ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳದಲ್ಲಿ ಮುಂದುವರಿದಿದೆ. ಇಂದು ಬೆಳಗ್ಗೆ 8.00 ಕ್ಕೆ ಸುಜಾಪುರ ಬಸ್ ನಿಲ್ದಾಣದಿಂದ ಯಾತ್ರೆ ಶುರುವಾಯಿತು. ಇಂದಿನ ಕಾರ್ಯಕ್ರಮಗಳು ಹೀಗಿದ್ದವು.
ಮಧ‍್ಯಾಹ್ನ ಮುರ್ಶಿದಾಬಾದಿನ ರಘುನಾಥಗಂಜ್ ನಲ್ಲಿ ವಿರಾಮ. ಆನಂತರ ಸಾರ್ವಜನಿಕ ಭಾಷಣ. 2.30 ಕ್ಕೆ ಮುರ್ಶಿದಾಬಾದ್ ಲಾಲಗೋಲಾ ನೇತಾಜಿ ಮೋರ್ ನಿಂದ ಯಾತ್ರೆ ಪುನರಾರಂಭ. 4.30 ಕ್ಕೆ ಬೆರಹಾಮ್ ಪುರ ಬಿಎಸ್ ಎನ್ ಎಲ್ ಆಫೀಸ್ ಮೋರ್ ನಲ್ಲಿ ವಿರಾಮ. ಬಳಿಕ ಸಾರ್ವಜನಿಕ ಭಾಷಣ. ಬಳಿಕ ಬಿಎಸ್ ಎನ್ ಎಲ್ ಮೋರ್ ನಿಂದ ನಭಾಗ್ರಾಮ್ ಗೆ ಯಾತ್ರೆ. ನಭಾಗ್ರಾಮ್ ಕಿಶೋರ್ ಸಂಘ ದ ಮೈದಾನಿನಲ್ಲಿ ರಾತ್ರಿ ವಾಸ್ತವ್ಯ.
ಬೆಳಿಗ್ಗೆ ಯಾತ್ರೆಯು ಮಾಲ್ಡಾದಿಂದ ಮುರ್ಶಿದಾಬಾದ್ ಗೆ ಹೋಗುವ ದಾರಿಯಲ್ಲಿ ಗಂಗಾ ನದಿಯನ್ನು ಫರಕ್ಕಾ ಬ್ಯಾರೇಜ್ ಮೂಲಕ ದಾಟಿತು. ಇದೊಂದು ಚಾರಿತ್ರಿಕ ಮಹತ್ವದ ಬ್ಯಾರೇಜ್. ಇದರ ನಿರ್ಮಾಣ ನೆಹರೂ ಕಾಲದ 1961 ರಲ್ಲಿ ಆರಂಭವಾಯಿತು. 1975 ರಲ್ಲಿ ಇಂದಿರಾ ಗಾಂಧಿಯವರಿಂದ ಉದ್ಘಾಟನೆಗೊಂಡಿತು.
ಇದರ ಮಹತ್ವವನ್ನು ಬರೆಯುತ್ತಾ ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಅವರು 109 ಗೇಟುಗಳಿರುವ ಈ ಬ್ಯಾರೇಜ್ ಭಾಗೀರಥಿ ಹೂಗ್ಲಿ ನದಿಯಲ್ಲಿ ನಾವೆಗಳ ಸಂಚಾರಕ್ಕೆ ಅನುಕೂಲವಾಗುವ ಹಾಗೆ ನೀರನ್ನು ಉಳಿಸಿಕೊಳ್ಳುತ್ತದೆ, ಆಮೂಲಕ ಬಹುಮುಖ್ಯ ಕಲ್ಕತ್ತಾ ಬಂದರು ನಿರಂತರ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.
ಮುರ್ಶಿದಾಬಾದ್ ಜಿಲ್ಲೆಯ ಜಂಗೀಪುರ ದಾರಿಯಲ್ಲಿ ರಾಹುಲ್ ಗಾಂಧಿಯವರನ್ನು ಸ್ವಾಗತಿಸಲು ಜನಸಾಗರವೇ ಸೇರಿತ್ತು. ಯಾತ್ರೆಯು ಅಲ್ಲಿಂದ ಮತ್ತೂ 70 ಕಿಲೋಮೀಟರ್ ಸಂಚರಿಸಿ ಸಂಜೆ ಬೆರಹಾಮ್ ಪುರದಲ್ಲಿ ಸಾರ್ವಜನಿಕ ಭಾಷಣದೊಂದಿಗೆ ಕೊನೆಗೊಂಡಿತು
ಶ್ರೀನಿವಾಸ ಕಾರ್ಕಳ, ಮಂಗಳೂರು