ಬೆಂಗಳೂರು ಪೊಲೀಸರ ಕಾರ್ಯಾಚರಣೆ: 24 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ; ಇಬ್ಬರು ವಿದೇಶಿಯರು ಸೇರಿ 6 ಮಂದಿ ಬಂಧನ

Most read

ಬೆಂಗಳೂರು: ನಗರ ಪೊಲೀಸರು ಹಾಗೂ ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 23.84 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 11.81 ಕೋಟಿ ರೂ. ಮೌಲ್ಯದ 7.176 ಕೆಜಿ ಹೈಡ್ರೋ ಗಾಂಜಾ, 1.399 ಕೆಜಿ ಎಂಡಿಎಂಎ ಕ್ರಿಸ್ಟಲ್‌, 2.30 ಕೆಜಿ ಅಫೀಮ್‌ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಉತ್ತರ ಹಾಗೂ ಪೂರ್ವವಿಭಾಗ ಮತ್ತು ಕೊತ್ತನೂರು ಪೊಲೀಸ್‌‍ ಠಾಣೆಯ ಅಧಿಕಾರಿಗಳು ರೂ.12.03 ಕೋಟಿ ಮೌಲ್ಯದ 4.815 ಕೆಜಿ ಎಂಡಿಎಂಎ ಕ್ರಿಸ್ಟಲ್‌ ವಶಪಡಿಸಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್‌‍ ಠಾಣೆ ಪೊಲೀಸರು ರಾಜಸ್ಥಾನ ಮೂಲದ ಡ್ರಗ್‌ ಪೆಡ್ಲರ್‌ನನ್ನು ಬಂಧಿಸಿ ಆತನಿಂದ 1 ಕೆ.ಜಿ 399 ಗ್ರಾಂ ಎಂಡಿಎಎಂಎ ಕ್ರಿಸ್ಟಲ್‌ ಮತ್ತು 2 ಕೆ.ಜಿ 30 ಗ್ರಾಂ ಅಫೀಮ್‌, ಒಟ್ಟು ಅಂದಾಜು 4 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕಳೆದ 3 ತಿಂಗಳಿಂದ ಡ್ರಗ್ಸ್‌ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ.ಜಿ.ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯ ವಿದೇಶಿ ಅಂಚೆ ಕಚೇರಿಗೆ ಶಂಕಾಸ್ಪದ ಪಾರ್ಸೆಲ್‌ ಬಂದಿರುವ ಖಚಿತ ಮಾಹಿತಿ ಆಧಾರದಲ್ಲಿ 3.81 ಕೋಟಿ ರೂ. ಮೌಲ್ಯದ 3 ಕೆ.ಜಿ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಕೆಲವು ಆರೋಪಿಗಳು ಥೈಲ್ಯಾಂಡ್‌ ಮತ್ತು ಜರ್ಮನಿ ದೇಶಗಳಿಂದ ನಕಲಿ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕ ಹೈಡ್ರೋ ಗಾಂಜಾವನ್ನು ಖರೀದಿಸಿ, ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡ್ರಗ್ಸ್‌ ತರಿಸಿಕೊಳ್ಳಲು ಆರ್ಡರ್‌ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಕೊತ್ತನೂರು ಪೊಲೀಸ್‌‍ ಠಾಣೆ ವ್ಯಾಪ್ತಿಯ ಎನ್‌.ಜಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ಅಪಾರ್ಟ್‌ಮೆಂಟ್‌ ನಲ್ಲಿ, ಡ್ರಗ್‌ ಪೆಂಡ್ಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿ ಅವರಿಂದ ರೂ. 12.03 ಕೋಟಿ ರೂ. ಮೌಲ್ಯದ 4 ಕೆ.ಜಿ 815 ಗ್ರಾಂ ಎಂಡಿಎಎಂಎ ಕ್ರಿಸ್ಟಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ವರ್ಷದ ಜನವರಿ 1 ರಿಂದ ಈ ದಿನದವರೆಗೆ ಬೆಂಗಳೂರು ನಗರ ಪೊಲೀಸರು 35 ವಿದೇಶಿ ಪ್ರಜೆಗಳು ಸೇರಿದಂತೆ 1048 ಆರೋಪಿಗಳನ್ನು ಬಂಧಿಸಿ 81.21 ಕೋಟಿ ರೂ. ಮೌಲ್ಯದ ನಿಷೇದಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 771 ಪ್ರಕರಣಗಳಲ್ಲಿ 1486.55 ಕೆಜಿ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

More articles

Latest article