ಭಾರತ್ ರೈಸ್ ಮಾರಾಟ ನಿಲ್ಲಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ: ಸಿಎಂ ಸಿದ್ದರಾಮಯ್ಯ

Most read

ರಾಜ್ಯಕ್ಕೆ MRP ದರದಲ್ಲಿ ಕೆಜಿಗೆಡ 29 ರೂ ನಂತೆ ಭಾರತ್ ಅಕ್ಕಿ ಮಾರಾಟ ನಿಲ್ಲಿಸಿದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಂ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಭಾರತ್ ಅಕ್ಕಿ ಮಾರಾಟ ಸ್ಥಗಿತಗೊಳಿಸಿರುವುದರ ವಿರುದ್ಧ ನಾವು ಪ್ರತಿಭಟನೆ ಪ್ರಾರಂಭಿಸುತ್ತೇವೆ. ಅವರ ಬಳಿ ಅಕ್ಕಿ ದಾಸ್ತಾನು ಇದ್ದರೂ ಅಕ್ಕಿ ನೀಡುತ್ತಿಲ್ಲ ಎಂದರೆ ಅದು ರಾಜಕೀಯ ಎಂದು ತಿರುಗೇಟು ನೀಡಿದ್ದಾರೆ.

ಚುನಾವಣೆ ಉದ್ದೇಶದಿಂದ ಭಾರತ್ ಅಕ್ಕಿಯ ಮಾರಾಟ ಮಾಡಲಾಯಿತು. ಚುನಾವಣೆ ಮುಗಿದ ಮೇಲೆ ಅದನ್ನು ನಿಲ್ಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ. ಅಕ್ಕಿಯ ದಾಸ್ತಾನು ಇಲ್ಲದಿದ್ದರೆ ಅದು ಅರ್ಥವಾಗುವಂತಹದ್ದು. ಆದರೆ ಅವರ ಬಳಿ ಅಕ್ಕಿ ಇದ್ದರೂ ಅದನ್ನು ನೀಡುತ್ತಿಲ್ಲ. ‘ಅನ್ನ ಭಾಗ್ಯ’ದ ಉಚಿತ ಅಕ್ಕಿ ಅಕ್ಕಿ ನೀಡುವಂತೆ ನಾವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದಾಗ ಅವರು ಭಾರತೀಯ ಆಹಾರ ನಿಗಮದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದರೂ ಅವರು ನೀಡಲು ನಿರಾಕರಿಸಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

”ಕೇಂದ್ರ ಸರ್ಕಾರ ದಲಿತರು, ಬಡವರು ಮತ್ತು ಹಿಂದುಳಿದವರ ಜೊತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ರಾಜ್ಯ ಸರ್ಕಾರವು ಸಮಾಜದ ಬಡವರಿಗೆ ಅನ್ನ ನೀಡಲು ಬಯಸಿದಾಗ ಅವರು ಅಕ್ಕಿ ನೀಡಲು ನಿರಾಕರಿಸಿದರು” ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ನಾವು ಅಕ್ಕಿ ಖರೀದಿಸಲು ಸಿದ್ಧರಿದ್ದರೂ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕರ್ನಾಟಕಕ್ಕೆ ಅಕ್ಕಿ ನೀಡುತ್ತಿಲ್ಲ ಎಂದು ಸಿಎಂ ಟೀಕಿಸಿದರು.

More articles

Latest article