ಬೆಂಗಳೂರು: ಧರ್ಮಸ್ಥಳದಲ್ಲಿ ಉತ್ಖನನ ನಡೆಸುವಾಗ ಹಲವಾರು ಮಾನವ ಅವಶೇಷಗಳು ದೊರೆತ ಬಂಗ್ಲೆಗುಡ್ಡ ಅರಣ್ಯ ಪ್ರದೇಶವನ್ನು ಭಯಾನಕ ಮತ್ತು ನಿಷೇಧಿತ ಪ್ರದೇಶ ಎಂದು ಪರಿಗಣಿಸಲಾಗಿತ್ತು ಎಂದು ಪ್ರಕರಣದ ಏಕೈಕ ಸಾಕ್ಷಿದೂರುದಾರ ಚಿನ್ನಯ್ಯ ತನಿಖೆಯ ಸಂದರ್ಭದಲ್ಲಿ ಎಸ್ ಐಟಿಗೆ ತಿಳಿಸಿದ್ದ ಎಂದು ಬಿಲ್ ಆರ್ ಪೋಸ್ಟ್ ವರದಿ ಮಾಡಿದೆ.
ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಇದೇ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಿಂದ ಮಗುವಿನದ್ದೂ ಸೇರಿದಂತೆ ಏಳು ತಲೆಬುರುಡೆಗಳು ಮತ್ತು ಅನೇಕ ಮೂಳೆಗಳನ್ನು ಸಂಗ್ರಹಿಸಿತ್ತು. ಈ ಸ್ಥಳದಲ್ಲಿ ಮನುಷ್ಯರು ಏಕೆ ಕಾಣೆಯಾಗುತ್ತಿದ್ದರು ಮತ್ತು ಅವರ ಅವಶೇಷಗಳು ಅಲ್ಲಲ್ಲಿ ಎಸೆದ ಪರಿಸ್ಥಿತಿಯಲ್ಲಿ ಏಕೆ ಕಂಡು ಬರುತ್ತಿದ್ದವು ಎಂಬ ರಹಸ್ಯವನ್ನು ಭೇಧಿಸಲು ಮುಂದಾಗಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ ಎಂದೂ ಬಿಎಲ್ ಆರ್ ಪೋಸ್ಟ್ ಹೇಳಿದೆ.
ಸುಳ್ಳು ಹೇಳಿಕೆ ಮತ್ತು ನಕಲಿ ಆರೋಪದ ಮೇಲೆ ಆಗಸ್ಟ್ 23 ರಂದು ಚಿನ್ನಯ್ಯನನ್ನು ಬಂಧಿಸಲಾಗಿತ್ತು. ತನ್ನಿಂದ ನೂರಾರು ಶವಗಳನ್ನು ಹೂತು ಹಾಕಿಸಲಾಗಿದೆ ಎಂದು ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಜುಲೈ 19 ರಂದು ಸರ್ಕಾರ ಎಸ್ ಐಟಿ ರಚಿಸಿತ್ತು. ಜುಲೈ11 ರಂದು ಚಿನ್ನಯ್ಯ ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಅವರ ಮುಂದೆ ಬಿ ಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದು, ಸಾಕ್ಷಿಯಾಗಿ ತಲೆ ಬುರುಡೆ ಮತ್ತು ಕೆಲವು ಮೂಳೆಗಳನ್ನು ಹಾಜರುಪಡಿಸಿರುತ್ತಾನೆ.
ನಂತರ ಎಸ್ ಐಟಿ ಸುಮಾರು ಎರಡು ವಾರ ಚಿನ್ನಯ್ಯ ಗುರುತಿಸಿದ 15 ಸ್ಥಳಗಳಲ್ಲಿ ಮಹಜರು ನಡೆಸಿ 6 ನೇ ಹಾಗೂ 11(A) ಸ್ಥಳದಲ್ಲಿಎರಡು ಅವಶೇಷಗಳನ್ನು ಸಂಗ್ರಹಿಸುತ್ತದೆ. ನ್ಯಾಯಾಲಯದಲ್ಲಿ ತಾನು ಶವಗಳನ್ನು ಹೂತು ಹಾಕಿರುವುದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ್ದಾಗಿ ಹೇಳಿದ ನಂತರ ಆಗಸ್ಟ್ 23ರಂದು ಎಸ್ ಐಟಿ ಚಿನ್ನಯ್ಯನನ್ನು ಬಂಧಿಸುತ್ತದೆ. ಇದೇ ಸೆಕ್ಷನ್ ಅಡಿಯಲ್ಲಿ ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿರುತ್ತದೆ. ಸೌಜನ್ಯ ಪರ ಹೋರಾಟಗಾರ ವಿಠಲ್ ಗೌಡ ಸಂಗ್ರಹಿಸಿದ ತಲೆ ಬುರುಡೆಯನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಹಾಜರುಪಡಿಸಿದ್ದಾಗಿಯೂ ಚಿನ್ನಯ್ಯ ಹೇಳಿಕೆ ನೀಡುರುತ್ತಾನೆ.
ತನಿಖೆಯ ಸಂದರ್ಭದಲ್ಲಿ ಈ ತಲೆ ಬುರುಡೆಯನ್ನು ಬಂಗ್ಲೆಗುಡ್ಡ ಅರಣ್ಯ ಪ್ರದೇಶದಿಂದ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಎಸ್ ಐಟಿ ಕಲೆ ಹಾಕುತ್ತದೆ. ಮಹಜರು ನಡೆಸುವಾಗ ಇದೇ ಅರಣ್ಯ ಪ್ರದೇಶದಿಂದ ಅನೇಕ ಅವಶೇಷಗಳನ್ನು ಸಂಗ್ರಹಿಸಿರುತ್ತದೆ. ಸತತ ಎರಡು ದಿನ ಈ ಅವಶೇಷಗಳಿಗಾಗಿ ಎಸ್ ಐಟಿ ತಂಡ ಹುಡುಕಾಟ ನಡೆಸಿರುತ್ತದೆ.
ಭಯಾನಕ ಬಂಗ್ಲೆಗುಡ್ಡ!
ಧರ್ಮಸ್ಥಳ ದೇವಸ್ಥಾನ ಮಂಡಳಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಈ ನಿಷೇಧಿತ ಅರಣ್ಯ ಪ್ರದೇಶವನ್ನು ಪ್ರವೇಶಿಸದಂತೆ ತಾಕೀತು ಮಾಡಿದ್ದರು ಎಂದು ತನಿಖೆಯ ಸಂದರ್ಭದಲ್ಲಿ ಚಿನ್ನಯ್ಯ ತಿಳಿಸಿದ್ದಾನೆ. ಧರ್ಮಸ್ಥಳ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಈ ಪ್ರದೇಶವನ್ನು ಪ್ರವೇಶಿಸಿರುವುದಿಲ್ಲ. ಪ್ರತಿಯೊಬ್ಬರೂ ಬಂಗ್ಲೆಗುಡ್ಡಕ್ಕೆ ಕಾಲಿಡಲು ಹೆದರುತ್ತಿದ್ದರು. ಏಕೆ ಈ ಗುಡ್ಡವನ್ನು ಪ್ರವೇಶಿಸಬಾರದು ಎಂಬ ಮಾಹಿತಿ ತನಗೆ ತಿಳಿದಿಲ್ಲ ಎಂದು ಚಿನ್ನಯ್ಯ ಎಸ್ ಐಟಿಗೆ ತಿಳಿಸಿದ್ದಾನೆ ಎಂದು ಗೃಹ ಇಲಾಖೆ ಮೂಲಗಳು ಖಚಿತಪಡಿಸಿವೆ.
ಚಿನ್ನಯ್ಯನ ಸಹೋದರ ಥಾನಸಿಯೂ ಇದೇ ಮಾಹಿತಿ ನೀಡಿದ್ದು, ಈ ಪ್ರದೇಶಕ್ಕೆ ಕಾಲಿಡಲು ನಮಗೂ ಭಯವಾಗುತ್ತಿತ್ತು ಎಂದಿದ್ದಾನೆ.
ಈ ನಿಷೇಧಿತ ಬಂಗ್ಲೆಗುಡ್ಡದಲ್ಲಿ ಕೆಲವು ರಹಸ್ಯ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತಿತ್ತು ಎಂಬ ಅಂಶವನ್ನು ಎಸ್ ಐಟಿ ಪತ್ತೆ ಹಚ್ಚಿದ್ದು ಇದು ಆತ್ಮಹತ್ಯಾ ಪ್ರದೇಶವಂತೂ ಅಲ್ಲವೇ ಅಲ್ಲ ಎಂದು ಹೇಳಿದೆ. ಇಲ್ಲಿ ಕಂಡು ಬಂದ ತಲೆ ಬುರುಡೆ ಮತ್ತು ಮೂಳೆಗಳೆಲ್ಲವೂ ಮಾನವ ದೇಹಗಳದ್ದೇ ಆಗಿರುವುದಿಲ್ಲ ಎಂಬ ಅಂಶವನ್ನೂ ದಾಖಲಿಸಿದೆ. ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರೆ ನೂರಾರು ಮಾನವ ಅವಶೇಷಗಳು ಸಿಗಬಹುದು ಎಂದು ಎಸ್ ಐಟಿ ಭಾವಿಸಿದೆ.

