“ಇಂದು ದೇಶದಲ್ಲಿ ದೊಡ್ಡ ದೊಡ್ಡ ಘಟನೆಗಳು ಸಂಭವಿಸುತ್ತಿವೆ. ದೇಶದ ಮಾನ ಸಮ್ಮಾನ ಹೆಚ್ಚುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಈ ಮಾನ ಸಮ್ಮಾನವು ಯುವಜನತೆಯ ಕನಸಿನೊಂದಿಗೆ ಸಂಬಂಧ ಹೊಂದಿದೆಯೇ? ಇದರಿಂದ ದೇಶದ ಯುವಜನರಿಗೆ ಉದ್ಯೋಗ ದೊರೆಯುತ್ತದೆಯೇ?” – ಪ್ರಿಯಾಂಕ ಗಾಂಧಿ
ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ನ್ಯಾಯ ಯಾತ್ರೆ ಇಂದು ನಡೆಯಿತು. ಈ ಯಾತ್ರೆ ಅನೇಕ ಕಾರಣಗಳಿಗೆ ವಿಶಿಷ್ಟವೆನಿಸಿತು, ಗಮನ ಸೆಳೆಯಿತು. INDIA ಮೈತ್ರಿಕೂಟದ ಭಾಗವೇ ಆದರೂ ಅಖಿಲೇಶ್ ಯಾದವ್ ಅವರ ನಡೆ ಏನು ಎಂಬ ಬಗ್ಗೆ ಕೆಲ ದಿನಗಳಿಂದ ಅನುಮಾನವಿತ್ತು. ಮೈತ್ರಿಕೂಟದಿಂದ ಹೊರನಡೆಯುತ್ತಾರೆ ಎಂಬ ವದಂತಿಯೂ ಇತ್ತು. ಈ ವದಂತಿಗೆಲ್ಲ ತೆರೆ ಎಳೆಯುವ ಹಾಗೆ ಇತ್ತೀಚೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ (ಸಪಾ) ಸೀಟು ಹಂಚಿಕೆ ನಡೆಯಿತು. ಇದರ ಮುಂದುವರಿಕೆಯಾಗಿ ಇಂದಿನ ಯಾತ್ರೆಯಲ್ಲಿ ಸಪಾ ನಾಯಕ ಅಖಿಲೇಶ್ ಯಾದವ್ ಕೂಡಾ ಭಾಗವಹಿಸಿದ್ದರು.
ರಾಷ್ಟ್ರೀಯ ಲೋಕದಳದ ಜಯಂತ ಚೌಧರಿ ಇಂಡಿಯಾ ಮೈತ್ರಿಕೂಟದ ಎಲ್ಲ ಸಭೆಗಳಲ್ಲಿ ಭಾಗವಹಿಸಿಯೂ ಕೊನೆಗೆ ಬಿಜೆಪಿ ಮೈತ್ರಿ ಕೂಟ ಸೇರಿಕೊಂಡರು. ಆದರೆ ಇಂದಿನ ಯಾತ್ರೆಯಲ್ಲಿ ಆರ್ ಎಲ್ ಡಿ ಯ ಅನೇಕ ನಾಯಕರು ಮತ್ತು ಬೆಂಬಲಿಗರು ಕಾಣಿಸಿಕೊಂಡುದು ಅಚ್ಚರಿಯ ಸಂಗತಿ ಮಾತ್ರವಲ್ಲ ಹೊಸ ರಾಜಕೀಯ ಸಮೀಕರಣದ ಸೂಚನೆಯನ್ನೂ ನೀಡಿತು. ಅಲ್ಲದೆ ಬಿಎಸ್ ಪಿ ನಾಯಕರು ಕೂಡಾ ಯಾತ್ರೆಯಲ್ಲಿ ಕಾಣಿಸಿಕೊಂಡರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್, ಆರ್ ಎಲ್ ಡಿ, ಬಿ ಎಸ್ ಪಿ ಹೀಗೆ ಇಡೀ ಯಾತ್ರೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಇಂದಿನ ಯಾತ್ರೆ ಹೊಸ ಭರವಸೆಗೆ ಕಾರಣವಾಯಿತು. ಇದೇ ಕಾರಣದಿಂದ ಭಾರೀ ಜನಸಂದಣಿಯೂ ಕಂಡುಬಂದಿತು ಯಾತ್ರೆಯಲ್ಲಿ.
ಇಂದಿನ (25.02.2024) ಕಾರ್ಯಕ್ರಮಗಳು ಹೀಗಿದ್ದವು. ಬೆಳಿಗ್ಗೆ 8.30 ಕ್ಕೆ ಉತ್ತರಪ್ರದೇಶದ ಜಮಲಾಪುರ, ಅಲಿಗಢ, ಬಯಾ ಎ ಎಮ್ ಯು ಗೇಟ್ ಚುಂಗಿ ಚೌರಾಹದಿಂದ ಯಾತ್ರೆ ಆರಂಭ. ಶಮಶದ್ ಮಾರ್ಕೆಟ್ ಚೌಕದಲ್ಲಿ ಸಾರ್ವಜನಿಕ ಭಾಷಣ. 12.00 ಕ್ಕೆ ಸ್ವಾಗತ ಕಾರ್ಯಕ್ರಮ ಮತ್ತು ವಿರಾಮ ಸೈದಾಬಾದ್, ಗಾಂಧಿ ತಿರಾಹ ಹಾತರಸ್. ಬದಾಯಿಯಲ್ಲಿ ಮಧ‍್ಯಾಹ್ನದ ಭೋಜನ. 2.00 ಕ್ಕೆ ತೆರಿ ಭಾಗ್ಯದಿಂದ ಯಾತ್ರೆ ಆರಂಭ. ಆಗ್ರಾದಲ್ಲಿ ಸ್ವಾಗತ ಕಾರ್ಯಕ್ರಮ. ತೆಹರಾದಲ್ಲಿ ಸಾರ್ವಜನಿಕ ಭಾಷಣ. 4.30 ಕ್ಕೆ ಉತ್ತರಪ್ರದೇಶ ಮತ್ತು ರಾಜಸ್ಥಾನ ಗಡಿಯಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ. ರಾಜಸ್ತಾನದ ಧೋಲ್ಪುರ, ಬೋತಪುರ ಮೋರ್ ನಲ್ಲಿ ವಿರಾಮ. ಲಂಡನ್ ನ ಕಾರ್ಯಕ್ರಮದಲ್ಲಿ ರಾಹುಲ್ ಪಾಲ್ಗೊಳ್ಳಲಿರುವ ಕಾರಣ ಮಾರ್ಚ್ 1 ರ ತನಕ ಯಾತ್ರೆಗೆ ವಿರಾಮ. ಮಾರ್ಚ್ 2 ರಂದು ರಾಜಸ್ತಾನ ಧೋಲಪುರದಿಂದ ಯಾತ್ರೆ ಮತ್ತೆ ಮುಂದುವರಿಯಲಿದೆ.
ಯಾತ್ರೆಯ ಸಮಯದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, “ಇಂದು ದೇಶದಲ್ಲಿ ದೊಡ್ಡ ದೊಡ್ಡ ಘಟನೆಗಳು ಸಂಭವಿಸುತ್ತಿವೆ. ದೇಶದ ಮಾನ ಸಮ್ಮಾನ ಹೆಚ್ಚುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಈ ಮಾನ ಸಮ್ಮಾನವು ಯುವಜನತೆಯ ಕನಸಿನೊಂದಿಗೆ ಸಂಬಂಧ ಹೊಂದಿದೆಯೇ? ಇದರಿಂದ ದೇಶದ ಯುವಜನರಿಗೆ ಉದ್ಯೋಗ ದೊರೆಯುತ್ತದೆಯೇ? ಜನರಿಗೆ ಮಾನ ಸಮ್ಮಾನ ದೊರೆತಾಗಲೇ ದೇಶದ ಸಮ್ಮಾನ ಹೆಚ್ಚುವುದು. ದೇಶದ ಯುವಜನರು ಸೇನೆ ಸೇರಲು ಗಂಟೆಗಟ್ಟಲೆ ಕೆಲಸ ಮಾಡುತ್ತಾರೆ. ಆದರೆ ಮೋದಿ ಸರಕಾರ ಅಗ್ನಿಪಥ ಯೋಜನೆ ತಂದಿತು. ಪಿ ಎಸ್ ಯು ನಲ್ಲಿ ಉದ್ಯೋಗ ಸಿಗುತ್ತಿತ್ತು. ಆದರೆ ಅದನ್ನು ಸರಕಾರ ನಿರಂತರ ಮಾರುತ್ತಿದೆ. ರೈತರು ರಸ್ತೆಯಲ್ಲಿ ಕುಳಿತಿದ್ದಾರೆ. ಬೆಲೆ ನಿರಂತರ ಏರುತ್ತಿದೆ. ಸರಕಾರ ಜನರ ಕೆಲಸ ಮಾಡಬೇಕು. ಇದು ನಿಮಗೆ ಅರ್ಥವಾಗುವ ವರೆಗೂ ಬದಲಾವಣೆ ಬಾರದು. ನನಗಿವತ್ತು ತುಂಬಾ ಖುಷಿಯ ದಿನ. ಯಾಕೆಂದರೆ ಭಾರತ್ ಜೊಡೋ ನ್ಯಾಯ ಯಾತ್ರೆಗೆ ಅಖಿಲೇಶ್ ಯಾದವ್ ಬಂದಿದ್ದಾರೆ. ನಾವು ಎಲ್ಲರೂ ಸೇರಿ ದೇಶದ ಲೋಕತಂತ್ರ ಮತ್ತು ಸಂವಿಧಾನ ಉಳಿಸುವ ಕೆಲಸ ಮಾಡುತ್ತಿದ್ದೇವೆ” ಎಂದರು.
ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಕುಟುಂಬದಲ್ಲಿ ಜಗಳವಾದಾಗ ಕುಟುಂಬ ದುರ್ಬಲವಾಗುತ್ತದೆ. ಇದೇ ರೀತಿಯಲ್ಲಿ ಯಾರಾದರೂ ದೇಶವನ್ನು ದುರ್ಬಲಗೊಳಿಸಿದಾಗ ಒಬ್ಬ ದೇಶಭಕ್ತ ದೇಶವನ್ನು ಉಳಿಸುತ್ತಾನೆ. ದ್ವೇಷ ಮತ್ತು ಹಿಂಸೆಯನ್ನು ಇಲ್ಲವಾಗಿಸುತ್ತಾನೆ. ಭಾರತ ಜೋಡೋ ಯಾತ್ರೆಯ ಉದ್ದೇಶ ಇದುವೇ ಆಗಿದೆ.
ನೀವು ಓದುತ್ತೀರಿ, ಖಾಸಗಿ ಟ್ಯೂಶನ್ ಪಡೆಯುತ್ತೀರಿ. ಆದರೆ ಪರೀಕ್ಷೆ ಬರೆಯಲು ಹೋದಾಗ ಪೇಪರ್ ಲೀಕ್ ಆದುದು ನಿಮಗೆ ತಿಳಿಯುತ್ತದೆ. ಮೋದಿ ಸರಕಾರದ ಗುರಿಯೆಂದರೆ, ಸರಕಾರಿ ನೌಕರಿ ಕೇಳುವವರ ಸಮಯ ಹಾಳು ಮಾಡುವುದು. ಯಾಕೆಂದರೆ ಅವರು ನಿಮಗೆ ಉದ್ಯೋಗ ಕೊಡಲು ಬಯಸುವುದಿಲ್ಲ. ಭಾರತದ ಸೇನೆಯಲ್ಲಿ ಲಕ್ಷಗಟ್ಟಲೆ ಜನರು ದೇಶಸೇವೆ ಮಾಡುತ್ತಿದ್ದರು. ಅವರಿಗೆ ಗೌರವದೊಂದಿಗೆ ಮೆಡಿಕಲ್, ಕ್ಯಾಂಟೀನ್, ಪೆನ್ಶನ್ ಇತ್ಯಾದಿ ಸವಲತ್ತು ದೊರೆಯುತ್ತಿತ್ತು. ಆದರೆ ಈಗ ಅಗ್ನಿವೀರ ಬಂದಿದೆ. ನಾಲ್ಕು ವರ್ಷದ ಬಳಿಕ ವಾಪಸ್ ಬಂದಾಗ ನಿಮ್ಮ ಆರ್ಥಿಕ ಸ್ಥಿತಿ ಹಾಳಾಗಿರುತ್ತದೆ” ಎಂದರು.
ಯಾತ್ರೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, “ಭಾರತ ಜೊಡೋ ನ್ಯಾಯ ಯಾತ್ರೆಯಲ್ಲಿ ಸಾಗುತ್ತಿರುವ ರಾಹುಲ್ ಗಾಂಧಿ, ಶ್ರೀಮತಿ ಪ್ರಿಯಾಂಕಾ ಗಾಂಧಿ ಮತ್ತು ಎಲ್ಲ ಕಾರ್ಯಕರ್ತರಿಗೂ ಜನರಿಗೂ ಆಭಾರ ವ್ಯಕ್ತ ಪಡಿಸಲು ಬಯಸುತ್ತೇನೆ. ರಾಹುಲ್ ಗಾಂಧಿ ಪ್ರೀತಿಯ ಅಂಗಡಿ ಹಿಡಿದು ಸಾಗುತ್ತಿದ್ದಾರೆ. ಈಗ ಅವರು ಆಗ್ರಾದಲ್ಲಿದ್ದಾರೆ. ನನಗೆ ಖುಷಿಯಾಗುತ್ತಿದೆ. ಆಗ್ರಾ ಪ್ರೀತಿಯ ಶಹರ. ಆದ್ದರಿಂದ ಇಲ್ಲಿಂದ ಪ್ರೀತಿಯನ್ನು ಬಾಚಿಕೊಳ್ಳಿ ಮತ್ತು ಯಾತ್ರೆಯಲ್ಲಿ ಅದನ್ನು ಹಂಚುತ್ತಾ ಹೋಗಿ. ಇಂದು ಲೋಕತಂತ್ರ ಮತ್ತು ಸಂವಿಧಾನ ಉಳಿಸುವ ಸವಾಲು ನಮ್ಮ ಮುಂದಿದೆ. ಆದ್ದರಿಂದ ಬಿಜೆಪಿ ಹಟಾವೋ ದೇಶ್ ಕೋ ಬಚಾವೋ ಮತ್ತು ಸಂಕಟ ಮಿಟಾವೋ” ಎಂದರು.
ಶ್ರೀನಿವಾಸ ಕಾರ್ಕಳ, ಮಂಗಳೂರು
ಯಾತ್ರೆ 42 –ಭಾರತ್ ಜೋಡೋ ನ್ಯಾಯ ಯಾತ್ರೆ- 42ನೆಯ ದಿನ