ಬೆಂಗಳೂರು: ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಮಂಗಳವಾರ ನಡೆದ ಎಐಸಿಸಿಯ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯ ಉದ್ಘಾಟನೆ ನೆರವೇರಿತು. ಇಂದು ಸಭೆಯಲ್ಲಿ ಹಿಂದುಳಿದ ವರ್ಗದವರು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿದ್ದಾರೆ ಎಂದು ಸಂಪೂರ್ಣವಾಗಿ ಚರ್ಚೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಮಾತನಾಡಿ ಈ ಸಭೆಯ ಮೂಲ ಅಜೆಂಡಾ ದೇಶದಲ್ಲಿರುವ ಹಿಂದುಳಿದ ವರ್ಗದವರ ಅಭಿವೃದ್ಧಿ ಹಾಗೂ ಏಳಿಗೆಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸುವುದಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಸಮಸ್ಯೆಗಳಿರುತ್ತವೆ. ಜತೆಗೆ ರಾಷ್ಟ್ರದಲ್ಲಿ ಜಾತಿ ಗಣತಿ ಜಾರಿಗೆ ನಮ್ಮ ನಾಯಕರು ಕೈಗೊಂಡ ಹೋರಾಟದ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡಲಾಗಿದೆ. ರಾಜಸ್ಥಾನ, ಪುದುಚೆರಿಯ ಮಾಜಿ ಸಿಎಂಗಳು ಸೇರಿದಂತೆ ಅನೇಕ ರಾಜ್ಯಗಳ ಪ್ರಮುಖ ಒಬಿಸಿ ನಾಯಕರು ಸೇರಿ ಈ ಸಮಿತಿಯಲ್ಲಿದ್ದಾರೆ ಎಂದು ತಿಳಿಸಿದರು.
ಎಐಸಿಸಿ ಒಬಿಸಿ ಅಧ್ಯಕ್ಷ ಅನಿಲ್ ಜೈಹಿಂದ್ ಮಾತನಾಡಿ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಆರಂಭಿಕ ಸಭೆಯನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಿತು. ಈ ಸಮಿತಿಯನ್ನು ಇತ್ತೀಚೆಗೆ ಆಯೋಜಿಸಲಾಗಿದ್ದು, ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷನಾಗಿರುವ ನಾನು ಈ ಸಮಿತಿಯ ಸಂಚಾಲಕನಾಗಿದ್ದೇನೆ. ಇಂದಿನ ಸಭೆಯಲ್ಲಿ ಕೆಲ ವಿಚಾರಗಳನ್ನು ಚರ್ಚೆ ಮಾಡಲಾಗಿದ್ದು, ಪಕ್ಷದ ಎಲ್ಲಾ ಹಿಂದುಳಿದ ವರ್ಗಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು ಎಂದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪುದುಚೇರಿಯ ಮಾಜಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, AICC OBC ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಡಾ. ಅನಿಲ್ ಜೈಹಿಂದ್ ಭಾಗವಹಿಸಿದ್ದಾರೆ.