ಅಂಬೇಡ್ಕರರ ದೃಷ್ಟಿಯಲ್ಲಿ ಕಾಂಗ್ರೆಸ್ ಅನ್ನು ನೋಡುವ ಮುನ್ನ ಬಿಜೆಪಿ…

Most read

ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಇದ್ದ ರಾಜಕೀಯ ಪಕ್ಷ ಉದಾಹರಣೆಗೆ ಕಾಂಗ್ರೆಸ್ ಅವರನ್ನು ಕೇವಲ ಚುನಾವಣೆಯಲ್ಲಿ ಸೋಲಿಸಿತು. ಆದರೆ ಈಗಿನ ಸಂಘ ಪರಿವಾರ ಮತ್ತು ಅದರ ನೇತೃತ್ವದ ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರರ ತತ್ವಗಳನ್ನು ವ್ಯಕ್ತಿತ್ವವನ್ನು ನಿತ್ಯ ಸೋಲಿಸಲು ಯತ್ನಿಸುತ್ತಿದೆ! – ಕಾನಿಷ್ಕ ಹೊ.ಬ

“ಬಾಬಾಸಾಹೇಬ್ ಅಂಬೇಡ್ಕರ್‌ ಅವರು ನಿಧನರಾದಾಗ ರಾಜಕೀಯ ಪಕ್ಷವೊಂದು(ಕಾಂಗ್ರೆಸ್) ಹೂಳಲು ಜಾಗ ಕೊಡಲಿಲ್ಲ, ಅವರನ್ನು ಚುನಾವಣೆಗಳಲ್ಲಿ ಸೋಲಿಸಿತು, ಹಾಗೆ ಹೀಗೆ…” ಎಂದು ಮತ್ತೊಂದು ರಾಜಕೀಯ ಪಕ್ಷ(ಬಿಜೆಪಿ) ಮತ್ತು ಆ ಪಕ್ಷ ಸಂಬಂಧಿತ ಸಂಘದ ಕಾರ್ಯಕರ್ತರು ಸದಾ ಹೀಗೊಂದು ಪುಂಗಿ ಬಿಡುತ್ತ ಇರುತ್ತಾರೆ. ಇದನ್ನು ಬಹಳ ಸತ್ಯ ಎಂಬಂತೆ ಅಲ್ಲಿ ತರಬೇತಿ ಪಡೆದ ಕೆಲ ದಲಿತ ರಾಜಕಾರಣಿಗಳು ಗಿಣಿ ಪಾಠ ಒಪ್ಪಿಸಿದಂಗೆ ಇದನ್ನು ಹೇಳುತ್ತಿರುತ್ತಾರೆ. ವ್ಯಾಟ್ಸಪ್ ಯೂನಿವರ್ಸಿಟಿಯಲ್ಲಂತು ಇದೇ ಸದ್ದು. ವಿಡಿಯೋ, ಬರಹ, ಸ್ಟೇಟಸ್ ಹೀಗೆ. ಈ ದಿಕ್ಕಿನಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆ ಎಂದರೆ ಬಾಬಾಸಾಹೇಬ್ ಅಂಬೇಡ್ಕರರನ್ನು ಹೇಗೆ ನೋಡಬೇಕು? ಎಂಬುದು. ಅವರನ್ನು ಆಗಿನ ಕಾಲದ ಒಂದು ರಾಜಕೀಯ ಪಕ್ಷದ ಪರ ಅಥವಾ ವಿರೋಧದ ಆಧಾರದ ಮೇಲೆ ನೋಡಬೇಕೆ ಅಥವಾ ಹೇಗೆ? 

ಈ ನಿಟ್ಟಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರರನ್ನು ಅವರು ಬದುಕಿದ್ದಾಗ ಇದ್ದ ಅಥವಾ ಈಗಲೂ ಇರುವ ರಾಜಕೀಯ ಪಕ್ಷ ಅಥವಾ ಪಕ್ಷಗಳ ಆಧಾರದ ಮೇಲೆ ನೋಡುವುದಲ್ಲ. ಖಂಡಿತ ಅದು ಸಲ್ಲ. ಹಾಗಿದ್ದರೆ ನೋಡಬೇಕಿರುವುದು? ‌ಸವರ್ಣೀಯತೆ ಮತ್ತು ಅಸ್ಪೃಶ್ಯತೆ ತತ್ವದ ಆಧಾರದ ಮೇಲೆ‌. ಸವರ್ಣೀಯ ಮನಸ್ಸುಗಳು ಅಸ್ಪೃಶ್ಯ ಸಮುದಾಯದ ಬಾಬಾಸಾಹೇಬ್ ಅಂಬೇಡ್ಕರರಿಗೆ ಆ ಕಾಲದಲ್ಲಿ ಹೂಳಲು ಸ್ಥಳ ಕೊಟ್ಟಿಲ್ಲ, ಅವರನ್ನು ಚುನಾವಣೆಗಳಲ್ಲಿ ಸೋಲಿಸಿತು ಎಂದಷ್ಟೇ ಬಿಟ್ಟು ಇನ್ನಾವುದೇ ಕಾರಣ ಅಥವಾ ಮತ್ತೊಂದು ಮಗದೊಂದು ಇದರ ಹಿಂದಿಲ್ಲ. 

ಅಂದಹಾಗೆ ಮುಂದುವರಿದು ಪ್ರಶ್ನಿಸುವುದಾದರೆ ಈಗ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಈ ಪರಿ ನಕಲಿ ಕಾಳಜಿ ತೋರುವ ಅಥವಾ ತೋರುವಂತೆ ನಾಟಕವಾಡುವ ಪಕ್ಷ, ಉದಾಹರಣೆಗೆ ಬಿಜೆಪಿ ಮತ್ತು ಸಂಘ ಪರಿವಾರ ಅದೇ ಬಾಬಾಸಾಹೇಬ್ ಅಂಬೇಡ್ಕರರ ತತ್ವಗಳಿಗೆ ಯಾವ ರೀತಿಯ ಗೌರವ ಕೊಡುತ್ತಿದೆ? ಎಂಬುದು. ಉದಾಹರಣೆಗೆ ತನ್ನ ಹಿಂದಿನ ಅಧಿಕಾರ ಅವಧಿಯಲ್ಲಿ ಇದೇ ಬಿಜೆಪಿ ನ್ಯಾಯಮೂರ್ತಿ ಇ.ಎಸ್.ವೆಂಕಟರಾಮಯ್ಯನವರ ನೇತೃತ್ವದಲ್ಲಿ ಸಂವಿಧಾನ ಪರಿಷ್ಕರಣೆ ಮಾಡಲು ಹೊರಟಿದ್ದು ಅಂಬೇಡ್ಕರರ ಅನುಯಾಯಿಗಳಿಗೆ ಮರೆತು ಹೋಗಿದೆಯೆಂದೇ? ಅಲ್ಲದೆ ಸದರಿ ಪಕ್ಷದ ಸಂಸದರು, ಮುಖಂಡರು ಮುಖ್ಯವಾಗಿ ಸಂಘ ಪರಿವಾರದ ಕಾರ್ಯಕರ್ತರು ನಿರಂತರವಾಗಿ ಸಂವಿಧಾನದ ವಿರುದ್ಧ ಮಾತನಾಡುವುದು ಈ ದೇಶದ ದಲಿತರಿಗೆ ಅಂಬೇಡ್ಕರ್ ಅನುಯಾಯಿಗಳಿಗೆ ಗೊತ್ತಿಲ್ಲ ಎಂದೇ? ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಇದ್ದ ರಾಜಕೀಯ ಪಕ್ಷ ಉದಾಹರಣೆಗೆ ಕಾಂಗ್ರೆಸ್ ಅವರನ್ನು ಕೇವಲ ಚುನಾವಣೆಯಲ್ಲಿ ಸೋಲಿಸಿತು. ಆದರೆ ಈಗಿನ ಸಂಘ ಪರಿವಾರ ಮತ್ತು ಅದರ ನೇತೃತ್ವದ ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರರ ತತ್ವಗಳನ್ನು ವ್ಯಕ್ತಿತ್ವವನ್ನು ನಿತ್ಯ ಸೋಲಿಸಲು ಯತ್ನಿಸುತ್ತಿದೆ! 

ವರ್ಷಗಳ ಹಿಂದೆ ಗುಜರಾತ್ ನಲ್ಲಿ ಸಂಘ ನೇತೃತ್ವದ ಬಿಜೆಪಿ ಮತ್ತು ಅದರ ಮುಖಂಡರಾದ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ರ 180 ಅಡಿ ಎತ್ತರದ ಪ್ರತಿಮೆ ನಿರ್ಮಿಸಿದರು. ಪ್ರಶ್ನೆ ಎಂದರೆ ಅಂಥ ಸಂದರ್ಭದಲ್ಲಿ ಆ ಪಕ್ಷಕ್ಕೆ ಬಾಬಾಸಾಹೇಬ್ ಅಂಬೇಡ್ಕರರು ನೆನಪಾಗಲಿಲ್ಲವೇಕೆ? ಬಾಬಾಸಾಹೇಬರ ಅಷ್ಟೇ ಎತ್ತರದ ಪ್ರತಿಮೆಯನ್ನು ದೇಶದ ಎಲ್ಲಾದರೂ ಸ್ಥಾಪಿಸಬೇಕು ಎಂದೆನಿಸಲಿಲ್ಲವೇಕೆ? ಹೀಗೆ ಮಾಡಿದ್ದರೆ ಅದು ಬಾಬಾಸಾಹೇಬ್ ಅಂಬೇಡ್ಕರರ ಸಮಾಧಿ ಸ್ಥಳಕ್ಕಿಂತಲು ದೊಡ್ಡ ಗೌರವವಾಗುತ್ತಿರಲಿಲ್ಲವೆ? 

ಪಟೇಲ್‌ ಪ್ರತಿಮೆ

ಮುಂದುವರಿದು ಸಂಘ ನೇತೃತ್ವದ ಆ ಪಕ್ಷ ಬಿಜೆಪಿಗೆ ಬಾಬಾಸಾಹೇಬರ ಬಗ್ಗೆ ಅಷ್ಟು ಪ್ರೀತಿಯಿದ್ದರೆ ಅವರ ತತ್ವಗಳನ್ನು ಕಾರ್ಯರೂಪಕ್ಕೆ ತಂದ ಸಾಮಾಜಿಕ ವಿಜ್ಞಾನಿ ದಾದಾಸಾಹೇಬ್ ಕಾನ್ಷೀರಾಮ್ ರವರಿಗೆ ಈ ಬಾರಿ ಭಾರತ ರತ್ನ ನೀಡುತ್ತಿತ್ತು! ಹಾಗೆಯೇ ದಲಿತರ ಬಗ್ಗೆ ಅಷ್ಟು ಆದ್ಯತೆ ನೀಡುವುದಿದ್ದರೆ ಬಾಬು ಜಗಜೀವನ್ ರಾಮ್ ರವರಿಗಾದರೂ ಭಾರತ ರತ್ನ ನೀಡುತ್ತಿತ್ತು‌. ಆದರೆ…. ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಪ್ರಬಲವಾಗಿದ್ದ ರಾಜಕೀಯ ಪಕ್ಷ ಕಾಂಗ್ರೆಸ್ ಬಗ್ಗೆ ವಿವಿಧ ರೀತಿಯಲ್ಲಿ ದೂರುವ ಸಂಘ ನೇತೃತ್ವದ ಬಿಜೆಪಿ ತಾನೇ ಇಷ್ಟೊಂದು ವರ್ಷ ಹತ್ತು ವರ್ಷ ಅಧಿಕಾರದಲ್ಲಿ ಇದ್ದರೂ ವಿಶ್ವಗುರು ಹಾಗೆ ಹೀಗೆ ಎಂದುಕೊಳ್ಳುತ್ತಿದ್ದರೂ ಬಾಬಾಸಾಹೇಬ್ ಅಂಬೇಡ್ಕರರಿಗೆ ಅವರ ವ್ಯಕ್ತಿತ್ವಕ್ಕೆ ಅಥವಾ ಅವರ ಅನುಯಾಯಿಗಳಿಗೆ ಗೌರವ ತರುವ ಹೆಮ್ಮೆ ತರುವ ಯಾವುದೇ ಕೆಲಸ ಮಾಡಲಿಲ್ಲ. ಹಾಗೆಯೇ ನೂತನ ಸಂಸತ್ ಭವನ ಕಟ್ಟಿತು, ಅದಕ್ಕಾದರೂ ಬಾಬಾಸಾಹೇಬ್ ಅಂಬೇಡ್ಕರರ ಹೆಸರು ಅಥವಾ ಅಲ್ಲಿ ಅವರದೊಂದು ಭವ್ಯ ಮೂರ್ತಿ…. ಬಿಜೆಪಿ ಏನೂ ಮಾಡಲಿಲ್ಲ. ಆದರೆ ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಪ್ರಬಲವಾಗಿದ್ದ ಕಾಂಗ್ರೆಸ್ ಪಕ್ಷದ ಬಗ್ಗೆ 70 ವರ್ಷಗಳ ಹಿಂದಿನ ಇತಿಹಾಸ ಕೆದಕುತ್ತ ಬಿಜೆಪಿ ಮತ್ತು ಸಂಘ ಪರಿವಾರ ಆರೋಪ ಮಾಡುತ್ತಿದೆ. ಪ್ರಶ್ನೆ ಎಂದರೆ ಇತಿಹಾಸ ಮುಖ್ಯವೊ ವರ್ತಮಾನ ಮುಖ್ಯವೊ. 

ಅಕ್ಷರಶಃ ಇಂತಹ ಚಾಳಿ ಬಿಟ್ಟು ಸಂಘ ಪರಿವಾರ ಮತ್ತು ಬಿಜೆಪಿ ಮತ್ತೊಂದು ಪಕ್ಷದ(ಕಾಂಗ್ರೆಸ್) ಬಗ್ಗೆ ಹೀಗೆ ದೂರುವುದನ್ನು ಬಿಡಬೇಕು. ಹಾಗೆಯೇ ಹೀಗೆ ದೂರಿದಾಗ ಹ್ಞೂಂ ಗುಡುವ ಕೆಲವು ಅರೆಬೆಂದ ದಲಿತ ಯುವಕರು/ ಚಮಚಾ ನಾಯಕರೂ ಈ ವಾಸ್ತವ ಅರಿಯಬೇಕು. ಹಾಗೆ ಅಂಥವರು ಅರಿಯಬೇಕಿರುವುದು ಬಾಬಾಸಾಹೇಬ್  ಅಂಬೇಡ್ಕರರನ್ನು ಸವರ್ಣೀಯತೆ ಮತ್ತು ಅಸ್ಪೃಶ್ಯತೆ ತತ್ವಗಳ ಆಧಾರದ ಮೇಲೆ ನೋಡಬೇಕು ಎಂಬುದನ್ನು. ಈ ನಿಟ್ಟಿನಲ್ಲಿ ಈಗಲೂ ತಮ್ಮ ಮನಸ್ಸಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಗಾಢವಾಗಿ ಸವರ್ಣೀಯತೆಯ ಆ ತತ್ವವನ್ನು ತರಬೇತಿ ಮೂಲಕ ತುಂಬಿಕೊಂಡಿರುವ ಸಂಘ ಸ್ಥಾಪಿತ ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರರ ಕಾಲದಲ್ಲಿ ಇದ್ದ ಈಗಲೂ ಇರುವ ಕಾಂಗ್ರೆಸ್ ವಿರುದ್ಧ ದೂರುವುದನ್ನು ಬಿಡಬೇಕು. ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂಬುದನ್ನು ಮೊದಲು ನೋಡಿಕೊಳ್ಳಬೇಕು. 

ಕಾನಿಷ್ಕ ಹೊ.ಬ

ಇದನ್ನೂ ಓದಿ- ದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ?

More articles

Latest article