ನರೇಂದ್ರ ಮೋದಿಯವರು ದೇಶದ ಖಾಸಗಿ ಉದ್ಯಮಿಗಳ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ರೈತರು ಕೇವಲ ಎಂ ಎಸ್ ಪಿ ಕೇಳುತ್ತಿದ್ದಾರೆ. ತಮ್ಮ ಫಸಲಿಗೆ ಸರಿಯಾದ ಬೆಲೆ ಕೇಳುತ್ತಿದ್ದಾರೆ. ಆದರೆ ಬಿಜೆಪಿಯವರು ಎಂ ಎಸ್ ಪಿ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಸರಕಾರ ಬಂದಾಗ ನಾವು ರೈತರಿಗೆ ಎಂ ಎಸ್ ಪಿ ಕೊಡುತ್ತೇವೆ -ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರ ಕೇಂಬ್ರಿಜ್ ಭೇಟಿಯ ಕಾರಣ ನೀಡಲಾಗಿದ್ದ ಕೆಲ ದಿನಗಳ ರಜೆಯ ಬಳಿಕ ಯಾತ್ರೆ ಇಂದು ರಾಜಸ್ತಾನದ ಧೋಲ್ ಪುರದಿಂದ ಆರಂಭಗೊಂಡಿತು. ಆ ಬಳಿಕ ಯಾತ್ರೆಯು ಮಧ್ಯಪ್ರದೇಶವನ್ನು ಪ್ರವೇಶಿಸಿದಾಗ ಮಧ್ಯಪ್ರದೇಶದ ಮೊರೇನಾದಲ್ಲಿ ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೊತಾಸ್ರ ಅವರಿಂದ ಮಧ‍್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿಯವರಿಗೆ ಧ್ವಜ ಹಸ್ತಾಂತರಣ ಕಾರ್ಯಕ್ರಮ ನಡೆಯಿತು.
ಇಂದಿನ (02.03.2024) ಕಾರ್ಯಕ್ರಮಗಳು ಹೀಗಿದ್ದವು. ಮಧ್ಯಾಹ್ನ 2.00 ರಿಂದ ರಾಜಸ್ತಾನ, ಧೋಲ್ ಪುರ ರಾಜಖೇಡ ಬೈಪಾಸ್ ನಿಂದ ಯಾತ್ರೆ ಆರಂಭ. ಮಧ‍್ಯಾಹ್ನ 3.00 ಕ್ಕೆ ಮಧ‍್ಯಪ್ರದೇಶ ಪ್ರವೇಶ. ಮೊರೆನಾದ ಡಾ. ಭೀಮರಾವ್ ಅಂಬೇಡ್ಕರ್ ಸ್ಟೇಡಿಯಂ ನಲ್ಲಿ ಧ‍್ವಜ ಹಸ್ತಾಂತರಣ. ಸಂಜೆ 5.30 ಕ್ಕೆ ಗ್ವಾಲಿಯರ್ ಸಿಟಿಯ ಚಾರ್ ಶಹರ್ ಕಾ ನಾಕಾ ರೋಡನ್ ನಿಂದ ಹಜಿರಾ ಚೌರಾಹದ ವರೆಗೆ ಪಾದಯಾತ್ರೆ. ಬಳಿಕ ಸಾರ್ವಜನಿಕ ಸಭೆ. ರಾತ್ರಿ ವಿಶ್ರಾಂತಿ ಮಧ್ಯಪ್ರದೇಶ ಗ್ವಾಲಿಯರ್ ನ ಡಿಬಿ ಸಿಟಿ ರೋಡ್ ನ ಗೋಲ್ಡನ್ ಲೋಟಸ್ ನಲ್ಲಿ.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು “ಈಗ ಮಾಧ್ಯಮಗಳಲ್ಲಿ ವಿಪಕ್ಷಗಳ ಮಾತು ಬರುವುದಿಲ್ಲ. ಆದ್ದರಿಂದ ನಾವು ಯಾತ್ರೆಯ ಮೂಲಕ ನೇರವಾಗಿ ಜನರ ನಡುವೆ ಹೋಗಿ ನಮ್ಮ ಮಾತು ಮುಂದಿಡುತ್ತಿದ್ದೇವೆ. ಇಂದು ದೇಶದಲ್ಲಿ ದ್ವೇಷ ಮತ್ತು ಪ್ರೀತಿಯ ಸಿದ್ಧಾಂತದ ನಡುವೆ ಸಂಘರ್ಷ ನಡೆದಿದೆ. ಒಂದೆಡೆಯಲ್ಲಿ ಬಿಜೆಪಿಯವರು ಜನರನ್ನು ಜಾತಿ ಧರ್ಮಗಳಲ್ಲಿ ಒಡೆಯುತ್ತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಒಗ್ಗೂಡಿಸಲು ಯತ್ನಿಸುತ್ತಿದೆ.
ಭಾರತ ಜೋಡೋ ಯಾತ್ರೆಯ ಬಳಿಕ ನಾವು ಮಣಿಪುರದಿಂದ ಮಹಾರಾಷ್ಟ್ರದ ತನಕ ಭಾರತ ಜೋಡೋ ನ್ಯಾಯ ಯಾತ್ರೆ ಶುರು ಮಾಡಿದೆವು. ಈ ಯಾತ್ರೆಯಲ್ಲಿ ನಾವು ನ್ಯಾಯ ಎಂಬ ಪದವನ್ನುಸೇರಿಸಿದ್ದೇವೆ. ದೇಶದಲ್ಲಿ ಜನರಿಗೆ ಅನೇಕ ರೀತಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಆದ್ದರಿಂದ ದ್ವೇಷ ಹರಡುತ್ತಿದೆ. ಭಾರತದ ಅರ್ಥವ್ಯವಸ್ಥೆಯನ್ನು ನೋಡಿದರೆ, ಪ್ರತಿಯೊಂದು ವಲಯದಲ್ಲಿಯೂ ನೀವು ಕೆಲವು ಖಾಸಗಿ ಕಂಪೆನಿಗಳ ಏಕಸ್ವಾಮ್ಯ ನೋಡುತ್ತೀರಿ. ದೇಶದ ವಿಮಾನ ನಿಲ್ದಾಣ, ಬಂದರು, ವಿದ್ಯುತ್ ಉತ್ಪಾದನೆ ಎಲ್ಲಿ ನೋಡಿದರೂ ಅದಾನಿ. ಮೋದಿ ಸರಕಾರವು ಖಾಸಗಿ ಉದ್ಯಮಿಗಳಿಗೆ ದೇಶದ ಎಲ್ಲ ಹಣವನ್ನೂ ಕೊಟ್ಟುಬಿಟ್ಟಿದೆ. ಇದರ ಪರಿಣಾಮವಾಗಿ ಜನರಿಗೆ ಉದ್ಯೋಗ ಕೊಡುವ ಸಣ್ಣ ವ್ಯಾಪಾರಿಗಳು ನಾಶವಾಗಿದ್ದಾರೆ. ಈಗ ದೇಶದ ಯುವಜನರು ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಇದು ಆರ್ಥಿಕ ಅನ್ಯಾಯ.
ನರೇಂದ್ರ ಮೋದಿಯವರು ದೇಶದ ಖಾಸಗಿ ಉದ್ಯಮಿಗಳ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ರೈತರು ಕೇವಲ ಎಂ ಎಸ್ ಪಿ ಕೇಳುತ್ತಿದ್ದಾರೆ. ತಮ್ಮ ಫಸಲಿಗೆ ಸರಿಯಾದ ಬೆಲೆ ಕೇಳುತ್ತಿದ್ದಾರೆ. ಆದರೆ ಬಿಜೆಪಿಯವರು ಎಂ ಎಸ್ ಪಿ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಸರಕಾರ ಬಂದಾಗ ನಾವು ರೈತರಿಗೆ ಎಂ ಎಸ್ ಪಿ ಕೊಡುತ್ತೇವೆ. ಇದು ಕಾಂಗ್ರೆಸ್ ನ ಭರವಸೆ.
ದೇಶದಲ್ಲಿ 50% ಒಬಿಸಿ, 15% ದಲಿತರು, 8% ಆದಿವಾಸಿಗಳು ಇದ್ದಾರೆ. ಇವರ ಒಟ್ಟು ಜನಸಂಖ್ಯೆ 73%. ಆದರೆ ಅವರಿಗೆ ಸರಿಯಾದ ಅವಕಾಶ ಸಿಕ್ಕಿಲ್ಲ. ಈ ದೇಶದಲ್ಲಿ ಅನ್ಯಾಯ ಹರಡುತ್ತಿದೆ, ಅದು ನಿಲ್ಲಬೇಕು. ಬಡವರು ಮತ್ತು ದುರ್ಬಲರಿಗೆ ನ್ಯಾಯ ಸಿಗಬೇಕು. ಜಾತಿಗಣತಿಯು ಸಾಮಾಜಿಕ ನ್ಯಾಯದ ಕ್ರಾಂತಿಕಾರಿ ಹೆಜ್ಜೆ. ಯಾವಾಗ ಜಾತಿ ಗಣತಿಯಾಗುತ್ತದೋ ಆಗ ದೇಶದ 73% ಜನತೆಗೆ ಭಾಗೀದಾರಿಕೆ ಸಿಗಲಾರಂಭಿಸುತ್ತದೆ.
ದೇಶದಲ್ಲಿ ಹಿಂದೆ ಸೈನಿಕರು ಹುತಾತ್ಮರಾದಾಗ ಅವರಿಗೆ ಹುತಾತ್ಮ ಪಟ್ಟ ದೊರೆಯುತ್ತಿತ್ತು. ಈಗ ಅಗ್ನಿವೀರ ಯೋಜನೆ ಬಂದ ಬಳಿಕ ಸೈನಿಕರಲ್ಲೂ ಭೇದಭಾವ ಮಾಡಲಾಗುತ್ತಿದೆ. ಮೋದಿ ಸರಕಾರ ಅಗ್ನಿವೀರ ಯೋಜನೆಯನ್ನು ಹಣ ಉಳಿಸುವ ಉದ್ದೇಶದಿಂದ ತಂದಿದೆ. ರಕ್ಷಣಾ ಬಜೆಟ್ ಸೈನಿಕರಿಗೆ ಖರ್ಚು ಮಾಡದೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ಆ ಹಣವನ್ನು ಹಂಚುವ ಉದ್ದೇಶ ಇದರ ಹಿಂದಿದೆ” ಎಂದರು.
ಇಂದಿನ ಯಾತ್ರೆಯಲ್ಲಿ ಅಶೋಕ ಗೆಹ್ಲೋಟ್, ಸಚಿನ್ ಪೈಲಟ್ ಸಹಿತ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ನಾಳೆ ಮಧ್ಯಪ್ರದೇಶದಲ್ಲಿ ಯಾತ್ರೆ ಮುಂದುವರಿಯಲಿದೆ.
ಶ್ರೀನಿವಾಸ ಕಾರ್ಕಳ, ಮಂಗಳೂರು
ಹಿಂದಿನ ಯಾತ್ರೆ –ಭಾರತ್ ಜೋಡೋ ನ್ಯಾಯ ಯಾತ್ರೆ- 43ನೆಯ ದಿನ