ಮನೆಯ ಕಸ ತೆಗೆದುಕೊಳ್ಳದ್ದಕ್ಕೆ ತಾಯಿ ಮಗ ಸೇರಿ ಪೌರಕಾರ್ಮಿಕರ ಕಪಾಳಕ್ಕೆ ಹೊಡೆದು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದನ್ನು ಕನ್ನಡ ಪ್ಲಾನೆಟ್ ಸರಣಿ ವರದಿ ಮಾಡಿತ್ತು. ನಂತರ ಪೌರಕಾರ್ಮಿಕರ ಒಗ್ಗಟ್ಟಿನ ಹೋರಾಟದ ಫಲವಾಗಿ ಬುಧವಾರ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಚಂದ್ರ ಎನ್ನುವವರು ಹಾಗೂ ಅವರ ತಾಯಿ ಮಗ ಸೇರಿ ಬಿಬಿಎಂಪಿ 5 ಮಹಿಳಾ ಪೌರಕಾರ್ಮಿಕರ ಮೇಲೆ ಜಾತಿ ನಿಂದನೆ, ಹಲ್ಲೆ ಮಾಡಿದ್ದಾರೆ. ಈ ವೇಳೆ ಪೌರಕಾರ್ಮಿಕರಿಗೆ ಗಾಯಗಳಾಗಿದ್ದು, ಅವರಲ್ಲಿ ಒಬ್ಬರಾದ ಲಕ್ಷ್ಮಿ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 11 ರಂದು ಈ ಘಟನೆ ನಡೆದಿದೆ. ಬ್ಯಾಡರಹಳ್ಳಿ ಪೊಲೀಸರು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ತಿದ್ದುಪಡಿ ಸುಗ್ರೀವಾಜ್ಞೆ-2014 ಮತ್ತು ವಿವಿಧ ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಗಾಯ, ಕ್ರಿಮಿನಲ್ ಬೆದರಿಕೆ ಮತ್ತು ಉದ್ದೇಶಪೂರ್ವಕ ಅವಮಾನದ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು ಆದರೆ ಬಂಧನವಾಗಿರಲಿಲ್ಲ.
ಪೌರಕಾರ್ಮಿಕರು ಒಗ್ಗಟ್ಟಿನಿಂದ ಹೋರಾಡಿ ಬಿಬಿಎಂಪಿಗೆ ಮನವಿ ಸಲ್ಲಿಸಿದ ನಂತರ ಬಿಬಿಎಂಪಿ ಬೆಂಗಳೂರು ಕಮಿಷನರ್ ಹಾಗೂ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ವಿವರವಾದ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿತ್ತು. ಇದರ ಬೆನ್ನಲ್ಲೇ ಪೊಲೀಸರು ಆರೋಪಿ ಚಂದ್ರುವನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ದೌರ್ಜನ್ಯ ನಡೆಸಿದ್ದ ವ್ಯಕ್ತಿಯ ಬಂಧನವಾಗಿರುವ ಕುರಿತು ಕನ್ನಡ ಪ್ಲಾನೆಟ್ ಗೆ ಪ್ರತಿಕ್ರಿಯಿಸಿರುವ ಹೋರಾಟದ ಮುಖಂಡರಾದ ನಿರ್ಮಲಾ ಅವರು, “ಪೌರ ಕಾರ್ಮಿಕರು ಬಿಬಿಎಂಪಿ ಎದುರು ನಡೆಸಿರುವ ಹೋರಾಟಕ್ಕೆ ಜಯ ಸಿಕ್ಕಿದೆ. ಈ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು, ರಾಜ್ಯದ ಎಲ್ಲಾ ಕಡೆಗಳಲ್ಲಿ ಪೌರಕಾರ್ಮಿಕರಿಗೆ ಸೂಕ್ತ ರಕ್ಷಣೆ ಹಾಗೂ ಮೂಲಸೌಕರ್ಯಗಳು ಸಮರ್ಪಕವಾಗಿ ದೊರೆಯಬೇಕು ಎಂದು ಹೇಳಿದರು.
ಸ್ವಚ್ಛತಾ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡುವುದು ಶಿಕ್ಷಾರ್ಹ ಅಪರಾಧ: ಬಿಬಿಎಂಪಿ ಎಚ್ಚರಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಮೇಲೆ ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಹಲ್ಲೆ, ಜಾತಿ ನಿಂದನೆ ಮಾಡುತ್ತಿರುವುದು ಕಂಡುಬಂದಿರುತ್ತದೆ. ಜಾತಿಯ ಹೆಸರಿನಲ್ಲಿ ನಿಂದಿಸುವುದು, ಹಲ್ಲೆ ಮಾಡುವುದು ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ತಿಳಿಸಿದೆ.
ಭಾರತದ ಸಂವಿಧಾನದ 17ನೇ ವಿಧಿಯು “ಅಸ್ಪೃಶ್ಯತೆ” ಯನ್ನು ನಿಷೇಧಿಸಿದೆ ಮತ್ತು ಯಾವುದೇ ರೂಪದಲ್ಲಿ ಅದರ ಆಚರಣೆಯು ಅಪರಾಧವಾಗಿದೆ. ನೈರ್ಮಲ್ಯ/ಸ್ವಚ್ಛತಾ ಕಾರ್ಮಿಕರನ್ನು ಗೌರವಿಸುವುದು ಕೇವಲ ನೈತಿಕ ಬಾಧ್ಯತೆಯಾಗಿರದೆ ಸಮಾಜದ ಅಗತ್ಯವೂ ಆಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಅವರು ನಿರ್ವಹಿಸುವ ಉದ್ಯೋಗಕ್ಕಿಂತ ವೈಯಕ್ತಿಕ ಘನತೆ ಮತ್ತು ಗೌರವಕ್ಕೆ ಅರ್ಹರಾಗಿರುತ್ತಾರೆ. ನೈರ್ಮಲ್ಯ ಕಾರ್ಮಿಕರ/ಪೌರಕಾರ್ಮಿಕರ ವಿರುದ್ಧ ತಾರತಮ್ಯವು ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಯಾವುದೇ ಸ್ಥಳದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರನ್ನು ಜಾತಿ ಹೆಸರಿನಿಂದ ನಿಂದಿಸುವುದು ಮತ್ತು ಉದ್ದೇಶಪೂರ್ವಕವಾಗಿ ಅವಮಾನಿಸುವುದು ಅಥವಾ ಬೆದರಿಕೆ ಹಾಕುವುದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ತಿದ್ದುಪಡಿ ಕಾಯಿದೆ 2015 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಬಿಬಿಎಂಪಿಯಲ್ಲಿನ ಎಲ್ಲಾ ನಿವಾಸಿಗಳು ಮತ್ತು ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ತಾವು ವಾಸಿಸುವ ಸ್ಥಳವನ್ನು/ಪರಿಸರವನ್ನು ದಿನನಿತ್ಯ ಸ್ವಚ್ಛಗೊಳಿಸುವ ಮೂಲಕ ಪೌರಕಾರ್ಮಿಕರು ತಮ್ಮ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಬಹು ಮಹತ್ತರ ಪಾತ್ರವಹಿಸಿದ್ದಾರೆ. ಪೌರಕಾರ್ಮಿಕರನ್ನು ಗೌರವದಿಂದ ಮತ್ತು ಘನತೆಯಿಂದ ನಡೆಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪೌರಕಾರ್ಮಿಕರನ್ನು ಅವರ ವೃತ್ತಿಯನ್ನು ಗೌರವಿಸಿ, ಅವರು ಸಮಾಜದಲ್ಲಿ ಘನತೆಯಿಂದ ಬದುಕಲು ಸಹಕರಿಸಲು, ಪೌರಕಾರ್ಮಿಕರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಲು ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಕೋರಿರುತ್ತಾರೆ.
ಘಟನೆಯ ವಿವರ:-
ಬ್ಯಾಡರಹಳ್ಳಿಯ ಭಾರತನಗರದ 14ನೇ ಕ್ರಾಸ್‌ನಲ್ಲಿ ರಸ್ತೆ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರು ತಮ್ಮ ಪಾಡಿಗೆ ರೋಡಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮನೆಯಿಂದ ಹೊರ ಬಂದ ಮಹಿಳೆ ತನ್ನ ಮನೆಯ ಹೊರಗೆ ಹಾಕಿರುವ ಕಸವನ್ನು ತೆಗೆದುಕೊಂಡ ಹೋಗುವಂತೆ ಪೌರ ಕಾರ್ಮಿಕರಿಗೆ ಹೇಳಿದ್ದಾರೆ. ಸಾಕಷ್ಟು ಕಸ ಇದೆ. ಮನೆ ಕಸ ತೆಗೆದುಕೊಳ್ಳಲು ಟಿಪ್ಪರ್ ಗಾಡಿ ಬರುತ್ತದೆ ಅವರಿಗೆ ನೀಡಿ. ನಾವು ಬೀದಿ ಕಸ ಗುಡಿಸುತ್ತೇವೆ ಎಂದು ಹೇಳಿದ್ದರು.
ಕೂಡಲೇ ಆ ಮಹಿಳೆಯು ನಾವು ಕಟ್ಟುವ ತೆರಿಗೆಯಿಂದ ನಿಮಗೆ ಸಂಬಳ ಸಿಗುತ್ತಿದೆ ಎಂದು ನಿಂದಿಸಿದ್ದಾರೆ. ಆ ನಂತರ ಮಗನಿಗೆ ಕರೆ ಮಾಡಿ ” ಈ ಕೆಳಜಾತಿಯವರು ಕಸ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಇವರಿಗೆ ಪಾಠ ಕಲಿಸಬೇಕು ” ಎಂದು ಹೇಳಿದ ಬೆನ್ನಲ್ಲೇ ಮಗ ಚಂದ್ರು ಬಂದು ಪೌರಕಾರ್ಮಿಕರಿಗೆ ಜಾತಿ ನಿಂದನೆ ಮಾಡಿದ್ದಾರೆ.
ಆತನ ಮಾತುಗಳನ್ನು ನಾವು ಫೋನಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸಿದಾಗ ನನ್ನ ಫೋನ್ ಅನ್ನು ಕಿತ್ತು ನೆಲಕ್ಕೆ ಎಸೆದನು. ಬಳಿಕ ನನಗೆ ಕಪಾಳಕ್ಕೆ ಹೊಡೆದರು. ನನ್ನ ಕೂದಲನ್ನು ಎಳೆದರು, ನನ್ನ ಬಟ್ಟೆ ಹರಿದು ನೆಲಕ್ಕೆ ತಳ್ಳಿದರು. ಜತೆಗೆ ಆ ಮಹಿಳೆ ಕೂಡ ಮಗನ ಜೊತೆ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಜೊತೆಗೆ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಪೌರಕಾರ್ಮಿಕ ಮಹಿಳಾ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದರು.