ತ್ಯಾಗ ಮಾಡಿ ಮನೆಯಲ್ಲಿ ಕೂತಿದೀನಿ, ನನಗೆ ಟಿಕೆಟ್‌ ಕೊಡಿ ಅಷ್ಟೇ : ಬಿಜೆಪಿ ವಿರುದ್ಧ ಬಿಸಿ ಪಾಟೀಲ್‌ ಕಿಡಿ

Most read

ನಾವು ತ್ಯಾಗ ಮಾಡಿ ಬಂದವರು, ಮನೆಯಲ್ಲಿ ಕುಳಿತುಕೊಂಡಿದ್ದೇವೆ. ನಮಗೆ ಹೆದರಿಸುವುದು ಬೆದರಿಸುವುದು ಗೊತ್ತಿಲ್ಲ. ಸೈಲೆಂಟ್ ಇದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ನನಗೆ ಟಿಕೆಟ್‌ ಕೊಡಬೇಕು ಅಷ್ಟೇ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಬಿಸಿ ಪಾಟೀಲ್‌ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಟಿಕೆಟ್‌ ವಿಚಾರವಾಗಿ ಹಾವೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ನಾನು ಹಾವೇರಿ – ಗದಗ ಜಿಲ್ಲೆಗಳ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಬೇಕು, ಬಿವೈ ವಿಜಯೇಂದ್ರ ಹಾಗೂ ಬಿಎಸ್‌ ಯಡಿಯೂರಪ್ಪ ಅವರನ್ನು ಭೇಟಿಯಾಗಿದೀನಿ. ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗುವವನಲ್ಲ. ನನಗೆ ಟಿಕೆಟ್‌ ಕೊಡಬೇಕು ಅಂತ ವಾದ ಮಾಡ್ತಾ ಇದ್ದೇನೆ ಎಂದರು.

ಒಬ್ಬ ಗ್ರಾಮ ಪಂಚಾಯತಿ ಸದಸ್ಯ ತನ್ನ ಸ್ಥಾನ ತ್ಯಾಗ ಮಾಡಲ್ಲ. ನಾವು ತ್ಯಾಗ ಮಾಡಿದೀವಿ, ನಮಗೆ ಕೊಡುವುದರಲ್ಲಿ ನ್ಯಾಯ ಇದೆ. ನಮ್ಮ ತ್ಯಾಗದಿಂದ ಸರ್ಕಾರ ಬಂತು. 2023ರಲ್ಲಿ ಬಿಜೆಪಿ ಯಾಕೆ ಸೋತಿತು ಎಂದು ಎಲ್ಲರಿಗೂ ಗೊತ್ತು. ನಾವೆಲ್ಲಾ ಸೋತಿದ್ದೇವೆ, ನಮ್ಮ ಹಿತವನ್ನೂ ಅವರು ಕಾಯಲಿ. ಅದರ ಜವಾಬ್ದಾರಿ ಅವರಿಗೆ ಇದೆ ಅಲ್ವಾ? ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧವೆ ಬಿಸಿ ಪಾಟೀಲ್‌ ಕಿಡಿಕಾರಿದರು.

ಟಿಕೆಟ್‌ ಸಿಗಲಿಲ್ಲ ಎಂದರೆ ಕಾರ್ಯಕರ್ತರ ಜೊತೆ ಮಾತಾಡ್ತೀನಿ. ನನಗೆ ನಂದೇ ಹಾದಿ ಇದೆ, ನನಗೆ ಶಿವರಾಮ್‌ ಹೆಬ್ಬಾರ್‌, ಎಸ್‌ಟಿ ಸೋಮಶೇಖರ್ ಹಾದಿ ಬೇಕಾಗಿಲ್ಲ. ಕೃಷಿ ಸಚಿವನಾಗಿ ರೈತರ ಹಿತ ಕಾದಿದ್ದೇವೆ ಎಂದು ಹೇಳಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಹಾವೇರಿ ಕ್ಷೇತ್ರದವರೇ ಆದ ಮಾಜಿ ಸಚಿವ ಬಿಸಿ ಪಾಟೀಲ್‌ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಇದರ ಜೊತೆ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಅವರು ತಮ್ಮ ಪುತ್ರ ಕೆಇ ಕಾಂತೇಶ್‌ಗೆ ಟಿಕೆಟ್‌ ಕೊಡಿಸಬೇಕು ಎಂದು ಪಣ ತೊಟ್ಟಿದ್ದಾರೆ. ಇದರ ನಡುವೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರು ಕೂಡ ಹಾವೇರಿಗೆ ಕೇಳಿಬರುತ್ತಿದೆ.

More articles

Latest article