ಅಭಿಮತ
ಸರ್ಕಾರ ತರುತ್ತಿರುವ ಈ ನಿಷೇಧ ಕೇವಲ ಒಂದು ‘ಲಗಾಮು’ ಮಾತ್ರ. ಆದರೆ, ಕುದುರೆ ಸರಿಯಾದ ಹಾದಿಯಲ್ಲಿ ಓಡಬೇಕೆಂದರೆ ಅದರ ಸವಾರರಾದ ಪೋಷಕರ ಪಾತ್ರ ಇಲ್ಲಿ ಬಹುಮುಖ್ಯ. ಹದಿನಾರರ ಹರೆಯದ ಹಠ, ಕುತೂಹಲಗಳನ್ನು ಕೇವಲ ನಿರ್ಬಂಧಗಳಿಂದ ಗೆಲ್ಲಲು ಸಾಧ್ಯವಿಲ್ಲ. ಮಕ್ಕಳ ಕೈಯಿಂದ ಫೋನ್ ಕಸಿದುಕೊಳ್ಳುವ ನಾವು, ಅವರಿಗೆ ಪರ್ಯಾಯವಾಗಿ ಒಂದು ಪುಸ್ತಕವನ್ನೋ ಅಥವಾ ಮೈದಾನದ ಆಟವನ್ನೋ ನೀಡುತ್ತಿದ್ದೇವಾ? – ನಿರಂಜನ ಹೊಸಕೊಪ್ಪ, ಯುವ ಬರಹಗಾರ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 17ನೆಯ ಬಜೆಟ್ ಮಂಡಿಸುತ್ತಾ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸುವುದಾಗಿ ಅವರು ಘೋಷಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬ ಆತಂಕದ ನಡುವೆಯೇ ಕರ್ನಾಟಕ ಸರ್ಕಾರ ಈ ರೀತಿಯಾದ ಪ್ರಕಟಣೆ ಹೊರಡಿಸಿದೆ.
ಬಜೆಟ್ನಲ್ಲಿ ಸಿಎಂ ಹೇಳಿದ್ದೇನು?
ರಾಜ್ಯದಲ್ಲಿ ಮಕ್ಕಳ ಶಿಕ್ಷಣ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿದ ಸಿದ್ದರಾಮಯ್ಯ ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಮಕ್ಕಳ ಕಲಿಕೆ, ನಡವಳಿಕೆ ಮತ್ತು ಮಾನಸಿಕ ಸ್ಥಿತಿಯ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಯಲು 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸಲಾಗುವುದು ಎಂದು ಸದನದಲ್ಲಿ ತಿಳಿಸಿದರು.
ಈ ನಿರ್ಧಾರಕ್ಕೆ ಇರಬಹುದಾದ ಕಾರಣವೇನು?

• ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು ಕೂಡ ಬೆಳಿಗ್ಗೆ ಎದ್ದ ತಕ್ಷಣ ‘ರೀಲ್ಸ್’ ನೋಡಲು ಶುರು ಮಾಡುತ್ತಾರೆ. ಓದು ಬರಹ ಬಿಟ್ಟು ಮೊಬೈಲ್ ನಲ್ಲೇ ಮುಳುಗಿರುವ ಮಕ್ಕಳನ್ನು ನೋಡಿ ಯಾವ ತಂದೆ ತಾಯಿಗೆ ಸಂಕಟ ಆಗಲ್ಲ ಹೇಳಿ? ಇದರ ಜೊತೆಗೆ ಇಂದು ನಾವು ನೋಡುತ್ತಿರುವ ಮಕ್ಕಳ ಜಗತ್ತು ಹಿಂದಿನಂತಿಲ್ಲ. ಮೈದಾನದಲ್ಲಿ ಆಟವಾಡುವ ಬದಲು, ಗ್ರಂಥಾಲಯಗಳಲ್ಲಿ ಓದುವ ಬದಲು ಮೊಬೈಲ್ ಗೇಮ್ಗಳಲ್ಲಿ, ರೀಲ್ಸ್ ನೋಡುವುದರಲ್ಲಿ, ರೀಲ್ಸ್ ಮಾಡುವುದರಲ್ಲಿ ಮಕ್ಕಳು ತಲ್ಲೀನರಾಗಿರುತ್ತಾರೆ. ಎಷ್ಟೋ ಪೋಷಕರೂ ತಮ್ಮ ಮಕ್ಕಳ ಜೊತೆ ಸೇರಿ ರೀಲ್ಸ್ ಮಾಡುವುದೂ ಇದೆ.
• ಸೋಶಿಯಲ್ ಮೀಡಿಯಾದಲ್ಲಿ ಸಿಗುವ ‘ಲೈಕ್ಸ್’ ಮತ್ತು ‘ಕಾಮೆಂಟ್ಸ್’ಗಳ ಮೇಲೆ ಮಕ್ಕಳ ಸಂತೋಷ ನಿರ್ಧರಿತವಾಗುತ್ತಿದೆ. ಇದು ಮಕ್ಕಳಲ್ಲಿ ಆತಂಕ (Anxiety) ಮತ್ತು ಖಿನ್ನತೆಯನ್ನು (Depression) ಹೆಚ್ಚಿಸುತ್ತಿದೆ.
• ಸತತವಾಗಿ ಮೊಬೈಲ್ ಪರದೆಯ ಮುಂದೆ ಕುಳಿತು ಮಕ್ಕಳ ಗಮನ ಕೇಂದ್ರೀಕರಿಸುವ ಶಕ್ತಿ (Attention Span) ಕ್ಷೀಣಿಸುತ್ತಿದೆ. ಶಾಲಾ ಪಾಠಗಳಿಗಿಂತ ಇನ್ಸ್ಟಾಗ್ರಾಮ್ ನ 15 ಸೆಕೆಂಡಿನ ವೀಡಿಯೋಗಳೇ ಅವರಿಗೆ ಹೆಚ್ಚು ಆಕರ್ಷಕವಾಗುತ್ತಿವೆ.
• ಅಪರಿಚಿತರೊಂದಿಗೆ ಸಂವಹನ, ಆನ್ಲೈನ್ ವಂಚನೆ ಮತ್ತು ಸೈಬರ್ ಬುಲ್ಲಿಂಗ್ನಂತಹ ಅಪಾಯಗಳಿಗೆ ಮಕ್ಕಳು ಸುಲಭವಾಗಿ ಬಲಿಯಾಗುತ್ತಿದ್ದಾರೆ. ಭಾರತದಲ್ಲೇ ಆನ್ಲೈನ್ ಗೇಮ್ಗಳ ಮೂಲಕ 16 ವರ್ಷ ಕೆಳಗಿನ ಮಕ್ಕಳು ಹಣ ಕಳೆದುಕೊಂಡಿರುವ ಉದಾಹರಣೆಗಳಿವೆ.
ಮುಖ್ಯಮಂತ್ರಿಗಳು ಈ ವಿಷಯವನ್ನು ಸದನದಲ್ಲಿ ಮಂಡಿಸುತ್ತಿದ್ದಂತೆ ವಿಷಯದ ಕುರಿತಾಗಿ ಅನೇಕ ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ರಾಜ್ಯದ ಅನೇಕ ಕಡೆಗಳಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಸರ್ಕಾರದ ಈ ನಡೆಯನ್ನು ಸ್ವಾಗತಿಸಿದ್ದಾರೆ. ಆದರೆ ಈ ವಿಷಯ ಅಷ್ಟು ಸರಳವೆ? ಸರ್ಕಾರ ಇಂತಹ ತೀರ್ಮಾನ ಮಾಡುವ ಮೊದಲು ಶಿಕ್ಷಣ ತಜ್ಞರು ಮತ್ತು ಮನ:ಶಾಸ್ತ್ರಜ್ಞರು ಹಾಗೂ ಮನೋವೈದ್ಯರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿದೆಯೋ ಇಲ್ಲವೋ ತಿಳಿದಿಲ್ಲ. ಇಂತಹ ಒಂದು ತೀರ್ಮಾನಕ್ಕೆ ಇಡೀ ರಾಜ್ಯದ ಪೋಷಕರು ಮತ್ತು ಮಕ್ಕಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ.
ಈ ವಿಚಾರದ ಕುರಿತಾಗಿ ಮನಶಾಸ್ತ್ರಜ್ಞರ ಅಭಿಪ್ರಾಯವೇ ಬೇರೆ. ಈ ವಿಷಯದ ಕುರಿತಾಗಿ ಕನ್ನಡ ಪ್ಲಾನೆಟ್ (Kannada Planet) ನೊಂದಿಗೆ ಖ್ಯಾತ ಮನಶಾಸ್ತ್ರಜ್ಞ ಯೋಗೇಶ್ ಮಾಸ್ಟರ್ ಅವರು ಕೆಲವು ಗಂಭೀರ ಅಂಶಗಳನ್ನು ಹಂಚಿಕೊಂಡಿದ್ದಾರೆ.
ನಿಷೇಧವು ಕುತೂಹಲದ ಕಿಚ್ಚು: ಮಾನಸಿಕ ವಿಜ್ಞಾನದ ಪ್ರಕಾರ, ಯಾವುದನ್ನು ನಾವು ಸಂಪೂರ್ಣವಾಗಿ ತಡೆಯುತ್ತೇವೆಯೋ, ಅದರ ಬಗ್ಗೆ ಮಕ್ಕಳಲ್ಲಿ ಕುತೂಹಲ ದುಪ್ಪಟ್ಟಾಗುತ್ತದೆ. ಇದು ಅವರು ಗುಪ್ತವಾಗಿ ಅಥವಾ ಪರ್ಯಾಯ ಮಾರ್ಗಗಳ ಮೂಲಕ ಜಾಲತಾಣಗಳನ್ನು ಬಳಸಲು ಪ್ರೇರೇಪಿಸಬಹುದು.
ನರ ವಿಜ್ಞಾನದ ಸತ್ಯ (Neuroscience): ‘ರಿವಾರ್ಡ್ ಸಿಸ್ಟಮ್’ ಸಾಮಾಜಿಕ ಮಾಧ್ಯಮದ ‘ಲೈಕ್’ ಮತ್ತು ‘ನೋಟಿಫಿಕೇಶನ್’ಗಳು ಮಕ್ಕಳ ಮೆದುಳಿನಲ್ಲಿ ಡೋಪಮಿನ್ ಬಿಡುಗಡೆ ಮಾಡಿ ತಾತ್ಕಾಲಿಕ ಸಂತೋಷ ನೀಡುತ್ತವೆ. ಇದು ಮೆದುಳನ್ನು ಚಟಕ್ಕೆ (Addiction) ತಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಪ್ರೀಫ್ರಂಟಲ್ ಕಾರ್ಟೆಕ್ಸ್: ನಿರ್ಧಾರ ತೆಗೆದುಕೊಳ್ಳುವ ಮೆದುಳಿನ ಈ ಭಾಗವು ಪೂರ್ಣವಾಗಿ ಅಭಿವೃದ್ಧಿಯಾಗುವುದು 20-25 ವರ್ಷದ ನಂತರವೇ. ಹಾಗಾಗಿ, ಮಕ್ಕಳಲ್ಲಿ ಸ್ವಯಂ-ನಿಯಂತ್ರಣದ ಕೊರತೆ ಇರುವುದು ಸಹಜ. ಇದಕ್ಕೆ ಪೋಷಕರ ಮಾರ್ಗದರ್ಶನ ಮುಖ್ಯವೇ ಹೊರತು ಕಾನೂನುಗಳಲ್ಲ.
ಡಿಜಿಟಲ್ ಸಂಸ್ಕಾರ: ಮಕ್ಕಳನ್ನು ಫೋನ್ಗಳಿಂದ ಮತ್ತು ಸೋಷಲ್ ಮೀಡಿಯಾದಿಂದ ಸಂಪೂರ್ಣವಾಗಿ ದೂರ ಇಡುವ ಬದಲು, ಅವರಿಗೆ ಸಮಯದ ಮಿತಿ, ಸೃಜನಾತ್ಮಕ ಬಳಕೆ ಮತ್ತು ಡಿಜಿಟಲ್ ಸಂಸ್ಕೃತಿಯನ್ನು ಕಲಿಸಿಕೊಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕು.
“ನಿಷೇಧಕ್ಕಿಂತ ಶಿಕ್ಷಣವೇ ಉತ್ತಮ ಪರಿಹಾರ” ಎಂಬುದು ಯೋಗೇಶ್ ಮಾಸ್ಟರ್ ಅವರ ಅಭಿಪ್ರಾಯ. ಮಕ್ಕಳ ನಡವಳಿಕೆ ಎಂಬುದು ಪೋಷಕರ ಮೇಲೆ ಅವಲಂಬಿತವಾಗಿರುತ್ತದೆ. ತನ್ನ ತಂದೆ ಅಥವಾ ತಾಯಿ ಫೋನ್ನಲ್ಲಿ ರೀಲ್ಸ್ ಮಾಡಿದರೆ ಮಗು ಕೂಡ ರೀಲ್ಸ್ ಮಾಡುತ್ತದೆ. ಪೋಷಕರು ಪುಸ್ತಕಗಳನ್ನು ಓದಿದರೆ ಖಂಡಿತ ಮಗು ಪೋಷಕರನ್ನು ಪಾಲಿಸುತ್ತದೆ. ಮಗು ಗಲಾಟೆ ಮಾಡುತ್ತದೆ, ಹೇಳಿದ ಮಾತು ಕೇಳುವುದಿಲ್ಲ ಅಂತ ಮಕ್ಕಳ ಕೈಯಲ್ಲಿ ಫೋನ್ ಕೊಡುವ ಪೋಷಕರು ಮೊದಲು ತಮ್ಮ ಅಭ್ಯಾಸವನ್ನು ಬಿಡಬೇಕು. ಮತ್ತು ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತಾಗಿ ಶಿಕ್ಷಣ ನೀಡಬೇಕು.

ಪ್ರಾಯಶಃ ಭಾರರತದಲ್ಲಿ ಹೀಗೆ ಮಕ್ಕಳಿಗೆ ಸೋಶಲ್ ಮೀಡಿಯಾ ನಿಷೇಧಿಸುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕವೇ ಇರಬಹುದು. ಆದರೆ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಕೂಡ ಸೋಷಿಯಲ್ ಮೀಡಿಯಾವನ್ನು ನಿಷೇಧಿಸಿರುವುದನ್ನು ಗಮನಿಸಬಹುದು. ಉದಾಹರಣೆಗೆ ಆಸ್ಟ್ರೇಲಿಯಾ 2025ರ ಡಿಸೆಂಬರ್ ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ದೇಶಾದ್ಯಂತ ನಿಷೇಧವನ್ನು ಜಾರಿಗೆ ತಂದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್, ಟಿಕ್ಟಾಕ್ ಸೇರಿದಂತೆ ಪ್ರಮುಖ ವೇದಿಕೆಗಳನ್ನು ನಿರ್ಬಂಧಿಸಲಾಗಿದ್ದು, ವಾಟ್ಸಾಪ್ ಮತ್ತು ಯೂಟ್ಯೂಬ್ ಕಿಡ್ಸ್ಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಈ ಹಾದಿಯಲ್ಲೇ ಸಾಗಿರುವ ಇಂಡೋನೇಷ್ಯಾ, ಮಾರ್ಚ್ 28, 2026 ರಿಂದ ಹಂತ ಹಂತವಾಗಿ 16 ವರ್ಷದೊಳಗಿನವರ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಿದೆ. ಮಲೇಷ್ಯಾ ಕೂಡ 2026ರಲ್ಲಿ ವಯಸ್ಸಿನ ದೃಢೀಕರಣ ವ್ಯವಸ್ಥೆಯೊಂದಿಗೆ ಇಂತಹುದೇ ನಿಷೇಧವನ್ನು ಜಾರಿಗೆ ತರುತ್ತಿದ್ದರೆ, ಯುರೋಪ್ ನಲ್ಲಿ ಸ್ಪೇನ್ ಫೆಬ್ರವರಿ 2026 ರಿಂದ ಮತ್ತು ಫ್ರಾನ್ಸ್ ಜನವರಿ 2026 ರಲ್ಲಿ ಅಂಗೀಕರಿಸಿದ ಹೊಸ ಕಾನೂನಿನ ಮೂಲಕ 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿವೆ. ಡೆನ್ಮಾರ್ಕ್ 2026ರ ಮಧ್ಯಭಾಗದ ವೇಳೆಗೆ ಡಿಜಿಟಲ್ ವಯಸ್ಸಿನ ದೃಢೀಕರಣ ಅಪ್ಲಿಕೇಶನ್ ಮೂಲಕ ಈ ಕಾನೂನನ್ನು ಜಾರಿಗೆ ತರಲು ಸಜ್ಜಾಗಿದ್ದರೆ, ಪೋರ್ಚುಗಲ್ ಈಗಾಗಲೇ 16 ವರ್ಷದೊಳಗಿನವರ ಪ್ರವೇಶವನ್ನು ಸೀಮಿತಗೊಳಿಸುವ ನಿರ್ಬಂಧಗಳನ್ನು ಅಂಗೀಕರಿಸಿದೆ. ನಾರ್ವೆ, ಗ್ರೀಸ್ ಮತ್ತು ಅಮೆರಿಕದ ಕೆಲವು ರಾಜ್ಯಗಳು ಕೂಡ ಇದೇ ಮಾದರಿಯ ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿವೆ.
ಒಟ್ಟಾರೆಯಾಗಿ ನೋಡಿದರೆ, ಸರ್ಕಾರ ತರುತ್ತಿರುವ ಈ ನಿಷೇಧ ಕೇವಲ ಒಂದು ‘ಲಗಾಮು’ ಮಾತ್ರ. ಆದರೆ, ಕುದುರೆ ಸರಿಯಾದ ಹಾದಿಯಲ್ಲಿ ಓಡಬೇಕೆಂದರೆ ಅದರ ಸವಾರರಾದ ಪೋಷಕರ ಪಾತ್ರ ಇಲ್ಲಿ ಬಹುಮುಖ್ಯ. ಹದಿನಾರರ ಹರೆಯದ ಹಠ, ಕುತೂಹಲಗಳನ್ನು ಕೇವಲ ನಿರ್ಬಂಧಗಳಿಂದ ಗೆಲ್ಲಲು ಸಾಧ್ಯವಿಲ್ಲ. ಮಕ್ಕಳ ಕೈಯಿಂದ ಫೋನ್ ಕಸಿದುಕೊಳ್ಳುವ ನಾವು, ಅವರಿಗೆ ಪರ್ಯಾಯವಾಗಿ ಒಂದು ಪುಸ್ತಕವನ್ನೋ ಅಥವಾ ಮೈದಾನದ ಆಟವನ್ನೋ ನೀಡುತ್ತಿದ್ದೇವಾ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಡಿಜಿಟಲ್ ಜಗತ್ತಿನ ಮಾಯಾಜಾಲದಿಂದ ಮಕ್ಕಳನ್ನು ರಕ್ಷಿಸುವುದು ಎಂದರೆ ಅವರನ್ನು ಕತ್ತಲೆಯಲ್ಲಿ ಇಡುವುದಲ್ಲ, ಬದಲಿಗೆ ಬೆಳಕಿನ ಸರಿಯಾದ ಬಳಕೆ ಕಲಿಸುವುದು.
ಸರ್ಕಾರ ನಿಯಮ ತರಬಹುದು, ತಜ್ಞರು ಸಲಹೆ ನೀಡಬಹುದು. ಆದರೆ, ಮಗು ಮೊಬೈಲ್ ಬಿಟ್ಟು ಮುಗುಳ್ನಗಬೇಕಾದರೆ ಪೋಷಕರು ಮೊದಲು ತಮ್ಮ ಫೋನ್ ಬದಿಗಿಟ್ಟು ಮಕ್ಕಳೊಂದಿಗೆ ಕಾಲ ಕಳೆಯುವ ‘ಡಿಜಿಟಲ್ ಶಿಸ್ತು’ ರೂಢಿಸಿಕೊಳ್ಳಬೇಕು. ಬದಲಾವಣೆ ಮನೆಯಿಂದಲೇ ಆರಂಭವಾಗಲಿ.
ನಿರಂಜನ ಹೊಸಕೊಪ್ಪ
ಯುವ ಬರಹಗಾರ.
ಇದನ್ನೂ ಓದಿ–http://ಬಜೆಟ್, 2026-27 – ಉನ್ನತ ಶಿಕ್ಷಣಕ್ಕೆ ಕಾಯಕಲ್ಪ: ಭರವಸೆಗಳು ಮತ್ತು ಅನುಷ್ಠಾನದ ಸವಾಲುಗಳು https://kannadaplanet.com/budget-2026-27-revitalization-of-higher-education/

