ್ತಿದ್ದಾನೆ. ಕೈಲಾದಷ್ಟು ಎದುರಿಸಿದ್ದಾನೆ. ಬದುಕಿನ ನಿರ್ಣಾಯಕ ಘಟ್ಟದಲ್ಲಿ ಮಾಡಬೇಕಾದ ತೀರ್ಮಾನಗಳನ್ನ ಮಾಡಿದ್ದಾನೆ.  ಅವನ ಜೊತೆಗಿಟ್ಟು ನೋಡಿದರೆ,  ಕಥಾನಾಯಕ ಸೋತ ಜೀವಿ. ಬೌದ್ಧಿಕವಾಗಿ ಶಕ್ತಿಶಾಲಿ ಎನಿಸಿದರೂ, ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕಾದ ನಿರ್ಣಯವನ್ನು ತೆಗೆದುಕೊಳ್ಳದ  ಮಾಡಬೇಕಾದ ಕ್ರಿಯೆಗಳನ್ನು ಮಾಡಲಾಗದ ಹ್ಯಾಮ್ಲೆಟ್ ನಂತೆ ( ಅನಿಶ್ಚಿತತೆಯ ವಿಚಾರದಲ್ಲಿ)  ದುರಂತ ಜೀವಿ.  ಆಲೋಚನೆಗಳಲ್ಲಿರುವ ಗಟ್ಟಿತನ ಕ್ರಿಯೆಗಳಲ್ಲಿ ಇಲ್ಲ. ಅದರ ಫಲವೇ ಅವನ ದುರಂತ ಸ್ಥಿತಿ. ಆದರೂ ಇಂಥ ಮನೋವಿಶ್ಲೇಷಣಾತ್ಮಕ ದೃಷ್ಟಿಕೋನ, ಸಾಮಾಜಿಕ ವಿಷಮತೆಯ ಸುಡುವಾಸ್ತವವನ್ನು ಮರೆಸುವ ಅಪಾಯಕ್ಕೆಳೆಸಬಾರದು. ಕೊನೆಗೆ ಇದರ ಬಗ್ಗೆ ಮತ್ತೆ ಮಾತಾಡುವೆ.

ಡಾ. ರಾಜಶೇಖರ ನೀರಮಾನ್ವಿ

ಎ.ಕೆ.ಅಬ್ಬಾಸರ ಗುಬ್ಬಿಗಳು, (ಸ್ಪೆರೋಸ್), ಹಂಗಿನರಮನೆಯ ಹೊರಗೆ, ಚಿನುವ ಆಚಬೆಯ  ‘ಮ್ಯಾರೇಜ್ ಈಸ್ ಎ ಪ್ರೈವೇಟ್ ಅಫೇರ್’ – ಹಿಂದಿನ ಶತಮಾನದ 60ರ ದಶಕ ಮತ್ತು ಅದಕ್ಕಿಂತ ಮೊದಲು ಬಂದ ಈ ಮೂರೂ ಕತೆಗಳನ್ನು ಇದೇ ಅನುಕ್ರಮದಲ್ಲಿಟ್ಟು ಓದುವ ಓದು, ಮನುಷ್ಯರ ಸಾಮಾಜಿಕ ಸಂಬಂಧಗಳ ಕ್ರಮಾನುಗತ ವಿಕಸನದಲ್ಲಿ ಶಿಕ್ಷಣದ ಪ್ರಭಾವದ ಕುರಿತಾದ ಸೂಕ್ಷ್ಮ ಗ್ರಹಿಕೆಯೊಂದನ್ನು ನೀಡುತ್ತದೆ.  ಆದರೆ, ಇದೇ ಹೊತ್ತಲ್ಲಿ ಅಂತರ್ಜಾತಿ ವಿವಾಹದ ಕಾರಣಕ್ಕೆ ತಂದೆಯೇ ಗರ್ಭಿಣಿ ಮಗಳನ್ನ ಕೊಂದ ಇತ್ತೀಚಿನ  ನಿದರ್ಶನ- ಇತ್ತೀಚಿನ  ಹಲವಾರು ನಿದರ್ಶನಗಳಲ್ಲಿ ಇದು ಒಂದಷ್ಟೇ – ಕಣ್ಣ ಮುಂದೆ ಬಂದು ಅಣಕಿಸುತ್ತದೆ.   ಅಂದರೆ  ಈ ಕಾಲದ ನಮ್ಮ ಸಾಮಾಜಿಕ ವಾಸ್ತವ, ಹಿಂದಿನಂತಲ್ಲದೆ, ಅದರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವಂತಿದೆ.   ಈ ಕತೆ ಹುಟ್ಟಿದ ಅರವತ್ತರ ದಶಕದ ಸಾಮಾಜಿಕ ಸನ್ನಿವೇಶವನ್ನಾದರೂ ಈಗ ಎಷ್ಟರಮಟ್ಟಿಗೆ ದಾಟಿದ್ದೇವೆ ಎಂಬುದೂ ಪ್ರಶ್ನಾರ್ಹವೇ.  ಅಂದರೆ, ಆ ಕಾಲದಲ್ಲಿ ಮರ್ಯಾದೆಗೇಡು ಹತ್ಯೆಗಳು  ನಡೆಯುತ್ತಲೇ ಇರಲಿಲ್ಲವೆಂದಲ್ಲ.  ಆ ಕಾಲದ ಅಂಥ ತಲ್ಲಣಗಳನ್ನು ದಾಟಿ ಬದುಕುಳಿಯಬಹುದಾದ  ದಾರಿಯಾಗಿಯೇ  ಸಾಹಿತ್ಯ ಇಂಥ ಕಥೆಗಳನ್ನ ಸೃಷ್ಟಿಸಿಕೊಂಡಿರಲೂಬಹುದು. ಆದರೆ,  ಆಗ ಅಂಥ ಘಟನೆಗಳ ಕುರಿತು  ಬರುವ   ವಿಮರ್ಶೆಗೆ ಅಥವಾ ಸೃಜನಶೀಲ ರಚನೆಗೆ  ಒಂದು ವರ್ಗದ  ವಿದ್ಯಾವಂತ ವಲಯ ಈಗಿನಂತೆ  ಪ್ರತಿಗಾಮಿಯಾಗಿ ಮತ್ತು ಪ್ರತಿಗಾಮಿತನವನ್ನೇ ಸಹಜವೆನಿಸುವಂತೆ ಪ್ರತಿಕ್ರಿಯಿಸುತ್ತಿರಲಿಲ್ಲ. ಹೆಚ್ಚುತ್ತಿರುವ ಈ ಪ್ರತಿಗಾಮಿತನದ ಮೂಲ ಎಲ್ಲಿದೆ? ಶಿಕ್ಷಣದ ಸ್ವರೂಪ ಮತ್ತು ಸಾಮಾಜಿಕ ಜೀವನದ  ಮೇಲೆ ಅದು ಉಂಟು ಮಾಡಬಲ್ಲ ಪರಿಣಾಮ ಆಯಾ ಕಾಲದಲ್ಲಿ ಪ್ರಭಾವಿಯಾಗಿರುವ ಸಮಾಜೋ- ಸಾಂಸ್ಕೃತಿಕ ತಾತ್ವಿಕತೆಯ ಚೌಕಟ್ಟುಗಳ ಮೇಲೆ ಅವಲಂಬಿತವಾಗಿರುತ್ತದೆ.  ಈ ಚೌಕಟ್ಟುಗಳಿಗೂ ಮತ್ತು ಆಯಾ ಕಾಲದ ರಾಜಕೀಯ ತಾತ್ವಿಕತೆಗೂ ಸೂಕ್ಷ್ಮ ಸಂಬಂಧವಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಹೊತ್ತಿನ ಪ್ರಭಾವಶಾಲಿ  ತಾತ್ವಿಕ ಚೌಕಟ್ಟು  ಸಾಂಸ್ಕೃತಿಕ ಸ್ವಾಭಿಮಾನದ ಹೆಸರಲ್ಲಿ ಶಿಕ್ಷಣ ಮತ್ತು ಜ್ಞಾನಶಾಸ್ತ್ರಗಳ ಸಂರಚನೆಗಳನ್ನೇ  ವಿರೂಪಗೊಳಿಸಿ,  ಈ ಅರಮನೆಯ  ಬುನಾದಿ ಮತ್ತು ನೀಲನಕ್ಷೆಗಳ ಬಗ್ಗೆ  ಹುಸಿ ಹೆಮ್ಮೆಯನ್ನು ಮೂಡಿಸಿ ಮತ್ತಷ್ಟು ಭದ್ರವಾಗಿಸುತ್ತಿರುವುದು  ಆತಂಕಕಾರಿ. ವ್ಯವಸ್ಥೆ ಉತ್ಪಾದಿಸುವ ಇಂಥ ಬಲಿಪಶುಗಳೂ ಸಹ ತಮ್ಮ ಆತ್ಮ ಸಂತೋಷ  ಮತ್ತು ವಿಮೋಚನೆ ಎಲ್ಲಿದೆ ಎಂದು ತಿಳಿಯಲು ಈ ಕಥೆ ಓದಲೇಬೇಕು.

ಡಾ. ಸಿ.ಬಿ.ಐನಳ್ಳಿ,  ಸಹಾಯಕ ಪ್ರಾಧ್ಯಾಪಕರು,  ಇಂಗ್ಲಿಷ್ ವಿಭಾಗ, ಕರ್ನಾಟಕ ಕಲಾಮಹಾವಿದ್ಯಾಲಯ, ಧಾರವಾಡ.

ಇದನ್ನೂ ಓದಿ- ನ್ಯಾಯಾಂಗದಲ್ಲಿ ಸನಾತನಿ ; ನ್ಯಾಯದಾನ ಆತಂಕದಲಿ

More articles

Latest article

Most read