ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ

Most read

ಮಹಾಮಾನವತಾವಾದಿ, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸೋ ಮೂಲಕ ಕರ್ನಾಟಕ ಸರ್ಕಾರ ಶರಣ ಸಂಕುಲಕ್ಕೆ ಬಹುದೊಡ್ಡ ಗೌರವ ಸಲ್ಲಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಜಗತ್ತಿನೆಲ್ಲೆಡೆ ಇರೊ ಸಮಸ್ತ ಬಸವಾನುಯಾಯಿಗಳಲ್ಲಿ ಹರ್ಷ ಮನೆಮಾಡಿದೆ. ನಾನು ಬಸವಾನುಯಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ತಮ್ಮ ಕ್ಯಾಬಿನೆಟ್ ಅನುಮತಿ ಪಡೆದು ಅಧಿಕೃತವಾಗಿ ಘೋಷಣೆ ಮಾಡಿರೋದಕ್ಕೆ ಅವರಿಗೆ ಅನಂತ ಅಭಿನಂದನೆಗಳು – ಅಮರ್‌ ಪಾಟೀಲ್ 

12 ನೆ ಶತಮಾನದ ಶರಣ ಚಳುವಳಿ ಕ್ರಾಂತಿಕಾರಿ ಬದಲಾವಣೆಯ ಕಾಲಘಟ್ಟ ಎನ್ನಬಹುದು. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಕುಂಬಾರ ಗುಂಡಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಶರಣೆ ಸತ್ಯಕ್ಕ, ಸೂಳೆ ಸಂಕವ್ವರಂತಹ ಅಪ್ರತಿಮ ಶರಣರನ್ನು ಜಗತ್ತಿಗೆ ನೀಡಿದ ಅನುಭವ ಮಂಟಪದ ರೂವಾರಿ ನಮ್ಮ ಬಸವಣ್ಣನವರು. ಈ ಕಾರಣಕ್ಕಾಗಿ ಸರ್ಕಾರದ ಘೋಷಣೆಯಿಂದ ಎಲ್ಲಾ ವರ್ಗಗಳಲ್ಲೂ ಸಂತಸ ಮನೆಮಾಡಿದೆ

ಕಾಯಕ, ದಾಸೋಹ ತತ್ವಗಳು ಬಸವಣ್ಣನವರು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಗಳು. ಎಲ್ಲರೂ ದುಡಿಯಬೇಕು, ದುಡಿದದ್ದರಲ್ಲಿ ದಾಸೋಹ ಮಾಡಬೇಕು ಆ ಮೂಲಕ ಸಮಾಜಕ್ಕೆ ದುಡಿಮೆಯ ಪಾಲನ್ನು ವಿನಿಯೋಗಿಸಬೇಕು ಎಂಬುದು ಶರಣರ ಸಂಕಲ್ಪವಾಗಿತ್ತು. ಬಸವಾದಿ ಶರಣರು ನುಡಿದಂತೆ ನಡೆದ ಕಾರಣಕ್ಕೆ ಇಂದಿಗೂ ಆದರ್ಶಪ್ರಾಯವಾಗಿದ್ದಾರೆ.

12 ನೇ ಶತಮಾನದಲ್ಲಿ ಕಲ್ಯಾಣವಾಗಿದ್ದ ರಾಜ್ಯದಲ್ಲಿ ಇಂದಿಗೂ ಜಾತಿ ತಾಂಡವವಾಡುತ್ತಿದೆ. ಅಸ್ಪೃಶ್ಯತೆಯ ಕಾರಣಕ್ಕೆ ದೀನದಲಿತರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಪ್ರಕರಣಗಳನ್ನು ನೋಡುವಾಗ ಬಸವಣ್ಣ ತೀವ್ರವಾಗಿ ಕಾಡುತ್ತಾರೆ. ಮರ್ಯಾದಾ ಹತ್ಯೆಗಳು ಕಲ್ಯಾಣ ಕ್ರಾಂತಿಯ ಭೀಕರತೆಯನ್ನು ಕಣ್ಣಮುಂದೆ ನೆನಪಿಸುತ್ತವೆ. 

ಜಾತೀಯತೆ, ಅಸ್ಪೃಶ್ಯತೆ ವಿರುದ್ಧ ತೊಡೆತಟ್ಟಿ ನಿಂತು ದೀನ ದಲಿತರ, ಕಾಯಕ ವರ್ಗಗಳ ಆಶಾಕಿರಣವಾಗಿದ್ದ ಬಸವಣ್ಣನವರು ದೇಹವೆ ದೇಗುಲವೆಂದು ಸಾರಿದರು. ವರ್ಗ, ಜಾತಿ, ಲಿಂಗ ಭೇದವನ್ನು ತೊಡೆದುಹಾಕಲು ಇಷ್ಟಲಿಂಗವನ್ನು ನೀಡಿದರು. ದೇವರು, ಭಕ್ತನ ನಡುವೆ ಪೂಜಾರಿ ಎಂಬ ಮಧ್ಯವರ್ತಿಯ ಅವಶ್ಯಕತೆಯಿಲ್ಲ ಎಂದು ನಿರೂಪಿಸಿದವರು. 

ಬಸವ ತತ್ವ ಪ್ರಸಾರವಾದರೆ ತಮ್ಮ ಆಟ ನಡೆಯುವುದಿಲ್ಲ ಎಂದರಿತ ಕಪಟಿಗಳು ಅಂದಿನಿಂದಲೂ ಬಸವ ತತ್ವಕ್ಕೆ ಕೊಕ್ಕೆ ಹಾಕೊ ಪ್ರಯತ್ನವನ್ನು ಮಾಡುತ್ತಲೆ ಬಂದಿದ್ದಾರೆ. ಇದೆಲ್ಲವನ್ನೂ ಹಿಮ್ಮೆಟ್ಟಿಸೊ ಶಕ್ತಿ ಬಸವತತ್ವಕ್ಕಿದೆಯೆಂದು ಕಾಲಕಾಲಕ್ಕೆ ನಿರೂಪಿತವಾಗುತ್ತಾ ಬಂದಿದೆ 

ಟಿ.ವಿ ಮಾಧ್ಯಮಗಳು ಸಹ ಸರ್ಕಾರದ ಈ ಚಾರಿತ್ರಿಕ ನಿರ್ಧಾರವನ್ನು ಪ್ರಸಾರ ಮಾಡದೆ ಬೇಕಂತಲೆ ನಿರ್ಲಕ್ಷ ವಹಿಸಿದವಾ? ಎನ್ನುವ ಅನುಮಾನ ಕಾಡುತ್ತಿದೆ. ಬಿತ್ತರಿಸಿದ ಒಂದು ಚಾನಲ್ ರಾಮ v/s ಬಸವಣ್ಣ ಎನ್ನುವ ವಿವಾದಾಸ್ಪದ ಟೈಟಲ್ ನೀಡಿತ್ತು. ಅದು ಖಂಡಿತ ಬೇಕಿರಲಿಲ್ಲ. ಅಯೋಧ್ಯೆಯ ಸಂಭ್ರಮವನ್ನು ಕನಿಷ್ಟ ಒಂದು ದಿನದ ಮಟ್ಟಿಗೆ ನಿಲ್ಲಿಸಿ, ಕರುನಾಡಿನ ಬಸವಣ್ಣನವರಿಗೆ ಸಿಕ್ಕ ಗೌರವದ ಬಗ್ಗೆ ತಮ್ಮ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಮಾಡುವುದು ಅವರ ಕರ್ತವ್ಯವಾಗಿತ್ತು.

ಇಡೀ ಕರುನಾಡು ಒಪ್ಪಿಕೊಂಡು ಸ್ವಾಗತಿಸಿರೋ ನಿರ್ಧಾರವನ್ನು ಮಾಧ್ಯಮಗಳು ಮನೆಮನೆಗೆ ತಲುಪಿಸಿ ಬಸವ ತತ್ವ ಪ್ರಸಾರಕ್ಕೆ ನೆರವಾಗಬೇಕಿತ್ತು ಎನ್ನುವ  ಬೇಸರ ಹೊರತು ಮತ್ತೇನಿಲ್ಲ. ಬಸವ ತತ್ವ ಪ್ರಸಾರವಾದಷ್ಟು ಜನರಲ್ಲಿ ಮೂಢನಂಬಿಕೆ, ಕಂದಾಚಾರಗಳ ಬಗ್ಗೆ ಅರಿವು ಮೂಡುತ್ತದೆ. ಶರಣರ ವಿಚಾರಗಳು ಮನೆಮನೆ ತಲುಪಬೇಕು. ಕಲ್ಯಾಣದ ಅರಿವು ವಿಸ್ತಾರವಾಗುತ್ತಾ ಹೋಗುವಲ್ಲಿ ಸರ್ಕಾರದ ಈ ನಿರ್ಧಾರ ಸಹಕಾರಿಯಾಗಲಿದೆ, ಆ ಉದ್ದೇಶ ಇಟ್ಟುಕೊಂಡೆ ಸರ್ಕಾರ ಈ ಘೋಷಣೆ ಮಾಡಿದೆ ಎನ್ನುವುದು ಬಸವಾನುಯಾಯಿಗಳ ಬಲವಾದ ನಂಬಿಕೆ. ಈ ವಿಷಯವಾಗಿ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು

ಅಮರ್‌ ಪಾಟೀಲ್

ಇದನ್ನೂ ಓದಿ-

ಲಿಂಗಾಯತ ಧರ್ಮದ ಸುತ್ತ ಪುರೋಹಿತಶಾಹಿಗಳ ಹುತ್ತ

ಬಸವಣ್ಣ ಕೇವಲ ನಾಯಕನಲ್ಲ, ವಿಶ್ವಮಾನವ ಧರ್ಮವೊಂದರ ಸಂಸ್ಥಾಪಕ

More articles

Latest article