‘ವೇಷಗಳು’ ಸಿನಿಮಾಗೆ ಹಾರೈಸಿದ ಭಾವನಾ ಬೆಳಗೆರೆ

Most read

ರವಿ ಬೆಳಗೆರೆ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿ‌ ಇಲ್ಲ. ಆದರೆ ಅವರ ಪುಸ್ತಕಗಳು, ಅವರ ಸ್ಪೂರ್ತಿದಾಯಕ ನುಡಿಗಳು ಎಲ್ಲವೂ ಈಗಲೂ ಜೀವಂತವಾಗಿವೆ. ಅಕ್ಷರ ಮಾಂತ್ರಿಕನ ಅಭಿಮಾನಿಗಳು ಈಗಲೂ ಅವರಾಡಿರುವ ಮಾತುಗಳನ್ನು ಕೇಳುತ್ತಲೇ ಇರುತ್ತಾರೆ. ಅವರ ಪುಸ್ತಕಗಳನ್ನೂ ಓದುತ್ತಲೇ ಇರುತ್ತಾರೆ. ರವಿ ಬೆಳಗೆರೆಯವರ ಒಂದೊಂದು ಪುಸ್ತಕವೂ ಅದರದ್ದೇ ಆದ ಕಲ್ಪನಾಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ಬಿಡುತ್ತದೆ. ಇಷ್ಟು ದಿನ ಅವರ ಪುಸ್ತಕಗಳನ್ನು ಓದಿ, ಅವರ ಸಾಹಿತ್ಯಿಕ ಜಗತ್ತಿನಲ್ಲಿ ಸಂಚರಿಸುತ್ತಿದ್ದವರಿಗಾಗಿಯೇ ಹೊಸಬರ ಚಿತ್ರತಂಡವೊಂದು ಬೆಳ್ಳಿತೆರೆಯ ಮೇಲೆ ಆ ಲೋಕವನ್ನೇ ಸೃಷ್ಟಿಸಲು ಹೊರಟಿದೆ. ಅದೇ ‘ವೇಷಗಳು’ ಸಿನಿಮಾ ತಂಡ.

ಕಿಶನ್ ರಾವ್ ದಳವಿಯವರು ‘ವೇಷಗಳು’ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬೆಳಗೆರೆಯವರ ‘ಒಟ್ಟಾರೆ ಕಥೆಗಳು’ ಕಥಾಸಂಕಲನದಿಂದ ಆಯ್ದ ಕಥೆ ‘ವೇಷಗಳು’. ಇದೀಗ ಸಿನಿಮಾ ರೂಪದಲ್ಲಿ ತೆರೆ‌ಯ ಮೇಲೆ ಕಂಗೊಳಿಸಲು ಸಿದ್ಧತೆ ನಡೆಸುತ್ತಿದೆ. ಈತ್ತೀಚೆಗಷ್ಟೇ ರವಿ ಬೆಳಗೆರೆಯವರ ಪ್ರೀತಿಯ ಪುತ್ರಿ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕಿಯೂ ಆಗಿರುವ ಭಾವನಾ ಬೆಳಗೆರೆ ಹಾಗೂ ಜನಪ್ರಿಯ ನಟರಾದ ಅವರ ಪತಿ ಶ್ರೀನಗರ ಕಿಟ್ಟಿಯವರು ಟೈಟಲ್ ಲಾಂಚ್ ಮಾಡಿ, ಶುಭ ಹಾರೈಸಿದ್ದಾರೆ. ಕಿಶನ್ ರಾವ್ ದಳವಿಯವರು ರವಿ ಬೆಳಗೆರೆಯವರ ಅಪ್ಪಟ ಅಭಿಮಾನಿ. ತಮ್ಮ ಗುರುಗಳ ಕಥೆಯನ್ನೇ ಸಿನಿಮಾ ಮಾಡುತ್ತಿರುವುದಕ್ಕೆ ತುಂಬಾ ಖುಷಿಪಟ್ಟಿದ್ದಾರೆ. ಅಷ್ಟೆ ಅಲ್ಲ ಭಾವನ ಬೆಳಗೆರೆಯವರು ನೀಡಿದ ಪ್ರೋತ್ಸಾಹಕ್ಕೂ ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕರಾದ ಕಿಶನ್ ರಾವ್ ದಳವಿ ಅವರು ಮೂಲತಃ ರಂಗಭೂಮಿ ಕಲಾವಿದರು. ಈಗಾಗಲೇ ಸಿನಿಮಾಗಳಲ್ಲಿ ನಟರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ರಂಗ SSLC, ಗೌಳಿ, ಸಂಜು ವೆಡ್ಸ್ ಗೀತಾ 2 ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇವರದ್ದು.

ಗ್ರೀನ್ ಟ್ರೀ ಸ್ಟೂಡಿಯೋಸ್ ಬ್ಯಾನರಿನ ಚೊಚ್ಚಲ ಸಿನಿಮಾ ‘ವೇಷಗಳು’ ಕಿಶನ್ ರಾವ್ ದಳವಿಯವರೇ ನಿರ್ಮಾಣ ಮಾಡುತ್ತಿದ್ದಾರೆ. ಭಾರತದ ವೈವಿಧ್ಯಮಯ ಸಂಗೀತ, ಸಂಸ್ಕೃತಿಗಳ ಪರಿಚಯವನ್ನು ತೋರಿಸಲು ಹೊರಟಿರುವ ನಿರ್ದೇಶಕರು ಉತ್ತರಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿದ್ದಾರೆ.

ನಟರಾದ ಕಡ್ಡಿ ವಿಶ್ವರವರು ತಮ್ಮ ಗೆಳೆಯ ಕಿಶನ್ ರಾವ್ ದಳವಿಯವರ ಪ್ರಥಮ ನಿರ್ದೇಶನದ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರದಲ್ಲಿ ಅಕ್ಷಯ್ ಪಿ ರಾವ್ ಅವರ ಸಂಕಲನ, ಗುರುರಾಜ ಎಂ ದೇಸಾಯಿಯವರ ಸಂಭಾಷಣೆ, ಕೌಶಿಕ್ ಹರ್ಷ ಅವರ ಸಂಗೀತ, ರಾ. ಅಂಜನ್ ಕುಮಾರ್ ಅವರ ಛಾಯಾಗ್ರಹಣ ಇರಲಿದೆ.

More articles

Latest article