ಒಬ್ಬ ಅಧಿಕಾರಸ್ಥ ರಾಜಕಾರಣಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಗೆದ್ದಿರಬಹುದು. ಆದರೆ ಇಲ್ಲಿ ನೈತಿಕತೆ ಸೋತಿದೆ. ಸ್ವಾಯತ್ತ ಹೆಸರಿನ ಅಕಾಡೆಮಿಗಳನ್ನೂ ತಮಗಿಷ್ಟ ಬಂದಂತೆ ಆಡಿಸುವ ರಾಜಕಾರಣಿಗಳ ಕುತಂತ್ರ ಇದು ಮೊದಲನೆಯದ್ದೂ ಅಲ್ಲಾ, ಕೊನೆಯದ್ದೂ ಅಲ್ಲಾ. ಸರಕಾರಿ ಕೃಪಾ ಪೋಷಿತ ಅಕಾಡೆಮಿಗಳ ನಿಯಂತ್ರಣ ಎಲ್ಲಿಯವರೆಗೂ ಅಧಿಕಾರಿಗಳು ಹಾಗೂ ಸ್ವಾರ್ಥ ರಾಜಕಾರಣಿಗಳ ಕೈಯಲ್ಲಿರುತ್ತದೋ ಅಲ್ಲಿಯವರೆಗೂ ಅಕಾಡೆಮಿಗಳು ಸ್ವಾಯತ್ತ ಸಂಸ್ಥೆಗಳು ಎನ್ನುವುದೇ ಹಾಸ್ಯಾಸ್ಪದ -ಶಶಿಕಾಂತ ಯಡಹಳ್ಳಿ,
ಲಮಾಣಿ ಸಮುದಾಯದ ನಾಯಕರೊಬ್ಬರ ಪ್ರತಿಷ್ಠೆ ಹಾಗೂ ಹಠಕ್ಕೆ ಕರ್ನಾಟಕ ರಾಜ್ಯ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರ ಅಧಿಕಾರ ಅಕಾಲಿಕವಾಗಿ ಅಸುನಿಗಿದೆ.
15-03-2024 ರಂದು ಡಾ.ಎ.ಆರ್.ಗೋವಿಂದಸ್ವಾಮಿಯವರನ್ನು ಬಂಜಾರ ಅಕಾಡೆಮಿಗೆ ಕರ್ನಾಟಕ ಸರಕಾರ ನೇಮಕ ಮಾಡಿತ್ತು. ಅದಾದ ಮೂರು ತಿಂಗಳ ನಂತರ 13-06-2024 ರಂದು ಗೋವಿಂದಸ್ವಾಮಿಗಳು ಅಧ್ಯಕ್ಷಗಿರಿ ವಹಿಸಿಕೊಂಡರು. ಆದರೆ ಅವರು ಸರಕಾರಿ ಇಲಾಖೆಯ ನೌಕರರಾಗಿದ್ದು ಸಣ್ಣ ಸಮಸ್ಯೆಯನ್ನುಂಟು ಮಾಡಿತ್ತು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಸಹಾಯಕ ಹುದ್ದೆಯಲ್ಲಿ ಸರಕಾರಿ ನೌಕರನಾಗಿ ಕಾರ್ಯನಿರ್ವಹಿಸುತ್ತಿರುವ ಗೋವಿಂದಸ್ವಾಮಿಗಳ ಹೆಸರನ್ನು ಸರಕಾರವೇ ನೇಮಿಸಿದ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿತ್ತು . ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾನ್ಯ ಮಾಡಿತ್ತು. ಸರಕಾರಿ ನೌಕರಿಯಲ್ಲಿದ್ದು ಎರಡೆರಡು ಕಡೆ ಸಂಬಳ ಸವಲತ್ತನ್ನು ಪಡೆಯಲು ಅವಕಾಶ ಇಲ್ಲದೇ ಇರುವುದರಿಂದ ಅಕಾಡೆಮಿಯ ಅಧ್ಯಕ್ಷರಿಗೆ ಸರಕಾರ ಕೊಡಮಾಡುವ ಗೌರವ ಧನ ಹಾಗೂ ಇತರೆ ಆರ್ಥಿಕ ಸವಲತ್ತುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಗೋವಿಂದಸ್ವಾಮಿಗಳು ಮುಚ್ಚಳಿಕೆ ಬರೆದುಕೊಟ್ಟಿದ್ದರಿಂದ ಅಧ್ಯಕ್ಷಗಿರಿ ಅಬಾಧಿತವಾಗಿತ್ತು. ಸರಕಾರದ ಅಧಿಸೂಚನೆ, ಮುಖ್ಯಮಂತ್ರಿಗಳ ಟಿಪ್ಪಣಿ, ಸರಕಾರದ ಅಧೀನ ಕಾರ್ಯದರ್ಶಿಗಳ ಪತ್ರ ಹಾಗೂ ಗೋವಿಂದಸ್ವಾಮಿಗಳ ಮನವಿಯ ಮೇರೆಗೆ ವಿದ್ಯುತ್ ನಿಗಮವು “ಅಕಾಡೆಮಿ ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ಅಧಿಕೃತ ಕಾರ್ಯಕಲಾಪಗಳಿಗೆ ಭಾಗವಹಿಸುವ ದಿನಗಳಂದು ಪೂರ್ವಾನುಮತಿ ಪಡೆಯಬೇಕು” ಎನ್ನುವ ಷರತ್ತಿನ ಮೇರೆಗೆ ಅಧಿಕೃತ ಪತ್ರದ ಮೂಲಕ ಅನುಮತಿ ಕೊಟ್ಟಿತ್ತು.
ಅಧ್ಯಕ್ಷರು ತಮಗೆ ತೋಚಿದಂತೆ, ಇರುವ ಕಡಿಮೆ ಅನುದಾನದಲ್ಲಿ ಹೇಗೋ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದರು. ಮೊದಮೊದಲು ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಯಾವಾಗ ವಿಧಾನಸಭೆಯ ಉಪಸಭಾಧ್ಯಕ್ಷರಾಗಿರುವ ಮಾನ್ಯ ರುದ್ರಪ್ಪ ಮಾನಪ್ಪ ಲಮಾಣಿಯವರ ಚಿತ್ತ ಬಂಜಾರ ಅಕಾಡೆಮಿಯತ್ತ ತಿರುಗಿತೋ ಆಗ ಬಂಜಾರ ಅಕಾಡೆಮಿಯಲ್ಲಿ ಕ್ಷುದ್ರ ರಾಜಕೀಯ ಶುರುವಾಯಿತು. ಒಂದು ಪ್ರಶಸ್ತಿಗಾಗಿ ಆರಂಭವಾದ ವೈಮನಸ್ಸು ಗೋವಿಂದಸ್ವಾಮಿಯವರ ತಲೆದಂಡಕ್ಕೆ ಕಾರಣವಾಯ್ತು.
ಆಗಿದ್ದಿಷ್ಟೇ. ಬಂಜಾರ ಅಕಾಡೆಮಿಯಿಂದ ಬಂಜಾರ ಸಮುದಾಯದ ದಿಗ್ಗಜ ಶ್ರೀ ಸಂತ ಸೇವಾಲಾಲ್ ಹೆಸರಿನ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಬಂಜಾರ ಸಮುದಾಯದ ಸಾಧಕರೊಬ್ಬರಿಗೆ ಕೊಡಮಾಡಲಾಗುತ್ತದೆ. 7-2-2025 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶಿಫಾರಸ್ಸು ಪತ್ರವೊಂದನ್ನು ಬರೆದ ರುದ್ರಪ್ಪ ಲಮಾಣಿಯವರು ಬಂಜಾರ ಜನಾಂಗದ ಶ್ರೇಯಸ್ಸಿಗಾಗಿ ಶ್ರಮಿಸಿರುವ ಶತಾಯುಷಿ ಶ್ರೀ ರೂಪ್ಲನಾಯ್ಕರವರನ್ನು ಸಂತ ಸೇವಾಲಾಲ್ ಪ್ರಶಸ್ತಿಗೆ ಆಯ್ಕೆಮಾಡಬೇಕೆಂದು ಆಗ್ರಹಿಸಿದರು. ಈ ರೆಕಮಂಡೇಶನ್ ಪತ್ರವನ್ನು ಆಧರಿಸಿ ಸಂಸ್ಕೃತಿ ಇಲಾಖೆಯ ನಿರ್ದೇಶಕರು ಬಂಜಾರ ಅಕಾಡೆಮಿಯ ರಿಜಿಸ್ಟ್ರಾರ್ ರವರಿಗೆ “ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು” ಎಂದು ಪತ್ರ ಬರೆದರು.

ಮೊದಲೇ ಆಗ್ರಹಿಸಿದ್ದರೆ ಉಪಸಭಾಧ್ಯಕ್ಷರ ಶಿಫಾರಸ್ಸನ್ನು ಅಕಾಡೆಮಿ ಮಾನ್ಯಮಾಡಬಹುದಾಗಿತ್ತು. ಆದರೆ ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. 22- 01-2025 ರಂದು ನಡೆದ ಅಕಾಡೆಮಿಯ ಸರ್ವ ಸದಸ್ಯರ ಸಭೆ ಸಾಂಸ್ಕೃತಿಕ ಚಿಂತಕರು ಹಾಗೂ ಮಾಜಿ ಸಚಿವೆಯಾಗಿದ್ದ ಶ್ರೀಮತಿ ಬಿ.ಟಿ.ಲಲಿತ ನಾಯಕ್ ರವರಿಗೆ ಶ್ರೀ ಸಂತ ಸೇವಾಲಾಲ್ ಪ್ರಶಸ್ತಿಯನ್ನು ನೀಡಿ ಗೌರವಿಸುವುದಾಗಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಮರುದಿನ ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಪ್ರಶಸ್ತಿಯ ವಿವರ ಪ್ರಕಟವಾಗಿತ್ತು. ಪ್ರಶಸ್ತಿ ಪ್ರಧಾನ ಸಮಾರಂಭದ ಕುರಿತು ತೀರ್ಮಾನ ಮಾಡಿಯಾಗಿತ್ತು. ಮುಂದಿನ ವರ್ಷದಲ್ಲಿ ಹಿರಿಯರಾದ ರೂಪ್ಲಾನಾಯ್ಕರವರವರನ್ನು ಸೇವಾಲಾಲ್ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಡಿ.ಎಂ.ರವಿಕುಮಾರರವರು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಹಾಗೂ ಉಪಸಭಾಧ್ಯಕ್ಷರಿಗೆ 17-03-2025 ರಂದು ಪತ್ರ ಬರೆದು ತಿಳಿಸಿದ್ದರು.
ಈ ಪತ್ರದಿಂದ ಕೆರಳಿದ ಮಾನ್ಯ ರುದ್ರಪ್ಪ ಲಮಾಣಿಯವರು ತಮ್ಮ ಆದೇಶಪೂರ್ವಕ ಶಿಫಾರಸ್ಸನ್ನು ಕಡೆಗಣಿಸಿದ ಬಂಜಾರ ಅಕಾಡೆಮಿಯ ಅಧ್ಯಕ್ಷರನ್ನೇ ಪದಚ್ಯುತಗೊಳಿಸುವ ಪ್ರಯತ್ನ ಶುರುಮಾಡಿದರು. ಅಕಾಡೆಮಿ ನಿಯಮಾನುಸಾರ ತೆಗೆದುಕೊಂಡ ನಿರ್ಣಯವನ್ನು ಬದಲಾಯಿಸಲಾಗದು ಎಂಬ ಕನಿಷ್ಠ ಅರಿವಿಲ್ಲದ ರುದ್ರಪ್ಪನವರು ಪ್ರಶಸ್ತಿ ಪ್ರಕರಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು. ಅಕಾಡೆಮಿಯಲ್ಲಿ ಸದಸ್ಯರಾಗಿರುವ ತಮ್ಮ ಆಜ್ಞಾಧಾರಕ ಎಸ್. ನಂಜಾನಾಯ್ಕರವರಿಂದ 18-03-2025 ರಂದು ದೂರು ಪತ್ರವನ್ನು ಬರೆಯಿಸಿದರು. ಈ ದೂರಿನನ್ವಯ ಗೋವಿಂದಸ್ವಾಮಿಯವರ ಆಯ್ಕೆಯೇ ಕಾನೂನುಬಾಹಿರವೆಂದೂ, ಗೋವಿಂದಸ್ವಾಮಿಯವರು ಸರಕಾರಿ ಉದ್ಯೋಗಿಯಾಗಿದ್ದಾರೆಂದು ಆರೋಪಿಸಿ ತಮ್ಮದೇ ಲೆಟರ್ ಹೆಡ್ ನಲ್ಲಿ 30-05-2025 ರಂದು ನಡಾವಳಿ ಪತ್ರ ಬರೆದು ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶಿವರಾಜ್ ತಂಗಡಗಿಯವರಿಗೆ ರವಾನಿಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಮಧೂಸೂದನ ರೆಡ್ಡಿಯವರಿಂದಲೂ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಗಳಿಗೆ ಟಿಪ್ಪಣಿ ಪತ್ರ ಬರೆಯಿಸಿದರು.
ಶತಾಯ ಗತಾಯ ಗೋವಿಂದಸ್ವಾಮಿಗಳನ್ನು ಅಕಾಡೆಮಿಯ ಅಧ್ಯಕ್ಷತೆಯಿಂದ ತೆಗೆದುಹಾಕಲು ಸರ್ವ ಪ್ರಯತ್ನವನ್ನೂ ಮಾಡಿದ ಮಾನ್ಯ ರುದ್ರಪ್ಪ ಲಮಾಣಿಯವರು ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರು. ಲಮಾಣಿಯವರ ಒಂದು ವರ್ಷದ ಸತತ ಪ್ರಯತ್ನದ ಫಲವಾಗಿ 27-10-2025 ರಂದು ಬಂಜಾರ ಅಕಾಡೆಮಿಯ ಅಧ್ಯಕ್ಷ ಗೋವಿಂದಸ್ವಾಮಿಯವರ ಅಧಿಕಾರ ರದ್ದತಿ ಅಧಿಸೂಚನೆಯನ್ನು ಸರಕಾರ ಹೊರಡಿಸಿತು.
ಒಬ್ಬ ಅಧಿಕಾರಸ್ಥ ರಾಜಕಾರಣಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗೆದ್ದಿರಬಹುದು. ಆದರೆ ಇಲ್ಲಿ ನೈತಿಕತೆ ಸೋತಿದೆ. ಸ್ವಾಯತ್ತ ಹೆಸರಿನ ಅಕಾಡೆಮಿಗಳನ್ನೂ ತಮಗಿಷ್ಟ ಬಂದಂತೆ ಆಡಿಸುವ ರಾಜಕಾರಣಿಗಳ ಕುತಂತ್ರ ಇದು ಮೊದಲನೆಯದ್ದೂ ಅಲ್ಲಾ, ಕೊನೆಯದ್ದೂ ಅಲ್ಲಾ. ಸರಕಾರಿ ಕೃಪಾ ಪೋಷಿತ ಅಕಾಡೆಮಿಗಳ ನಿಯಂತ್ರಣ ಎಲ್ಲಿಯವರೆಗೂ ಅಧಿಕಾರಿಗಳು ಹಾಗೂ ಸ್ವಾರ್ಥ ರಾಜಕಾರಣಿಗಳ ಕೈಯಲ್ಲಿರುತ್ತದೋ ಅಲ್ಲಿಯವರೆಗೂ ಅಕಾಡೆಮಿಗಳು ಸ್ವಾಯತ್ತ ಸಂಸ್ಥೆಗಳು ಎನ್ನುವುದೇ ಹಾಸ್ಯಾಸ್ಪದ.
ಇಷ್ಟಕ್ಕೂ ಇಲ್ಲಿ ಗೋವಿಂದಸ್ವಾಮಿಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಅವರ ಅಧ್ಯಕ್ಷಗಿರಿಯಲ್ಲಿ ಕೆಲವಾರು ಆರೋಪಗಳೂ ಇವೆ. ಮಾಮೂಲಿಯಂತೆ ಹಣ ಹೊಡೆದರು ಎನ್ನುವವರಿದ್ದಾರೆ. ಅಕಾಡೆಮಿಯ ರೆಜಿಸ್ಟ್ರಾರ್ ಸಹಯೋಗ ಇಲ್ಲದೇ ಆರ್ಥಿಕ ಅಪಚಾರ ಅಸಾಧ್ಯ. ಹಾಗೇನಾದರೂ ಆರ್ಥಿಕ ಅವ್ಯವಹಾರ ನಡೆದಿದ್ದರೆ ಸಂಸ್ಕೃತಿ ಇಲಾಖೆ ವಿಚಾರಣೆ ನಡೆಸಿ ಕ್ರಮತೆಗೆದುಕೊಳ್ಳಲಿ. ಅಕಾಡೆಮಿಯ ಇತರೆ ಸದಸ್ಯರ ಜೊತೆಗೆ ಅಧ್ಯಕ್ಷರ ಹೊಂದಾಣಿಕೆ ಇಲ್ಲ ಎನ್ನುವ ಆರೋಪ ಇದೆ. ಅಧ್ಯಕ್ಷರು ಹಾಗೂ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಎಲ್ಲಾ ಅಕಾಡೆಮಿಗಳಲ್ಲೂ ಇರುವಂತಹುದೇ. ಗೋವಿಂದಸ್ವಾಮಿಯವರು ಯಾರ ಮಾತನ್ನೂ ಕೇಳದೇ ಸರ್ವಾಧಿಕಾರಿಯಾಗಿ ವರ್ತಿಸುತ್ತಾರೆ ಎನ್ನುವವರಿದ್ದಾರೆ. ಹಾಗೇನಾದರೂ ಇದ್ದರೆ ಅಕಾಡೆಮಿಯ ಸದಸ್ಯರು ಪ್ರಶ್ನಿಸಲಿ, ರಾಜೀನಾಮೆ ಕೊಡಲಿ, ಪತ್ರಿಕೆಗೆ ಹೇಳಿಕೆ ನೀಡಲಿ. ಅದು ಬಿಟ್ಟು ಮೌಖಿಕ ಆರೋಪಗಳನ್ನು ಮಾಡುವುದು ಅಕಾಡೆಮಿಗೆ ಮಾಡುವ ಅಪಮಾನವಾಗಿದೆ.
ಈಗ ಗೋವಿಂದಸ್ವಾಮಿಯವರನ್ನು ಅಧ್ಯಕ್ಷಗಿರಿಯಿಂದ ಪದಚ್ಯುತಗೊಳಿಸಿದ್ದಕ್ಕೇ ಸರಕಾರ ಕೊಡುತ್ತಿರುವ ಕಾರಣ ಏನೆಂದರೆ ಅವರ ಆಯ್ಕೆಯೇ ಕಾನೂನಾತ್ಮಕವಾಗಿಲ್ಲ ಎಂಬುದು. ಸದಸ್ಯರಾದ ನಂಜಾನಾಯ್ಕರವರ ದೂರು ಪತ್ರ ಹಾಗೂ ಮಾನ್ಯ ರುದ್ರಪ್ಪ ಲಮಾಣಿಯವರ ನಡಾವಳಿ ಪತ್ರದಲ್ಲಿರುವ ಆರೋಪವೂ “ಕಾನೂನು ಬಾಹಿರ ಆಯ್ಕೆ” ಎಂಬುದಾಗಿದೆ. ಸರಕಾರಿ ನೌಕರರು ಅಕಾಡೆಮಿ ಅಧ್ಯಕ್ಷರಾಗಿದ್ದೇ ಕಾನೂನು ಬಾಹಿರವೆಂಬುದು ಇವರ ತಪ್ಪು ಗ್ರಹಿಕೆಯಾಗಿದೆ.

ಈ ಹಿಂದೆ ಅಕಾಡೆಮಿಗಳಿಗೆ ಅಧ್ಯಕ್ಷರುಗಳಾಗಿದ್ದ ಹಾ.ಮಾ.ನಾಯಕ, ಜಿ.ಎಸ್.ಶಿವರುದ್ರಪ್ಪ, ಲಕ್ಕಪ್ಪಗೌಡ, ಹಿ.ಶಿ.ರಾಮಚಂದ್ರಗೌಡ, ಡಾ.ಮರುಳಸಿದ್ದಪ್ಪ, ಪ್ರೊ.ಸಿದ್ದಲಿಂಗಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪನವರಿಂದ ಹಿಡಿದು ಇತ್ತೀಚೆಗೆ ಅಧ್ಯಕ್ಷರಾಗಿದ್ದ ಪ್ರೊ.ಅರವಿಂದ ಮಾಲಗತ್ತಿ, ವಸಂತಕುಮಾರ್ ಮುಂತಾದವರುಗಳು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರು. ಆದರೂ ಅವರನ್ನು ಸರಕಾರ ಅಕಾಡೆಮಿಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಪ್ರೊ.ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ನಡೆದ “ಸಾಂಸ್ಕೃತಿಕ ನೀತಿ”ಯಲ್ಲೂ ಸಹ ಸರಕಾರಿ ಕಾಯಕ ನಿರತರೂ ಅಧ್ಯಕ್ಷರಾಗಬಹುದು ಎಂದೇ ನಮೂದಾಗಿದೆ. ಕಳೆದ ಬಾರಿ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗಲೇ ಈ ಸಾಂಸ್ಕೃತಿಕ ನೀತಿ ಸದನದಲ್ಲಿ ಮಾನ್ಯವಾಗಿದೆ. ಅದನ್ನು ಸೂಕ್ತವಾಗಿ ಜಾರಿಗೊಳಿಸುವಲ್ಲಿ ಅಧಿಕಾರಸ್ಥರು ವಿಳಂಬ ಮಾಡುತ್ತಿದ್ದಾರೆ.
ಇಷ್ಟಕ್ಕೂ ಡಾ.ಗೋವಿಂದಸ್ವಾಮಿಯವರು ಸರಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ಅಕಾಡೆಮಿ ಅಧ್ಯಕ್ಷರುಗಳ ಆಯ್ಕೆ ಸಮಿತಿಗೂ ಗೊತ್ತಿತ್ತು. ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೂ ತಿಳಿದಿತ್ತು. ಗೋವಿಂದಸ್ವಾಮಿಯವರ ಬಯೋಡಾಟಾದಲ್ಲೂ ಆ ವಿವರ ಬರೆಯಲಾಗಿತ್ತು. ಸರಕಾರವೇ ಕೆಪಿಟಿಸಿಎಲ್ ಗೆ ಪತ್ರ ಬರೆದು ತಿಳಿಸಿತ್ತು. ಗೋವಿಂದಸ್ವಾಮಿಗಳನ್ನು ಬಂಜಾರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳುವಾಗ ಇರದೇ ಇದ್ದ ತಕರಾರು ಈಗ್ಯಾಕೆ? ಸರಕಾರಿ ನೌಕರರು ಎನ್ನುವ ಆಧಾರದಲ್ಲಿ ಅವರ ಆಯ್ಕೆಯೇ ಕಾನೂನುಬಾಹಿರ ಎನ್ನುವುದಾದರೆ ಗೊತ್ತಿದ್ದೂ ಅವರನ್ನು ಆಯ್ಕೆ ಮಾಡಿದ ಸಂಸ್ಕೃತಿ ಇಲಾಖೆ ಹಾಗೂ ಮಾನ್ಯ ಮಾಡಿದ ಸರಕಾರವೂ ಆರೋಪಿ ಅಲ್ಲವೇ? ಯಾವುದೇ ಸರಕಾರಿ ಸಂಬಳ ಸವಲತ್ತು ಪಡೆಯದೇ ಅಧ್ಯಕ್ಷನಾಗಿ ಕೆಲಸ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಗೋವಿಂದಸ್ವಾಮಿಗಳು ತಾವು ಕೆಲಸ ಮಾಡುವ ಸರಕಾರಿ ಸಂಸ್ಥೆಯಿಂದಲೂ ಅನುಮತಿ ಪತ್ರ ತಂದು ಕೊಟ್ಟಿದ್ದಾರೆ. ಆದರೂ ಈಗ ಸರಕಾರ ಪ್ರಭಾವಿ ವ್ಯಕ್ತಿಯೊಬ್ಬರ ದ್ವೇಷ ರಾಜಕಾರಣಕ್ಕೆ ಮಣಿದು ಅಕಾಡೆಮಿಯೊಂದರ ಅಧ್ಯಕ್ಷರನ್ನು ವಜಾ ಮಾಡಿದ್ದೇ ಕಾನೂನು ಬಾಹಿರವಾದ ಕ್ರಮ. ವಿಧಾನ ಸಭೆಯ ಉಪಸಭಾಧ್ಯಕ್ಷರೊಬ್ಬ ಈ ರೀತಿಯ ಅಸಾಂವಿಧಾನಿಕ ನಡೆ ಅಕಾಡೆಮಿಗಳ ವ್ಯವಸ್ಥೆಯಲ್ಲಿ ಕೆಟ್ಟ ಮಾದರಿಯನ್ನು ಸೃಷ್ಟಿಸುವಂತಹುದು.
ಉಪಾಸಭಾಧ್ಯಕ್ಷರೊಬ್ಬರ ದ್ವೇಷಪೂರಿತ ಒತ್ತಡಕ್ಕೆ ಒಳಗಾಗಿ ಅಕಾಡೆಮಿಯ ಅಧ್ಯಕ್ಷರನ್ನು ವಜಾ ಗೊಳಿಸಲು ಅನುಮತಿಯನ್ನು ಕೊಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಈ ಅಸಾಂವಿಧಾನಿಕ ನಡಾವಳಿಯತ್ತ ಗಮನ ಹರಿಸಿ ಆದ ಪ್ರಮಾಣವನ್ನು ಸರಿಪಡಿಸಬೇಕಿದೆ. ಅದು ಆಗದಿದ್ದರೆ ದ್ವೇಷ ರಾಜಕಾರಣದ ಫಲಾನುಭವಿಯಾದ ಡಾ.ಗೋವಿಂದಸ್ವಾಮಿಗಳು ನ್ಯಾಯಾಲಯದ ಮೊರೆ ಹೋಗುವುದು ಸೂಕ್ತವೆನಿಸುತ್ತದೆ.
ಇಂತಹ ಅವಘಡಗಳು ಇನ್ನು ಮುಂದೆ ಘಟಿಸಬಾರದು ಎಂದಾದರೆ “ಸಾಂಸ್ಕೃತಿಕ ನೀತಿ”ಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತರಲು ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳು ಸರಕಾರವನ್ನು ಒತ್ತಾಯಿಸಬೇಕಿದೆ. ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ನಿಜವಾದ ರೂಪದಲ್ಲಿ ಸ್ವಾಯತ್ತತೆಯನ್ನು ಕೊಡಬೇಕೆಂದು ಸರಕಾರಿ ವ್ಯವಸ್ಥೆಯನ್ನು ಆಗ್ರಹಿಸಬೇಕಿದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿಯಂತ್ರಣದಿಂದ ಎಲ್ಲಾ ಅಕಾಡೆಮಿಗಳು ಮುಕ್ತವಾಗಲೇ ಬೇಕಿವೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ, ರಾಜಕೀಯ ವಿಶ್ಲೇಷಕರು.
ಇದನ್ನೂ ಓದಿ- ಸಮುದಾಯ 50 |ಮಾನವತೆಯೆಡೆಗೆ ಜನಾಂದೋಲನ


