ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು (ಟಿಎಂಸಿ) ವರಿಷ್ಠೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ದೇಶದಲ್ಲಿ ಏನಾಗುತ್ತದೊ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನಮ್ಮದು ಜಾತ್ಯತೀತ ಪಕ್ಷ ಮತ್ತು ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸುತ್ತೇವೆ” ಎಂದು ಅವರು ಎಎನ್‌ಐ ವರದಿ ಮಾಡಿದ್ದಾರೆ .
ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಜೊತೆ ತಾನು ಯಾವುದೇ ಚರ್ಚೆ ನಡೆಸಿಲ್ಲ. ಮೈತ್ರಿಕೂಟದ ಭಾಗವಾಗಿದ್ದರೂ, ಪಶ್ಚಿಮ ಬಂಗಾಳದ ಮೂಲಕ ಹಾದುಹೋಗುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಯಾರೂ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.
ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಟಿಎಂಸಿ ಪಕ್ಷದ ನಾಯಕರ ಗುಪ್ತ ಸಭೆಯ ಒಂದು ದಿನದ ನಂತರ ಈ ಘೋಷಣೆ ಬಂದಿದೆ. ಸಭೆಯಲ್ಲಿ ಸಿಎಂ ಮಮತಾ ಅವರು ತಮ್ಮ ಪಕ್ಷದ ನಾಯಕರಿಗೆ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುವಂತೆ ಒತ್ತಾಯಿಸಿದ್ದಾರೆ ಮತ್ತು ಸೀಟು ಹಂಚಿಕೆ ಬಗ್ಗೆ ಯೋಚಿಸಬೇಡಿ ಎಂದು ಪಿಟಿಐ ವರದಿ ಮಾಡಿದೆ.
ಹಿರಿಯ ಟಿಎಂಸಿ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದು, “ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಬಗ್ಗೆ ನಾವು ಯೋಚಿಸುವ ಅಗತ್ಯವಿಲ್ಲ ಎಂದು ನಮ್ಮ ಪಕ್ಷದ ವರಿಷ್ಠರು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷವು ಅವರಿಗೆ ಎರಡು ಸ್ಥಾನಗಳನ್ನು ನೀಡಿದೆ ಆದರೆ ಕಾಂಗ್ರೆಸ್ 10ಕ್ಕೆ ಬೇಡಿಕೆ ಇಟ್ಟಿದೆ ಎಂದು ಹೇಳಿದ್ದಾರೆ.