ಬೆಂಗಳೂರು ಟೆಕ್ ಸಮ್ಮಿಟ್-2024 ಗೆ ಚಾಲನೆ: ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ ಜಾಗತಿಕ ನಾವೀನ್ಯತಾ ಜಿಲ್ಲೆ ಸ್ಥಾಪನೆ; ಸಿದ್ದರಾಮಯ್ಯ ಘೋಷಣೆ

Most read

ಬೆಂಗಳೂರು : ಭಾರತದ ಮೊದಲ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ ನೀತಿಯನ್ನು ಕರ್ನಾಟಕ ಜಾರಿಗೆ ತಂದಿದೆ. ಇದರ ಮುಂದುವರೆದ ಭಾಗವಾಗಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಮೂರು ಜಾಗತಿಕ ನಾವೀನ್ಯತಾ ಜಿಲ್ಲೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಅವರು ಇಂದು ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕರ್ನಾಟಕ ಸರ್ಕಾರ ಹಾಗೂ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಟೆಕ್ ಸಮ್ಮಿಟ್ ನ 27ನೇ ಆವೃತ್ತಿಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ಜಾಗತಿಕ ನಾವೀನ್ಯತಾ ಜಿಲ್ಲೆಯು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರದ ಭಾಗವಾಗಿರಲಿದೆ (ಕ್ವಿನ್ ಸಿಟಿ). ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಅಂತರದಲ್ಲಿದ್ದು, ನಾವೀನ್ಯತೆ ಮತ್ತು ಸಂಶೋಧನೆಗೆ ಜಾಗತಿಕ ಕೇಂದ್ರವಾಗಿ ಪರಿಣಮಿಸಲಿದೆ ಎಂದರು.

ರಾಜ್ಯದಲ್ಲಿ ಜಿಸಿಸಿಗಳನ್ನು ಸ್ಥಾಪಿಸಲು ಈ ಪಾರ್ಕ್ ಗಳು ಮೀಸಲಾಗಿರುತ್ತದೆ. ಇಂಜಿನಿಯರಿಂಗ್ ಪ್ರತಿಭೆ ಮತ್ತು ಜಾಗತಿಕವಾಗಿ ಅತ್ಯಧಿಕ ಎ ಐ ವೃತ್ತಿಪರರನ್ನು ಹೊಂದಿರುವ ಕರ್ನಾಟಕ ಜಿಸಿಸಿಗಳಿಗೆ ಅತಿ ಪ್ರಿಯವಾದ ಗಮ್ಯವಾಗಿದೆ. ಎನ್ ಐ ಪಿ ಯು ಎನ್ ಎ ಕರ್ನಾಟಕದಡಿಯಲ್ಲಿ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸಲು ಸಿದ್ದರಿರುವ ಕಾರ್ಮಿಕ ಪಡೆಯನ್ನು ತಯಾರು ಮಾಡಲು ನಾವು ಕೈಗೊಂಡ ಯೋಜನೆಗಳು ಇನ್ನಷ್ಟು ಬಲಪಡಿಸಲಿವೆ. ಈಗ ತಾನೇ ಮೈಕ್ರೋ ಸಾಫ್ಟ್, ಇಂಟೆಲ್, ಆಕ್ಸೆಂಚರ್, ಐ.ಬಿ.ಎಂ ಮತ್ತು ಬಿ ಎಫ್ ಎಸ್ ಕಾಂಸಾರ್ಟಿಯಂ ಜೊತೆಗೆ ಸಹಿ ಹಾಕಲಾದ ಐದು ಒಪ್ಪಂದಗಳು ಕರ್ನಾಟಕದ ಒಂದು ಲಕ್ಷ ವ್ಯಕ್ತಿಗಳನ್ನು ಕೌಶಲಯುಕ್ತಗೊಳಿಸಲಿದೆ ಎಂದು ವಿವರಿಸಿದರು.

ಮಂಗಳೂರಿನ ಫಿನ್ ಟೆಕ್ ಲೀಡರ್ ಶಿಪ್ ನಿಂದ ಹುಬ್ಬಳ್ಳಿ ಧಾರವಾಡದ ಇವಿ ಪ್ರಗತಿ ಮತ್ತು ಡ್ರೋನ್ ಗಳು ಹಾಗೂ ಮೈಸೂರು ಪಿಸಿಬಿ ಕ್ಲಸ್ಟರ್ ಆಗುವವರೆಗೆ ಕ್ಲಸ್ಟರ್ ಆಧಾರಿತ ಅನು ಸಂಧಾನದ ಮೂಲಕ ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಸಾಧಿಸಲಾಗುತ್ತಿದೆ. ಬೆಂಗಳೂರಿನ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುತ್ತಲೇ ಪ್ರಾದೇಶಿಕ ಬಲವನ್ನು ಸಜ್ಜುಗೊಳಿಸಲು ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಸೂಕ್ತ ನೀತಿ ಮತ್ತು ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ. ಟೆಕ್ ಆಧಾರಿತ ವಲಯಗಳನ್ನು ಉತ್ತೇಜಿಸಲು ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯದ ಮೇಲೆ ನಮ್ಮ ಸರ್ಕಾರವು ಗಮನಾರ್ಹ ಹೂಡಿಕೆಗಳನ್ನು ಮಾಡಿದೆ ಎಂದು ಹೇಳಿದರು.

ಬಿಯಾಂಡ್ ಬೆಂಗಳೂರು ಕಾರ್ಯಕ್ರಮಗಳ ಮೂಲಕ ಬೆಳವಣಿಗೆಯ ಸೌಲಭ್ಯಗಳನ್ನು ಟೆಕ್ ವಲಯದಿಂದಾಚೆಗೂ ಕೊಂಡೊಯ್ಯುವುದರಲ್ಲಿ ನಮಗೆ ನಂಬಿಕೆಯಿದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ತಂತ್ರಜ್ಞಾನ, ವಿದ್ಯಾರ್ಥಿಗಳಿಗೆ ಇ – ಶಿಕ್ಷಣದ ಸುಧಾರಣೆ ಮತ್ತು ಎಲ್ಲಾ ನಾಗರಿಕ ಸೇವೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. 2022ರಿಂದ 2023 ರವರೆಗೆ 18.2% ಏರಿಕೆಯನ್ನು ಕಂಡಿರುವ ಕರ್ನಾಟಕದ ಸ್ಟಾರ್ಟ್ ಅಪ್ ಪರಿಸರ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಒಟ್ಟು 3,036 ಸ್ಟಾರ್ಟ್ಅಪ್ಗಳನ್ನು ಹೊಂದಿರುವ ಕರ್ನಾಟಕ ಭಾರತದ ಒಟ್ಟು ಸ್ಟಾರ್ಟ್ಅಪ್ಗಳಲ್ಲಿ 8.7% ಸ್ಟಾರ್ಟ್ ಅಪ್ ಗಳನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಈ ಯಶಸ್ಸು ಉದ್ಯಮಿಗಳಿಗೆ ನಮ್ಮ ಬೆಂಬಲ ಮತ್ತು ವೈವಿಧ್ಯಮಯ ಅವಕಾಶಗಳನ್ನು ಬಿಂಬಿಸುತ್ತದೆ. ಇಂಡಿಯನ್ ವೆಂಚರ್ ಮತ್ತು ಆಲ್ಟರ್ನೇಟ್ ಕ್ಯಾಪಿಟಲ್ ಅಸೋಸಿಯೇಷನ್ (IVCA) ನೊಂದಿನ ನಮ್ಮ ಸಹಯೋಗವು 100 ಧನಸಹಾಯ ಒದಗಿಸುವ ಸಂಸ್ಥೆಗಳೊಂದಿಗೆ 200 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳನ್ನು ಜೋಡಿಸಿದ್ದು , ಬಂಡವಾಳ, ಮಾರ್ಗದರ್ಶನ ಮತ್ತು ಬೆಳವಣಿಗೆಯ ಅವಕಾಶಗಳನ್ನು ಒದಗಿಸುತ್ತಿದೆ ಎಂದರು.

ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (EMC) ನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಲು ನನಗೆ ಅತ್ಯಂತ ಸಂತೋಷವಾಗಿದೆ. ಇದು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕದ ಪಾತ್ರವನ್ನು ಸಧೃಢಗೊಳಿಸುತ್ತದೆಯಲ್ಲದೆ ಉದ್ಯೋಗಗಳನ್ನು ಸೃಷ್ಟಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಶರಣ್ ಪ್ರಕಾಶ್ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

More articles

Latest article