ಬೇಡರ ಕಣ್ಣಪ್ಪ ಸಿನಿಮಾಗೆ ಇಂದಿಗೆ 70 ವರ್ಷವಾಗಿದೆ. 1954-ಮೇ 7ರಂದು ತೆರೆಕಂಡ ಬೇಡರ ಕಣ್ಣಪ್ಪ ಸಿನಿಮಾ ಸತತ ಒಂದು ವರ್ಷಗಳ ಕಾಲ ಅದ್ದೂರಿ ಪ್ರದರ್ಶನ ಕಂಡಿತ್ತು. ಈ ಸಿನಿಮಾಗಾಗಿ ಅಣ್ಣಾವ್ರು ಪಡೆದ ಸಂಭಾವನೆ 1800 ರೂಪಾಯಿ.
ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದವರಲ್ಲಿ ಡಾ.ರಾಜ್ ಕುಮಾರ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಅಣ್ಣಾವ್ರು ಎಂದರೆ ಅಭಿಮಾನಕ್ಕಿಂತ ಹೆಚ್ಚು ಭಕ್ತಿ ಇಟ್ಟುಕೊಂಡಿರುವವರೇ ಹೆಚ್ಚು. ಯಾಕಂದರೆ ಅವರು ನೀಡಿದ ಒಂದೊಂದು ಸಿನಿಮಾಗಳು ಅಷ್ಟು ಸಮಾಜಮುಖಿಯಾಗಿದ್ದವು. ಮುತ್ತುರಾಜನಾಗಿ ಇಂಡಸ್ಟ್ರಿಗೆ ಬಂದ ಡಾ.ರಾಜ್ ಅಭಿನಯದ ಅನೇಕ ಸಿನಿಮಾಗಳು ಸಾಲುಸಾಲಾಗಿ ಭರ್ಜರಿ ಯಶಸ್ಸು ಕಂಡವು. ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅಣ್ಣಾವ್ರಿಗೆ ಮೊದಲ ಸಿನಿಮಾ ಸಿಕ್ಕಿದ್ದು ಕೂಡ ಅಷ್ಟು ಸುಲಭವಾಗಿರಲಿಲ್ಲ.
ರಾಜ್‍ಕುಮಾರ್ ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರು ನಾಟಕದಲ್ಲಿ ಅಭಿನಯಿಸುತ್ತಿದ್ದರು. ಮಕ್ಕಳು ಕೂಡ ತಂದೆಯೊಂದಿಗೆ ನಾಟಕದಲ್ಲಿ ಪಾತ್ರ ಮಾಡುತ್ತಿದ್ದರು. ಮುತ್ತುರಾಜನ ಪ್ರತಿಭೆ ನೋಡಿದ ಅವರ ತಂದೆಗೆ ಮಗನನ್ನು ಹೀರೋ ಮಾಡಬೇಕೆಂಬ ಆಸೆ ಆಯ್ತು. ಆದರೆ ಹೋದ ಕಡೆಯಲ್ಲೆಲ್ಲಾ ಉತ್ತಮ ರೆಸ್ಪಾನ್ಸ್ ಏನು ಸಿಗಲಿಲ್ಲ. ಮೂಗು ಉದ್ದ ಅಂತ ಮೂಗು ಮುರಿದವರೇ ಹೆಚ್ಚಾಗಿದ್ದರು. ಒಂದೆರಡು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರದಲ್ಲೂ ಅಭಿನಯಿಸಿದ್ದರು. ಆ ಸಮಯಕ್ಕೆ ನಾಟಕದಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದರು.
ಆಗ ಬೇಡರ ಕಣ್ಣಪ್ಪ ಸಿನಿಮಾದ ಸಿದ್ಧತೆ ನಡೆಯುತ್ತಿತ್ತು. ರಾಜ್‍ಕುಮಾರ್ ಅವರ ಹೆಸರು ಈ ಸಿನಿಮಾದ ನಾಯಕನ ಪಾತ್ರಕ್ಕೆ ಕೇಳಿ ಬಂತು. ಮೊದಲಿಗೆ ಲುಕ್ ಟೆಸ್ಟ್ ಮಾಡಿ, ಹದಿನೈದು ದಿನದ ಬಳಿಕ ಆಯ್ಕೆ ಮಾಡಿದ್ದರು. ಆದರೆ ನಿರ್ಮಾಪಕರಲ್ಲಿ ಒಬ್ಬರಾದ ಮೇಯಪ್ಪನ್ ಗೆ ಮುತ್ತುರಾಜನ ಆಯ್ಕೆ ಸಮಾಧಾನ ತಂದಿರಲಿಲ್ಲ. ಆತನ ಮೂಗು ಉದ್ದ. ನಾಯಕನ ಪಾತ್ರಕ್ಕೆ ಸೂಕ್ತನಾ ಎನ್ನುವ ಅಳುಕು ಇತ್ತು. ನಾಲ್ಕೇ ದಿನ ಅಣ್ಣಾವ್ರ ಅಭಿನಯದಿಂದ ಮೇಯಪ್ಪನ್ ಮನಸ್ಸಲ್ಲಿ ಇದ್ದ ಅಸಮಾಧಾನ ಕಳೆದು ಹೋಗಿತ್ತು. ಬೇಡರ ಕಣ್ಣಪ್ಪ ಸಿನಿಮಾದಲ್ಲಿ ದಿಣ್ಣ ಆಗಿ ಅಣ್ಣಾವ್ರು ಅಭಿನಯಿಸಿದ್ದರು.
1954-ಮೇ 7ರಂದು ತೆರೆಕಂಡ ಬೇಡರ ಕಣ್ಣಪ್ಪ ಸಿನಿಮಾ ಸತತ ಒಂದು ವರ್ಷಗಳ ಕಾಲ ಅದ್ದೂರಿ ಪ್ರದರ್ಶನ ಕಂಡಿತ್ತು. ಈ ಸಿನಿಮಾಗಾಗಿ ಅಣ್ಣಾವ್ರು ಪಡೆದ ಸಂಭಾವನೆ 1800 ರೂಪಾಯಿ. ಬೇಡರ ಕಣ್ಣಪ್ಪ ಸಿನಿಮಾಗೆ ಇಂದಿಗೆ 70 ವರ್ಷವಾಗಿದೆ. ಡಾ.ರಾಜ್ ಅವರ ನಟನೆ ಇನ್ನೂ ಸಿನಿರಸಿಕರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.