ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ (victim woman kidnap case ) ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ (bhavani revanna) ಅವರ ಜಾಮೀನು ಅರ್ಜಿ ವಜಾಗೊಂಡಿದ್ದು, ಇಂದು ಭವಾನಿ ಅವರ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು (ಮೇ 31) ಭವಾನಿ ರೇವಣ್ಣ ಅವರಿಗೆ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಇಂದಿಗೆ (ಮೇ 31) ಜಾಮೀನು ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್, ಭವಾನಿ ರೇವಣ್ಣ ಅವರಿಗೆ ಜಾಮೀನು ತಿರಸ್ಕರಿಸಿದೆ.
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ನೀಡಿತ್ತು. ಆದರೆ, ಈ ನೊಟೀಸ್ಗೆ ಭವಾನಿ ರೇವಣ್ಣ ಉತ್ತರ ನೀಡಿಲ್ಲ. ಅಲ್ಲದೆ, ಕಳೆದ ಹದಿನೈದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ಭವಾನಿ ಅವರಿಗೆ ಎರಡನೇ ನೋಟಿಸ್
ಮೊದಲು ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ತಾವು, ತನಿಖೆಗೆ ಅವಶ್ಯವಿದ್ದರೆ ಹೊಳೆನರಸೀಪುರದ ನಿವಾಸದಲ್ಲಿ ಇರುವುದಾಗಿ ತಿಳಿಸಿದ್ದೀರಿ. ಆದರೆ, ಈ ಹಿಂದೆ ನೀಡಿದ್ದ ನೋಟೀಸ್‌ಗೆ ನೀವು ಉತ್ತರಿಸಿಲ್ಲ. ಈ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.