ಕೋಲಾರ: ಕೋಲಾರ ತಾಲೂಕಿನ ಮದ್ದೇರಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ 2 ಕೋಟಿ ರೂ.ಗಳಿಗೂ ಹೆಚ್ಚಿನ ಹಣದ ಅವ್ಯವಹಾರ ನಡೆದಿದೆ. ಗ್ರಾಹಕರ ಹಣ ಅವರಿಗೆ ತಿಳಿಯದಂತೆ ಮಾಯವಾಗಿದೆ. ಈ ಅವ್ಯವಹಾರಕ್ಕೆ ಬ್ಯಾಂಕ್ ನ ಸಿಬ್ಬಂದಿಯೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ ವೈಸರ್ ಅವರಿಗೆ ಕನ್ನಡ ಭಾಷೆ ಬಾರದೆ ಇರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಮೂರು ದಶಕಗಳಷ್ಟು ಹಳೆಯದಾದ ಈ ಶಾಖೆಯಲ್ಲಿ ಇದೀಗ ಪ್ರತಿದಿನ ಗ್ರಾಹಕರು ಎಡತಾಕುತ್ತಿದ್ದು, ತಮ್ಮ ಬ್ಯಾಂಕ್ ಖಾತೆ ಹಾಗೂ ಲಾಕರ್ ಗಳನ್ನು ಪರಿಶೀಲಿಸುತ್ತಿದ್ದಾರೆ. ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣವನ್ನು ಕಳೆದುಕೊಂಡ ಗ್ರಾಹಕರು ಕಂಗಾಲಾಗಿದ್ದಾರೆ ಮದುವೆ, ಮಕ್ಕಳ ಉನ್ನತ ಶಿಕ್ಷಣ ಹಬ್ಬ, ಮನೆ ನಿವೇಶನ ಖರೀದಿ ಹೀಗೆ ಹತ್ತಾರು ಉದ್ದೇಶಗಳಿಗೆ ಕೂಡಿಟ್ಟ ಹಣವನ್ನು ಠೇವಣಿ ಇರಿಸಿದ್ದ ಹಣ ಕಳೆದುಕೊಂಡ ಗ್ರಾಹಕರು
ಪರಿತಪಿಸುತ್ತಿದ್ದಾರೆ.
ಕೋಲಾರ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಅವರು ಬ್ಯಾಂಕ್ ನ ನಾಲ್ವರು ಸಿಬ್ಬಂದಿಗಳಾದ ಮ್ಯಾನೇಜರ್ ಇಂದ್ರಜಿತ್ ಸಿಂಗ್, ಸೂಪರ್ ವೈಸರ್ ರಾವತ್ ಮಹೇಶ್ವರ್, ಅಟೆಂಡರ್ ಮಂಜುನಾಥ್ ಹಾಗೂ ಹೌಸ್ ಕೀಪಿಂಗ್ ಕೆಲಸಗಾರ ಮಧು ಎಂಬುವರ ವಿರುದ್ದ ದೂರು ದಾಖಲಿಸಿದ್ದಾರೆ. ಇಷ್ಟೆಲ್ಲಾ ವಂಚನೆ ನಡೆಯಲು ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ ವೈಸರ್ ಗೆ ಕನ್ನಡ ಭಾಷೆ ಬಾರದೆ ಇರುವುದು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಹೊರಗುತ್ತಿಗೆ ನೌಕರರ ಕರಾಮತ್ತು:
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ತಾಲ್ಲೂಕು ವೇಮಗಲ್ ಮೂಲದ ಮಧು ಹಾಗೂ ಮಾಲೂರಿನ ಮಂಜುನಾಥ್ ಇಬ್ಬರೂ ಸೇರಿ ಈ ಕರಾಮತ್ತು ನಡೆಸಿದ್ದಾರೆ. ಕನ್ನಡ ತಿಳಿಯದ ಉತ್ತರ ಭಾರತ ಮೂಲದ ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ ವೈಸರ್ ಅವರನ್ನು ದಾರಿ ತಪ್ಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನು ಗ್ರಾಮೀಣ ಭಾಗದ ಅನಕ್ಷರಸ್ಥರು ಬ್ಯಾಂಕ್ ವ್ಯವಹಾರಗಳಿಗೆ ಬಂದಾಗ ಹಣ ಕಟ್ಟಿಸಿಕೊಳ್ಳುವುದಕ್ಕೆ ಬದಲಾಗಿ ಅವರ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಲು ಬೇಕಾದ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳುತ್ತಿದ್ದರು. ನಂತರ ಅವರ ಹಣವನ್ನು ಲಪಟಾಯಿಸುತ್ತಿದ್ದರು. ಹೀಗೆ ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬಂದಿದ್ದು, 2 ಕೋಟಿ ರೂ.ಗಳಿಗೂ ಹೆಚ್ಚಿನ ವಂಚನೆ ನಡೆದಿದೆ ಎನ್ನಲಾಗಿದೆ.
ಭಾಷಾ ಸಮಸ್ಯೆಯಿಂದ ಕನ್ನಡಿಗರಿಗೆ ಅನ್ಯಾಯವಾಗಿರುವುದಂತೂ ನಿಜ. ಗ್ರಾಮೀಣ ಭಾಗದ ಅನಕ್ಷರಸ್ಥ ಗ್ರಾಹಕರಿಗೆ ಅನ್ಯಾಯವಾಗಿದ್ದು, ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.